ಶನಿವಾರ, ಮಾರ್ಚ್ 6, 2021
20 °C

ಬಿಜೆಪಿಯ 6 ವಾಗ್ದಾನಗಳು ಈ ಬಜೆಟ್‌ನಲ್ಲಿ ಜಾರಿಯಾಗುವವೇ!?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಶುಕ್ರವಾರ ತಮ್ಮ ಚೊಚ್ಚಲ ಬಜೆಟ್‌ ಮಂಡಿಸಲಿದ್ದಾರೆ. ಬಿಜೆಪಿ ಮತ್ತೆ ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿದಿರುವುದರಿಂದ  ಈ ಬಾರಿಯ ಬಜೆಟ್‌ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಪ್ರಮುಖ 6 ವಾಗ್ದಾನಗಳನ್ನು ಈಡೇರಿಸುವ ಸಾಧ್ಯತೆಗಳಿವೆ. ಇನ್ನು ಕೆಲವೇ ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನೂ ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಬಾರಿ ಜನಪರ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೇಳಿದ್ದ ಪ್ರಮುಖ 6 ವಾಗ್ದಾನಗಳು ಯಾವುವು ಎಂಬದರ ಒಂದು ಕಿರು ನೋಟ ಇಲ್ಲಿದೆ. 

1) ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ

ರೈತರಿಗೆ ₹ 1 ಲಕ್ಷದವರೆಗೂ ಬಡ್ಡಿ ರಹಿತ ಕೃಷಿ ಸಾಲ ನೀಡುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಬಡ್ಡಿ ರಹಿತ ಕೃಷಿ ಸಾಲ ನೀಡುವ ಯೋಜನೆ ಇದಾಗಿದೆ. ಈ ಸಾಲವನ್ನು ರೈತರು 5 ವರ್ಷಗಳಲ್ಲಿ ಮರುಪಾವತಿ ಮಾಡಬೇಕು. ಈ ಸಲದ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ. ದೇಶದಾದ್ಯಂತ 70 ಲಕ್ಷಕ್ಕೂ ಹೆಚ್ಚು ರೈತರು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ.

2) ಅಡಮಾನರಹಿತ ಸಾಲ

ನಿರುದ್ಯೋಗಿ ಯುವಕರಿಗೆ ಅಥವಾ ನವೋದ್ಯಮಿಗಳಿಗೆ ಅಡಮಾನರಹಿತ ಸಾಲ ನೀಡುವುದಾಗಿ ಬಿಜೆಪಿ ಹೇಳಿತ್ತು. ಮುದ್ರಾ ಯೋಜನೆಯ ಅಡಿಯಲ್ಲಿ ಯುವಕರಿಗೆ ವ್ಯಾಪಾರ ಹಾಗೂ ಉದ್ಯಮ ಸ್ಥಾಪನೆಗೆ  ₹ 50 ಲಕ್ಷಗಳವರೆಗೂ ಸಾಲ ನೀಡುವ ಯೋಜನೆ ಇದಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈ ಯೋಜನೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ. 

3) ಹತ್ತು ಸಾವಿರ ರೈತ ಸಹಕಾರ ಸಂಘಗಳ ಸ್ಥಾಪನೆ

ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸಲು ಸಹಕಾರಿಯಾಗುವಂತೆ ರೈತ ಸಹಕಾರ ಸಂಘಗಳನ್ನು ರಚಿಸುವ ವಾಗ್ದಾನವನ್ನು ಕಳೆದ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮಾಡಿತ್ತು.  ರೈತ ಸಹಕಾರ ಸಂಘಗಳ ಮೂಲಕ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ ಎಂಬ ಲೆಕ್ಕಚಾರದ ಅಡಿಯಲ್ಲಿ ಈ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಈ ಯೋಜನೆ ಈ ಬಾರಿಯ ಬಜೆಟ್‌ನಲ್ಲಿ ಕಾರ್ಯರೂಪಕ್ಕೆ ಬರಲಿದೆ. 

4) ಪ್ರತಿ ಕುಟುಂಬಕ್ಕೆ ವಾರ್ಷಿಕ 12 ಕೆ.ಜಿ. ಸಕ್ಕರೆ ವಿತರಣೆ

ಸಾರ್ವಜನಿಕ ಪಡಿತರ ವಿತರಣೆ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೂ ವಾರ್ಷಿಕ 13 ಕೆ.ಜಿ ಸಕ್ಕರೆಯನ್ನು ನೀಡುವುದಾಗಿ ಬಿಜೆಪಿ ಪ್ರಕಟಿಸಿತ್ತು. ಈ ಯೋಜನೆ ಜಾರಿಯಿಂದ 1.80 ಕೋಟಿ ಕುಟುಂಬಗಳಿಗೆ ಸಕ್ಕರೆ ಸಿಗಲಿದೆ. ಇದಕ್ಕಾಗಿ ವಾರ್ಷಿಕ ₹ 78 ಸಾವಿರ ಕೋಟಿ ರೂಪಾಯಿ ತೆಗೆದಿರಿಸುವುದಾಗಿ ಬಿಜೆಪಿ ಹೇಳಿದೆ.

 5) ಆಯುಷ್ಮಾನ್‌ ಭಾರತ ಯೋಜನೆ ವಿಸ್ತರಣೆ

ಆಯುಷ್ಮಾನ್‌ ಭಾರತ ಯೋಜನೆಯನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ಯತೆಯರಿಗೂ ವಿಸ್ತರಿಸುವುದಾಗಿ ಬಿಜೆಪಿ ಹೇಳಿತ್ತು. ಈ ಬಾರಿಯ ಬಿಜೆಟ್‌ನಲ್ಲಿ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ. 

6) ವರ್ತಕರಿಗೆ ಅಪಘಾತ ವಿಮೆ

ಜಿಎಸ್‌ಟಿ ನೋಂದಾಯಿತ ವರ್ತಕರಿಗೆ ₹ 10 ಲಕ್ಷ ರೂಪಾಯಿಗಳ ಅಪಘಾತ ವಿಮೆ ಮಾಡಿಸುವ ಭರವಸೆಯನ್ನು ಈ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿತ್ತು. ಈ ಯೋಜನೆ ಕೂಡ ಜಾರಿಯಾಗಲಿದೆ ಎನ್ನಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು