ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಆರೋಗ್ಯ ‘ಸೇತು’ವಿನಲ್ಲಿ ಬಿರುಕು: ಬಳಕೆಯಲ್ಲಿ ತೊಡಕು

Last Updated 12 ಜೂನ್ 2020, 1:53 IST
ಅಕ್ಷರ ಗಾತ್ರ

ಕೋವಿಡ್ ತಗುಲದೇ ಇರುವವರು, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಾರದಂತೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರೋಗ್ಯ ಸೇತು ಆ್ಯಪ್‌ ಬಿಡುಗಡೆ ಮಾಡಿತು. ಬಿಡುಗಡೆಯಾದ ಮೂರೇ ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ದೇಶದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೌನ್‌ಲೋಡ್ ಆದ ಆ್ಯಪ್ ಇದು. ಆದರೆ, ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸುವುದರ ಹಿಂದಿನ ಮೂಲ ಉದ್ದೇಶವೇ ಈಡೇರಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ದೇಶದಲ್ಲಿ 55 ಕೋಟಿಯಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು, ಸುಮಾರು 60 ಕೋಟಿಯಷ್ಟು ಫೀಚರ್ ಫೋನ್ ಬಳಕೆದಾರರು ಇದ್ದಾರೆ. ಆರೋಗ್ಯ ಸೇತು ಆ್ಯಪ್‌ನ ಉದ್ದೇಶ ಈಡೇರಬೇಕು ಅಂದರೆ, ದೇಶದ ಜನಸಂಖ್ಯೆಯ ಶೇ 50ರಷ್ಟು ಜನರು ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಡೌನ್‌ಲೋಡ್ ಮಾಡಿಕೊಂಡರೆ ಸಾಲದು. ತಮ್ಮ ಹೆಸರನ್ನು ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. 130 ಕೋಟಿಗೂ ಹೆಚ್ಚು ಜನರು ಇರುವ ಭಾರತದಲ್ಲಿ ಸ್ಮಾರ್ಟ್‌ಫೋನ್ ಇರುವವರ ಪ್ರಮಾಣ ಶೇ 40ರಷ್ಟು ಮಾತ್ರ. ಇಷ್ಟೂ ಜನರು ಈ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರೆ, ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದರ ಹಿಂದಿನ ಉದ್ದೇಶ ಅರ್ಧದಷ್ಟು ಈಡೇರಿದಂತಾಗುತ್ತಿತ್ತು. ಆದರೆ, ಈವರೆಗೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಆ್ಯಪ್‌ ಡೌನ್‌ಲೋಡ್‌ ಆಗಿಲ್ಲ.

ಬಿಡುಗಡೆಯಾದಾಗಿನಿಂದ ಈವರೆಗೆ 14 ಕೋಟಿಯಷ್ಟು ಜನರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲಿ ಆ್ಯಂಡ್ರಾಯ್ಡ್‌, ಆ್ಯಪಲ್ ಐಓಎಸ್ ಮತ್ತು ರಿಲಯನ್ಸ್ ಜಿಯೊ ಫೀಚರ್‌ ಫೋನ್‌ಗಳಲ್ಲಿ ಆಗಿರುವ ಡೌನ್‌ಲೋಡ್‌ಗಳು ಸೇರಿವೆ. ದೇಶದ ಒಟ್ಟು ಜನಸಂಖ್ಯೆಯ ಶೇ 10ರಷ್ಟು ಜನರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್‌ ಬಳಸುವವರಲ್ಲಿ ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡವರ ಪ್ರಮಾಣ ಶೇ 20ಕ್ಕಿಂತಲೂ ಕಡಿಮೆ ಇದೆ.

ದೇಶದಲ್ಲಿ ಬಳಕೆಯಲ್ಲಿರುವ ಎಲ್ಲ ಫೀಚರ್‌ ಫೋನ್‌ಗಳಲ್ಲೂ ಈ ಆ್ಯಪ್‌ ಬಳಸುವಂತಾದರೆ, ಹೆಚ್ಚು ಜನರು ಇದನ್ನು ಬಳಸುವ ಸಾಧ್ಯತೆ ಇತ್ತು. ತಡವಾಗಿಯಾದರೂ ಸರ್ಕಾರವು, ಫೀಚರ್‌ ಫೋನ್‌ಗೆಂದು ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿತು. ಸರ್ಕಾರದ್ದೇ ಅಂಕಿಅಂಶಗಳ ಪ್ರಕಾರ 30 ಲಕ್ಷ ಫೀಚರ್‌ ಫೋನ್‌ಗಳಲ್ಲಿ ಮಾತ್ರ ಈ ಆ್ಯಪ್‌ ಡೌನ್‌ಲೋಡ್ ಆಗಿದೆ.

ಇಷ್ಟೆಲ್ಲಾ ಕ್ರಮ ತೆಗೆದುಕೊಂಡಿದ್ದರೂ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಏರಿಕೆ ಆಗಿಲ್ಲ, ಸರ್ಕಾರದ ಗುರಿ ತಲುಪಲು ಆಗಿಲ್ಲ.

ಬ್ಯಾಟರಿ ಬೇಗ ಖಾಲಿ

ಆರೋಗ್ಯ ಸೇತು ಆ್ಯಪ್‌ ಅನ್ನು ಬಳಸುವುದರಲ್ಲಿ ಹಲವು ತೊಡಕುಗಳಿವೆ. ಈ ಆ್ಯಪ್‌ ಫೋನ್‌ನ ಬ್ಲೂಟೂತ್ ಮತ್ತು ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ಕೆಲಸ ಮಾಡುತ್ತದೆ. ಆ್ಯಪ್‌ ಅನ್ನು ಸಂಪೂರ್ಣವಾಗಿ ಬಳಸುವುದಾದರೆ, ಬ್ಲೂಟೂತ್ ಮತ್ತು ಜಿಪಿಎಸ್‌ ಅನ್ನು ಸದಾಕಾಲ ಚಾಲ್ತಿಯಲ್ಲಿ ಇಡಬೇಕು. ‘ಬ್ಲೂಟೂತ್ ಮತ್ತು ಲೊಕೇಶನ್ ಅನ್ನು ಆನ್ ಮಾಡಿ ಇಟ್ಟರೆ, ಫೋನ್‌ನ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ದಿನಕ್ಕೆ ಎರಡು–ಮೂರು ಬಾರಿ ಚಾರ್ಜ್ ಮಾಡಬೇಕಾಗುತ್ತದೆ. ಕೆಲಸದ ಸಮಯದಲ್ಲಿ ಐದಾರು ತಾಸು ಹೊರಗೆ ಇರಬೇಕಾದಂತಹ ಉದ್ಯಮ ನನ್ನದು. ಈ ಆ್ಯಪ್‌ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನ್‌ಇನ್‌ಸ್ಟಾಲ್ ಮಾಡಿದ್ದೇನೆ’ ಎನ್ನುತ್ತಾರೆ ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಉದ್ಯಮ ಹೊಂದಿರುವ ಬಾಲಚಂದ್ರ. ಈ ಆ್ಯಪ್ ಬಳಸಿದವರಲ್ಲಿ ಹಲವರ ಅಭಿಪ್ರಾಯವೂ ಇದೇ ಆಗಿದೆ.

ಕೋವಿಡ್‌ನ ಲಕ್ಷಣಗಳು ಇರುವವರನ್ನು ಈ ಆ್ಯಪ್‌ ಹಳದಿ ಪಟ್ಟಿಯಲ್ಲಿ ಗುರುತಿಸುತ್ತದೆ. ಹಳದಿ ಪಟ್ಟಿಯಲ್ಲಿ ಇರುವವರ ಸಮೀಪ ಇತರರು ಬಂದರೆ, ಅವರ ಆ್ಯಪ್‌ನಲ್ಲಿ ಈ ಬಗ್ಗೆ ಅಲರ್ಟ್ ಬರಬೇಕು. ಆದರೆ, ಹಲವು ಭಾರಿ ಈ ಸ್ವರೂಪದ ಅಲರ್ಟ್‌ ಅನ್ನು ಆರೋಗ್ಯ ಸೇತು ನೀಡುವುದೇ ಇಲ್ಲ ಎಂದು ಹಲವರು ದೂರುತ್ತಾರೆ.

ಆರೋಗ್ಯ ಸೇತು ಆ್ಯಪ್‌ ಹೇಗೆ ಕೆಲಸ ಮಾಡುತ್ತದೆ?

ಆರೋಗ್ಯ ಸೇತು ಆ್ಯಪ್‌ ಬಳಕೆದಾರರ ಹತ್ತಿರದಲ್ಲಿ ಯಾರಾದರೂ ಕೋವಿಡ್‌–19 ಕಾಯಿಲೆ ಪೀಡಿತರು (ಅವರೂ ಆ್ಯಪ್‌ ಬಳಕೆದಾರರೇ ಆಗಿರಬೇಕು) ಇದ್ದಾರೆಯೇ ಎನ್ನುವುದನ್ನು ಮೊಬೈಲ್‌ನ ಬ್ಲೂಟೂತ್‌ ಹಾಗೂ ಲೊಕೇಶನ್‌ ಡೇಟಾ ನೆರವಿನಿಂದ ಶೋಧಿಸುವ ಈ ಆ್ಯಪ್‌, ಬಳಕೆದಾರರಿಗೆ ಮಾಹಿತಿ ನೀಡುತ್ತದೆ. ಆ ಅಂಕಿ ಅಂಶವನ್ನು MyGov ದತ್ತಾಂಶ ಕೇಂದ್ರಕ್ಕೂ ರವಾನಿಸುತ್ತದೆ. ಯಾರಾದರೂ ಆ್ಯಪ್‌ ಬಳಕೆದಾರರು ಕಳೆದ ಎರಡು ವಾರಗಳ ಅವಧಿಯಲ್ಲಿ ಭೇಟಿ ಮಾಡಿದ್ದ ಯಾವುದೇ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾದರೆ ಸಂಭವನೀಯ ಅಪಾಯದ ಆಧಾರದ ಮೇಲೆ ಬಳಕೆದಾರರಿಗೆ ಮಾಹಿತಿ ರವಾನಿಸಲಾಗುತ್ತದೆ.

ಬಳಕೆದಾರರ ಹೆಸರು ಮತ್ತು ಮೊಬೈಲ್‌ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಆದರೆ, ಲಿಂಗ, ಪ್ರವಾಸದ ಇತಿಹಾಸ, ಧೂಮಪಾನದ ಅಭ್ಯಾಸ ಮತ್ತಿತರ ವಿವರಗಳನ್ನು ಬಳಕೆದಾರರಿಂದ ಈ ಆ್ಯಪ್‌ ಕಲೆ ಹಾಕುತ್ತದೆ.

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಕಡ್ಡಾಯವೇ?

ದೇಶದ ಪ್ರತಿಯೊಬ್ಬ ನಿವಾಸಿಯೂ ಈ ಆ್ಯಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು. ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿತ್ತು. ಬಳಿಕ ಆ ಆದೇಶವನ್ನು ಮಾರ್ಪಡಿಸಿ ಖಾಸಗಿ ಸಂಸ್ಥೆಗಳು, ತಮ್ಮ ಉದ್ಯೋಗಿಗಳಿಗೆ ಆ್ಯಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಸೂಚಿಸಲಾಯಿತು. ಕಂಟೈನ್‌ಮೆಂಟ್‌ ವಲಯದಲ್ಲಿರುವವರು ಸಹ ಆ್ಯಪ್‌ ಹೊಂದುವುದು ಕಡ್ಡಾಯ. ಆದರೆ, ‘ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡುವಂತಿಲ್ಲ. ಅದು ಕಾನೂನಿಗೆ ವಿರುದ್ಧ ಕ್ರಮ’ ಎಂದು
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌. ಶ್ರೀಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಆ್ಯಪ್‌ ಕುರಿತ ಮುಖ್ಯ ಆಕ್ಷೇಪವೇನು?

‘ಆರೋಗ್ಯ ಸೇತು’ವು ಲೊಕೇಶನ್‌ ಡೇಟಾವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅಲ್ಲದೆ, ಬ್ಲೂಟೂತ್‌ನ ನಿರಂತರ ಸಂಪರ್ಕವನ್ನು ಬಯಸುತ್ತದೆ. ಇದು ಭದ್ರತೆ ಹಾಗೂ ಖಾಸಗಿತನದ ದೃಷ್ಟಿಯಿಂದ ಅಪಾಯಕಾರಿ. ಬಳಕೆದಾರನ ಲೊಕೇಶನ್‌ ಟ್ರ್ಯಾಕ್‌ ಮಾಡುವುದು ಯಾವ ದೃಷ್ಟಿಯಿಂದಲೂ ಸರಿಯಲ್ಲ. ಇದರಿಂದ ಖಾಸಗಿತನ ಹೇಗೆ ಉಳಿಯುತ್ತದೆ ಎನ್ನುವುದು ತಜ್ಞರ ಆಕ್ಷೇಪ.

ಸಿಂಗಪುರದಲ್ಲಿ TraceTogether ಎಂಬ ಆ್ಯಪ್‌ಅನ್ನು ಅಲ್ಲಿನ ಆರೋಗ್ಯ ಸಚಿವಾಲಯ ಅಭಿವೃದ್ಧಿಪಡಿಸಿದ್ದು, ನಾಗರಿಕರು ಬಳಕೆ ಮಾಡುವಂತೆ ಉತ್ತೇಜಿಸುತ್ತದೆ. ಸಂಗ್ರಹವಾದ ದತ್ತಾಂಶವನ್ನು ಸೋಂಕಿತರ ಪತ್ತೆಗಾಗಿ ಮಾತ್ರ ಬಳಕೆ ಮಾಡಲಾಗುವುದು. ಕಾನೂನು ಜಾರಿಯ ಹೊಣೆಹೊತ್ತ ಯಾವ ಇಲಾಖೆಯೊಂದಿಗೂ ಈ ದತ್ತಾಂಶವನ್ನು ಹಂಚಿಕೊಳ್ಳುವುದಿಲ್ಲ ಎಂದು ಅಲ್ಲಿನ ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದೆ. ಆದರೆ, ಆರೋಗ್ಯ ಸೇತುವಿನ ದತ್ತಾಂಶ ಬಳಕೆ ಕುರಿತು ಅಂತಹ ಸ್ಪಷ್ಟತೆ ಇಲ್ಲ.

ಸೋಂಕಿತ ಸಂಪರ್ಕಕ್ಕೆ ಬಂದ ಕುರಿತು ಬ್ಲೂಟೂತ್‌ ಕೊಡುವ ಮಾಹಿತಿಯು ಶೇ 100ರಷ್ಟು ಸರಿಯಾಗಿರುತ್ತದೆ ಎಂದು ಹೇಳಲಾಗದು. ಏಕೆಂದರೆ, ಸೋಂಕಿತ ವ್ಯಕ್ತಿಯೊಬ್ಬ ಎರಡನೇ ಮಹಡಿಯಲ್ಲಿದ್ದು, ಬಳಕೆದಾರ ಮೂರನೇ ಮಹಡಿಯಲ್ಲಿದ್ದರೆ ಬ್ಲೂಟೂತ್‌ ಇಬ್ಬರೂ ಭೇಟಿಯಾಗಿದ್ದಾರೆ ಎಂದೇ ಮಾಹಿತಿ ರವಾನಿಸುತ್ತದೆ. ಇದರಿಂದ ಬಳಕೆದಾರ ಅನಗತ್ಯ ಕಿರಿಕಿರಿ ಅನುಭವಿಸಬೇಕಾಗುತ್ತದೆ ಎನ್ನುವುದು
ಆ್ಯಪ್‌ ತಜ್ಞರ ಅನಿಸಿಕೆ.

ಖಾಸಗಿತನಕ್ಕೆ ಹೇಗೆ ದಕ್ಕೆ ಬರುತ್ತದೆ?

ಆ್ಯಪ್‌ ಸಂಗ್ರಹಿಸಿದ ಮಾಹಿತಿಯು ಸರ್ಕಾರದಿಂದ ನಿರ್ವಹಣೆ ಮಾಡಲಾಗುವ ಸರ್ವರ್‌ಗೆ ರವಾನೆಯಾಗಲಿದೆ. ಕೋವಿಡ್‌–19ಕ್ಕೆ ಸಂಬಂಧಿಸಿದ ಪ್ರಕರಣಗಳ ನಿರ್ವಹಣೆಯಲ್ಲಿ ಆ ಮಾಹಿತಿ ಬಳಕೆದಾರರಿಗೆ ಹಂಚಿಕೆಯಾಗುತ್ತ ಹೋಗುತ್ತದೆ. ಯಾವುದೇ ವ್ಯಕ್ತಿಯೂ ಈ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಖಾಸಗಿತನಕ್ಕೆ ದಕ್ಕೆ ಬರುತ್ತದೆ ಎನ್ನುವುದು ಆ್ಯಪ್‌ ಕುರಿತು ಇರುವ ಮುಖ್ಯ ತಕರಾರು. ಆದರೆ, MyGovನ ನಿರ್ವಾಹಕರು, ‘ಖಾಸಗಿತನಕ್ಕೆ ದಕ್ಕೆ ಆಗದಂತೆ ಆ್ಯಪ್‌ ಅಭಿವೃದ್ಧಿ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ವೈಯಕ್ತಿಕ ವಿವರಗಳು ಸೋರಿಕೆ ಆಗುವುದಿಲ್ಲ’ ಎಂದು ಹೇಳುತ್ತಾರೆ.

ಆ್ಯಪ್‌ಗೆ ನೋಂದಣಿ ಮಾಡಿಕೊಂಡ ತಕ್ಷಣವೇ ಗುರುತನ್ನು ಮರೆಮಾಚಿಸುವ ಐ.ಡಿ.ಯೊಂದನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಸರ್ವರ್‌ನಲ್ಲಿ ಸಂಗ್ರಹವಾಗುವ ಎಲ್ಲ ದತ್ತಾಂಶ ಆ ಐ.ಡಿ. ಹೆಸರಿನಲ್ಲಿ ಸಂಗ್ರಹವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಸರ್ಕಾರದ ಈ ವಾದವನ್ನು ಒಪ್ಪಲು ತಜ್ಞರು ಸಿದ್ಧವಿಲ್ಲ. ದೇಶದಲ್ಲಿ ಈಗ ಯಾರೆಲ್ಲ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನುವುದನ್ನು ಆ್ಯಪ್‌ನ ದತ್ತಾಂಶದಿಂದ ತಿಳಿಯಬಹುದು ಎನ್ನುತ್ತಾರೆ. ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ಸರ್ಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ಹೀಗಾಗಿ ಅದರ ಭರವಸೆಯನ್ನು ನಂಬುವುದು ಕಷ್ಟ ಎಂದೂ ಹೇಳುತ್ತಾರೆ.

ಪಾರದರ್ಶಕತೆ ಕುರಿತು ಇರುವ ತಕರಾರು ಏನು?

ಇಂಗ್ಲೆಂಡ್‌ನ ಕೋವಿಡ್‌–19 ಪತ್ತೆಯ ಆ್ಯಪ್‌ನಂತೆ ಆರೋಗ್ಯ ಸೇತು ಆ್ಯಪ್‌ ಪಾರದರ್ಶಕವಾಗಿಲ್ಲ. ಅಂದರೆ ಆ್ಯಪ್‌ನ ಭದ್ರತಾ ಲೋಪಗಳ ಕುರಿತು ಹೊರಗಿನ ಯಾರೂ ತಪಾಸಣೆ ನಡೆಸುವಂತಿಲ್ಲ. ಆದರೆ, ಈ ಆ್ಯಪ್‌ನ ಲೋಪಗಳ ತಪಾಸಣೆಗೂ ಅವಕಾಶ ಕೊಡಲಾಗುವುದು ಎಂದು MyGovನ ನಿರ್ವಾಹಕರು ಹೇಳಿದ್ದಾರೆ.

ಜಿಯೊಗಾಗಿ ಆ್ಯಪ್ ಅಭಿವೃದ್ಧಿ

ಫೀಚರ್‌ ಫೋನ್‌ಗಳಲ್ಲೂ ಆ್ಯಪ್ ಬಳಕೆ ಆಗಬೇಕು ಎಂದು ಸರ್ಕಾರವು ಆ್ಯಪ್‌ನ ಫೀಚರ್ ಫೋನ್‌ನ ಅವತರಣಿಕೆಯನ್ನು ಅಭಿವೃದ್ಧಿಪಡಿಸಿತು. ಆದರೆ, ಈ ಅವತರಣಿಕೆಯು ಎಲ್ಲಾ ಫೀಚರ್‌ ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಕೆಎಐ ಆಪರೇಟಿಂಗ್ ಸಿಸ್ಟಂ (KaiOS) ಹೊಂದಿರುವ ರಿಲಯನ್ಸ್ ಜಿಯೊ ಫೋನ್‌ಗಳಲ್ಲಿ ಮಾತ್ರ ಇದು ಕೆಲಸ ಮಾಡುತ್ತದೆ. ಏಕೆಂದರೆ, ಜಿಯೊ ಫೀಚರ್ ಫೋನ್‌ಗಳಿಗಾಗಿ ಮಾತ್ರ ಈ ಅವತರಣಿಕೆ ಅಭಿವೃದ್ಧಿಪಡಿಸಲಾಗಿದೆ.

ದೇಶದಲ್ಲಿ 60 ಕೋಟಿಗೂ ಹೆಚ್ಚು ಫೀಚರ್ ಫೋನ್‌ಗಳಿವೆ. ಇವುಗಳಲ್ಲಿ KaiOS ಇರುವ ಜಿಯೊ ಪೋನ್‌ಗಳೆಷ್ಟು ಎಂಬುದರ ಮಾಹಿತಿ ಸರ್ಕಾರದ ಬಳಿ ಇಲ್ಲ. ಹೀಗಿದ್ದೂ ಇದೊಂದೇ ಆಪರೇಟಿಂಗ್ ಸಿಸ್ಟಂಗೆ ಆ್ಯಪ್ ಅಭಿವೃದ್ಧಿಪಡಿಸಲಾಯಿತು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಟ್ವೀಟ್‌ನ ಪ್ರಕಾರ, ‘3 ಕೋಟಿ ಜಿಯೊ ಪೋನ್‌ಗಳಲ್ಲಿ ಈ ಆ್ಯಪ್ ಅಳವಡಿಸಲಾಗಿದೆ’. ಇನ್ನೂ 57 ಕೋಟಿ ಫೋನ್‌ಗಳಲ್ಲಿ ಯಾವ ಆ್ಯಪ್‌ ಬಳಸುವುದು ಎಂಬುದರ ಬಗ್ಗೆ ಸರ್ಕಾರದ ಬಳಿ ಉತ್ತರವಿಲ್ಲ. ಟ್ವಿಟರ್‌ನಲ್ಲಿ ಸಾರ್ವಜನಿಕರು ಎತ್ತಿದ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಸಚಿವಾಲಯ ಹೋಗಿಲ್ಲ.‌

ಸಾರ್ವಜನಿಕರ ಹಣದಲ್ಲಿ ಖಾಸಗಿ ಕಂಪನಿಯೊಂದಕ್ಕೆ ಅನುಕೂಲವಾಗುವಂತೆ ಆ್ಯಪ್ ಅಭಿವೃದ್ಧಿಪಡಿಸುವುದರ ಅವಶ್ಯಕತೆ ಇರಲಿಲ್ಲ. ಸರ್ಕಾರ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ ಎಂದು ಟ್ವಿಟರ್‌ನಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT