ಶುಕ್ರವಾರ, ಜುಲೈ 1, 2022
22 °C

ದೆಹಲಿಯಲ್ಲಿ ಎಎಪಿ ಗೆಲುವು: ಶಾಹೀನ್‌ಬಾಗ್, ಜಾಮಿಯಾ ನಗರದಲ್ಲಿ ಸಂಭ್ರಮಾಚರಣೆ

ಪಿಟಿಐ Updated:

ಅಕ್ಷರ ಗಾತ್ರ : | |

AAP Celebration

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿಗೆ ಶಾಹೀನ್‌ಬಾಗ್ ನಿವಾಸಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಹಲವಾರು ಮಂದಿ ಉಚಿತ ಊಟ ಮತ್ತು ಬಿರಿಯಾನಿ ವಿತರಿಸಿ ಎಎಪಿ ಗೆಲುವನ್ನು ಕೊಂಡಾಡಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಓಖ್ಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿ ಅಭ್ಯರ್ಥಿ ಅಮಾನತುಲ್ಲಾ ಖಾನ್  ಬಿಜೆಪಿ ಅಭ್ಯರ್ಥಿ ಬ್ರಹಮ್ ಸಿಂಗ್ ಅವರನ್ನು 71,827 ಮತಗಳಿಂದ ಪರಾಭವಗೊಳಿಸಿದ್ದಾರೆ. ಶಾಹೀನ್‌ಬಾಗ್ ಮತ್ತು ಜಾಮಿಯಾ ನಗರ್ ಓಖ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ಮೊದಲ ಸುತ್ತಿನ ಮತ ಎಣಿಕೆ ನಡೆದಾಗ ಸಿಂಗ್ 194  ಮತಗಳ ಮುನ್ನಡೆ ಸಾಧಿಸಿದ್ದರು. ಆಮೇಲೆ ಖಾನ್ ಮುನ್ನಡೆ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ  ಕಳೆದ ಎರಡು ತಿಂಗಳನಿಂದ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ದೆಹಲಿ ಚುನಾವಣಾ ಪ್ರಚಾರದಲ್ಲಿ ಶಾಹೀನ್‌ಬಾಗ್ ಆಗಾಗ ಉಲ್ಲೇಖವಾಗುತ್ತಿತ್ತು.

ಇದನ್ನೂ  ಓದಿExplainer | ಮತ್ತೆ ಆಪ್ ಮಡಿಲಿಗೆ ದೆಹಲಿ: ಕೇಜ್ರಿವಾಲ್ ಗೆಲುವಿಗೆ ಕಾರಣಗಳಿವು...

ಇದು ನಮ್ಮೆಲ್ಲರ ಗೆಲುವು. ನಾವೆಲ್ಲರೂ ಅಮಾನತ್ ಭಾಯ್‌ನ್ನು ನಮ್ಮ ನಾಯಕನಾಗಿ ಆಯ್ಕೆ ಮಾಡಿದ್ದೇವೆ. ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಮತ್ತು ಉದ್ಯೋಗ ಎಲ್ಲದಕ್ಕೂ ಅವರು ಇಲ್ಲಿನ  ಮಹಿಳೆಯರಿಗೆ ಯುವಕರಿಗೆ ಸಹಾಯ ಮಾಡಿದ್ದಾರೆ. ಹಲವಾರು ಯುವಜನರಿಗೆ ಉದ್ಯೋಗ ನೀಡಿದ್ದಾರೆ ಎಂದು ಶಾಹೀನ್‌ಬಾಗ್‌ನ ಶಮೀಮಾ ಬಾನು ಹೇಳಿದ್ದಾರೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಶಾಹೀನ್‌ಬಾಗ್‌ನ ಮಹಿಳೆಯರು ಖುಷಿಯಿಂದ ಹರ್ಷೋದ್ಗಾರ ಮಾಡಿ ಪರಸ್ಪರ ಆಲಿಂಗನ ಮಾಡಿ ಖುಷಿ ಹಂಚಿಕೊಂಡರು. 

ಎಎಪಿ ನಿಜವಾಗಿಯೂ ಆಮ್ ಆದ್ಮಿ (ಸಾಮಾನ್ಯ ವ್ಯಕ್ತಿ)ಯ ಜೀವನದಲ್ಲಿ ಬದಲಾವಣೆ ತಂದಿದೆ. ನಮ್ಮ ಮಕ್ಕಳು ಹತ್ತಿರದಲ್ಲಿರುವ ಸರ್ಕಾರಿ ಶಾಲೆಗೆ ಹೋಗುತ್ತಾರೆ. ನಾವೆಲ್ಲರೂ ಚಿಕಿತ್ಸೆ ಪಡೆಯಬೇಕಾದರೆ ಎಎಪಿ ಸರ್ಕಾರದ  ಮೊಹಲ್ಲಾ ಕ್ಲಿನಿಕ್‌ಗೆ ಹೋಗುತ್ತೇವೆ. ನಾಲ್ಕು ವರ್ಷದಿಂದ ಮಂಡಿ ನೋವಿನಿಂದ ಬಳಲುತ್ತಿದ್ದ ನನ್ನ ಅತ್ತೆ ಅಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಮೆಹಜಬೀನ್ ಖುರೇಷಿ ಹೇಳಿದ್ದಾರೆ.
ಜನರಿಗೆ ಯಾವುದರ ಅಗತ್ಯವಿದೆ ಎಂಬುದು ಎಎಪಿ ಗೊತ್ತು ಅಂತಾರೆ ಖುರೇಷಿ.

ಬಾಟ್ಲಾ ಹೌಸ್, ನೂರ್ ನಗರ್, ಅಬು ಫಜಲ್ ಎನ್‌ಕ್ಲೇವ್,  ಜಕೀರ್ ನಗರ್ ಮತ್ತು ಸುತ್ತುಮುತ್ತ ಪ್ರದೇಶಗಳ ಜನರು ಆಪ್ ಗೆಲುವಿಗೆ ಸಂಭ್ರಮಾಚರಿಸಿದ್ದಾರೆ.

ನಾವು ಕಳೆದ 5 ವರ್ಷಗಳಲ್ಲಿ ಜಾಮಿಯಾ ನಗರದಲ್ಲಿ ಆದ ಬದಲಾವಣೆಯನ್ನು ಕಂಡಿದ್ದೇವೆ. ಅವರ ಪ್ರಾಮಾಣಿಕತೆ ಮತ್ತು ಪಾರದರ್ಶಕ ನೀತಿಯನ್ನು ಮೆಚ್ಚಿ ನಾವು ಎಎಪಿಗೆ ಮತ ನೀಡಿದ್ದೆವು. ಜಾಮಿಯಾ ನಗರ ಮಾತ್ರ ಅಲ್ಲ ಇಡೀ ದೆಹಲಿ ನಿಜವಾದ ಅಭಿವೃದ್ದಿ ಅಂದರೆ ಕೇಜ್ರಿವಾಲ್‌ಗೆ ಮತ ನೀಡಿತ್ತು ಎಂದಿದ್ದಾರೆ ಆಸಿಂ ಖಾನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು