ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ಸಂಶೋಧನೆ: ಖಾಸಗಿ ಕಂಪನಿಗಳ ಭಾಗವಹಿಸುವಿಕೆಗೆ ಕೇಂದ್ರ ಅನುಮೋದನೆ

Last Updated 25 ಜೂನ್ 2020, 11:01 IST
ಅಕ್ಷರ ಗಾತ್ರ

ನವದೆಹಲಿ: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಚಟುವಟಿಕೆಗಳಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ‘ಇದರಿಂದ ಈ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಅನುಕೂಲವಾಗಲಿದೆ. ಭಾರತದ ಕಂಪನಿಗಳಿಗೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆಯಲಿದೆ. ಭಾರಿ ಪ್ರಮಾಣದಲ್ಲಿ ಉದ್ಯೋಗಗಳೂ ಸೃಷ್ಟಿಯಾಗಲಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮೂಲಸೌಕರ್ಯಗಳು ಖಾಸಗಿ ಕಂಪನಿಗಳಿಗೆ ನ್ಯಾಯಯುತವಾಗಿ ಲಭ್ಯವಿರಬೇಕು. ಇದನ್ನು ನಿರ್ವಹಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅಧಿಕೃತೀಕರಣ ಕೇಂದ್ರವನ್ನು (IN-SPACe) ಸ್ಥಾಪಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

‘ಬಾಹ್ಯಾಕಾಶ ಕ್ಷೇತ್ರದ ಎಲ್ಲಾ ಚಟುವಟಿಕೆಗಳು ಕೇಂದ್ರ ಸರ್ಕಾರದ ನಿಗಾವಣೆಯಲ್ಲೇ ಇರಲಿದೆ. ಕ್ಷೇತ್ರದಲ್ಲಿ ಖಾಸಗಿಯವರ ಭಾಗಿಯಾಗುವಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ನೀತಿ ಮತ್ತು ನಿಯಮಗಳನ್ನು ರೂಪಿಸಲಿದೆ.ಗ್ರಹಗಳ ಸಂಶೋಧನಾ ಯಾನಗಳಲ್ಲೂ ಖಾಸಗಿ ಕಂಪನಿಗಳು ಭಾಗಿಯಾಗಲು ಅವಕಾಶ ನೀಡಲಾಗುತ್ತದೆ. ಇಂತಹ ಚಟುವಟಕೆಗಳಲ್ಲಿ ಭಾಗಿಯಾಗುವ ಕಂಪನಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ವಿಧಾನವನ್ನು ರೂಪಿಸಲಾಗುತ್ತದೆ’ಎಂದು ಸಚಿವರು ವಿವರಿಸಿದ್ದಾರೆ.

‘ದೇಶದಲ್ಲಿ ಈಗ ಬಾಹ್ಯಾಕಾಶ ಚಟುವಟಿಕೆಗಳು, ಪೂರೈಕೆಗೆ ಅನುಗುಣವಾಗಿ ನಡೆಯುತ್ತಿವೆ. ಇದನ್ನು ಬೇಡಿಕೆಗೆ ಅನುಗುಣವಾಗಿ ನಡೆಯುವಂತೆ ಬದಲಿಸಬೇಕಿದೆ. ಇದಕ್ಕಾಗಿ ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್‌)’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ. ನಮ್ಮ ಬಾಹ್ಯಾಕಾಶ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳಲು ಈ ಸಂಸ್ಥೆ ನೆರವಾಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೈನುಗಾರಿಕೆ ಉದ್ಯಮಕ್ಕೆ ₹ 15,000 ಕೋಟಿ

ಖಾಸಗಿ ಕಂಪನಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳುಹೈನುಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನು ಉತ್ತೇಜಿಸುವ ಸಲುವಾಗಿ ₹ 15,000 ಕೋಟಿ ಮೊತ್ತದ ನಿಧಿಯನ್ನು ಸ್ಥಾಪಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

‘ಹೈನುಗಾರಿಕೆ, ಕೋಳಿ ಸಾಕಾಣಿಕೆ, ಪಶು ಆಹಾರ ಮತ್ತು ಮಾಂಸ ಸಂಸ್ಕರಣೆ ಉದ್ಯಮವನ್ನು ಆರಂಭಿಸಲು ಉತ್ತೇಜನ ನೀಡುವ ಸಲುವಾಗಿ ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಈ ನಿಧಿಯ ಮೂಲಕ ಶೇ 3–4ರಷ್ಟು ಸಬ್ಸಿಡಿ ದರದಲ್ಲಿ ಸಾಲ ನೀಡಲಾಗುತ್ತದೆ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

‘ಹೈನುಗಾರಿಕೆ, ಕೋಳಿ ಸಾಕಾಣಿಕೆ, ಪಶುಆಹಾರ ತಯಾರಿಕೆ ಮತ್ತು ಸಂಸ್ಕರಣ ಘಟಕ ಮತ್ತು ಮಾಂಸ ಸಂಸ್ಕರಣ ಘಟಕ ಆರಂಭಿಸುವ ರೈತ ಸಂಘಟನೆಗಳು, ಎಂಎಸ್‌ಎಂಇಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ. ಇಂತಹ ಘಟಕ ಆರಂಭಕ್ಕೆ ಬೇಕಿರುವ ಬಂಡವಾಳದಲ್ಲಿ ಶೇ 10ರಷ್ಟನ್ನು ಸಂಘಟನೆಗಳು/ಉದ್ಯಮಗಳು/ಕಾಸಗಿ ವ್ಯಕ್ತಿಗಳು ಹೂಡಿಕೆ ಮಾಡಬೇಕಾಗುತ್ತದೆ. ಉಳಿಕೆ ಶೇ 90ರಷ್ಟು ಮೊತ್ತವನ್ನು ಷೆಡ್ಯೂಲ್‌ ಬ್ಯಾಂಕ್‌ಗಳ ಮೂಲಕ ಸಾಲ ನೀಡಲಾಗುತ್ತದೆ. ಈ ಸಾಲವನ್ನು ಮರುಪಾವತಿ ಮಾಡಲು ಆರು ವರ್ಷಗಳವರೆಗೆ ಅವಕಾಶ ನೀಡಲಾಗುತ್ತದೆ. ಸಾಲದ ಕಂತು ಪಾವತಿ ಮುಂದೂಡಿಕೆ ಅವಧಿ ಎರಡು ವರ್ಷಗಳವರೆಗೆ ಇರಲಿದೆ’ ಎಂದು ಅವರು ವಿವರಿಸಿದ್ದಾರೆ.

ಸಂಪುಟ ಸಭೆಯ ಇತರ ತೀರ್ಮಾನಗಳು

* ವಸೂಲಾಗದ ಸಾಲದ ವ್ಯಾಪ್ತಿಯಲ್ಲಿ ಇರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಮತ್ತು ತಯಾರಿಕೆ ಆರಂಭಿಸಲು ಅಗತ್ಯವಿರುವ ಸಾಲವನ್ನು ನೀಡಲು ₹ 20,000 ಕೋಟಿ ಮೊತ್ತದ ಸಾಲ ಖಾತರಿ ಯೋಜನೆಗೆ ಅನುಮೋದನೆ ದೊರೆತಿದೆ. ಸಾಲಮರುಪಾವತಿಗೆ 10 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ.ಸಾಲದ ಕಂತು ಪಾವತಿ ಮುಂದೂಡಿಕೆ ಅವಧಿ ಏಳು ವರ್ಷಗಳವರೆಗೆ ಇರಲಿದೆ

*ಉತ್ತರ ಪ್ರದೇಶದ ಖುಷಿನಗರ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾನ್ಯತೆ

* ಮುದ್ರಾ ಯೋಜನೆಯಲ್ಲಿ ‘ಶಿಶು’ ವಿಭಾಗದ ಅಡಿ ಪಡೆಯಲಾದ ಸಾಲಕ್ಕೆ ಶೇ 2ರಷ್ಟು ಬಡ್ಡಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಒದಗಿಸಲಿದೆ

* ಇತರೆ ಉಂದುಳಿದ ವರ್ಷಗಗಳ ಆಯೋಗದ (ಒಬಿಸಿ ಆಯೋಗ) ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲಾಗಿದೆ

***

ನೂತನ ನೀತಿಗಳು ಮತ್ತು ನಿಯಮಗಳನ್ನು ರೂಪಿಸುವ ಮೂಲಕ, ಖಾಸಗಿ ಕಂಪನಿಗಳು ಈ ಕ್ಷೇತ್ರದಲ್ಲಿ ಭಾಗಿಯಾಗುವಂತೆ ಮಾಡಲು ಕೇಂದ್ರ ಸರ್ಕಾರವು ಉತ್ತೇಜನ ನೀಡಲಿದೆ

ಜಿತೇಂದ್ರ ಸಿಂಗ್, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT