ಸೋಮವಾರ, ಮಾರ್ಚ್ 8, 2021
31 °C

ಡೆಂಗಿ, ಮಲೇರಿಯಾ ಮುನ್ನೆಚ್ಚರಿಕೆ ನೀಡಲಿರುವ ಹವಾಮಾನ ಇಲಾಖೆ

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ಆಲ್ವಾರ್ (ರಾಜಸ್ಥಾನ): ಸೊಳ್ಳೆಗಳಿಂದ ಹರಡುವ ಡೆಂಗಿ ಮತ್ತು ಮಲೇರಿಯಾ ರೋಗಗಳ ಕುರಿತು 15 ದಿನಗಳಿಗೆ ಮುನ್ನವೇ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಲು ಸಜ್ಜಾಗಿದೆ.

ವಾತಾವರಣದ ತೇವಾಂಶ ಕುರಿತ ಮಾಹಿತಿಯನ್ನು ಆಧರಿಸಿ, ಸೊಳ್ಳೆಗಳು ವೃದ್ಧಿಯಾಗಬಹುದಾದ ಸಂಭವನೀಯತೆಯನ್ನು ಗಮನಿಸಿ ಈ ರೋಗಗಳ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಕೆ. ಜೆ. ರಮೇಶ್‌ ಹೇಳಿದರು.

ಸೆಂಟರ್‌ ಫಾರ್ ಸೈನ್ಸ್‌ ಅಂಡ್‌ ಎನ್ವಿರಾನ್ಮೆಂಟ್‌  ವತಿಯಿಂದ ಅನಿಲ್‌ ಅಗರ್‌ವಾಲ್‌ ಪರಿಸರ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾದ ಭಾರತದ ಪರಿಸರದ ಸ್ಥಿತಿಗತಿ ಕುರಿತ ಕಾರ್ಯಗಾರದಲ್ಲಿ ಸೋಮವಾರ , ‘ಹವಾಮಾನ ಬದಲಾವಣೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದೇ ವರ್ಷ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಪ್ರಥಮ ಬಾರಿಗೆ ಈ ರೀತಿಯ ಮುನ್ಸೂಚನೆಯನ್ನು ನೀಡಲು ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದೆ. ಇದರಿಂದ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಸಾಧ್ಯವಾಗಲಿದೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲು ಪೂರಕ ವಾತಾವರಣ ಸೃಷ್ಟಿಯಾದಲ್ಲಿ, ರೋಗಗಳು ಹರಡದಂತೆ ಆರೋಗ್ಯ ಇಲಾಖೆಯೂ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬಹುದು’ ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆಯ ಪರಿಣಾಮಗಳು ದೇಶದಲ್ಲಿ ಗೋಚರಿಸಲು ಶುರುವಾಗಿದ್ದರೂ ಅವು ಮುಂಗಾರು ಮಳೆ ವಿನ್ಯಾಸದ ಮೇಲೆ ಇನ್ನೂಪರಿಣಾಮ ಬೀರಿಲ್ಲ. ದೇಶದಲ್ಲಿ ಒಟ್ಟು ಬೀಳುವ ಮಳೆ ಪ್ರಮಾಣದಲ್ಲಿ ಕಡಿತವಾಗಿಲ್ಲ. ವಾರ್ಷಿಕ ಮಳೆದಿನಗಳ ಸಂಖ್ಯೆ ಕಡಿಮೆಯಾಗಿದ್ದರೂ ಮಳೆ ಬೀಳುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ನೀರಿನ ಲಭ್ಯತೆಯ ಪ್ರಮಾಣವೂ ಹೆಚ್ಚಾಗಿರುವುದನ್ನು ಕೇಂದ್ರ ಜಲ ಆಯೋಗ  ನಡೆಸಿದ ಸಮೀಕ್ಷೆ ಹೇಳಿದೆ. ಆದರೆ ಬೀಳುತ್ತಿರುವ ಮಳೆ ನೀರಿನ ಸಂರಕ್ಷಣೆ ಮಾಡುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಸಿಎಸ್‌ಇ ಸಿದ್ಧಪಡಿಸಿದ ಅಧ್ಯಯನ ವರದಿ  ‘ಭಾರತ ಪರಿಸರದ ಪ್ರಸ್ತುತ ಸ್ಥಿತಿಗತಿ’ ಯನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರದ ಸ್ವಚ್ಛಭಾರತ ಪರಿಕಲ್ಪನೆಯನ್ನು ನ್ಯಾಯಾಲಯ ಸಂಕೀರ್ಣಗಳಿಗೂ ಅನ್ವಯಿಸಬೇಕು. ಈ ಕುರಿತು ನ್ಯಾಯಾಧೀಶರಿಗೂ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.  ಸಿಎಸ್‌ಇ ನಿರ್ದೇಶಕಿ ಸುನೀತಾ ನಾರಾಯಣ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು