ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಮತ್ತೆ ಆಪ್ ಮಡಿಲಿಗೆ ದೆಹಲಿ: ಕೇಜ್ರಿವಾಲ್ ಗೆಲುವಿಗೆ ಕಾರಣಗಳಿವು...

Last Updated 12 ಫೆಬ್ರುವರಿ 2020, 5:14 IST
ಅಕ್ಷರ ಗಾತ್ರ
ADVERTISEMENT
""
""

ಐದು ವರ್ಷಗಳ ಆಡಳಿತದಲ್ಲಿ ಕೇಜ್ರಿವಾಲ್‌ ಅವರು ಉಚಿತ ವಿದ್ಯುತ್‌, ಉಚಿತ ನೀರು, ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿ ಜನರಿಗೆ ಹತ್ತಿರವಾಗಿದ್ದಾರೆ. ‘ಇದು ಮಧ್ಯಮ ವರ್ಗದವರ ಸರ್ಕಾರ’ ಎಂಬ ಭಾವನೆ ಮೂಡಿಸಿದ್ದಾರೆ. ಮತ್ತೊಮ್ಮೆ ಅಧಿಕಾರಕ್ಕೆ ಏರಲು ಇವಿಷ್ಟೇ ಸಾಕಾಗಿದ್ದವು. ಆದರೆ, ಮಾತಿನ ಮೇಲೆ ನಿಯಂತ್ರಣ, ಮೃದು ಹಿಂದುತ್ವ, ಹಾಗೂ ಅತಿ ಎಚ್ಚರಿಕೆಯಿಂದ ರೂಪಿಸಿದ ಚುನಾವಣಾ ಕಾರ್ಯತಂತ್ರಗಳು ಎಎಪಿಯ ಗೆಲುವನ್ನು ಖಚಿತಪಡಿಸಿದವು.

ಎಎಪಿಯ ಈ ನಿರೀಕ್ಷೆಗೂ ಮೀರಿದ ಗೆಲುವಿನ ಹಿಂದಿನ ಕೆಲವು ಕಾರಣಗಳನ್ನು ವಿಶ್ಲೇಷಕರು ಪಟ್ಟಿ ಮಾಡಿದ್ದಾರೆ...

* ಬಿಜೆಪಿಯ ಪರವಾಗಿ ದೆಹಲಿಯಲ್ಲಿ ಪ್ರಚಾರ ನಡೆಸಿದ್ದ ನಾಯಕರು, ರ್‍ಯಾಲಿಗಳಲ್ಲಿ ಬಳಸಿದ್ದ ಭಾಷೆಯು ವ್ಯಾಪಕ ಟೀಕೆಗೆ ಗುರಿಯಾಯಿತು. ಕೇಜ್ರಿವಾಲ್‌ ಅವರನ್ನು ‘ಭಯೋತ್ಪಾದಕ’ ಎಂದೂ ಟೀಕಿಸಲಾಯಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮೋದಿ ವಿರುದ್ಧ ನೀಡಿದ್ದ, ‘ಪ್ರಧಾನಿಯನ್ನು ಯುವಕರು ದೊಣ್ಣೆಯಿಂದ ಥಳಿಸುತ್ತಾರೆ’ ಎಂಬ ಹೇಳಿಕೆಯೂ ವಿವಾದ ಸೃಷ್ಟಿಸಿತ್ತು. ಆದರೆ ಕೇಜ್ರಿವಾಲ್‌, ಪ್ರಚಾರದುದ್ದಕ್ಕೂ ಮಾತಿನ ಮೇಲೆ ಹಿಡಿತವಿಟ್ಟುಕೊಂಡಿದ್ದರು

* ಸಿಎಎ ವಿರೋಧಿಸಿ ಶಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಹೋರಾಟವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಚುನಾವಣೆಗೆ ಬಳಸುವ ಪ್ರಯತ್ನ ಮಾಡಿದವು. ಕೇಜ್ರಿವಾಲ್‌ ಇದರಿಂದ ದೂರ ಉಳಿದು ಜಾಣತನ ಪ್ರದರ್ಶಿಸಿದರು. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವನ್ನು ಪ್ರಶ್ನಿಸುತ್ತಾ, ಆ ಪಕ್ಷದ ಮತಗಳನ್ನೂ ತನ್ನ ಬುಟ್ಟಿಗೆ ಬೀಳಿಸಿಕೊಂಡರು

* ‘ನಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ನಿಮಗೆ ಅನ್ನಿಸಿದ್ದರೆ ಮಾತ್ರ ಮತ ಕೊಡಿ, ಇಲ್ಲದಿದ್ದರೆ ಬಿಜೆಪಿಗೆ ಮತ ನೀಡಿ’ ಎಂದು ಪ್ರಚಾರ ರ್‍ಯಾಲಿಯೊಂದರಲ್ಲಿ ಕೇಜ್ರಿವಾಲ್‌ ಹೇಳಿದರು. ಇದು ಅವರ ಆತ್ಮವಿಶ್ವಾಸದ ಮಾತಾಗಿ ಕಾಣಿಸಿತು

* ಪ್ರಧಾನಿ ಮೋದಿಯ ತೀವ್ರ ಟೀಕಾಕಾರರಾಗಿದ್ದ ಕೇಜ್ರಿವಾಲ್‌, ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿಯನ್ನು ಅಷ್ಟಾಗಿ ಟೀಕಿಸಲಿಲ್ಲ. ಬದಲಿಗೆ ‘ದೆಹಲಿಗೆ ಎಎಪಿ, ಕೇಂದ್ರಕ್ಕೆ ಬಿಜೆಪಿ’ ಎಂದು ಘೋಷಿಸಿ, ಅದಕ್ಕೆ ತಕ್ಕಂತೆಯೇ ಕಾರ್ಯತಂತ್ರ ರೂಪಿಸಿದರು. ವಾಸ್ತವದಲ್ಲಿ ಅದು ದೆಹಲಿಯ ಜನರ ನಿಲುವೂ ಆಗಿತ್ತು

* ಕ್ರಾಂತಿಕಾರಿ ನಾಯಕನಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದ ಕೇಜ್ರಿವಾಲ್‌, ಈ ಚುನಾವಣೆಯ ಸಂದರ್ಭದಲ್ಲಿ ‘ನಾನು ದೆಹಲಿಯ ಮಗ’ ಎಂದು ಹೇಳಿಕೊಂಡು ‘ಒಳ್ಳೆಯ ವ್ಯಕ್ತಿ’ ಎಂಬ ಇಮೇಜ್‌ ರೂಪಿಸಿಕೊಂಡರು. ಬಿಜೆಪಿಯವರು ತನ್ನ ವಿರುದ್ಧ ಮಾಡಿದ್ದ ಟೀಕೆಗಳನ್ನು ಬಳಸಿಕೊಂಡು, ಆ ಇಮೇಜ್‌ ಅನ್ನು ಗಟ್ಟಿಗೊಳಿಸಿದರು

* ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ‘ಮೃದು ಹಿಂದುತ್ವ’ದ ಪ್ರಯೋಗ ನಡೆಸಿದ್ದ ಕಾಂಗ್ರೆಸ್‌ಗೆ ಅದರ ಲಾಭ ಪಡೆಯಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ನ ಸೋಲಿನಿಂದ ಪಾಠ ಕಲಿತ ಕೇಜ್ರಿವಾಲ್‌, ಎಚ್ಚರಿಕೆಯಿಂದ ಮೃದು ಹಿಂದುತ್ವವನ್ನು ಬಳಸಿಕೊಂಡರು. ಚುನಾವಣಾ ಪ್ರಚಾರದ ಮಧ್ಯದಲ್ಲಿ ಹನುಮಾನ್‌ ಮಂದಿರಕ್ಕೆ ಭೇಟಿನೀಡಿ, ‘ನಾನೊಬ್ಬ ಹನುಮ ಭಕ್ತ’ ಎಂಬ ಸಂದೇಶ ರವಾನಿಸಿದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳೂ ವ್ಯಕ್ತವಾಗಿದ್ದವು

* ಸಿಎಎ ವಿರೋಧಿ ಮುಸ್ಲಿಂ ಮತಗಳು ಕಾಂಗ್ರೆಸ್‌ ಕಡೆಗೆ ವಾಲದಂತೆ ನೋಡಿಕೊಳ್ಳುವುದು ಕೇಜ್ರಿವಾಲ್‌ ಅವರಿಗೆ ಸವಾಲಾಗಿತ್ತು. ಕಾಂಗ್ರೆಸ್‌ ನಾಯಕರು ಶಹೀನ್‌ಬಾಗ್‌, ಜಾಮಿಯಾ ಮಿಲಿಯಾ ಕ್ಯಾಂಪಸ್‌ಗಳಲ್ಲಿ ಭಾಷಣ ಮಾಡಿದ್ದನ್ನೇ ಬಳಸಿಕೊಂಡ ಕೇಜ್ರಿವಾಲ್‌, ‘ದೆಹಲಿಯ ಅಧಿಕಾರ ಹಿಡಿಯುವ ಇಚ್ಛೆ ಕಾಂಗ್ರೆಸ್‌ಗೆ ಇಲ್ಲ’ ಎಂಬ ಸಂದೇಶ ರವಾನಿಸಿದರು. ಅದು ಫಲ ನೀಡಿತು. ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಈ ಬಾರಿ ಇನ್ನಷ್ಟು ಕುಸಿದಿದೆ.

ಆಪ್‌ ಸ್ಥಾನಗಳಿಕೆ 2020 ಮತ್ತು 2015

ಅಭಿವೃದ್ಧಿಯೇ ಮಂತ್ರ...

ಚುನಾವಣಾ ಕಾರ್ಯತಂತ್ರಗಳೇನೇ ಇರಲಿ, ಎಎಪಿಯ ಗೆಲುವಿಗೆ ಅವರ ಆಡಳಿತದಲ್ಲಿ ಜಾರಿ ಮಾಡಲಾದ ಕೆಲವು ಪ್ರಮುಖ ಯೋಜನೆಗಳೇ ಕಾರಣ ಎಂದು ಮತದಾರರು ಹೇಳುತ್ತಾರೆ. ಎಎಪಿ ಅಧಿಕಾರಾವಧಿಯಲ್ಲಿ ಜಾರಿಯಾಗಿ, ಜನರ ಮೆಚ್ಚುಗೆಗೆ ಪಾತ್ರವಾದ ಯೋಜನೆಗಳು...

1. ಖಾಸಗಿ ಶಾಲೆಗಳಿಗೆ ಮೂಗುದಾರ

ಶಿಕ್ಷಣ ಕ್ಷೇತ್ರದಲ್ಲಿ ದೆಹಲಿಯಲ್ಲಿ ಕ್ರಾಂತಿಯೇ ನಡೆದಿದೆ. ಗುಣಮಟ್ಟದ ಶಿಕ್ಷಣ ನೀಡುವ ವಿಚಾರದಲ್ಲಿ ದೆಹಲಿಯ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡುತ್ತಿವೆ. ರಾಜ್ಯದ ಬಜೆಟ್‌ನ ಶೇ 25ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲೂ ಸ್ಮಾರ್ಟ್‌ ಕ್ಲಾಸ್‌, ಈಜುಕೊಳ, ಕ್ಲಾಸ್‌ರೂಮ್‌ ಗ್ರಂಥಾಲಯ, ಅತ್ಯಾಧುನಿಕ ಪೀಠೋಪಕರಣಗಳು ಕಾಣಿಸುತ್ತಿವೆ. ಜನರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಸಾಲುಗಟ್ಟಿ ನಿಲ್ಲುವಂತಾಗಿದೆ.

ಇದರ ಜತೆಗೆ ಸರ್ಕಾರವು ಖಾಸಗಿ ಶಾಲೆಗಳಿಗೆ ಮೂಗುದಾರವನ್ನೂ ಹಾಕಿದೆ. ಶಾಲಾ ಶುಲ್ಕವನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಸುವುದಕ್ಕೆ ತಡೆಯೊಡ್ಡಿದೆ. ಐದು ವರ್ಷಗಳಲ್ಲಿ ಒಮ್ಮೆಯೂ ಖಾಸಗಿ ಶಾಲೆಗಳ ಶುಲ್ಕ ಏರಿಸಲು ಬಿಟ್ಟಿಲ್ಲ ಎಂಬುದು ದೊಡ್ಡ ಸಾಧನೆಯೇ ಆಗಿದೆ. ಸರ್ಕಾರದ ನೀತಿಯನ್ನು ಪ್ರಶ್ನಿಸಿ ಕೆಲವು ಖಾಸಗಿ ಶಾಲೆಗಳವರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಶುಲ್ಕ ಹೆಚ್ಚಳಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ‘ಖಾಸಗಿ ಶಾಲೆಗಳ ಮೇಲಿನ ನಿಯಂತ್ರಣವನ್ನು ಮುಂದುವರಿಸುತ್ತೇವೆ’ ಎಂದು ಕೇಜ್ರಿವಾಲ್‌ ಚುನಾವಣೆಗೂ ಮುನ್ನ ಘೋಷಿಸಿದ್ದಾರೆ.

2. ಉಚಿತ ನೀರು, ವಿದ್ಯುತ್‌

ಮಾಸಿಕ 200 ಯೂನಿಟ್‌ಗೂ ಕಡಿಮೆ ವಿದ್ಯುತ್‌ ಬಳಕೆ ಮಾಡುವವರಿಗೆ ವಿದ್ಯುತ್‌ ಶುಲ್ಕದಲ್ಲಿ ಶೇ 100 ಸಬ್ಸಿಡಿ ಘೋಷಿಸುವ ಮೂಲಕ ಎಎಪಿ ಸರ್ಕಾರವು ಕೆಳ ಮತ್ತು ಮಧ್ಯಮ ವರ್ಗದ ಜನರ ಹೊರೆಯನ್ನು ಇಳಿಸಿದೆ. 201ರಿಂದ 400 ಯೂನಿಟ್‌ ಬಳಕೆದಾರರಿಗೆ ಶುಲ್ಕದಲ್ಲಿ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇತ್ತೀಚಿನವರೆಗೂ ದೆಹಲಿಯ ಜನರು 200 ಯೂನಿಟ್‌ ವಿದ್ಯುತ್‌ ಬಳಕೆಗೆ ₹ 622ರಷ್ಟು ಶುಲ್ಕ ಪಾವತಿಸುತ್ತಿದ್ದರು. 250 ಯೂನಿಟ್‌ಗೆ ₹ 800 ಶುಲ್ಕ ಪಾವತಿಸುತ್ತಿದ್ದವರು ಈಗ ₹ 252 ಪಾವತಿಸುತ್ತಾರೆ. ಇತರ ಬಳಕೆದಾರರಿಗೂ ಸಬ್ಸಿಡಿ ಲಭಿಸುತ್ತಿದೆ.

ಪ್ರತಿ ಬಳಕೆದಾರರಿಗೆ ಮಾಸಿಕ 20 ಸಾವಿರ ಲೀಟರ್‌ ನೀರನ್ನು ಉಚಿತವಾಗಿ ಸರಬರಾರು ಮಾಡುವುದಾಗಿ ಎಎಪಿಯು ಕಳೆದ ಬಾರಿಯ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅದನ್ನು ಈಡೇರಿಸಿದೆ. 20 ಸಾವಿರ ಲೀಟರ್‌ಗೂ ಹೆಚ್ಚಿನ ಪ್ರಮಾಣದ ಬಳಕೆಗೆ ಶುಲ್ಕ ವಿಧಿಸಲಾಗುತ್ತಿದೆ. ಅದನ್ನು 2017ರಲ್ಲಿ ಹೆಚ್ಚಿಸಲಾಗಿದೆ.

ಮತ ಹಂಚಿಕೆ ವಿವರ. 2013, 2015 ಮತ್ತು 2020

3. ಮೊಹಲ್ಲಾ ಕ್ಲಿನಿಕ್‌

ಮೊಹಲ್ಲಾ ಕ್ಲಿನಿಕ್‌ಗಳ ಮೂಲಕ ಜನರಿಗೆ ತಮ್ಮ ಮನೆಯ ಸಮೀಪದಲ್ಲೇ ಕಡಿಮೆ ವೆಚ್ಚದಲ್ಲಿ ಒಳ್ಳೆಯ ಆರೋಗ್ಯ ಸೇವೆ ಲಭಿಸುವಂತೆ ಮಾಡಿದ ಎಎಪಿ, ಆರೋಗ್ಯ ಕ್ಷೇತ್ರದಲ್ಲಿ ಭಾರಿ ಸುಧಾರಣೆಗಳನ್ನು ಮಾಡಿತು. ಜನರಿಗೆ ಸಾಮಾನ್ಯವಾಗಿ ಎದುರಾಗುವ ಜ್ವರ, ಕೆಮ್ಮು, ನೆಗಡಿ, ಚರ್ಮವ್ಯಾಧಿ, ಉಸಿರಾಟದ ಸಮಸ್ಯೆ, ಗಾಯಗಳಿಗೆ ಪ್ರಥಮ ಚಿಕಿತ್ಸೆ ಮುಂತಾದವು ಈ ಮೊಹಲ್ಲಾ ಕ್ಲಿನಿಕ್‌ಗಳಲ್ಲೇ ಲಭಿಸಲು ಆರಂಭವಾದವು. ರೋಗಿಗಳಿಗೆ ಉಚಿತವಾಗಿ ಔಷಧಗಳನ್ನು ನೀಡಲಾಗುತ್ತಿದೆ.

ದೆಹಲಿಯಲ್ಲಿ ಒಟ್ಟಾರೆ ಒಂದು ಸಾವಿರ ಮೊಹಲ್ಲಾ ಕ್ಲಿನಿಕ್‌ಗಳನ್ನು ಆರಂಭಿಸುವುದಾಗಿ ಎಎಪಿ ಹೇಳಿತ್ತು. ಆ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಆದರೆ ಈ ಸೇವೆಯನ್ನು ವಿಸ್ತರಿಸುವುದಾಗಿ ಪಕ್ಷ ಭರವಸೆ ನೀಡಿದೆ. ಮೊಹಲ್ಲಾ ಕ್ಲಿನಿಕ್‌ಗಳು ಜಗತ್ತಿನ ಗಮನವನ್ನು ಸೆಳೆದಿದೆ ಎಂಬುದು ವಿಶೇಷವಾಗಿದೆ.

4. ಮಹಿಳೆಯರಿಗೆ ಉಚಿತ ಪ್ರಯಾಣ

ಕಳೆದ ಅಕ್ಟೋಬರ್‌ 29ರಂದು ಎಎಪಿ ಸರ್ಕಾರವು ದೆಹಲಿಯ ಡಿಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಘೋಷಿಸಿತು. ಮಹಿಳೆಯರು ₹ 10 ನೀಡಿ ಪಿಂಕ್‌ ಟಿಕೆಟ್‌ ಖರೀದಿಸಿದರೆ ಆ ನಂತರ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

5. ಮೃದು ಹಿಂದುತ್ವ

‘ಜಾತಿ– ಧರ್ಮಗಳ ಆಧಾರದಲ್ಲಿ ಮತ ಯಾಚಿಸುವುದಿಲ್ಲ' ಎಂದು ಎಎಪಿ ಹೇಳಿದ್ದರೂ, ಆ ಪಕ್ಷದ ಮುಖಂಡರು ಆಗಾಗ ಇಫ್ತಾರ್‌ ಕೂಟದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದು ಇನ್ನೊಂದು ವರ್ಗದ ಜನರ ಅಸಹನೆಗೆ ಕಾರಣವಾಗಿತ್ತು. ಅದನ್ನು ಮನಗಂಡ ಪಕ್ಷವು ಮೃದು ಹಿಂದುತ್ವಕ್ಕೆ ಮೊರೆಹೋಯಿತು. ಹಿರಿಯ ನಾಗರಿಕರನ್ನು ರೈಲಿನಲ್ಲಿ ಉಚಿತವಾಗಿ ತೀರ್ಥಯಾತ್ರೆಗೆ ಕಳುಹಿಸುವ ‘ಮುಖ್ಯಮಂತ್ರಿ ತೀರ್ಥಯಾತ್ರಾ ಯೋಜನೆ’ಗೆ ಕೇಜ್ರಿವಾಲ್‌ ಅವರು ಕಳೆದ ಜುಲೈ ತಿಂಗಳಲ್ಲಿ ಚಾಲನೆ ನೀಡಿದ್ದರು. ಹೀಗೆ ತೀರ್ಥಯಾತ್ರೆಗೆ ಹೋಗುವ ಹಿರಿಯ ನಾಗರಿಕರ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT