ಸೋಮವಾರ, ಮಾರ್ಚ್ 30, 2020
19 °C
ಪೌರಾಣಿಕ ಧಾರಾವಾಹಿಗಳ ಮರು ಪ್ರಸಾರಕ್ಕೆ ಡಿಡಿ ಒಪ್ಪಿಗೆ

ರಾಮಾಯಣ, ಮಹಾಭಾರತದ ಹಳೇ ಧಾರಾವಾಹಿಗಳಿಗೆ ದೇಶದಲ್ಲಿ ದಿಢೀರ್‌ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದ್ದು, ಮನೆಗಳಲ್ಲಿ ಬಂಧಿಯಾಗಿರುವ ಜನರನ್ನು ರಂಜಿಸಲು, ಅವರನ್ನು ಒತ್ತಡ, ಬೇಸರಗಳಿಂದ ಹೊರ ತರಲು ರಾಮಾಯಾಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವಂತೆ ಹಲವರು ಟ್ವಿಟರ್‌ ಮೂಲಕ ದೂರದರ್ಶನವನ್ನು ಆಗ್ರಹಿಸಿದ್ದಾರೆ. ಜನರ ಒತ್ತಡಗಳಿಗೆ ಮಣಿದಿರುವ ದೂರದರ್ಶನ ಮರು ಪ್ರಸಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶಶಿ ಶೇಖರ್‌, ‘ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿದ್ದು, ಧಾರಾವಾಹಿಗಳ ಹಕ್ಕು ಸ್ವಾಮ್ಯ ಹೊಂದಿರುವವರೊಂದಿಗೆ ಚರ್ಚೆ ಆರಂಭಿಸಿದ್ದೇವೆ. ಮುಂದಿನ ಬೆಳವಣಿಗೆಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು,’ ಎಂದು ಎಂದಿದ್ದಾರೆ.

ಪ್ರಸಾರ ಭಾರತಿ ಅಧಿಕಾರಿಯೊಬ್ಬರು, 'ಎರಡೂ ಧಾರಾವಾಹಿಗಳ ಮರು ಪ್ರಸಾರಕ್ಕೆ ಇರುವ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡ ಬಳಿಕವೇ ಸ್ಪಷ್ಟತೆ ಸಿಗಲಿದೆ,’ ಎಂದು ತಿಳಿಸಿದ್ದಾರೆ. ಈ ಕುರಿತು ದಿ ಪ್ರಿಂಟ್‌ ವರದಿ ಮಾಡಿದೆ.

ಭಾರತೀಯರನ್ನು ಕ್ವಾರಂಟೈನ್‌ ಮಾಡಿದ್ದ ಧಾರಾವಾಹಿಗಳು!

ರಾಮಾಯಣ ಮತ್ತು ಮಹಾಭಾರತ ಪೌರಾಣಿಕ ಧಾರಾವಾಹಿಗಳು ದೇಶದಲ್ಲಿ ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಭಾರಿ ಜನಪ್ರಿಯವಾಗಿದ್ದವು. ಈ ಎರಡೂ ಧಾರಾವಾಹಿಗಳು ದೇಶದ ಜನರನ್ನು ಮನೆಗಳಲ್ಲಿ ಬಂಧಿಗಳನ್ನಾಗಿ ಮಾಡಿದ್ದವು. ಸದ್ಯ ಜನರನ್ನು ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಬಲವಂತವಾಗಿ ಮನೆಗಳಲ್ಲಿ ಬಂಧಿಗಳನ್ನಾಗಿ ಮಾಡಲಾಗಿದೆ. ಇಂಥ ಹೊತ್ತಲ್ಲಿ ಜನರನ್ನು ಕ್ವಾರಂಟೈನ್‌ ಮಾಡಲು ಈ ಎರಡೂ ಧಾರಾವಾಹಿಗಳು ನೆರವಿಗೆ ಬರಬಲ್ಲವು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ‌

ಈ ಧಾರಾವಾಹಿಗಳು ಜನರ ಒತ್ತಡವನ್ನು ನಿವಾರಿಸುವಲ್ಲಿಯೂ ಸಹಕಾರಿ ಎಂದು ಇನ್ನೂ ಕೆಲ ಮಂದಿ ಅಭಿಪ್ರಾಯಪಟ್ಟಿದ್ದಾರೆ.

1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ಅವರ ರಾಮಾಯಣ ಧಾರಾವಾಹಿಯನ್ನೇ ಪ್ರಸಾರ ಮಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ. ಅಲ್ಲದೆ, 1988ರಲ್ಲಿ ದೂರದರ್ಶನ ಮೊದಲ ಬಾರಿಗೆ ಪ್ರಸಾರ ಮಾಡಿದ್ದ ಬಿ.ಆರ್‌ ಚೋಪ್ರಾ ಅವರ ಮಹಾಭಾರತವನ್ನೂ ಮರು ಪ್ರಸಾರ ಮಾಡುವಂತೆ ಜನ ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು