ಸೋಮವಾರ, ಜೂನ್ 27, 2022
26 °C
ರಜೆಯ ಬಳಿಕ ಜುಲೈ 1ರಿಂದ ಸುಪ್ರೀಂಕೋರ್ಟ್ ಕಲಾಪಗಳು ಪುನರಾರಂಭ

ಅಯೋಧ್ಯೆ, ರಫೇಲ್ ಪ್ರಕರಣ ವಿಚಾರಣೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆರು ವಾರಗಳ ರಜೆಯ ಬಳಿಕ ಜುಲೈ 1ರಿಂದ ಸುಪ್ರೀಂ ಕೋರ್ಟ್ ಕಲಾಪಗಳು ಪುನರಾರಂಭವಾಗಲಿದ್ದು, ಸೂಕ್ಷ್ಮ ಎನಿಸಿರುವ ಅಯೋಧ್ಯೆ ವಿವಾದ, ರಫೇಲ್ ಒಪ್ಪಂದ ಪ್ರಕರಣಗಳನ್ನು ನ್ಯಾಯಪೀಠ ವಿಚಾರಣೆಗೆ ಎತ್ತಿಕೊಳ್ಳಲಿದೆ. 

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ಎಲ್ಲ 31 ನ್ಯಾಯಮೂರ್ತಿಗಳೊಂದಿಗೆ ಸುಪ್ರೀಂ ಕೋರ್ಟ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

ರಫೇಲ್ ಯುದ್ಧವಿಮಾನ ಖರೀದಿಯನ್ನು ಪ್ರಶ್ನಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ 2018ರ ಡಿಸೆಂಬರ್ 14ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ. 

‘ಪ್ರಧಾನಿ ಮೋದಿ ಕಳ್ಳ ಎಂಬುದನ್ನು ಸುಪ್ರೀಂ ಕೋರ್ಟ್ ಸಹ ಹೇಳಿದೆ’ ಎಂದು ಕೋರ್ಟ್‌ ಆದೇಶವನ್ನು ತಪ್ಪಾಗಿ ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದನ್ನು ಕುರಿತ ಪ್ರಕರಣವೂ ವಿಚಾರಣೆಗೆ ಬರಲಿದೆ. ಈ ಬಗ್ಗೆ ಬಿಜೆಪಿಯ ಸಂಸದೆ ಮೀನಾಕ್ಷಿ ಲೇಖಿ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಕ್ಷಮೆ ಕೋರಿರುವ ರಾಹುಲ್, ಪ್ರಕರಣ ಮುಕ್ತಾಯಗೊಳಿಸಲು ಮನವಿ ಮಾಡಿದ್ದಾರೆ. 

ರಾಮಜನ್ಮಭೂಮಿ ವಿವಾದದ ಸೌಹಾರ್ದಯುತ ಪರಿಹಾರಕ್ಕಾಗಿ ನೇಮಿಸಲಾಗಿರುವ ಮಾಜಿ ನ್ಯಾಯಮೂರ್ತಿ ಎಫ್‌ಎಂಐ ಖಲೀಫುಲ್ಲಾ ನೇತೃತ್ವದ ಮಧ್ಯಸ್ಥಿಕೆ ಸಮಿತಿಯ ವರದಿ ಅಂತಿಮಗೊಳ್ಳಬೇಕಿದೆ. ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ ಪಂಚು ಅವರನ್ನೊಳಗೊಂಡ ಸಮಿತಿಗೆ ಐವರು ನ್ಯಾಯಮೂರ್ತಿಗಳ ಪೀಠ ಆಗಸ್ಟ್ 15ರವರೆಗೆ ಸಮಯಾವಕಾಶ ನೀಡಿದೆ. ಸೂಕ್ತ ಪರಿಹಾರ ನೀಡುವ ಆಶಾಭಾವದಲ್ಲಿ ಸಮಿತಿ ಇದೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ಕಲಂ ಹಾಗೂ 35ಎ ಕಲಂಗಳ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯೂ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು