ಶುಕ್ರವಾರ, ಆಗಸ್ಟ್ 6, 2021
21 °C
ರಾಜ್ಯದಲ್ಲಿ ಮತ್ತೆ 115 ಮಂದಿ ಸಾವು

Covid-19 Karnataka Update | 3,693 ಹೊಸ ಪ್ರಕರಣ, ಯಾವ ಜಿಲ್ಲೆಯಲ್ಲಿ ಹೆಚ್ಚು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನಲ್ಲಿ 2,208 ಸೇರಿದಂತೆ ರಾಜ್ಯದಲ್ಲಿ ಮತ್ತೆ 3,693 ಮಂದಿ ಕೋವಿಡ್ ಪೀಡಿತರಾಗಿರುವುದು ಹಾಗೂ ಸೋಂಕಿತರಲ್ಲಿ 115 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ.

ಕಳೆದ 17 ದಿನಗಳಲ್ಲಿ 39,873 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 901 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55,115ಕ್ಕೆ ಹಾಗೂ ಮೃತರ ಸಂಖ್ಯೆ 1,147ಕ್ಕೆ ತಲುಪಿದೆ. ಅಧಿಕ ಪ್ರಕರಣಗಳು ವರದಿಯಾಗಿರುವ ರಾಜ್ಯಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕ, ದಕ್ಷಿಣ ಭಾರತದ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ. 

ಶುಕ್ರವಾರ 24,700 ಮಂದಿಯ ಗಂಟಲ ದ್ರವವನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 1,134 ಮಂದಿಯ ವರದಿ ಬರಬೇಕಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲೇ, ಚೇತರಿಸಿಕೊಂಡು ಮನೆಗೆ ತೆರಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಒಂದೇ ದಿನ 1,028 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 20,757ಕ್ಕೆ ಏರಿದೆ. ಬೆಂಗಳೂರಿನಲ್ಲಿ 333 ಸೇರಿದಂತೆ ರಾಜ್ಯದಲ್ಲಿ 568 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಹೊಸದಾಗಿ ದೃಢಪಟ್ಟ ಸಾವು ಪ್ರಕರಣಗಳಲ್ಲಿ 24 ಮಂದಿ 50 ವರ್ಷದ ಒಳಗಿನವರಾಗಿದ್ದಾರೆ. ಇದರಲ್ಲಿ 22 ವರ್ಷದ ಯುವಕ ಕೂಡ ಸೇರಿದ್ದಾನೆ. 50 ವರ್ಷ ಮೇಲ್ಪಟ್ಟವರಲ್ಲಿ ಬಹುತೇಕರು ವಿವಿಧ ಕಾಯಿಲೆಗಳಿಂದ ಕೂಡ ಬಳಲಿದವರಾಗಿದ್ದಾರೆ. 

ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ಒಟ್ಟು ಸೋಂಕಿತರ ಸಂಖ್ಯೆ 27,496ಕ್ಕೆ ತಲುಪಿದೆ. ಸದ್ಯ 20 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಎದುರಾಗಿದೆ.

ಬೆಳಗಾವಿಯ ಅಥಣಿಯಲ್ಲಿ 55 ವರ್ಷದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಕುಟುಂಬದ ಸದಸ್ಯರು ಬಾರದ ಪರಿಣಾಮ ತಳ್ಳುವ ಗಾಡಿಯಲ್ಲಿ ಶವ ಸಾಗಿಸಿದ ಘಟನೆ ನಡೆದಿದೆ.  ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಹೊಸ ಪ್ರಕರಣಗಳು?
ಬೆಂಗಳೂರು ನಗರದಲ್ಲಿ ಅತಿಹೆಚ್ಚು (2208) ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಒಂದೇ ದಿನ 75 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 582 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನಗರದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 27,496 ಮುಟ್ಟಿದೆ.

ಧಾರವಾಡ 157, ಬಳ್ಳಾರಿ 133, ವಿಜಯಪುರ 118, ಬೆಳಗಾವಿ 95, ಮೈಸೂರು 93, ಕಲಬುರ್ಗಿ 89, ಉಡುಪಿ 80, ಉತ್ತರ ಕನ್ನಡ 75, ಬೀದರ್ 69, ಗದಗ 59, ಹಾವೇರಿ 58, ಕೋಲಾರ 51 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು