ಶುಕ್ರವಾರ, ಆಗಸ್ಟ್ 19, 2022
25 °C
ಗಾಂಧಿ ಕುಟುಂಬಕ್ಕೆ ನಿಷ್ಠರು, ವಿಶ್ವಾಸಾರ್ಹ ಉತ್ತರಾಧಿಕಾರಿಗೆ ಹುಡುಕಾಟ!

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ನೊಗ ಯಾರ ಹೆಗಲಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲುಲುಂಡ ಬಳಿಕ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾರ್ಯಕಾರಿ ಸಮಿತಿ ರಾಜೀನಾಮೆಯನ್ನು ಒಪ್ಪಿಲ್ಲ. ಇದರ ಮಧ್ಯೆ ಇಂದು(ಬುಧವಾರ) ರಾಹುಲ್ ಗಾಂಧಿ ನಾನಿನ್ನು ಕಾಂಗ್ರೆಸ್‌ ಅಧ್ಯಕ್ಷನಲ್ಲ; ತಡವಿಲ್ಲದೇ ಹೊಸ ನಾಯಕ ನೇಮಕವಾಗಲಿ ಎಂದು ಹೇಳಿದ್ದಾರೆ. ಹೀಗಾಗಿ, ಪಕ್ಷದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ? ಯಾರೆಲ್ಲಾ ರೇಸ್‌ನಲ್ಲಿದ್ದಾರೆ? ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಆಹ್ವಾನ ನೀಡಿದರೂ ನಾಯಕರು ಹಿಂದೇಟು ಹಾಕುತ್ತಿರುವುದೇಕೆ? ಪಕ್ಷದ ಮುಂದಿನ ನಡೆ ಏನು? ಸಿಡಬ್ಲ್ಯುಸಿ ಕೈಗೊಳ್ಳಬಹುದಾದ ನಿರ್ಧಾರ ಏನು? ಅಧ್ಯಕ್ಷ ಸ್ಥಾನದ ನೊಗವನ್ನು ಯಾರು ಹೊರುತ್ತಾರೆ ಎಂಬ ಪ್ರಶ್ನೆಗಳು ಕುತೂಹಲ ಮೂಡಿಸಿವೆ.

ಈ ಅನಿಶ್ಚಿತತೆಗಳ ನಡುವೆಯೂ ಕೆಲವು ಕಾಂಗ್ರೆಸ್‌ನ ಅನುಭವಿಗಳು ‘ಹೊಸ ವ್ಯವಸ್ಥೆ’ಯನ್ನು ಹುಟ್ಟುಹಾಕಬೇಕಿದೆ.

ಜೂನ್‌ 17ರಂದು 17ನೇ ಲೋಕಸಭೆ ಸಭೆಯಲ್ಲಿ ನೂತನ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕರಿಸುವ ವೇಳೆ, ಸಂಸದ ಮತ್ತು ‘ಇಂಡಿಯನ್‌ ರಿಪಬ್ಲಿಕನ್‌ ಪಾರ್ಟಿ’ ಅಧ್ಯಕ್ಷ ರಾಮಧಾಸ್‌ ಅಠವಳೆ ಅವರು, ‘ರಾಹುಲ್‌ ಗಾಂಧಿ ಎಲ್ಲಿದ್ದಾರೆ’ ಎಂದು ಕೇಳಿದ್ದರು. ಅಪಹಾಸ್ಯ ಮಾಡುವ ದಾಟಿಯಲ್ಲಿದ್ದ ಅವರ ಪ್ರಶ್ನೆ ಸದನವನ್ನು ನಗೆಗಡಲಲ್ಲಿ ತೇಲಿಸಿತ್ತು. ಅಂದು ಕಾಂಗ್ರೆಸ್‌ನ ಸಂಸದರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ರಾಹುಲ್ ಗಾಂಧಿ ಸದನದಲ್ಲಿ ಉಪಸ್ಥಿತರಿರಲಿಲ್ಲ. ‘ನಾನು ಇಂದೇ ಪ್ರಮಾಣ ವಚನ ಸ್ವೀಕರಿಸುತ್ತೇನೆ’ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗೊಂದಲ ಪರಿಹರಿಸಿದ್ದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್‌ ಗಾಂಧಿ, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷದ ಮುಖಂಡರಿಗೆ ಒಂದು ತಿಂಗಳ ಕಾಲಾವಕಾಶ ನೀಡಿ, ‘ಪಕ್ಷದ ಅಧ್ಯಕ್ಷ ಸ್ಥಾನ ನೆಹರೂ ಕುಟುಂಬದ ಹೊರತಾಗಿರಬೇಕು. ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರ ಹೆಸರೂ ಪ್ರಸ್ತಾಪ ಬೇಡ’ ಎಂದು ಸಿಡಬ್ಲ್ಯುಸಿ ಸಭೆಯಲ್ಲಿ ಹೇಳಿದ್ದರು.

ಈ ಎಲ್ಲಾ ಬೆಳವಣಿಗೆ ಬಳಿಕ ರಾಹುಲ್‌ ಗಾಂಧಿ ಅವರ ನಿರ್ಧಾರವನ್ನು ಬದಲಾಯಿಸುವಂತೆ ಅವರ ಮನವೊಲಿಸುವ ಕೆಲಸವನ್ನು ಎಲ್ಲಾ ನಾಯಕರೂ ಮಾಡಿದ್ದಾರೆ. ಇದಾವುದೂ ಫಲ ನೀಡಿಲ್ಲ. 

ಈ ಅನಿಶ್ಚಿತತೆಯ ನಡುವೆಯೂ ಬೇರೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಗಾಂಧಿ ಕುಟುಂಬದ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳುತ್ತದೆ ಎಂದು ನಂಬಲಾಗಿದೆ. ಹಾಗಾದರೆ, ಮುಂದಿನ ಉತ್ತರಾಧಿಕಾರಿ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿ ಮತ್ತು ವಿಶ್ವಾಸಾರ್ಹರೂ ಆಗಿರಬೇಕು ಹಾಗೂ ಕೃತಜ್ಞತೆ ಇಲ್ಲದ ಜವಾಬ್ದಾರಿಯನ್ನು ನಿರ್ವಹಿಸುವವರಾಗಿರಬೇಕು. ಈ ಮಾನದಂಡವು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್, ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರಂತಹ ಹಲವಾರು ಸಂಭವನೀಯ ನಾಯಕರಿಗೆ ಬಾಗಿಲು ಮುಚ್ಚಲಿದೆ. 

ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದ್ದು, ಅವರು ಗಾಂಧಿ ಕುಟುಂಬದ ನಿಷ್ಠರು ಹಾಗೂ ಹಿಂದುಳಿದ ವರ್ಗದ ನಾಯಕರೂ ಆಗಿದ್ದಾರೆ. ಅವರು 16ನೇ ಲೋಕಸಭೆಯಲ್ಲಿ ಕಾಂಗ್ರೆಸ್‌ ಅನ್ನು ಮುನ್ನಡೆಸಿದ್ದರು. ಆ ಸ್ಥಾನಕ್ಕೆ ಅವರನ್ನು ಸೋನಿಯಾ ಗಾಂಧಿ ಆಯ್ಕೆ ಮಾಡಿದ್ದರು. ಪ್ರಸ್ತುತ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪ್ರಸ್ತಾಪ ಆದಾಗ, ಅವರು ಪ್ರಸ್ತುತ ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಕೆಲವು ಮುಖಂಡರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಅವರ ಹೆಸರೂ ಮುಂಚೂಣಿಯಲ್ಲಿದೆ. ಇವರು ಈ ವರೆಗೆ ಯಾವುದೆ ಹಣಕಾಸು ಅವ್ಯವಹಾರದ ಕಳಂಕ ಹೊಂದಿಲ್ಲ. ಇವರು ಕಾಂಗ್ರೆಸ್‌ನ ಹಿರಿಯ ನಾಯಕರ ಜತೆಗೂಡಿ ಕಾರ್ಯನಿರ್ವಹಿಸ ಬಲ್ಲವರಾಗಿದ್ದಾರೆ ಎನ್ನಲಾಗಿದೆ. ಆದರೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ  ವರ್ಷಾಂತ್ಯಕ್ಕೆ ನಡೆಯಲಿದ್ದು, ಅವರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಕೇಳಿಬಂದಿರುವ ಪ್ರಮುಖರ ಹೆಸರುಗಳು

* ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌.
* ಜ್ಯೋತಿರಾಧ್ಯ ಸಿಂಧ್ಯ
* ಶಶಿ ತರೂರ್‌

* ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌. ಸೋನಿಯಾ ಗಾಂಧಿ ಅಮರೀಂದ್ರ್‌ ಸಿಂಗ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಸುಳಿವನ್ನೂ ನೀಡಿದ್ದರು. ಆದರೆ, ಅವರು ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

* ಗಾಂಧಿ ಕುಟುಂಬದ ಅತ್ಯಂತ ಆಪ್ತರು ಹಾಗೂ ನಿಷ್ಠರು ಆಗಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಹಾಗೂ ಎ.ಕೆ. ಆಂಟನಿ ಅವರಿಬ್ಬರೂ ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ದೂರ ಉಳಿದಿದ್ದಾರೆ.

* ಹಾಲಿ ಪಕ್ಷದ ಖಜಾಂಚಿ ಅಹಮ್ಮದ್‌ ಪಟೇಲ್ ಮತ್ತು ಮುಖ್ಯ ಕಾರ್ಯದರ್ಶಿ ಗುಲಾಮ್‌ ನಭಿ ಅಜಾದ್‌ ಇಬ್ಬರೂ ಮುಸ್ಲಿಂ ನಾಯಕರು. ಆದರೆ, ಇಬ್ಬರೂ ‘ಮಾಸ್‌’ ನಾಯಕರಲ್ಲ ಎಂಬ ಕಾರಣಕ್ಕೆ ಪರಿಗಣಿಸುವುದು ಕಷ್ಟ. ಪ್ರಸ್ತುತ ರಾಜಕೀಯ ದೃವೀಕರಣ ಇತ್ಯಾದಿಗಳನ್ನು ಗಮನಿಸಿದಾಗ ಯಾವುದೂ ಅಸಾಧ್ಯವಾದುದೇನೂ ಅಲ್ಲ.

* ಓಡುವ ಕುದುರೆ ಎಂದೇ ಭಾವಿಸಿರುವ ಹಾಗೂ ಹರಿಯಾಣದಲ್ಲಿ ಪಕ್ಷವನ್ನು ಮುನ್ನಡೆಸಿದ ಮತ್ತು ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ರಾಹುಲ್‌ ಗಾಂಧಿ ಅವರ ಬೆಂಬಲವನ್ನೂ ಹೊಂದಿದ್ದಾರೆ.

* ಅಧ್ಯಕ್ಷರು ಯಾರಾಗುತ್ತಾರೆ ಎಂಬುದರ ಕುರಿತು ಯಾವೊಬ್ಬ ದೊಡ್ಡ ನಾಯಕರ ಹೆಸರು ಸ್ಪಷ್ಟವಾಗಿಲ್ಲ. ಅದು ಸ್ಪಷ್ಟವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಕಾಂಗ್ರೆಸ್, ಅಧ್ಯಕ್ಷರು ಮತ್ತು ಹಲವು ಉಪಾಧ್ಯಕ್ಷರನ್ನು ಒಳಗೊಂಡ ಕಾರ್ಯಕಾರಿ ಮಂಡಳಿಯನ್ನು ರಚಿಸುತ್ತದೆ ಎನ್ನುತ್ತವೆ ಪಕ್ಷದ ಆಂತರಿಕ ಮೂಲಗಳು. ಈ ಹಂತದಲ್ಲಿ ಸಮಾನ ಸ್ಥಾನ ಹೊಂದಿರುವವರಿಗೆ ಸಮಾನ ಕೆಲಸವನ್ನು ಸ್ಪಷ್ಟವಾಗಿ ಹಂಚಿಕೆ ಮಾಡಿ ಜವಾಬ್ದಾರಿ ವಹಿಸಬಹುದು. ರಾಹುಲ್‌ ಗಾಂಧಿ ಮಾರ್ಗದರ್ಶನ ನೀಡಬಹುದು. 

* ಹಾಗಾದರೆ, ಕನಿಷ್ಠ ಒಂದು ವರ್ಷ ಪಕ್ಷದ ಯಾವುದೇ ಸ್ಥಾನವನ್ನು ಬಯಸವುದಿಲ್ಲ ಎಂದು ಹೇಳಿರುವ ರಾಹುಲ್‌ ಗಾಂಧಿ ಅವರ ಮುಂದಿನ ನಡೆ ಏನು? ಎಂಬ ಪ್ರಶ್ನೆಗೆ, ‘ಅವರು ಸ್ವತಂತ್ರವಾಗಿ ಭಾರತ ಪ್ರವಾಸ ಕೈಗೊಳ್ಳುವರು’ ಎಂದು ಗಾಂಧಿ ಕುಟುಂಬದ ದೀರ್ಘಕಾಲದ ಆಪ್ತರು ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು