ಬುಧವಾರ, ಆಗಸ್ಟ್ 4, 2021
23 °C
24ನೇ ಸ್ಥಾನದ ನಡುವೆಯೂ ಕಲೆಯಲ್ಲಿ ಮೊದಲ ಮೂರು ರ್‍ಯಾಂಕ್‌

ಪಿಯುಸಿ ಫಲಿತಾಂಶ: ಆರು ವರ್ಷ ಹಿಂದಕ್ಕೆ ಸರಿದ ಬಳ್ಳಾರಿ ಜಿಲ್ಲೆ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯ ಶೇಕಡಾವಾರು ಗಳಿಕೆಯೊಂದಿಗೆ ಸ್ಥಾನವೂ ಕುಸಿದಿದ್ದು, ಆರು ವರ್ಷ ಹಿಂದಕ್ಕೆ ಸರಿದಂತಾಗಿದೆ. ಆದರೆ ಕೊಟ್ಟೂರಿನ ಇಂದು ಸ್ವತಂತ್ರ ಪಿಯು ಕಾಲೇಜು ಕಲಾ ವಿಭಾಗದ ಮೊದಲ ಮೂರು ರ್‍ಯಾಂಕ್ ಸೇರಿದಂತೆ  ಕಾಲೇಜಿನ 11 ವಿದ್ಯಾರ್ಥಿಗಳು ಹರಪನಹಳ್ಳಿಯ ಜೈನ್‌ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅತ್ಯಧಿಕ ಅಂಕ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ.

ರ್‍ಯಾಂಕ್‌ ವಿಜೇತರು: ಇಂದು ಕಾಲೇಜಿನ ಕರೇಗೌಡ ಬಸವನಗೌಡ ಪ್ರಥಮ ರ್‍ಯಾಂಕ್‌ (594)ಗಳಿಸಿದ್ದಾರೆ. ನಂತರದ ಎರಡು ರ್‍ಯಾಂಕ್‌ಗಳನ್ನು ಅದೇ ಕಾಲೇಜಿನ ಸ್ವಾಮಿ ಡಿ.ಎಂ (592), ಮಹ್ಮದ್‌ ಮಾರಿಯೋ (591) ಗಳಿಸಿದ್ದಾರೆ.

ಕೊಟ್ಟೂರಿನ ಸೀತಾ ದೊಗ್ಗಳ್ಳಿ ಮತ್ತು ಶಾಹಿನ್‌ (590), ಪ್ರಿಯಾಂಕ ಎಂ, ತೋಟದ ತೇಜಸ್ವಿನಿ ಮತ್ತು ಶರಣಬಸಪ್ಪ ಬಡಿಗೇರ್, ಹರಪನಹಳ್ಳಿಯ ಹಕ್ಕಿ ರೂಪ (589), ಕೊಟ್ಟೂರಿನ ಸಹನ, ಸಾಬವ್ವ, ರಗಡಿ ಮಲ್ಲೇಶಪ್ಪ, ಎಸ್‌.ಎಂ.ಓಬಮ್ಮ ಹಾಗೂ ಹರಪನಹಳ್ಳಿಯ ಅನಿತಾ ಚಲುವಾದಿ (588) ಅಂಕ ಗಳಿಸಿದ್ದಾರೆ. 

ಫಲಿತಾಂಶ: ಜಿಲ್ಲೆಯು 2014ರಲ್ಲಿ 25ನೇ ಸ್ಥಾನವನ್ನು ಗಳಿಸಿತ್ತು. ನಂತರ ಫಲಿತಾಂಶದಲ್ಲಿ ಗಣನೀಯ ಸುಧಾರಣೆಯನ್ನೂ ಕಂಡಿತ್ತು. ಆದರೆ ಈ ಬಾರಿ ಹಾಗೆ ಆಗಿಲ್ಲ. ಹಿಂದಿನ ವರ್ಷ ಶೇ 64.87 ಫಲಿತಾಂಶದೊಂದಿಗೆ 19ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆಯಲ್ಲಿ ಈ ವರ್ಷ ಫಲಿತಾಂಶವು ಅದಕ್ಕಿಂತ ಕಡಿಮೆಯಾಗಿದೆ. ಜಿಲ್ಲಾವಾರು ಪಟ್ಟಿಯಲ್ಲೂ ಕೆಳಕ್ಕೆ ಇಳಿದಿದೆ.

ಜಿಲ್ಲಾವಾರು ಸಾಧನೆಯ ಪಟ್ಟಿಯಲ್ಲಿ 2018ರಲ್ಲಿ ಜಿಲ್ಲೆಯು 10ನೇ ಸ್ಥಾನದಲ್ಲಿತ್ತು. ಆಗ ಶೇಕಡಾವಾರು ಫಲಿತಾಂಶ ಕಡಿಮೆ ಇದ್ದರೂ 20ನೇ ಸ್ಥಾನದಿಂದ ಏಕಾಏಕಿ 10ನೇ ಸ್ಥಾನಕ್ಕೆ ಏರಿತ್ತು. ಸತತ ಮೂರು ವರ್ಷ 20ನೇ ಸ್ಥಾನದಲ್ಲಿದ್ದ ಜಿಲ್ಲೆಯು 10ನೇ ಸ್ಥಾನಕ್ಕೇರಿದ ಮರು ವರ್ಷವೇ ಮತ್ತೆ 20ರ ಸಮೀಪ, 19ಕ್ಕೆ ಬಂದು ನಿಂತಿತ್ತು. ಈಗ 24 ಮುಟ್ಟಿದೆ.

ಮಾರ್ಚ್‌ ಅಂತ್ಯದಲ್ಲಿ ನಡೆಯಬೇಕಿದ್ದ ಇಂಗ್ಲಿಷ್‌ ವಿಷಯದ ಪರೀಕ್ಷೆಯು ಕೊರೊನಾ ಲಾಕ್‌ಡೌನ್‌ ಪರಿಣಾಮವಾಗಿ ಜೂನ್‌ ಮಧ್ಯಭಾಗದಲ್ಲಿ ನಡೆದಿತ್ತು.

ಫಲಿತಾಂಶದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಆರ್‌.ನಾಗರಾಜ್‌, ‘ಜಿಲ್ಲೆಯಲ್ಲಿ 48 ಉಪನ್ಯಾಸಕರ ಹುದ್ದೆ ಖಾಲಿ ಇದೆ. ಕೆಲವು ಕಾಲೇಜುಗಳಿಗೆ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿತ್ತು. ಬೋಧನೆಯ ಕೊರತೆಯೂ ಫಲಿತಾಂಶ ಕಡಿಮೆಯಾಗಲು ಕಾರಣವಿರಬಹುದು’ ಎಂದು ಅಭಿಪ್ರಾಯಪಟ್ಟರು.

‘ಈ ಬಾರಿ 43 ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು. ಇಂಗ್ಲಿಷ್‌, ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯಗಳ ಕುರಿತು ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ‘ಲಾಕ್‌ಡೌನ್‌ ಪರಿಣಾಮವಾಗಿ ಇಂಗ್ಲಿಷ್‌ ಪರೀಕ್ಷೆ ಮುಂದೂಡಿದ್ದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ನಿರಾಸಕ್ತಿಯೂ ಫಲಿತಾಂಶದ ಮೇಲೆ ಕೊಂಚ ಪರಿಣಾಮ ಬೀರಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು