ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಿಂದ ರಕ್ತದಾನ ಶಿಬಿರಗಳು ಸ್ಥಗಿತ, ಶೇಖರಣೆಗೆ ಅಡ್ಡಿ: ತೀವ್ರ ಕೊರತೆ

ಮನೆಯಿಂದ ಹೊರಬರದ ದಾನಿಗಳು
Last Updated 8 ಏಪ್ರಿಲ್ 2020, 8:03 IST
ಅಕ್ಷರ ಗಾತ್ರ

ಬೆಂಗಳೂರು: ಕೊರಾನಾ ಸೋಂಕು ಹರಡುವಿಕೆ ತಡೆಯಲು ಘೋಷಿಸಿದ ಲಾಕ್‌ಡೌನ್‌ ಪರಿಣಾಮ ರಕ್ತದಾನ ಶಿಬಿರಗಳು ಸಂಪೂರ್ಣ ಸ್ಥಗಿತಗೊಂಡಿವೆ. ರಕ್ತದಾನಿಗಳು ಮನೆಯಿಂದ ಹೊರಬಾರದೇ ಇರುವುದರಿಂದ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತ ಶೇಖರಣೆಗೆ ಅಡ್ಡಿಯಾಗಿದೆ. ಹೀಗಾಗಿ, ರಾಜ್ಯದಲ್ಲಿ ರಕ್ತದ ತೀವ್ರ ಕೊರತೆ ಎದುರಾಗಿದೆ.

ರಾಜ್ಯದಲ್ಲಿ 43 ಸರ್ಕಾರಿ ಬ್ಲಡ್‌ಬ್ಯಾಂಕ್‌ಗಳು ಸೇರಿ ಒಟ್ಟು 226 ರಕ್ತ ನಿಧಿ ಕೇಂದ್ರಗಳಿವೆ. ತಲಸ್ಸೇಮಿಯಾ, ಡಯಾಲಿಸಿಸ್‌, ಹೆರಿಗೆ, ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದೆ. ಈ ಉದ್ದೇಶಕ್ಕೆ ರಕ್ತ ಶೇಖರಣೆ ಮತ್ತು ಸ್ವಯಂ ಪ್ರೇರಿತ ರಕ್ತ ದಾನ ಶಿಬಿರಗಳನ್ನು ಈ ಕೇಂದ್ರಗಳು ಆಯೋಜಿಸುತ್ತವೆ. ಆದರೆ, ಈ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.

ರಾಜ್ಯ ಸರ್ಕಾರಕ್ಕೆ ಮಾರ್ಚ್‌ 25ರಂದು ಪತ್ರ ಬರೆದಿರುವ ರಾಷ್ಟ್ರೀಯ ರಕ್ತಪೂರಣ ಪರಿಷತ್‌ (ಎನ್‌ಬಿಟಿಸಿ), ರಕ್ತದಾನದಿಂದ ಕೊರೊನಾ ವೈರಸ್‌ ಹರಡಿದ ಯಾವುದೇ ಉದಾಹರಣೆ ಇಲ್ಲ. ಆದರೂ ಕೆಲವು ಮುನ್ನೆಚ್ಚರಿಕೆ ವಹಿಸಿ ರಕ್ತದಾನ ಶಿಬಿರ ಆಯೋಜಿಸುವಂತೆ ಸೂಚಿಸಿದೆ. ಈ ಸೂಚನೆಯನ್ನು ಉಲ್ಲೇಖಿಸಿ, ಪೊಲೀಸ್‌ ಇಲಾಖೆಗೆ ಪತ್ರ ಬರೆದಿರುವ ರಾಜ್ಯ ರಕ್ತ ಪೂರಣ ಪರಿಷತ್‌ನ (ಕೆಎಸ್‌ಬಿಟಿಸಿ) ನಿರ್ದೇಶಕ ಎಂ.ಕೆ. ಶ್ರೀರಂಗಯ್ಯ, ರಕ್ತ ನಿಧಿ ಕೇಂದ್ರಗಳಿಗೆಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಭೇಟಿ ನೀಡುವ ರಕ್ತದಾನಿಗಳಿಗೆ ಅನುಮತಿ ನೀಡುವಂತೆ ಕೋರಿದ್ದಾರೆ.

‘ಆರು ತಿಂಗಳ ಮಗುವಿನಿಂದ 45 ವರ್ಷ ವಯೋಮಾನ ವರೆಗಿನ 425ಕ್ಕೂ ಹೆಚ್ಚು ತಲಸ್ಸೀಮಿಯಾ ಪೀಡಿತರು ಬೆಂಗಳೂರು ಮತ್ತು ಹುಬಳ್ಳಿಯಲ್ಲಿರುವ ನಮ್ಮ ರಕ್ತನಿಧಿ ಕೇಂದ್ರಗಳನ್ನು ಅವಲಂಬಿಸಿದ್ದಾರೆ. ಅವರಿಗೆ ನಿಯಮಿವಾಗಿ ರಕ್ತಪೂರಣ ಮಾಡಲು ದಿನ ನಿತ್ಯ 30ರಿಂದ 40 ಯುನಿಟ್ ರಕ್ತ ಸಂಗ್ರಹಿಸಲೇಬೇಕಿದೆ. ಅಲ್ಲದೆ, ಪ್ರತಿವರ್ಷ ಶೇ 40ಕ್ಕೂ ಹೆಚ್ಚು ರಕ್ತವನ್ನು ನಮ್ಮ ಕೇಂದ್ರಗಳಿಂದ ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ’ ಎಂದು ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವ್ಯವಸ್ಥಾಪಕ ಕೆ.ಎಸ್‌. ನಾರಾಯಣ ತಿಳಿಸಿದರು.

‘ರಕ್ತದಾನ ಶಿಬಿರಗಳ ಮೂಲಕ ಪ್ರತಿ ತಿಂಗಳು 2,500ರಿಂದ 3,000 ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲಾಗುತ್ತದೆ. ನಿರಂತರವಾಗಿ ರಕ್ತ ಪೂರಣ ಮಾಡಿಸಿಕೊಳ್ಳಬೇಕಾದ ತಲಸ್ಸೀಮಿಯಾ ಪೀಡಿತರು, ಡಯಾಲಿಸಿಸ್‌ಗೆ ಒಳಪಟ್ಟವರು, ಹೆರಿಗೆ ಸಂದರ್ಭದಲ್ಲಿ ರಕ್ತ ಕೊರತೆ ಉಂಟಾಗಿ ಸಾವು‍ಬದುಕಿನ ಹೋರಾಟ ನಡೆಸುವವರಿಗೆ ರಕ್ತ ಪೂರೈಸಬೇಕಾಗಿದೆ. ಸಾಮಾನ್ಯವಾಗಿ ಏಪ್ರಿಲ್‌. ಮೇ ತಿಂಗಳಲ್ಲಿ ರಕ್ತ ಶೇಖರಣೆ ಕಡಮೆ ಇರುತ್ತದೆ.ಆದರೆ, ಇದೀಗ ಲಾಕ್‌ಡೌನ್‌ ಘೋಷಿಸಿದ್ದರಿಂದ ರಕ್ತದಾನಶಿಬಿರಗಳು ನಡೆಯುತ್ತಿಲ್ಲ. ರಕ್ತದಾನ ಮಾಡಲು ಕೂಡಾ ಯಾರೂ ಬರುತ್ತಿಲ್ಲ. ಹೀಗಾಗಿ ಗಂಭೀರ ಸಮಸ್ಯೆ ಎದುರಾಗಿದೆ’ ಎಂದು ವಿವರಿಸಿದರು.

ರೆಡ್ ಕ್ರಾಸ್ ಸಂಸ್ಥೆಯಲ್ಲಿ ರಕ್ತದ ಅಭಾವ: ಕರ್ನಾಟಕದ ರೆಡ್ ಕ್ರಾಸ್ ಸಂಸ್ಥೆ ಮಾಸಿಕ 3,500 ಯುನಿಟ್‌ಗೂ ಹೆಚ್ಚು ರಕ್ತ ಸಂಗ್ರಹಿಸುತ್ತದೆ. ಸದ್ಯ ಇಲ್ಲಿನ ರಕ್ತ ನಿಧಿಯಲ್ಲಿ ಕೇವಲ 50 ಯುನಿಟ್‌ ರಕ್ತ ಇದೆ. ರಕ್ತದ ಅಭಾವ ಹೆಚ್ಚಿದ್ದು, ಸಂಸ್ಥೆ ಪ್ರತಿದಿನ 100 ಯುನಿಟ್ ರಕ್ತದ ಕೊರತೆ ಎದುರಿಸುತ್ತಿದೆ. ಹೀಗಾಗಿ ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ದಾನಿಗಳು ಬರಬೇಕು ಎಂದು ಸಂಸ್ಥೆಯ ಅಧ್ಯಕ್ಷ ನಾಗಣ್ಣ ಮನವಿ ಮಾಡಿದ್ದಾರೆ.

'ಲಾಕ್ ಡೌನ್ ಹಿನ್ನೆಲೆಯಲ್ಲಿ ರಕ್ತದಾನಕ್ಕೆ ಬರಲು ಪಾಸ್ ವಿತರಿಸಲಾಗುವುದು. ಯಾರಾದರು 20 ಜನರಿಗಿಂತ ಹೆಚ್ಚು ಜನರನ್ನು ಸೇರಿಸಿ ರಕ್ತದಾನ ಶಿಬಿರ ಆಯೋಜಿಸಲು ಬಯಸುವುದಾದರೆ ಅದಕ್ಕೂ ನೆರವು ನೀಡಲಾಗುವುದು. ಮಾಹಿತಿಗೆ (9035068435/ 9902859859) ಸಂಪರ್ಕಿಸಬಹುದು' ಸಂಸ್ಥೆಯ ಪ್ರಧಾನ ಕಾರ್ಯದರ್ಶಿಪ್ರಶಾಂತ ಚಂದ್ರಶೇಖರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT