ಮಂಗಳವಾರ, ಸೆಪ್ಟೆಂಬರ್ 21, 2021
26 °C
ಬೈಂದೂರಿನ ಹೇರಂಜಾಲಿನಲ್ಲಿ ಹಳ್ಳಿ ಬದುಕಿನೊಂದಿಗೆ ಬೆರೆತ ತೆರೆಸಾ

ಮನೆಮಗಳಾದ ಸ್ಪೇನ್ ಯುವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ದಕ್ಷಿಣ ಭಾರತ ಪ್ರವಾಸಕ್ಕೆ ಬಂದು, ಲಾಕ್‌ಡೌನ್ ಕಾರಣದಿಂದ ಹಿಂತಿರುಗಲಾಗದೇ ನಾಲ್ಕು ತಿಂಗಳಿಂದ ಇಲ್ಲಿಗೆ ಸಮೀಪದ ಹೇರಂಜಾಲಿನ ಕೃಷ್ಣ ಪೂಜಾರಿ ಅವರ ಮನೆಯಲ್ಲಿ ತಂಗಿರುವ ಸ್ಪೇನ್‌ನ ತೆರೆಸಾ, ಈಗ ಅವರ ಮನೆಯ ಮಗಳಾಗಿದ್ದಾರೆ. 

ಗೊಬ್ಬರ ಹೊತ್ತು ಗದ್ದೆ, ತೋಟಕ್ಕೆ ಹಾಕುತ್ತಾರೆ. ಪೂಜಾರರ ತಾಯಿ ಚಿಕ್ಕಮ್ಮ ಪೂಜಾರಿ ಅವರಿಂದ ರಂಗೋಲಿ ಹಾಕಲು, ದನದ ಹಾಲು ಕರೆಯಲು, ಮಡಲು ನೇಯಲು ಕಲಿತ್ತಿದ್ದಾರೆ. ಕುಂದಾಪ್ರ ಕನ್ನಡದ ಹಲವು ಪದಗಳನ್ನು ಮಾತನಾಡಲು, ಬರೆಯಲು ಕಲಿತ್ತಿದ್ದಾರೆ.

‘ಮನೆಯಲ್ಲಿ ಮಾಡುವ ಕೊಟ್ಟೆಕಡುಬು, ಇಡ್ಲಿ, ದೋಸೆ, ಚಿಕ್ಕನ್–ಮೀನು ಸಾರು, ತರಕಾರಿ ಸಾಂಬಾರು ನನಗೆ ಇಷ್ಟವಾಗಿವೆ’ ಎಂದು ಹೇಳಿ ಬಾಯಿ ಚಪ್ಪರಿಸುತ್ತಾರೆ.

ಹೊಸಬರನ್ನು ಕಂಡೊಡನೆ ನಗುವ ತೆರೆಸಾ, ‘ಹ್ವಾಯ್ ಹೇಂಗಿದ್ರಿ’ ಎಂದು ಕುಂದಾಪ್ರ ಕನ್ನಡದಲ್ಲೇ ಮಾತಿಗೆ ಪ್ರಯತ್ನಿಸುತ್ತಾರೆ. ಈ ಭಾಷೆ ಹೇಗಿದೆ? ಎಂದು ಪ್ರಶ್ನಿಸಿದರೆ ‘ಕುಂದಾಪ್ರ ಭಾಸಿ ಚೆಂದ್ ಗೋಂಪಿ’ (ಕುಂದಾಪ್ರ ಭಾಷೆ ಅತ್ಯಂತ ಸುಂದರ) ಎಂದು ಸ್ಪೇನಿಶ್ ಧಾಟಿಯಲ್ಲೇ ಉತ್ತರಿಸುತ್ತಾರೆ.

‘ನಮ್ಮದು ದೇಶದ ಗಡಿಗಳನ್ನು ಮೀರಿದ ಮಾನವೀಯ ಸಂಬಂಧ. ಸ್ವದೇಶಕ್ಕೆ ಮರಳಲಾಗದೇ ತೊಂದರೆಗೆ ಸಿಲುಕಿರುವ ಅವರು  ನಮ್ಮಲ್ಲಿಗೆ ಬಂದಿದ್ದಾರೆ. ಅಲ್ಪಸ್ವಲ್ಪ ಕನ್ನಡ ಕಲಿತ್ತಿದ್ದರಿಂದ, ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ನಾಲ್ಕು ತಿಂಗಳಿನಿಂದ ನಮ್ಮೂರ, ನಮ್ಮ ಮನೆಯ ಹುಡುಗಿ ಆಗಿದ್ದಾರೆ’ ಎಂದು ಸದ್ಯ ಲಾಕ್‌ಡೌನ್ ಕಾರಣ ಮನೆಯಲ್ಲೇ ಇರುವ ಕೃಷ್ಣ ಪೂಜಾರಿ ಹೇಳಿದರು.

‘ಸ್ಪೇನ್‌ಗೆ ಯಾವಾಗ ಹಿಂತಿರುಗುತ್ತೀರಿ?’ ಎಂದು ತೆರೆಸಾ ಅವರನ್ನು ಪ್ರಶ್ನಿಸಿದರೆ, ‘ಹೋಗಬೇಕು; ಆದರೆ ಹೇರಂಜಾಲು ಹಿಡಿಸಿದೆ. ಬಿಟ್ಟು ಹೋಗಲು ಬೇಸರವಾಗುತ್ತದೆ’ ಎಂದು ದೊಡ್ಡದಾಗಿ ನಗುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು