ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್: ವುಹಾನ್ ಮಾರುಕಟ್ಟೆ ಪಾತ್ರ ಇದೆ ಎಂದ ವಿಶ್ವ ಆರೋಗ್ಯ ಸಂಸ್ಥೆ

Last Updated 8 ಮೇ 2020, 14:05 IST
ಅಕ್ಷರ ಗಾತ್ರ

ಜನೀವಾ: ಕೊರೊನಾ ವೈರಸ್ ಹರಡುವಿಕೆ ಹಿಂದೆ ಚೀನಾದ ವುಹಾನ್‌ ನಗರದ ಸಗಟು ಮಾರುಕಟ್ಟೆಯ ಪಾತ್ರ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೈರಸ್ ಹರಡಲು ಮಾರುಕಟ್ಟೆ ಮೂಲವಾಗಿರುವ ಸಾಧ್ಯತೆ ಇದೆ. ಈ ಕುರಿತು ಹೆಚ್ಚಿನ ಸಂಶೋಧನೆಯಾಗಬೇಕಿದೆ ಎಂದು ಅದು ಹೇಳಿದೆ.

ವೈರಸ್ ಹರಡುವಿಕೆ ತಡೆಯುವ ಉದ್ದೇಶದಿಂದ ಚೀನಾ ಆಡಳಿತವು ಆ ಮಾರುಕಟ್ಟೆಯನ್ನು ಜನವರಿಯಲ್ಲಿ ಬಂದ ಮಾಡಿತ್ತು. ವನ್ಯಜೀವಿ ಮಾಂಸ ಮಾರಾಟ ಮತ್ತು ಖರೀದಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು.

‘ವೈರಸ್ ಹರಡುವಿಕೆ ಹಿಂದೆ ಮಾರುಕಟ್ಟೆಯ ಪಾತ್ರ ಇರುವುದು ಸ್ಪಷ್ಟ. ಆದರೆ, ಯಾವ ರೀತಿಯ ಪಾತ್ರ ಎಂಬುದು ತಿಳಿದಿಲ್ಲ. ಮಾರುಕಟ್ಟೆಯೇ ವೈರಸ್‌ನ ಮೂಲವೇ, ಹೆಚ್ಚಿನ ಸಂಖ್ಯೆಯಲ್ಲಿ ಹರಡಲು ಮಾರುಕಟ್ಟೆಯೇ ಕಾರಣವಾಯಿತೇ ಅಥವಾ ಆಕಸ್ಮಿಕವಾಗಿ ಅಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸೋಂಕು ಹರಡಿತೇ ಎಂಬುದು ತಿಳಿಯಬೇಕಿದೆ’ ಎಂದು ಡಬ್ಲ್ಯುಎಚ್‌ಒದ ಆಹಾರ ಸುರಕ್ಷತಾ ತಜ್ಞ ಪೀಟರ್ ಬೆನ್ ಎಂಬಾರೆಕ್ ಹೇಳಿದ್ದಾರೆ.

ಜೀವಂತ ಪ್ರಾಣಿಗಳಿಂದ ಅಥವಾ ವ್ಯಾಪಾರಿಗಳು, ಅಂಗಡಿಗಳವರಿಂದ ಮಾರುಕಟ್ಟೆಗೆ ವೈರಸ್ ಬಂತೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

‘ಕೊರೊನಾ ವೈರಸ್ ವುಹಾನ್‌ನ ಪ್ರಯೋಗಾಲಯದಿಂದಲೇ ಹರಡಿದೆ ಎಂಬುದಕ್ಕೆ ಮಹತ್ವದ ಪುರಾವೆ ಇದೆ’ ಎಂದು ಅಮೆರಿಕದ ಸಚಿವ ಮೈಕ್ ಪಾಂಪಿಯೊ ಇತ್ತೀಚೆಗೆ ಹೇಳಿದ್ದರು. ಆದಾಗ್ಯೂ ಹೆಚ್ಚಿನ ಮಾಹಿತಿ ಏನನ್ನೂ ಅವರು ನೀಡಿರಲಿಲ್ಲ.

ಈ ಮಧ್ಯೆ, ಕೊರೊನಾ ವೈರಸ್ ಮಾನವ ನಿರ್ಮಿತ ಅಲ್ಲ ಎಂದು ವಿಜ್ಞಾನಿಗಳು ಹೇಳಿದ್ದರು. ಜರ್ಮನಿಯ ಗುಪ್ತಚರ ವರದಿಯು ಮೈಕ್ ಪಾಂಪಿಯೊ ಆರೋಪಗಳ ಬಗ್ಗೆ ಅನುಮಾನ ಹುಟ್ಟಿಸಿದೆ ಎಂದು ಜರ್ಮನಿಯ ನಿಯತಕಾಲಿಕೆಯೊಂದೂ ವರದಿ ಮಾಡಿತ್ತು.

ಕೊರೊನಾ ವೈರಸ್‌ ಚೀನಾದ ವುಹಾನ್‌ ಪ್ರಯೋಗಾಲಯದಲ್ಲಿ ಹುಟ್ಟಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಇತ್ತೀಚೆಗೆ ಆರೋಪಿಸಿದ್ದರು. ಆದರೆ, ಈ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಅ ದೇಶ ನೀಡಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT