ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕುಗಳೇ ನಿಮ್ಮ ದುಡ್ಡನ್ನು ನೀವು ತೆಗೆದುಕೊಳ್ಳಿ: ವಿಜಯ್ ಮಲ್ಯ

Last Updated 14 ಫೆಬ್ರುವರಿ 2020, 11:13 IST
ಅಕ್ಷರ ಗಾತ್ರ

ಲಂಡನ್: ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೆ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಇದೀಗ ಮತ್ತೊಮ್ಮೆ ಬ್ಯಾಂಕುಗಳಿಗೆ ತಮ್ಮ ಸಾಲದ ಅಸಲನ್ನು ಮರುಪಾವತಿ ಮಾಡುವುದಾಗಿ ತಿಳಿಸಿದ್ದಾರೆ.

ಹಸ್ತಾಂತರವನ್ನು ಪ್ರಶ್ನಿಸಿ ಬ್ರಿಟಿಷ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಮಲ್ಯ, ಮೂರನೇ ದಿನದ ವಿಚಾರಣೆಗೆ ಹಾಜರಾದ ಬಳಿಕಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದಲೂ ಸಿಬಿಐ ಮತ್ತು ಇ.ಡಿ. ಏನು ಮಾಡಿದೆಯೋ ಅದೆಲ್ಲವೂ ಅಸಂಮಂಜಸವಾದದ್ದು. ಶೀಘ್ರವೇ ಶೇ 100ರಷ್ಟು ನಿಮ್ಮ ಮೂಲ ಹಣವನ್ನು ತೆಗೆದುಕೊಳ್ಳಿ ಎಂದು ಬ್ಯಾಂಕುಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ನಾನು ಹಣವನ್ನು ಮರುಪಾವತಿ ಮಾಡುತ್ತಿಲ್ಲ ಎಂಬ ಬ್ಯಾಂಕುಗಳ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ನನ್ನ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ನಾನು ಯಾವುದೇ ಅಪರಾಧವನ್ನು ಮಾಡಿಲ್ಲ. ಹೀಗಿದ್ದರೂ ಇ.ಡಿ. ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.ಬ್ಯಾಂಕುಗಳೇ ದಯಮಾಡಿ ನಿಮ್ಮ ಹಣವನ್ನು ವಾಪಾಸ್ ತೆಗೆದುಕೊಳ್ಳಿ ಎಂದು ನಾನು ಹೇಳುತ್ತಿದ್ದೇನೆ. ಆದರೆ ಜಾರಿ ನಿರ್ದೇಶನಾಲಯ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಈ ಸ್ವತ್ತುಗಳ ಮೇಲೆ ನಮಗೆ ಹಕ್ಕು ಇದೆ ಎನ್ನುತ್ತಿದೆ. ಒಂದೇ ಆಸ್ತಿ ಮೇಲೆ ಇ.ಡಿ ಮತ್ತು ಬ್ಯಾಂಕುಗಳು ಜಗಳ ಆಡುತ್ತಿವೆ ಎಂದು ದೂರಿದರು.

ನಾನು ಇ.ಡಿ.ಯಿಂದ ಯಾವುದೇ ಹಣವನ್ನು ಪಡೆದುಕೊಂಡಿಲ್ಲ. ಅಲ್ಲದೆ ಬ್ಯಾಂಕುಗಳಿಂದಲೂ ಕೂಡ ಸ್ವತಃ ನಾನೇ ಹಣವನ್ನು ಪಡೆದಿಲ್ಲ. ಬದಲಿಗೆ ಕಿಂಗ್‌ಫಿಷರ್ ಮತ್ತು ಏರ್‌ಲೈನ್ಸ್ ಪಡೆದಿವೆ. ಹೀಗಿದ್ದರೂ ನಾನು ಬ್ಯಾಂಕುಗಳ ಹಣವನ್ನು ಸಂಪೂರ್ಣವಾಗಿ ಪಾವತಿಸುತ್ತೇನೆ ಎನ್ನುವ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ವಾಪಸ್ ಹೋಗುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಮಲ್ಯ, 'ನನ್ನ ಕುಟುಂಬ ಮತ್ತು ನನ್ನ ಹಿತಾಸಕ್ತಿ ಎಲ್ಲಿರುತ್ತದೆಯೋ ನಾನು ಕೂಡ ಅಲ್ಲಿರಬೇಕಾಗುತ್ತದೆ. ಸಿಬಿಐ ಮತ್ತು ಇ.ಡಿ. ನಡೆದುಕೊಳ್ಳುವುದು ಸಮಂಜಸವಾಗಿದ್ದರೆ ಅದರ ಕಥೆ ಬೇರೆಯೇ ಆಗಿರುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಅವು ಸಮಂಜಸವಾಗಿ ವರ್ತಿಸಿಲ್ಲ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT