ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಣತನದಿಂದ ಲಾಕ್‌ಡೌನ್‌ ಅನ್ನು ತೆರವುಗೊಳಿಸಬೇಕಿದೆ: ರಘುರಾಮ್‌ ರಾಜನ್‌

Last Updated 30 ಏಪ್ರಿಲ್ 2020, 8:46 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದ ಮುಂದಿನ ದಿನಗಳಲ್ಲಿ ಸೃಷ್ಟಿಯಾಗಬಹುದಾದ ಆರ್ಥಿಕ ತೊಂದರೆಗಳ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಆರ್‌ಬಿಐ ಮಾಜಿ ಮುಖ್ಯಸ್ಥ ರಘುರಾಮ್‌ ರಾಜನ್‌ ಅವರು ಗುರುವಾರ ವಿಡಿಯೊ ಮೂಲಕ ಚರ್ಚೆ ನಡೆಸಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ಆರ್ಥಿಕತೆ ಮೇಲಾಗುವ ಪರಿಣಾಮ ಕುರಿತು ಮಾತನಾಡಿದ ರಘುರಾಮ್‌ ರಾಜನ್‌, ದೀರ್ಘಕಾಲದ ಲಾಕ್‌ಡೌನ್‌ನಿಂದ ಆರ್ಥಿಕತೆ ಸ್ಥಿರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

'ದೇಶದಲ್ಲಿ ಬಡವರ ಪ್ರಾಣ ಉಳಿಸಬೇಕೆಂದರೆ, ನಮಗೆ ₹65,000 ಕೋಟಿ ಹಣದ ಅವಶ್ಯಕತೆ ಇದೆ' ಎಂದು ರಾಹುಲ್‌ ಗಾಂಧಿ ಅವರು ಕೇಳಿದ ಪ್ರಶ್ನೆಯೊಂದಕ್ಕೆ ರಘುರಾಮ್‌ ರಾಜನ್‌ ಉತ್ತರಿಸಿದ್ದಾರೆ.

ದೀರ್ಘಕಾಲದ ಲಾಕ್‌ಡೌನ್‌ ಹೊಂದುವುದು ಸರಳವಾಗಿ ಕಾಣಿಸಬಹುದು. ಆದರೆ ಇದು ನಮ್ಮ ಆರ್ಥಿಕತೆಯನ್ನು ಸ್ಥಿರವಾಗಿರಲು ಬಿಡುವುದಿಲ್ಲವೆಂದು ರಾಜನ್‌ ಅಭಿಪ್ರಾಯಪಟ್ಟಿದ್ದಾರೆ.

'ನಾವು ಜಾಣತನದಿಂದ ಲಾಕ್‌ಡೌನ್‌ ಅನ್ನು ತೆರವುಗೊಳಿಸಬೇಕಿದೆ. ಲಾಕ್‌ಡೌನ್‌ ಅನ್ನು ತೆರವುಗೊಳಿಸಬೇಕೆಂದರೆ, ಕೋವಿಡ್‌ ಸೋಂಕಿತರನ್ನು ಪ್ರತ್ಯೇಕವಾಗಿಡಲೇಬೇಕಾದ ಅನಿವಾರ್ಯತೆ ಇದೆ' ಎಂದು ಅವರು ತಿಳಿಸಿದ್ದಾರೆ.

ಅಜಾಗರೂಕವಾಗಿ ಲಾಕ್‌ಡೌನ್‌ ತೆರವುಗೊಳಿಸಿದರೆ ಸರ್ಕಾರದ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಲಿದೆ ಎಂದ ರಘುರಾಮ್‌ ರಾಜನ್‌, 'ಹೊಸ ಕೊರೊನಾ ವೈರಸ್‌ ಸೋಂಕಿತರನ್ನು ಪ್ರತ್ಯೇಕಗೊಳಿಸಿ ಮೂರನೇ ಸುತ್ತಿನ ಲಾಕ್‌ಡೌನ್‌ಗೆ ಹೋಗದೇ ಇರುವುದು ಹೇಗೆಂದು ನಾವು ಖಚಿತಪಡಿಸಿಕೊಳ್ಳಬೇಕು' ಎಂದು ಹೇಳಿದ್ದಾರೆ.

ಒಂದು ವೇಳೆ ಈ ವಿಚಾರದಲ್ಲಿ ತೊಂದರೆಗಳಾದರೆ ಸರ್ಕಾರದ ಮೇಲಿನ ವಿಶ್ವಾಸಾರ್ಹತೆಗೆ ದಕ್ಕೆಯಾಗಲಿದೆ ಎಂದಿದ್ದಾರೆ.

ಲಾಕ್‌ಡೌನ್‌ ತೆರವುಗೊಳಿಸುವ ಸಂದರ್ಭದಲ್ಲಿ, ಕಾರ್ಮಿಕರಿಗೆ ಸುರಕ್ಷಿತ ಕೆಲಸದ ಸ್ಥಳ ಮತ್ತು ಸಾರಿಗೆಯ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯ ಎಂದು ರಘುರಾಮ್‌ ರಾಜನ್‌ ಪ್ರತಿಪಾದಿಸಿದ್ದಾರೆ.

'ಜನರು ಮತ್ತೆ ಜೀವನೋಪಾಯ ಕಂಡುಕೊಳ್ಳುವುದರ ಬಗ್ಗೆ ನಾವು ಯೋಚಿಸಲು ಪ್ರಾರಂಭಿಸಬೇಕು. ಮೊದಲು, ನಾವು ಅಂತರ ಕಾಪಾಡಿಕೊಳ್ಳುವ ಸ್ಥಳಗಳ ಬಗ್ಗೆ ಆಲೋಚಿಸಬೇಕು. ಕೇವಲ ಕೆಲಸ ಮಾಡುವ ಜಾಗಗಳಲ್ಲದೇ, ಭೇಟಿ ನೀಡುವ ಜಾಗಗಳ ಬಗ್ಗೆಯೂ ಕಾಳಜಿವಹಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಅಂತರ ಕಾಪಾಡಿಕೊಳ್ಳುವುದು ಹೇಗೆಂಬುದು ಪ್ರಮುಖ ಪ್ರಶ್ನೆ. ಈ ವಿಚಾರವಾಗಿ ನಾವು ತುಂಬಾ ಕೆಲಸಗಳನ್ನು ಮಾಡಬೇಕಿದೆ. ನೌಕರರ ಸುರಕ್ಷತೆಗಾಗಿ ಉಪಾಯಗಳನ್ನು ಕಂಡುಕೊಳ್ಳಬೇಕಿದೆ' ಎಂದು ರಘುರಾಮ್‌ ರಾಜನ್‌ ಸಲಹೆ ನೀಡಿದ್ದಾರೆ.

ಇದೇ ವೇಳೆ, ಸಾರ್ವತ್ರಿಕ ಕೊರೊನಾ ಸೋಂಕು ಪರೀಕ್ಷೆಗಳನ್ನು ಅಧಿಕಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT