ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ 7,00,000 ದಾಟಿದ ಸೋಂಕು ಪ್ರಕರಣ; ಜಗತ್ತಿನಾದ್ಯಂತ 1,50,000 ಸಾವು

Last Updated 18 ಏಪ್ರಿಲ್ 2020, 4:23 IST
ಅಕ್ಷರ ಗಾತ್ರ

ರಾಯಿಟರ್ಸ್‌: ಜಗತ್ತಿನಾದ್ಯಂತದ ದಾಖಲಾಗಿರುವ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಪೈಕಿ ಸಾವಿಗೀಡಾದವರ ಸಂಖ್ಯೆ ಶುಕ್ರವಾರ 1,50,000 ದಾಟಿದೆ.

ಜಗತ್ತಿನಲ್ಲೇ ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿವೆ. ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಪ್ರಕಾರ, ಅಮೆರಿಕದಲ್ಲಿ ಒಟ್ಟು ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ 7,00,282 ತಲುಪಿದೆ. ಸೋಂಕಿನಿಂದ 36,773 ಮಂದಿ ಸಾವಿಗೀಡಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 3,856 ಮಂದಿ ಮೃತಪಟ್ಟಿದ್ದಾರೆ. ನ್ಯೂಯಾರ್ಕ್‌ ನಗರದಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆಗೆ ಈ ವಾರ 3,778 ಸೇರ್ಪಡೆಯಾಗಲಿದೆ ಎನ್ನಲಾಗಿದೆ.

ಇಟಲಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22,745 ಮುಟ್ಟಿದೆ. ಸ್ಪೇನ್‌ನಲ್ಲಿ 19,478 ಮಂದಿ ಹಾಗೂ ಫ್ರಾನ್ಸ್‌ನಲ್ಲಿ 18,681 ಜನ ಸಾವಿಗೀಡಾಗಿದ್ದಾರೆ.

ಜನವರಿ 9ರಂದು ಚೀನಾದ ವುಹಾನ್‌ನಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದ ಮೊದಲ ಪ್ರಕರಣ ವರದಿಯಾಗಿತ್ತು. ಅನಂತರ 83 ದಿನಗಳಲ್ಲಿ ಜಗತ್ತಿನಾದ್ಯಂತ 50,000 ಜನರು ಸೋಂಕಿಗೆ ಬಲಿಯಾದರು. ಮುಂದಿನ ಎಂಟು ದಿನಗಳಲ್ಲಿ ಅಂದರೆ, 91 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 1,00,000 ಮುಟ್ಟಿತು.

ಸೋಂಕಿನಿಂದ ಮೊದಲ ಸಾವು ಸಂಭವಿಸಿ 100 ದಿನ ಕಳೆಯುವುದರೊಳಗೆ 1,50,000 ಮಂದಿ ಸಾವಿಗೀಡಾದರು. 1918ರಲ್ಲಿ ಕಂಡು ಬಂದ ಸ್ಪ್ಯಾನಿಷ್‌ ಫ್ಲೂನಿಂದ ಮೃತಪಟ್ಟವರಿಗಿಂತ ಈ ಸಂಖ್ಯೆ ಕಡಿಮೆ ಎಂದು ಹೇಳಲಾಗುತ್ತಿದೆ. 1920ರ ವರೆಗೂ ವ್ಯಾಪಿಸಿದ್ದ ಫ್ಲೂಗೆ ಒಟ್ಟು 2 ಕೋಟಿ ಜನ ಬಲಿಯಾದರು.

ಚೀನಾದ ವುಹಾನ್‌ನ ಕಾಡು ಪ್ರಾಣಿಗಳ ಮಾರುಕಟ್ಟೆಯಿಂದ ಕೊರೊನಾ ವೈರಸ್‌ ಸೋಂಕು ವ್ಯಾಪಿಸಿದೆ ಎಂದು ನಂಬಲಾಗಿದೆ. ಸಾಂಕ್ರಾಮಿಕವಾದ ಸೋಂಕು ನಿವಾರಣೆಗೆ ಸೂಕ್ತ ಔಷಧಿ ಲಭ್ಯವಿಲ್ಲದೆ ಮಾರಣಾಂತಿಕವಾಗಿ ಪರಿಣಮಿಸಿದ್ದು, ವಿಜ್ಞಾನಿಗಳು ನಿರಂತರ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕ ರಾಷ್ಟ್ರಗಳಲ್ಲಿ ಆಸ್ಪತ್ರೆಗಳಲ್ಲಿ ಸಾವಿಗೀಡಾದವರ ಸಂಖ್ಯೆ ಮಾತ್ರ ಲಭ್ಯವಿದ್ದು, ನರ್ಸಿಂಗ್‌ ಹೋಂಗಳು ಹಾಗೂ ಮನೆಗಳಲ್ಲಿ ಮೃತಪಟ್ಟವರ ಲೆಕ್ಕ ಒಟ್ಟು ಗೂಡಿಲ್ಲ.

ಬಿಎನ್‌ಒ ವೆಬ್‌ಸೈಟ್‌ ಪ್ರಕಾರ, ಜಗತ್ತಿನಾದ್ಯಂತ 22,53,502 ಕೋವಿಡ್‌–19 ಪ್ರಕರಣಗಳು ದಾಖಲಾಗಿವೆ. 5,63,255 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT