ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಏನಿದು ತಬ್ಲಿಗಿ ಜಮಾತ್?

Last Updated 2 ಏಪ್ರಿಲ್ 2020, 7:25 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನನಿಜಾಮುದ್ದೀನ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಹಲವರಲ್ಲಿ ಕೊರೊನಾವೈರಸ್‌ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ದೇಶದಾದ್ಯಂತ ಸೋಂಕು ಹರಡುವ ಭೀತಿ ಸೃಷ್ಟಿಯಾಗಿದೆ.

93 ವರ್ಷಗಳ ಹಿಂದೆ ಸ್ಥಾಪನೆಯಾದ ಜಮಾತ್
ಮಹಮ್ಮದ್‌ ಇಲ್ಯಾಸ್‌ ಅಲ್‌–ಕಂಧ್ಲಾವಿ 1926ರಲ್ಲಿ ಹರಿಯಾಣದ ಮೇವನ್‌ನಲ್ಲಿ ಇಸ್ಲಾಂ ಧಾರ್ಮಿಕ ಸುಧಾರಣೆಯ ಉದ್ದೇಶದಿಂದಾಗಿ ಈ ಸಂಘಟನೆಯನ್ನು ಸ್ಥಾಪಿಸಿದ್ದರು. ದಿಯೋಬಂದಿ ಚಳವಳಿಯ ಭಾಗವಾಗಿ ಆರಂಭವಾದ ‘ತಬ್ಲಿಗಿ ಜಮಾತ್‌‘ ಸಂಘಟನೆಯ ಕಾರ್ಯಕರ್ತರು, ಯುದ್ಧಗಳ ಗೆಲುವು ಅಥವಾ ಸೋಲು ಪರುಷರ ಹೃದಯದಲ್ಲಿ ನಿರ್ಧಾರವಾಗುತ್ತವೆ ಎಂದು ನಂಬಿದ್ದಾರೆ. ಮಾತ್ರವಲ್ಲದೆ, ಮತಾಂತರ ಎಂಬ ಅಸ್ತ್ರ ಬಳಸುವುದರಿಂದ ತಾವು ನಿರಂತರವಾಗಿ ಆಧ್ಯಾತ್ಮಿಕ ಜಿಹಾದ್‌ನಲ್ಲಿ ಉಳಿಯಲಿದ್ದೇವೆ ಎಂದು ಭಾವಿಸಿದ್ದಾರೆ.

ಈ ಸಂಘಟನೆಯ ಮುಖ್ಯ ಕಚೇರಿ ಇರುವುದು ಅಲಾಮಿ ಮರ್ಕಜ್‌ ಬಂಗ್ಲೆವಾಲಿ ಮಸೀದಿ ಇರುವ ನಿಜಾಮುದ್ದೀನ್‌ನಲ್ಲಿ. ಅಲ್ಲಿ ಸುಮಾರು 2 ಸಾವಿರ ಜನರು ವಾಸಿಸಬಹುದಾದ ಆರು ಅಂತಸ್ತಿನ ವಸತಿ ಸಂಕೀರ್ಣವಿದೆ.

ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಧರ್ಮನಿಷ್ಠ ಮುಸ್ಲಿಮರು ಹಾಗೂ ವಿದೇಶಿಯರು ಧಾರ್ಮಿಕ ಉದ್ದೇಶಗಳಿಗಾಗಿ ಮರ್ಕಜ್‌ ಮಸೀದಿಗೆ ಭೇಟಿ ನೀಡುತ್ತಾರೆ. ಕೆಲವರು ಇದೇ ಉದ್ದೇಶಕ್ಕಾಗಿ ದೇಶದ ಬೇರೆಬೇರೆ ಪ್ರದೇಶಗಳಿಗೆ ಗುಂಪುಗುಂಪಾಗಿ ತೆರಳುತ್ತಾರೆ. ಇದು ವರ್ಷದುದ್ದಕ್ಕೂ ನಡೆಯುವ ಪ್ರಕ್ರಿಯೆ‘ ಎನ್ನಲಾಗಿದೆ.

ಈ ಸಂಘಟನೆಯತ್ತ ವಿದೇಶಿಗರು ಅದರಲ್ಲೂ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್‌, ನೇಪಾಳ, ಮ್ಯಾನ್ಮಾರ್‌, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಕಿರ್ಗಿಸ್ಥಾನ ದೇಶಗಗಳ ಧರ್ಮನಿಷ್ಠರು ಬಹುವಾಗಿ ಆಕರ್ಷಿತರಾಗುತ್ತಿದ್ದಾರೆ. ಈ ಸಂಘಟನೆ ಸದ್ಯ ಅಸಂಖ್ಯ ಹಿಂಬಾಲಕರೊಂದಿಗೆ ಪ್ರಪಂಚದಾದ್ಯಂತ ವಿಸ್ತರಿಸಿದೆ. ದಕ್ಷಿಣ ಏಷ್ಯಾದಲ್ಲಿ ಮುಖ್ಯವಾಗಿ ಭಾರತ ಭದ್ರತಾ ಪಡೆಗಳು ಇದರ ಚಟುವಟಿಕೆಗಳ ಮೇಲೆ ನಿಗಾ ಇರಿಸಿವೆ.

ಕ್ವಾರಂಟೈನ್‌ನಲ್ಲಿ 24 ಜನ: 447 ಮಂದಿಯಲ್ಲಿ ಸೋಂಕಿನ ಲಕ್ಷಣ
ಬರೋಬ್ಬರಿ 93 ವರ್ಷಗಳ ಇತಿಹಾಸ ಹೊಂದಿರುವ ತಬ್ಲಿಗಿ ಜಮಾತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 9 ಜನರು ಕೋವಿಡ್‌–19ಗೆ ಬಲಿಯಾಗಿದ್ದಾರೆ. ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಾಗತಿಕ ಪಿಡುಗು ಕೋವಿಡ್‌–19 ಸೋಂಕು ಭೀತಿ ಇದ್ದರೂ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆ ಇದೀಕ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಜಮಾತ್‌ ಪ್ರಧಾನ ಕಚೇರಿಯ ವಸತಿ ಸಂಕೀರ್ಣದಲ್ಲಿ ಉಳಿದುಕೊಂಡಿದ್ದ 1548 ಜನರನ್ನು ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಸೋಂಕು ದೃಢಪಟ್ಟಿರುವ 24 ಜನರನ್ನು ಕ್ವಾರಂಟೈನ್‌ಲ್ಲಿ ಇರಿಸಲಾಗಿದೆ. ಇನ್ನೂ 447 ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಕೋವಿಡ್‌–19 ಭೀತಿ ನಡುವೆ ಧಾರ್ಮಿಕ ಕಾರ್ಯಕ್ರಮ ನಡೆದದ್ದು ದೆಹಲಿಯಲ್ಲಿ ಮಾತ್ರವಲ್ಲ, ಫೆಬ್ರವರಿ 27ರಿಂದ ಮಾರ್ಚ್‌ 1ರ ನಡುವೆ ಕೌಲಾಲಂಪುರದಲ್ಲೂ ನಡೆದಿದೆ. ಇದರಿಂದಾಗಿ ಅಲ್ಲಿಯೂ ಸುಮಾರು 600 ಜನರಲ್ಲಿ ಸೋಂಕು ಹರಡಿದೆ.

ಸಭೆಯಲ್ಲಿ ಭಾಗವಹಿಸಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮನೆಯಲ್ಲಿ ಪ್ರತ್ಯೇಕವಾಸದಲ್ಲಿರಿಸಲು ವಿವರಗಳನ್ನು ನೀಡುವಂತೆ ದೆಹಲಿ ಪೊಲೀಸರು ಮಾರ್ಚ್‌ 28 ರಂದು ತಿಳಿಸಿದ್ದರು. ಅದರಂತೆ ವಿವಿಧ ರಾಜ್ಯಗಳ ಸುಮಾರು ‌2137 ಜನರನ್ನು ಇದುವರೆಗೆ ಗುರುತಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ‘ಜನವರಿ 1 ರಿಂದ ಮಾರ್ಚ್‌ 21ರ ವರೆಗೆ ಸುಮಾರು 2100 ವಿದೇಶಿಗರು ತಬ್ಲಿಗಿ ಕ್ರಾಯಕ್ರಮಗಳ ಸಲುವಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲಿ 824 ಮಂದಿ ಮಾರ್ಚ್‌ 21ರ ವೇಳೆಗೆ ದೇಶದಾದ್ಯಂತ ಸಂಚರಿಸಿದ್ದಾರೆ. 216 ಜನರು ನಿಜಾಮುದ್ದೀನ್‌ನಲ್ಲಿರುವ ವಸತಿ ಸಂಕೀರ್ಣದಲ್ಲಿಯೇ ಉಳಿದಿದ್ದಾರೆ. ಇನ್ನುಳಿದವರು ಲಾಕ್‌ಡೌನ್‌ ಆದೇಶ ಜಾರಿಯಾಗುವ ಮುನ್ನ ದೇಶ ತೊರೆದಿರಬಹುದು’ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT