ಶನಿವಾರ, ಫೆಬ್ರವರಿ 22, 2020
19 °C

ಕೊರೊನಾ ವೈರಸ್ | ಭಾರತೀಯರಿರುವ ಹಡಗಿಗೆ ಏಕಾಏಕಿ ನಿರ್ಬಂಧ ವಿಧಿಸಿದ ಜಪಾನ್

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ಭೀತಿಯಿಂದಾಗಿ ಡೈಮಂಡ್‌ ಪ್ರಿಸ್ಸೆಸ್‌ ಹಡಗು ಜಪಾನ್‌ನಿಂದ ಏಕಾಏಕಿ ನಿರ್ಬಂಧಿಸಲಾಗಿದ್ದು, ಅದರಲ್ಲಿ ಸಾಕಷ್ಟು ಮಂದಿ ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಹಡಗಿನಲ್ಲಿರುವ ಭಾರತೀಯರಲ್ಲಿ ಯಾರೊಬ್ಬರಿಗೂ ವೈರಸ್‌ ಸೋಂಕು ಇರುವುದು ದೃಢಪಟ್ಟಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್‌ ತಿಳಿಸಿದ್ದಾರೆ.

ಈ ಸಂಬಂಧ ಶುಕ್ರವಾರ ರಾತ್ರಿ ಟ್ವೀಟ್‌ ಮಾಡಿರುವ ಜೈಶಂಕರ್‌, ‘ಕೊರೊನಾ ವೈರಸ್‌ ಕಾರಣದಿಂದಾಗಿ ಜಪಾನ್‌ನಿಂದ ಹೊರಗುಳಿದಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿ ಅನೇಕ ಭಾರತೀಯ ಸಿಬ್ಬಂದಿ ಹಾಗೂ ಭಾರತೀಯ ಪ್ರಯಾಣಿಕರು ಇದ್ದಾರೆ. ಜಪಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ ಭಾರತೀಯರಲ್ಲಿ ಯಾರೊಬ್ಬರಿಗೂ ಸೋಂಕು ಇರುವುದು ದೃಢಪಟ್ಟಿಲ್ಲ. ಈ ಬೆಳವಣಿಗೆಯ ಕುರಿತು ನಿಕಟ ಸಂಪರ್ಕದಲ್ಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಯೊಕೊಹಾಮಾ ಕರಾವಳಿಯಲ್ಲಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿರುವ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 61ಕ್ಕೆ ಏರಿದೆ ಎಂದು ಜಪಾನ್‌ ಆರೋಗ್ಯ ಸಚಿವಾಲಯ ಈ ಹಿಂದೆ ಖಚಿತ ಪಡಿಸಿತ್ತು. ಅದರಲ್ಲಿ ಜಪಾನ್‌ನ 28, ಅಮೆರಿಕದ 11, ಕೆನಡಾದ 7, ಚೀನಾದ 3 ಹಾಗೂ ಇಂಗ್ಲೆಂಡ್‌, ನ್ಯೂಜಿಲೆಂಡ್‌, ತೈವಾನ್‌, ಅರ್ಜೆಂಟೀನಾ ಮತ್ತು ಫಿಲಿಪೈನ್ಸ್‌ನ ತಲಾ ಒಬ್ಬರು ಸೋಂಕಿತರು ಎಂದು ಅಧಿಕಾರಿಗಳು ಹೇಳಿದ್ದರು.

ಇದಕ್ಕೂ ಮೊದಲು ರಾಜ್ಯಸಭೆಗೆ ಮಾಹಿತಿ ನೀಡಿದ್ದ ವಿದೇಶಾಂಗ ಸಚಿವರು, ಅಂದಾಜು 80 ಭಾರತೀಯ ವಿದ್ಯಾರ್ಥಿಗಳು ಕೊರೊನಾ ಪೀಡಿತ ಪ್ರದೇಶವಾದ ಚೀನಾದ ವುಹಾನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ 70 ಮಂದಿ ಸ್ಥಳಾಂತರಿಸುವ ಕಾರ್ಯಾಚರಣೆ ವೇಳೆ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದ್ದರು.

ಮಿಯಾಮಿ ಮೂಲದ ಕಾರ್ನಿವಲ್‌ ಒಡೆತನದ ಡೈಮಂಡ್‌ ಪ್ರಿನ್ಸೆಸ್‌ನಿಂದ ಹಾಂಗ್‌ಕಾಂಗ್‌ನಲ್ಲಿ ಇಳಿದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಸೋಮವಾರ ಯೊಕೊಹಾಮಾಕ್ಕೆ ಆಗಮಿಸಿದ ಹಡಗನ್ನು ಎರಡುವಾರ ಕಾಲ ತಡೆಹಿಡಿಯಲಾಗಿತ್ತು. 

ಸುಮಾರು 3,700 ಪ್ರಯಾಣಿಕರು ಪ್ರಯಾಣಿಸಬಹುದಾದ ಸಾಮರ್ಥ್ಯದ ಈ ಹಡಗಿನಲ್ಲಿ, 1,100 ಸಿಬ್ಬಂದಿ ಮತ್ತು 2670 ಪ್ರಯಾಣಿಕರು ಇರಬಹುದಾಗಿದೆ.

ಸದ್ಯ ಕೊರೊನಾ ವೈರಸ್‌ಗೆ ಸುಮಾರು 630ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಚೀನಾದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು