ಮಂಗಳವಾರ, ಆಗಸ್ಟ್ 3, 2021
20 °C

ಡಿ.ಕೆ.ಶಿವಕುಮಾರ್‌ ಭೇಟಿಯಾಗಿ ಮಾತುಕತೆ ನಡೆಸಿದ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಬೆಂಗಳೂರಿನ ಶಿವಾನಂದ ವೃತ್ತ ಬಳಿಯ ಡಿ.ಕೆ ಶಿವಕುಮಾರ್ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದರು.  ಯಡಿಯೂರಪ್ಪ ಜೊತೆ ಹರತಾಳು ಹಾಲಪ್ಪ, ಪುತ್ರ ಬಿ‌.ವೈ ರಾಘವೇಂದ್ರ ಉಪಸ್ಥಿತರಿದ್ದರು. 

ಹೂಗುಚ್ಚ ನೀಡಿ ಯಡಿಯೂರಪ್ಪ ಅವರನ್ನು ಡಿ.ಕೆ ಶಿವಕುಮಾರ್ ಬರಮಾಡಿಕೊಂಡರು. ಯಡಿಯೂರಪ್ಪ ಹೆಗಲಮೇಲೆ ಕೈಹಾಕಿದ ಡಿ.ಕೆ ಶಿವಕುಮಾರ್ ಉಭಯಕುಶಲೋಪರಿ ವಿಚಾರಿಸಿದರು. 

ಡಿ.ಕೆ ಶಿವಕುಮಾರ್ ಮತ್ತು ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಕಡು ವೈರಿಗಳಂತೆ ಕಾಣಿಸಿಕೊಂಡಿದ್ದರು.

ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ನಿರ್ಮಾಣ ಸಂಬಂಧ ಚರ್ಚಿಸಲು ಯಡಿಯೂರಪ್ಪ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಂದಿದ್ದರು. ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ. 

ಡಿಕೆಶಿ ಭೇಟಿ ಬಳಿಕ ಯಡಿಯೂರಪ್ಪ ಹೇಳಿಕೆ:  ಸಿಗಂದೂರು ಸೇತುವೆ, ಶಿವಮೊಗ್ಗ ನೀರಾವರಿ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಬೇರೆನೂ ಚರ್ಚೆ ಮಾಡಿಲ್ಲ, ಮಾತುಕತೆ ಸಮಾಧಾನ ತಂದಿದೆ. ಸಿಗಂದೂರು ಸೇತುವೆ ನೆನೆಗುದಿಗೆ ಬಿದ್ದಿತ್ತು. ಅರಣ್ಯ ಸಚಿವರು ಕೂಡ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು. 

ಅವರ ಮನೆಗೆ ಇವರು ಬರೋದು ವಿಷಯ ಅಲ್ಲ ನಾವು ಬರ್ತಿವಿ ಎಂದು ಡಿ. ಕೆ ಶಿವಕುಮಾರ್ ಅಧಿಕಾರಿಗಳನ್ನು ಸಹ ಕರೆಸಿದ್ದರು. ನನಗೆ ಮಾತುಕತೆ ತೃಪ್ತಿ ನೀಡಿದೆ. ನಮ್ಮ ರಾಜಕೀಯ ಹೇಳಿಕೆ ಸದನಕ್ಕೆ ಮಾತ್ರ ಎಂದರು. 

ಡಿಕೆಶಿ  ಬಗ್ಗೆ ಖಳನಾಯಕ ಎಂದಿದ್ದ ಮಾತಿನ ಬಗ್ಗೆ  ಮಾಧ್ಯಮದವರು ಕೇಳಿದಾಗ, ಈಗ ಅದು ಅನಗತ್ಯ, ರಾಜಕೀಯವನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವೇ ಎಂದು  ನಗೆ ಚಟಾಕಿ ಹಾರಿಸಿದರು. 

ಯಡಿಯೂರಪ್ಪ ಆತ್ಮೀಯ ಗೆಳೆಯ: ನಾನು ಯಡಿಯೂರಪ್ಪ ಆತ್ಮೀಯ ಗೆಳೆಯರು. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಮಗೆ ಕೂಡಾ ಹಲವು ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾವು ಯಾರೂ ರಾಜಕಾರಣ ಮಾಡಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. 

ಬಹಳ ಒತ್ತಡ ಇದ್ದರೂ ಕೂಡಾ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿದ್ದೇನೆ. ಸದ್ಯದಲ್ಲೇ ಅವರ ಕ್ಷೇತ್ರಕ್ಕೂ ಹೋಗಿ ಆತಿಥ್ಯ ಸ್ವೀಕಾರ ಮಾಡ್ತೇನೆ. ಕಾಮಗಾರಿ ವಿಚಾರವಾಗಿ ಆಗಬೇಕಾಗಿರುವ ಕೆಲಸಗಳನ್ನು ಶೀಘ್ರ ಪ್ರಾರಂಭಿಸುತ್ತೇವೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು