ಶನಿವಾರ, ಮಾರ್ಚ್ 6, 2021
26 °C

ಕೋವಿಡ್ 19ನಿಂದ ಮೃತಪಟ್ಟವರಿಗೆ ಕೊನೆ ನಮಸ್ಕಾರ; ಇರಲಿ ಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೊದಲು ಯಾವುದೇ ವ್ಯಕ್ತಿ ಮೃತಪಟ್ಟರೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಧಾವಿಸುತ್ತಿದ್ದ ಜನರೇ ಈಗ ಕೋವಿಡ್‌ನಿಂದ ಮೃತಪಟ್ಟವರನ್ನು ಮಣ್ಣು ಮಾಡದಂತೆ ತಡೆಯಲು ಓಡೋಡಿ ಬರುತ್ತಿದ್ದಾರೆ. ಮೃತದೇಹದಿಂದಲೂ ಸೋಂಕು ಹರಡುತ್ತದೆ ಎಂಬ ಸುದ್ದಿಯ ಅಬ್ಬರದ ಮುಂದೆ ಮಾನವೀಯತೆ ಗೌಣವಾಗಿದೆ.

ಮೃತ ಶರೀರದಿಂದ ಸೋಂಕು ಹರಡುವುದಿಲ್ಲ ಎಂದು ವೈದ್ಯರು ಪರಿಪರಿಯಾಗಿ ಹೇಳಿದರೂ ಜನ ಕೇಳುತ್ತಿಲ್ಲ. ಶರೀರದಿಂದ ಉಸಿರೇ ಹೊರಡದಿದ್ದ ಮೇಲೆ ಸೋಂಕು ಹೇಗೆ ಹೊರಸೂಸುತ್ತದೆ; ಆ ಭೀತಿಯನ್ನು ಬಿಟ್ಟುಬಿಡಿ ಎನ್ನುತ್ತದೆ ವೈದ್ಯರ ಸಮೂಹ. 

ಕೋವಿಡ್ ಪೀಡಿತ ಮೃತ ವ್ಯಕ್ತಿಯ ದೇಹದಿಂದ ದ್ರವ ಹೊರಬರಬಾರದು ಎಂಬ ಕಾರಣಕ್ಕೆ ಮೂಗು ಸೇರಿದಂತೆ ದೇಹದ ರಂಧ್ರಗಳನ್ನು ಮುಚ್ಚಲಾಗುತ್ತದೆ. ದೇಹಕ್ಕೆ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಿಸಿ, ಸೋಂಕು ರಹಿತಗೊಳಿಸಲಾಗುತ್ತದೆ. ಬಳಿಕ ದೇಹವನ್ನು ಚೀಲದಲ್ಲಿ (ಬ್ಯಾಗ್ ಮಾದರಿ) ಇರಿಸಲಾಗುತ್ತದೆ. ಚೀಲದ ಹೊರಗಡೆ ಕೂಡ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತದೆ. ಹೀಗಾಗಿ ಮೃತ ವ್ಯಕ್ತಿಯಿಂದ ಸೋಂಕು ಹರಡುವುದಿಲ್ಲ ಎನ್ನುತ್ತಾರೆ ವೈದ್ಯಕೀಯ ತಜ್ಞರು. 

ಕೋವಿಡ್‌ ಪೀಡಿತ ವ್ಯಕ್ತಿ ಮೃತಪಟ್ಟ ಬಳಿಕವೂ ಆತನ ದೇಹದಲ್ಲಿ ಸೋಂಕು ಕ್ರಿಯಾಶೀಲವಾಗಿರುತ್ತದೆ. ಆದರೆ, ವ್ಯಕ್ತಿಯ ಅಂತ್ಯಸಂಸ್ಕಾರವನ್ನು ವೈಜ್ಞಾನಿಕವಾಗಿ ನಡೆಸಿದಲ್ಲಿ ಸೋಂಕು ಹರಡುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಸಹ ಈಗಾಗಲೇ ಸ್ಪಷ್ಟಪಡಿಸಿದೆ.

‘ಹಿಂದೆ ಯಾವುದೇ ಸಾಂಕ್ರಾಮಿಕ ರೋಗದಿಂದ ಸಾವು ಸಂಭವಿಸಿದರೂ ಅಂತ್ಯಸಂಸ್ಕಾರವನ್ನು ಸರ್ಕಾರವೇ ನಡೆಸಿರುವ ಉದಾಹರಣೆಗಳಿಲ್ಲ. ಈಗ ಅಂತಹ ಪ್ರಸಂಗ ಬಂದಿರುವುದು ಹಾಗೂ ಜನ ಮಾನವೀಯತೆಯನ್ನು ಮರೆಯುತ್ತಿರುವುದು ಸಾಮಾಜಿಕ ಬಿಕ್ಕಟ್ಟಿನ ದ್ಯೋತಕ’ ಎಂದು ಮಂಗಳೂರಿನ ವೈದ್ಯ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ ಹೇಳುತ್ತಾರೆ.

‘ಮೃತ ವ್ಯಕ್ತಿಯ ಕಣ್ಣೀರು, ಬೆವರು, ಗಂಟಲದ್ರವ, ಮೂತ್ರ ಹಾಗೂ ರಕ್ತದಂತಹ ದ್ರವ ದೇಹದಿಂದ ಹೊರಹೊಮ್ಮಿದಲ್ಲಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ದೇಹದ ರಂಧ್ರಗಳನ್ನು ಮುಚ್ಚಲಾಗುತ್ತದೆ. ಸೋಂಕು ನಿವಾರಕ ಸಿಂಪಡಿಸಿ ದೇಹವನ್ನು ಒಮ್ಮೆ ಚೀಲದಲ್ಲಿ ಹಾಕಿದ ಬಳಿಕ ಸೋಂಕು ಹೊರಗಡೆ ಬರುವುದಿಲ್ಲ’ ಎನ್ನುತ್ತಾರೆ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಯು.ಜಿ. ದೀಪಕ್.

**

ಸೋಂಕು ಹರಡುವುದಿಲ್ಲ
ಕೋವಿಡ್ ಪೀಡಿತ ಮೃತ ವ್ಯಕ್ತಿಯಿಂದ ಸೋಂಕು ಹರಡುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದಾಗಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡದಿರುವ, ಶವಗಳನ್ನು ಹಾದಿಬೀದಿಯಲ್ಲೇ ಬಿಟ್ಟುಹೋಗುವ ಪ್ರಕರಣಗಳು ವರದಿಯಾಗುತ್ತಿರುವುದು ಬೇಸರದ ಸಂಗತಿ. ಈ ಸೋಂಕು ಉಸಿರಾಟದಿಂದ ಹರಡುತ್ತದೆ.

ಉಸಿರಾಟವೇ ಇಲ್ಲದಿದ್ದಲ್ಲಿ ಸೋಂಕು ಹೊರಗಡೆ ಬರುವುದಿಲ್ಲ. ಮೃತದೇಹ ಪಕ್ಕದಲ್ಲಿಯೇ ಇದ್ದರೂ ಸೋಂಕು ಹರಡುವುದಿಲ್ಲ. ಅವರನ್ನು ಸ್ಪರ್ಶಿಸಿದಲ್ಲಿ ಮಾತ್ರ ಅಂತಹ ಸಾಧ್ಯತೆ ಇರುತ್ತದೆ. ಹಾಗಾಗಿ ವ್ಯಕ್ತಿ ಸತ್ತ ಬಳಿಕವೂ ಸೂಕ್ತ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಬೇಕು. ಅದು ನಮ್ಮ ಸಂಪ್ರದಾಯ ಕೂಡ ಹೌದು. ಸೂಕ್ತ ಸುರಕ್ಷತಾ ಸಾಧನಗಳನ್ನು ಧರಿಸಿ, ಅಂತ್ಯಸಂಸ್ಕಾರ ಮಾಡಬೇಕು.


-ಡಾ. ಸುದರ್ಶನ್ ಬಲ್ಲಾಳ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ, ಬೆಂಗಳೂರು

**

ವೈರಾಣು ಇರುವುದಿಲ್ಲ
ಮನುಷ್ಯ ಮೃತಪಟ್ಟ ಎರಡರಿಂದ 6 ಗಂಟೆಯ ಒಳಗೆ ವೈರಾಣು ಸಾಯುತ್ತದೆ. ಮೃತದೇಹ ಕೊಡುವಾಗ ಅದಕ್ಕಿಂತ ಹೆಚ್ಚು ಅವಧಿ ಹಿಡಿದಿರುವುದರಿಂದ ದೇಹದಲ್ಲಿ ವೈರಾಣು ಇರುವುದಿಲ್ಲ. ಆದರೆ, ಹೊದಿಕೆ, ಮೇಲ್ಮೈನಲ್ಲಿ ಇರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

ಹೀಗಾಗಿ ಸೋಂಕಿದ್ದ ಮೃತದೇಹವನ್ನು ಸಂಬಂಧಿಕರಿಗೆ ಕೊಡದೆ ಸರ್ಕಾರವೇ ಅಂತ್ಯಕ್ರಿಯೆ ನೆರವೇರಿಸುತ್ತದೆ. ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಆದರೆ, ಗುಂಪಾಗಿ ಬರುವಂತಿಲ್ಲ. ಮಾಸ್ಕ್‌ ಹಾಕಿಕೊಂಡು, ದೂರ ದೂರ ನಿಂತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಬಹುದು. ಕೊರೊನಾ ಸೋಂಕು ಬಂದ ವ್ಯಕ್ತಿ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೆದರಬೇಕಿಲ್ಲ. ಆದರೆ, ಎಚ್ಚರದಿಂದ ಇರುವುದು ಅತ್ಯಗತ್ಯ.


-ಡಾ. ಜಿ.ಡಿ. ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ,ದಾವಣಗೆರೆ

**

ಅಗ್ನಿಸಂಸ್ಕಾರವೇ ಉತ್ತಮ
ಕೋವಿಡ್‌ನಿಂದ ಮೃತಪಟ್ಟವರ ದೇಹಗ ಳನ್ನು ವಿದ್ಯುತ್‌ ಚಿತಾ ಗಾರದಲ್ಲಿ ಸಂಸ್ಕಾರ ಮಾಡುವುದೇ ಉತ್ತಮ. ಅದೇ ಹೆಚ್ಚು ಸುರಕ್ಷಿತ ಕೂಡ. ಇಡೀ ದೇಹ ಸಂಪೂರ್ಣ ಭಸ್ಮವಾಗುತ್ತದೆ. ವೈರಾಣು ಇದ್ದರೂ ನಾಶವಾಗುತ್ತದೆ. ಚಿತಾಭಸ್ಮ ಪಡೆದು ಮುಂದಿನ ವಿಧಿವಿಧಾನ ಪೂರೈಸಬಹುದು.

ಜನರ ಮನಸ್ಸಿನಲ್ಲಿರುವ ಆತಂಕ ಕೂಡ ದೂರವಾಗುತ್ತದೆ. ಅಲ್ಲದೆ, ಸಾಮಾಜಿಕ ಸಮಸ್ಯೆ ನೀಗುತ್ತದೆ. ಹೂಳಲೇಬೇಕೆಂದು ಕೆಲ ಸಮುದಾಯದವರು ಬಯಸಿದರೆ ಅದಕ್ಕೂ ಅವಕಾಶ ನೀಡಬಹುದು. ದೇಹವೇನೋ ಬೇಗನೇ ಕರಗಿ ಹೋಗುತ್ತದೆ. ಆದರೆ, ದೇಹವನ್ನು ಸುತ್ತಲು ಬಳಸಿದ ಪ್ಲಾಸ್ಟಿಕ್‌ ನಾಶವಾಗದೇ ಉಳಿದು ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಜನರಿಗೂ ಭಯ ಇದ್ದೇ ಇರುತ್ತದೆ.


–ಡಾ.ಎಂ.ಜಿ.ಸತೀಶ್‌ ಕುಮಾರ್‌, ವೈದ್ಯ, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಮೈಸೂರು

**

ಕ್ರಿಮಿನಲ್‌ ಪ್ರಕರಣ ದಾಖಲಿಸಿ
ಕೋವಿಡ್‌ ಸೋಂಕಿತರು ಮೃತಪಟ್ಟಾಗ ಸರ್ಕಾರವೇ ಅಂತ್ಯಸಂಸ್ಕಾರ ನಡೆಸಬೇಕೆಂಬ ತಪ್ಪು ಅಭಿಪ್ರಾಯವನ್ನು ಆಡಳಿತ ವ್ಯವಸ್ಥೆ ಬಿತ್ತಿರುವುದೇ ಈಗ ಸೃಷ್ಟಿಯಾಗಿರುವ ಆತಂಕ, ಗೊಂದಲಗಳಿಗೆ ಕಾರಣ. ಸರ್ಕಾರವೇ ಅಂತಿಮ ಸಂಸ್ಕಾರ ನಡೆಸಬೇಕು ಎಂಬುದು ಯಾವುದೇ ಕಾಯ್ದೆಯಲ್ಲೂ ಇಲ್ಲ.

ಕೋವಿಡ್ ಕುರಿತ‌ ಮಾರ್ಗಸೂಚಿಯಲ್ಲೂ ಇಲ್ಲ. ಸ್ಥಳೀಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಈ ಕ್ರಮ ಜಾರಿಗೆ ತಂದು ಭೀತಿ ಸೃಷ್ಟಿಸಿದ್ದಾರೆ. ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಅವರೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಬೇಕು.ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುವುದು ಅರ್ಥಹೀನ. ಯಾರೇ ಅಡ್ಡಿಪಡಿಸಿದರೂ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಬಂಧಿಸುವ ಮೂಲಕ ಕಠಿಣ ಸಂದೇಶ ರವಾನಿಸಬೇಕು.


-ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯ, ಮಂಗಳೂರು

**

ಹೀಗಿದೆ ಸಂಸ್ಕಾರದ ಪ್ರಕ್ರಿಯೆ
ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಅಂತಿಮ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ಮೊದಲು ಮೂರು ಪದರುಗಳಲ್ಲಿ ಬಟ್ಟೆ ಹಾಗೂ ಪ್ಲಾಸ್ಟಿಕ್‌ ಬ್ಯಾಗ್‌ನಿಂದ ಮುಚ್ಚಲಾಗಿರುತ್ತದೆ. ಶವ ಸಂಸ್ಕಾರಕ್ಕೆ ನಾಲ್ಕು ಜನ ಸಿಬ್ಬಂದಿ ಇರುತ್ತಾರೆ. ಅವರೆಲ್ಲರೂ ಪಿಪಿಇ ಕಿಟ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಂಡಿರುತ್ತಾರೆ.

ಆರೋಗ್ಯ ಇಲಾಖೆಯ ಒಬ್ಬ ಅಧಿಕಾರಿಯೂ ಇರುತ್ತಾರೆ. ಎಂಟು ಮೀಟರ್‌ ಆಳ ಗುಂಡಿ ತೋಡಿ ಅದಕ್ಕೆ ರಾಸಾಯನಿಕ ಸಿಂಪಡಣೆ ಮಾಡಿದ ಬಳಿಕ ಸಂಸ್ಕಾರ ಮಾಡಲಾಗುತ್ತದೆ. ಬಳಿಕ ಆಂಬುಲೆನ್ಸ್‌ಗೆ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತದೆ. ಆಂಬುಲೆನ್ಸ್‌ ಸಿಬ್ಬಂದಿ ಕೂಡ ಪಿಪಿಇ ಕಿಟ್ ಕಳಚಿ ಸ್ಯಾನಿಟೈಸರ್‌ ಹಾಕಿಕೊಳ್ಳುತ್ತಾರೆ.


-ಡಾ. ಯಶವಂತ ಮದೀನಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಧಾರವಾಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು