ಶುಕ್ರವಾರ, ಮೇ 29, 2020
27 °C

ಛೇ! ಯಾರು ಸಾಯಬೇಕು? ಆಯ್ಕೆ ಮಾಡಬೇಕಾದ ಸಂಕಟದಲ್ಲಿದ್ದಾರೆ ಸ್ಪೇನ್‌ ವೈದ್ಯರು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಹರಡುವಿಕೆಯನ್ನು ಆರಂಭದ ದಿನಗಳಲ್ಲಿ ಹಗುರವಾಗಿ ತೆಗೆದುಕೊಂಡಿದ್ದ ಸ್ಪೇನ್ ಇಂದು ಅದಕ್ಕೆ ಬೆಲೆ ತೆರುತ್ತಿದೆ. ಪ್ರಧಾನಿಯ ಪತ್ನಿ, ಉಪ ಪ್ರಧಾನಿ ಸೋಂಕಿತರಾಗಿದ್ದರು. ಫುಟ್‌ಬಾಲ್ ತಂಡದ ಕೋಚ್ ಮತ್ತು ರಾಜಕುಮಾರಿ ಮೃತಪಟ್ಟಿದ್ದಾರೆ. ಅಲ್ಲಿನ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆಯೆಂದರೆ ನೆರವಿಗೆ ಕೈಚಾಚಿ ಆಸ್ಪತ್ರೆಗೆ ಬಂದವರಲ್ಲಿ ಬದುಕ ಬಲ್ಲವರನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಅಲ್ಲಿನ ವೈದ್ಯರಿಗೆ ಬಂದಿದೆ. ಮನುಷ್ಯ ಕುಲವನ್ನು ಬಾಧಿಸುತ್ತಿರುವ ಈ ಮಹಾ ಸಂಕಟ ಒಂದು ದೇಶವನ್ನು ಹೇಗೆ ಹಿಂಡುತ್ತಿದೆ ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಈ ಸುದೀರ್ಘ ಬರಹದಲ್ಲಿದೆ.

---

ಅದು ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನ ಅತ್ಯಂತ ದೊಡ್ಡ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗ. ಡಾ. ಡೇನಿಯಲ್‌ ಬೆರ್ನಾಬ್ಯು ವ್ಯಕ್ತಿಯೊಬ್ಬರ ಮರಣ ಪತ್ರಕ್ಕೆ ಸಹಿ ಹಾಕಿದರು. ಆವರಿಸಿಕೊಂಡಿದ್ದ ದುಃಖವನ್ನು ನಿಟ್ಟುಸಿರಿನಿಂದ ಹೊರಹಾಕಲೂ ಅವರಿಗೆ ಸಮಯ ಸಿಗಲಿಲ್ಲ. ಇನ್ನೊಂದು ಬೆಡ್‌ನತ್ತ ತಿರುಗಿ ಮತ್ತೋರ್ವ ರೋಗ ಪೀಡಿತರೊಬ್ಬರ ವೈದ್ಯಕೀಯ ದಾಖಲೆ ಪರಿಶೀಲಿಸಿ, ಶುಶ್ರೂಷೆ ಆರಂಭಿಸಿದರು.

ಕೊರೊನಾ ವೈರಸ್‌ ಎಂಬ ಮಹಾಮಾರಿಯ ದಾಳಿಗೆ ತುತ್ತಾಗಿ ಆಸ್ಪತ್ರೆಗೆ ಬಂದಿದ್ದವರಲ್ಲಿ ದುಗುಡ. ಆಸ್ಪತ್ರೆಗೆ ನಮ್ಮನ್ನು ದಾಖಲಿಸಿಕೊಳ್ಳುವ ಮೊದಲೇ ನಾವೆಲ್ಲರೂ ಸತ್ತು ಹೋಗಬಹುದು ಎಂಬ ದುಗುಡ. ಅಲ್ಲಿನ ವೇಟಿಂಗ್‌ ರೂಂನಲ್ಲಿಯೇ ಸಾಕಷ್ಟು ಮಂದಿ ಸಾಯುತ್ತಿದ್ದುದು ಕಟು ವಾಸ್ತವ. ಎಲ್ಲರನ್ನೂ ಉಳಿಸಬೇಕೆನ್ನುವ ತಮ್ಮ ಮನಸ್ಸಿನ ತುಡಿತವನ್ನು ತಡೆಹಿಡಿಯಬೇಕಾದ ಅನಿವಾರ್ಯತೆ ಅಲ್ಲಿನ ವೈದ್ಯರದ್ದು. ಬದುಕಬಲ್ಲರು ಎಂಬ ಭರವಸೆಯ ಲಕ್ಷಣ ಕಂಡವರಿಗಷ್ಟೇ ಅಡ್ಮಿಟ್ ಭಾಗ್ಯ, ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ.

ಆಸ್ಪತ್ರೆಯ ಅವಸ್ಥೆ ಹೀಗಾದರೆ, ಮ್ಯಾಡ್ರಿಡ್‌ ಮಹಾನಗರದ ಬೀದಿಗಳ ಕಥೆ ಬೇರೆಯದ್ದೇ ಆಗಿದೆ. ಸತ್ತವರಿಗೆ ಎರಡ ಹನಿ ಕಣ್ಣೀರು ಹಾಕಿ ವ್ಯವಸ್ಥಿತವಾಗಿ ಅಂತ್ಯಕ್ರಿಯೆ ನಡೆಸುವಷ್ಟು ವ್ಯವಧಾನವಾಗಲೀ, ಅವಕಾಶವಾಗಲೀ ಯಾರಿಗೂ ಸಿಗುತ್ತಿಲ್ಲ. ಸಾಯುವವರ ಸಂಖ್ಯೆ ಸ್ಮಶಾನದ ಸಾಮರ್ಥ್ಯವನ್ನೂ ಮೀರಿದೆ. ಹೀಗಾಗಿ ಆಗಿದಾಗ್ಗೆ ಗುಂಡಿ ತೋಡಿ, ಹೂಳಲು ಆಗುತ್ತಿಲ್ಲ. ದೊಡ್ಡದೊಡ್ಡ ಐಸ್‌ ಸ್ಕೇಟ್‌ ರಿಂಗ್‌ಗಳನ್ನೇ ಶವಾಗಾರಗಳನ್ನಾಗಿ ಮಾರ್ಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಸ್‌ ಸೋಂಕಿಗೆ ಸ್ಪೇನ್‌ ದೇಶದ ರಾಜಕುಮಾರಿ ಬಲಿ


ಸ್ಪೇನ್ ಆಸ್ಪತ್ರೆಯೊಂದರಲ್ಲಿ ರೋಗಿಗೆ ತುರ್ತು ಚಿಕಿತ್ಸೆ

ತುಂಬಿ ತುಳುಕುತ್ತಿವೆ ಆಸ್ಪತ್ರೆಗಳು

ಆಸ್ಪತ್ರೆಗಳು ರೋಗಿಗಳ ಸಂಖ್ಯಾಸ್ಫೋಟದಿಂದ ಕಂಗಾಲಾಗಿವೆ. ಹೀಗಾಗಿ ಹೊಸ ನಿಬಂಧನೆಯನ್ನು ಪಾಲಿಸುತ್ತಿವೆ. ‘ಬದುಕುಳಿಯಬಹುದಾದ ಸಾಧ್ಯತೆ ಇರುವ ಕಿರಿಯ ವಯಸ್ಸಿನವರಿಗೆ ಮಾತ್ರ ಚಿಕಿತ್ಸೆ ಪಡೆಯುವ ಅವಕಾಶ. ಉಳಿಯುವ ಅವಕಾಶ ಕ್ಷೀಣಿಸಿರುವ ಹಿರಿಯರಿಗೆ ಚಿಕಿತ್ಸೆ ನಿರಾಕರಣೆ. ಇದರ ಇನ್ನೊಂದು ಅರ್ಥ. ಅವರು ಸಾಯಬಹುದು ಎಂದು ಗೊತ್ತಿದ್ದರೂ ನಮಗೆ ಏನೂ ಮಾಡಲು ಆಗುತ್ತಿಲ್ಲ' ಎಂದು ವೈದ್ಯ ಬರ್ನಾಬ್ಯೂ ಅಸಹಾಯಕತೆ ತೋಡಿಕೊಂಡರು.

‘ಬೇರೆ ದಿನಗಳಲ್ಲಿ ಇಂಥ ಅಜ್ಜಂದಿರಿಗೆ ಚಿಕಿತ್ಸೆಯಲ್ಲಿ ಮೊದಲ ಆದ್ಯತೆ ಸಿಗುತ್ತಿದೆ. ಆದರೆ ಈಗ ನೋಡಿ, ಒಂದೇ ಸಲಕ್ಕೆ ಅನೇಕರು ಸಾಯಬೇಕಾದ ಪರಿಸ್ಥಿತಿ ಬಂದಿದೆ. ಯಾರನ್ನು ಉಳಿಸುವುದು? ಜೀವ ಉಳಿಸಲು ತರಬೇತಿ ಪಡೆದ ವೈದ್ಯನ ಎದುರು ಈ ಪ್ರಶ್ನೆ ಮೂಡಿದರೆ ಅವನ ಮನಸ್ಸು ಎಷ್ಟು ಪ್ರಕ್ಷುಬ್ಧಗೊಳ್ಳಬಹುದು ಎಂದು ಅಂದಾಜು ಮಾಡಿದ್ದೀರಾ...' ವೈದ್ಯರ ಮಾತು ಸ್ಪೇನ್‌ನ ದುಸ್ಥಿತಿಗೆ ಕನ್ನಡಿ ಹಿಡಿದಿತ್ತು.

ಕೊರೊನಾ ವೈರಸ್‌ ಖಂಡ ಖಂಡಗಳನ್ನೇ ಗುಡಿಸಿಹಾಕುತ್ತಿರುವ ಈ ಹೊತ್ತಿನಲ್ಲಿ ಜಗತ್ತು ಸ್ಪೇನ್‌ ಕಡೆಗೆ ನೋಡುತ್ತಿದೆ. ಕೇವಲ 4.7 ಕೋಟಿ ಜನಸಂಖ್ಯೆಯ ಈ ನಾಡಿನಲ್ಲಿ ಮಹಾಮಾರಿಗೆ ಶರಣಾಗಿ ಸಾಯುತ್ತಿರುವವರ ಪ್ರಮಾಣ ಈ ವೈರಸ್‌ನ ತವರು ಚೀನಾಕ್ಕಿಂತಲೂ ಹೆಚ್ಚಾಗಿದೆ. ಅಷ್ಟೇ ಅಲ್ಲ, ಸೋಂಕು, ಸಾವಿನ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿ ಮುಂದೆ ಬಂದಿರುವ ಇಟಲಿಯನ್ನೂ ಮೀರಿಸುವಂತೆ ಕಾಣುತ್ತಿದೆ. ಇಟಲಿಯಲ್ಲಿ ಕೊರೊನಾ ವೈರಸ್‌ ಕಳೆದ ತಿಂಗಳಿಂದೀಚೆಗೆ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿರುವುದು ಇಡೀ ಪ್ರಪಂಚಕ್ಕೆ ಗೊತ್ತಿರುವ ವಿಷಯ. ಸ್ಪೇನ್‌ನಲ್ಲಿ ಉದ್ಭವಿಸಿರುವ ಈ ಆರೋಗ್ಯದ ಸಮಸ್ಯೆ ಯೂರೋಪ್‌ಗೆ ಎಚ್ಚರಿಕೆಯ ಗಂಟೆಯಾಗಿ ಪರಣಿಮಿಸಿದೆ. ಗಮನಿಸಬೇಕಾದ ವಿಚಾರವೆಂದರೆ ಯೂರೋಪ್‌ನಲ್ಲಿ ಬ್ರಿಟನ್‌ ಮಾತ್ರ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಸ್ಪೇನ್‌ನಲ್ಲಿ (ಮಾರ್ಚ್ 29) ಈವರೆಗೆ 5982 ಮಂದಿ ಸಾವಿಗೀಡಾಗಿದ್ದಾರೆ. ಇದು ಚೀನಾದಲ್ಲಿ ಸತ್ತವರ ಸಂಖ್ಯೆಗಿಂತಲೂ ಹೆಚ್ಚು. ಹೀಗಾಗಿ ಸ್ಪೇನ್‌ ಸಾವಿನ ಮನೆಯಾಗಿ ಪರಿಣಮಿಸಿದೆ. ಈ ಮಹಾಮಾರಿಯನ್ನು ಹತ್ತಿಕ್ಕಲು ಶತಾಯಗತಾಯ ಪ್ರಯತ್ನಿಸುತ್ತಿರುವ ಸ್ಪೇನ್‌ ಹಲವು ಕ್ರಮಗಳನ್ನೂ ಘೋಷಿಸಿದೆ. ಅದರಲ್ಲಿ ಆರ್ಥಿಕ ಕ್ರಮಗಳೂ ಇವೆ. ಹೀಗಾಗಿ ಸಾವಿನ ಸಂಖ್ಯೆ ಕಳೆದ ಗುರುವಾರಕ್ಕೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು.

ಇದನ್ನೂ ಓದಿ: ಸ್ಪೇನ್‌ ಪ್ರಧಾನಿ ಪತ್ನಿಗೆ ಕೊರೊನಾ ವೈರಸ್ ಸೋಂಕು


ಸ್ಪೇನ್‌ ಪ್ರಧಾನಿ ಪೆಟ್ರೋ ಸ್ಯಾಂಚೇಜ್‌

ಸ್ಪೇನ್‌ಗೆ ಎಂದೂ ಇಂಥ ಗಂಡಾಂತರ ಬಂದಿರಲಿಲ್ಲ

ಸ್ಪೇನ್‌ ಪ್ರಧಾನಿ ಪೆಟ್ರೋ ಸ್ಯಾಂಚೇಜ್‌ ಕೇವಲ ಮೂರು ವಾರಗಳ ಹಿಂದೆ ವೈರಸ್‌ ದೇಶವನ್ನು ಆವರಿಸುವ  ಸಾಧ್ಯತೆಗಳನ್ನು ತಳ್ಳಿ ಹಾಕಿದ್ದರು. ಆದರೆ, ಈ ಪರಿಸ್ಥಿತಿ ಏನಾಗಿದೆಯೆಂದರೆ, ಸ್ವತಃ ಅವರೇ ಜನರನ್ನು ಎಚ್ಚರಿಸುವಂತಾಗಿದೆ. ಈ ಮಟ್ಟದ ಬೆದರಿಕೆಯೊಂದು ನಮ್ಮಲ್ಲಿ ಎಂದೂ ಎದುರಾಗಿರಲಿಲ್ಲ ಎಂದು ಅವರು ದೇಶದ ಜನರೆದುರು ಮೈಕ್‌ ಹಿಡಿದು ಹೇಳುವಂತಾಗಿದೆ. 

'ನಾಗರಿಕ ಯುದ್ಧಗಳು ಮತ್ತು ಅದರ ನಂತರದ ಪರಿಣಾಮಗಳು ನಮ್ಮ ನಡುವಿನ ಹಿರಿಯರಿಗಷ್ಟೇ ಗೊತ್ತು. ಆ ಸಂದರ್ಭ ಈಗಿನದ್ದಕ್ಕಿಂತಲೂ ಭೀಕರವಾಗಿತ್ತು’ ಎಂದು ಹೇಳಿಕೊಂಡಿರುವ ಅವರು, 'ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ತುರ್ತು ಪರಿಸ್ಥಿತಿ ಹೇರುವುದು ಅನಿವಾರ್ಯವಾಯಿತು' ಎಂದು ಘೋಷಿಸಿದ್ದಾರೆ. ಜನರು ಮನೆಗಳಿಂದ ಹೊರ ಬಾರದಂತೆ ಮನವಿ ಮಾಡಿದ್ದಾರೆ. ‘ಸ್ಪೇನ್‌ನ ಹೊಸ ತಲೆಮಾರು ಘೋರ ಸಂದರ್ಭಗಳನ್ನು ಎಂದೂ ಕಂಡಿಲ್ಲ’ ಎಂದೂ ಅವರು ಹೇಳಿದ್ದಾರೆ.

ಡಾ. ಬರ್ನಾಬ್ಯೂ ಅವರು ಕೆಲಸ ಮಾಡುವ 17 ಮಹಡಿಗಳ ಲಾ ಪಾಜ್‌ ಆಸ್ಪತ್ರೆಗೆ ದಾಖಲಾಗಲು ಮಂಗಳವಾರ ಒಂದೇ ದಿನ 240 ಅಸ್ವಸ್ಥರು ಎಮರ್ಜೆನ್ಸಿಗೆ ಬಂದಿದ್ದರು. ಅಲ್ಲಿದ್ದ ಮೊದಲ ಹಂತದ ವೈದ್ಯರು ಸಂಪೂರ್ಣವಾಗಿ ಸುರಕ್ಷಿತ ಕವಚಗಳನ್ನು ಧರಿಸಿರಲಿಲ್ಲ. ರೋಗಿಗಳಿಂದ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, ಅಂತರ ಕಾಯ್ದುಕೊಳ್ಳುವುದು ಅಸಾಧ್ಯ ಎನ್ನುವುದು ಅಲ್ಲಿನ ಪರಿಸ್ಥಿತಿ ನೋಡಿದವರಿಗೆ ಅರ್ಥವಾಗುತ್ತಿತ್ತು.

‘ನಮ್ಮ ಜೊತೆ ಕೆಲಸ ಮಾಡುವ ಸಹೋದ್ಯೋಗಿಗಳೆಲ್ಲರೂ ಅನಾರೋಗ್ಯಪೀಡಿತರಾಗಿದ್ದಾರೆ. ನಾನು ರೆಡಿಯೋಲಜಿಸ್ಟ್‌. ನಾನು ಎಮರ್ಜೆನ್ಸಿ ರೂಂನಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿದ್ದರೆ ರೋಗದ ಕಂದಕದಲ್ಲಿದ್ದಂತೆ’ ಎಂದು ಹೇಳುತ್ತಾರೆ ಡಾ.ಬರ್ನಾಬ್ಯೂ.

ಇದನ್ನೂ ಓದಿ: ಕೊರೊನಾ | ಸ್ಪೇನ್‌ನಲ್ಲಿ ತಲ್ಲಣ: ಒಂದೇ ದಿನ 738 ಮಂದಿ ಬಲಿ


ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆದ ಮಹಿಳಾ ದಿನಾಚರಣೆ ಸಮಾರಂಭ

ದುರಂತದ ಮುನ್ನುಡಿ ಬರೆದ ಮಹಿಳಾ ದಿನಾಚರಣೆ

ಮಾರ್ಚ್‌ 8ರ ಮಹಿಳಾ ದಿನಾಚರಣೆಯಂದು ಇಟಲಿಯಲ್ಲಿ ಲಾಕ್‌ ಡೌನ್‌ ಘೋಷಣೆ ಮಾಡಲಾಗಿತ್ತು. ಹಾಗಿದ್ದರೂ ಸ್ಪೇನ್‌ನಲ್ಲಿ ಮಹಿಳಾ ದಿನಾಚರಣೆಯನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಪ್ರಧಾನಿ ಸ್ಯಾಂಚೇಜ್‌ ಕರೆ ಕೊಟ್ಟಿದ್ದರು. ಆ ಹೊತ್ತಲ್ಲಿ ಸ್ಪೇನ್‌ನಲ್ಲಿ 589 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿದ್ದವು. ನಾಲ್ವರು ಮೃತಪಟ್ಟಿದ್ದರು. ಹೀಗಿದ್ದೂ ರಾಷ್ಟ್ರ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ 1.20 ಲಕ್ಷ ಜನ ಸೇರಿದ್ದರು. ಅದರಲ್ಲಿ ಸರ್ಕಾರದ ಸಚಿವರು, ಪ್ರಧಾನಿ ಸ್ಯಾಂಚೇಜ್‌ ಪತ್ನಿ ಬೇಗಾನ್‌ ಗೊಮೆಜ್‌ ಕೂಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಪ್ರಧಾನಿ ಸ್ಯಾಂಚೇಜ್‌, ‘ದೇಶದಲ್ಲಿ ಕೊರೊನಾ ವೈರಸ್‌ ನಿಯಂತ್ರಣದಲ್ಲಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಆದರೆ ಈಗ ಪರಿಸ್ಥಿತಿ ಏನಾಗಿದೆ ಗೊತ್ತೇ? ಪ್ರಧಾನಿ ಸ್ಯಾಂಚೇಜ್‌ ಪತ್ನಿ ಗೋಮೆಜ್‌ ಮತ್ತು ಅಲ್ಲಿನ ಸಮಾನತೆ ಸಚಿವ ಇರೇನೆ ಮೋಟೇರೋಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಉಪ ಪ್ರಧಾನ ಮಂತ್ರಿ ಕಾರ್ಮೆನ್‌ ಕಾಲ್ವೋ ಅವರೂ ಸದ್ಯ ಆಸ್ಪತ್ರೆ ಸೇರಿದ್ದಾರೆ. 86 ವರ್ಷದ ರಾಜಕುಮಾರಿ ಮಾರಿಯಾ ತೆರೇಸಾ ಅವರೂ ಕೋವಿಡ್‌-19ಕ್ಕೆ ಬಲಿಯಾಗಿದ್ದಾರೆ.

ಮಹಿಳಾ ದಿನಾಚರಣೆಯ ಕಾರ್ಯಕ್ರಮದ ನಂತರದ ದಿನಗಳಲ್ಲಿ ಸ್ಪೇನ್‌ನಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇತ್ತ ಪ್ರಧಾನಿ ಸ್ಯಾಂಚೇಜ್‌ ಮುಖದಲ್ಲಿ ಬೆವರಿನ ಹನಿಗಳು ಮೂಡಲಾರಂಭಿಸಿದವು. ವೈರಸ್‌ ಹರಡುವಿಕೆ ಮಿತಿ ಮೀರಿತು. ನಿಯಂತ್ರಣ ತಪ್ಪಿ ವ್ಯಾಪಿಸಿತು. ಸ್ಯಾಂಚೇಜ್‌ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದರು. 

ದೇಶದ ಜನಜೀವನವನ್ನು ಸ್ತಬ್ಧಗೊಳಿಸಿದ ಲಾಕ್‌ಡೌನ್‌ಗೆ ಸ್ಪೇನ್‌ನಲ್ಲಿ ಜನರಿಂದ ಅಷ್ಟೇನೂ ಉತ್ತಮ ಸ್ಪಂದನೆ ಸಿಗಲಿಲ್ಲ. ಅದೇ ಸಂದರ್ಭದಲ್ಲಿ ಸ್ಪೇನ್‌ ಪ್ರಧಾನಿ ಸ್ಯಾಂಚೇಜ್‌ ಅವರು ದೇಶದ ಆರೋಗ್ಯ ಸೇವಾ ವ್ಯವಸ್ಥೆಗೆ ಪುಷ್ಟಿ ನೀಡಲು ಮುಂದಾದರು. ಯಾಕೆಂದರೆ, ಸೋಂಕು ಪ್ರಕರಣಗಳು ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಹಿಮಪಾತದಂತೆ ಬೀಳಲಾರಂಭಿಸಿದ್ದವು. ಆದರೆ, ವೆಂಟಿಲೇಟರ್‌ಗಳಿಲ್ಲದ, ತೀವ್ರ ನಿಗಾ ಘಟಕದಲ್ಲಿ, ತಕ್ಕಷ್ಟು ಹಾಸಿಗೆಗಳಿಲ್ಲದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಾದರೂ ಹೇಗೆಂದು ವೈದ್ಯರೂ ಆಂತಕಗೊಂಡಿದ್ದರು.

ಇದನ್ನೂ ಓದಿ: ಕೋವಿಡ್–19 | ಸ್ಪೇನ್ ಫುಟ್‌ಬಾಲ್ ತಂಡದ 21 ವರ್ಷದ ಕೋಚ್ ಗಾರ್ಸಿಯಾ ಸಾವು


ಸ್ಪೇನ್‌ನ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನವೂ ಈಗ ಆತುರಾತುರ

ವೃದ್ಧಾಶ್ರಮದ ಹಾಸಿಗೆಗಳಲ್ಲಿ ಹೆಣಗಳು

ಕೆಲ ವೃದ್ಧಾಶ್ರಮಗಳಲ್ಲಿ ಅಲ್ಲಿದ್ದ ರೋಗಪೀಡಿತರನ್ನು ಅವರ ಹಣೆಬರಹಕ್ಕೆ ಬಿಟ್ಟು ಸಿಬ್ಬಂದಿ ಪರಾರಿಯಾಗಿದ್ದಾರೆ. ಸೋಂಕು ನಿವಾರಕ ದ್ರಾವಣ ಸಿಂಪಡಿಸಲೆಂದು ಕಟ್ಟಡಗಳ ಸಮೀಪಕ್ಕೆ ಹೋಗಿದ್ದ ಸೇನೆಯ ಸಿಬ್ಬಂದಿಗೆ ವೃದ್ಧಾಶ್ರಮದ ಹಾಸಿಗೆಯಲ್ಲಿ ಶವಗಳು ಕಾಣಿಸಿದ್ದವು. ಈ ವಿಚಾರವನ್ನು ಸ್ಪೇನ್‌ನ ರಕ್ಷಣಾ ಸಚಿವರಾದ ಮಾರ್ಗರಿಟಾ ರೊಬೆಲ್ಸ್‌ ಒಪ್ಪಿಕೊಂಡಿದ್ದರು.

ಕೊರೊನಾ ಸೋಂಕು ದೇಶದಲ್ಲಿ ತೀವ್ರವಾಗಿ ಹರಡುತ್ತಿದೆ. ಶಂಕಿತರಿಂದ ಸಂಗ್ರಹಿಸುತ್ತಿರುವ ಗಂಟಲು ದ್ರವದ ಮಾದರಿಯನ್ನು ಸಕಾಲದಲ್ಲಿ ಪರೀಕ್ಷೆಗೆ ಒಳಪಡಿಸಿ, ಫಲಿತಾಂಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಅಲವತ್ತುಕೊಂಡಿದೆ.

ಒಬ್ಬರಾದ ಮೇಲೆ ಒಬ್ಬರಂತೆ ರೋಗಿಗಳು ಬರುತ್ತಲೇ ಇದ್ದಾರೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗೆ ವಿಶ್ರಾಂತಿ ಮರೀಚಿಕೆಯಾಗಿದೆ. ಅವರ ರಕ್ಷಣೆಗೆ ಬೇಕಾದ ಸಲಕರಣೆಗಳನ್ನೂ ಸರ್ಕಾರಕ್ಕೆ ಒದಗಿಸಲು ಸಾಧ್ಯವಾಗಿಲ್ಲ. ಕಸದಲ್ಲಿ ಸಿಗುವ ಪ್ಲಾಸ್ಟಿಕ್‌ ಹಾಳೆಗಳನ್ನೇ ತಮ್ಮ ದೇಹಕ್ಕೆ ಸುತ್ತಿಕೊಂಡು ವೈದ್ಯರು ರೋಗಿಗಳ ತಪಾಸಣೆ, ಚಿಕಿತ್ಸೆ ಮಾಡುತ್ತಿದ್ದಾರೆ. 'ನಮಗೆ ಕೊಟ್ಟಿರುವ ಪ್ಲಾಸ್ಟಿಕ್‌ ಗ್ಲಾಸ್‌ಗಳ ಗುಣಮಟ್ಟ ಕಳಪೆಯದ್ದಾಗಿದೆ. ಅದರಿಂದ ಸರಿಯಾಗಿ ನೋಡಲು ಆಗುವುದಿಲ್ಲ. ರಕ್ಷಾ ಕವಚ ತೊಟ್ಟು ರೋಗಿಗಳ ನಾಡಿ ಹಿಡಿದರೆ ಅದರ ಮಿಡಿತದ ಅನುಭವವೂ ಸಿಗುತ್ತಿಲ್ಲ' ಎಂದು ವಿಕ್ಟೋರಿಯಾ ನಗರದ ನರ್ಸ್‌ ಒಬ್ಬರು ಅಲವತ್ತುಕೊಂಡರು.

ಸ್ಪೇನ್‌ನಲ್ಲಿ ಸುಮಾರು 4000 ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿರಬಹುದು ಎಂದು ಅಲ್ಲಿನ ಸರ್ಕಾರ ಕಳೆದ ಸೋಮವಾರ ಹೇಳಿತ್ತು. ಇದು ಅಲ್ಲಿನ ವೈದ್ಯಕೀಯ ಸಿಬ್ಬಂದಿಯ ಒಟ್ಟು ಸಂಖ್ಯೆಯ ಶೇ 12ರಷ್ಟು ಪ್ರಮಾಣ. ಬಾಸ್ಕ್‌ ಪ್ರದೇಶದಲ್ಲಿ ಈಚೆಗೆ ಮೃತಪಟ್ಟ 52 ವರ್ಷದ ವೈದ್ಯಕೀಯ ಸಿಬ್ಬಂದಿಯೊಬ್ಬರ ಸಾವಿಗೆ ರಕ್ಷಣಾ ಸಲಕರಣೆಗಳು ಪೂರೈಕೆ ಆಗದಿದ್ದುದೇ ಕಾರಣ ಎಂದು ನರ್ಸ್‌ಗಳ ಸಂಘ ಆರೋಪಿಸಿತ್ತು.

ಇದನ್ನೂ ಓದಿ: Explainer | ಕೊರೊನಾ ಕಂಟಕ ಯಾವಾಗ ಕೊನೆ?


ಲಾಕ್‌ಡೌನ್ ಅವಧಿಯಲ್ಲಿ ಸ್ಪೇನ್‌ನ ದೊಡ್ಡ ಕಟ್ಟಡವೊಂದನ್ನು ಸೋಂಕು ಮುಕ್ತಗೊಳಿಸಿದ ರಕ್ಷಣಾ ಸಿಬ್ಬಂದಿ

ಫಲ ನೀಡುತ್ತಿದೆ ಲಾಕ್‌ಡೌನ್ ನಿರ್ಧಾರ

ಇದೀಗ ಜನರನ್ನು ಮನೆಯಲ್ಲಿಯೇ ಉಳಿಸಬೇಕೆನ್ನುವ ಕಠಿಣ ನಿರ್ಧಾರಕ್ಕೆ ಫಲ ಸಿಗುತ್ತಿದೆ. ಇಟಲಿಯಲ್ಲಿ ಕಳೆದ ಬುಧವಾರದಿಂದ (ಲಾಕ್‌ಡೌನ್ ಜಾರಿಯಾದ ಮೂರು ವಾರಗಳ ನಂತರ) ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ 635 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 77,000 ಮಂದಿಯ ಮೇಲೆ ಅಲ್ಲಿನ ಪೊಲೀಸರು ಮತ್ತು ಸಿವಿಲ್ ಡಿಫೆನ್ಸ್ ಸಿಬ್ಬಂದಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಮೊದಲು ಸ್ಪೇನ್ ಸರ್ಕಾರ ಒಂದು ತಿಂಗಳ (ನಾಲ್ಕು ವಾರ) ಲಾಕ್‌ಡೌನ್ ಸಾಕು ಎಂದುಕೊಂಡಿತ್ತು. ಆದರೆ ಇದು ಕನಿಷ್ಠ ಎರಡು ತಿಂಗಳ ಅವಧಿಗೆ (ಎಂಟು ವಾರ) ವಿಸ್ತರಿಸಲಿದೆ ಎಂದು ದೇಶದ ದೊಡ್ಡ ಉದ್ಯಮಿಗಳು ಹೇಳುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸರ್ಕಾರಕ್ಕೆ ಖಾತ್ರಿಯಾಗುವವರೆಗೆ ಲಾಕ್‌ಡೌನ್‌ ಹಿಂಪಡೆಯುವ ಸಾಧ್ಯತೆಯೇ ಇಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಸ್ಪೇನ್‌ನಲ್ಲಿ ನಿರುದ್ಯೋಗ ಪ್ರಮಾಣ ಈಗಾಗಲೇ ದೈತ್ಯರೂಪದಲ್ಲಿ ಬೆಳೆದಿದೆ. ಈ ಬಾರಿ ಬೇಸಿಗೆಗೆ ಪ್ರವಾಸಿಗರು ಬರುವುದು ಅನುಮಾನ. ಹೀಗಾಗಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗಾಗಿ ಕುಸಿತದತ್ತ ಆರ್ಥಿಕತೆಯ ಚೇತರಿಕೆ ಹೇಗೆ ಎಂಬುದು ಅಲ್ಲಿನ ಸರ್ಕಾರಕ್ಕೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಇಷ್ಟೆಲ್ಲದರ ನಡುವೆ ಸ್ಪೇನ್‌ ಶೇ 65ರಷ್ಟು ಜನರು ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ತನ್ನ ವಶದಲ್ಲಿದ್ದ 10 ಶತಕೋಟಿ ಯೂರೊ ಮೊತ್ತದ ಸಾಲಪತ್ರಗಳನ್ನು ಸ್ಪೇನ್ ಸರ್ಕಾರ ಮಾರಾಟ ಮಾಡಿ ಆರ್ಥಿಕತೆಗೆ ಮರುಜೀವ ನೀಡಲು ಯತ್ನಿಸಿದೆ. ಅಲ್ಪಾವಧಿಯಲ್ಲಿ ಆರ್ಥಿಕತೆ ಕುಸಿದು ಬೀಳುವುದನ್ನು ಈ ಕ್ರಮ ತಪ್ಪಿಸಿದೆ. 6.40 ಲಕ್ಷ ತ್ವರಿತ ಪರೀಕ್ಷಾ ಕಿಟ್‌ಗಳನ್ನು ಖರೀದಿಸಿದೆ. ಕೇವಲ ಎರಡು ದಿನಗಳಲ್ಲಿ 16 ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಮಾರ್ಚ್‌ 10ರಿಂದ ಈವರೆಗೆ ದೇಶದಲ್ಲಿ 40 ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗಿದೆ.

ವಿಶ್ವವಿದ್ಯಾಲಯಗಳು, ಕಂಪನಿಗಳು ಅಷ್ಟೇಕೆ ಕೆಲ ವ್ಯಕ್ತಿಗಳು ಸಹ ತ್ರಿಡಿ ಪ್ರಿಂಟರ್‌ಗಳ ನೆರವಿನಿಂದ ವೆಂಟಿಲೇಟರ್ ಮತ್ತು ರಕ್ಷಣಾ ಗ್ಲಾಸ್‌ಗಳನ್ನು ತಯಾರಿಸುವ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಜೀವಂತವಾಗಿರಿಸಲು ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ: Explainer | ಕೋವಿಡ್‌–19 ಪ್ಯಾಂಡೆಮಿಕ್‌: ಏನಿದರ ಅರ್ಥ? 


ಆಸ್ಪತ್ರೆಗೆ ದಾಖಲಾಗುವ ಅದೃಷ್ಟ ಸಿಕ್ಕಿತು. ಉಳಿದೀತೆ ಜೀವ?

'ಎಲ್ಲವೂ ಕೈ ಮೀರುತ್ತಿದೆ' -ಇದು ವಿಷಾದವೋ, ವಾಸ್ತವವೋ

ಮ್ಯಾಡ್ರಿಡ್‌ ಹೊರವಲಯದಲ್ಲಿ 5000 ಹಾಸಿಗೆಗಳ ಬೃಹತ್ ಆಸ್ಪತ್ರೆಯೊಂದನ್ನು ಸೇನೆ ನಿರ್ಮಿಸುತ್ತಿದೆ. ಅಲ್ಲಿ ಈಗಾಗಲೇ 1400 ಹಾಸಿಗೆಗಳ ಸಾಮರ್ಥದ ಘಟಕವನ್ನು ಸೇವೆಗೆ ಅರ್ಪಿಸಲಾಗಿದೆ.

'ಕೋವಿಡ್-19 ಸೋಂಕಿನಿಂದ ದೇಶವನ್ನು ಕಾಪಾಡಲು ನಮ್ಮ ಅಧಿಕಾರಿಗಳು ಮತ್ತು ರಾಜಕಾರಿಣಿಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಅರಿವು ನನಗಿದೆ. ಆದರೆ ಅದು ಸಾಕಾಗುವುದಿಲ್ಲ' ಎನ್ನುವುದು ನರ್ಸ್‌ ಸಂಘದ ವಕ್ತಾರರ ಅಭಿಪ್ರಾಯ.

ಲ ಪಾಜ್‌ ಆಸ್ಪತ್ರೆಯು ವೇಟಿಂಗ್‌ ರೂಂಗಳನ್ನು ಕೋವಿಡ್-19ರ ಚಿಕಿತ್ಸಾ ವಾರ್ಡ್‌ಗಳಾಗಿ ಮಾರ್ಪಡಿಸಿದೆ. ಮುಂದಿನ ದಿನಗಳಲ್ಲಿ ಮುಖ್ಯ ರಿಸೆಪ್ಷನ್‌ ಹಾಲ್‌ ಸಹ ಕೋವಿಡ್-19 ಚಿಕಿತ್ಸಾ ವಾರ್ಡ್ ಆಗಲಿದೆ.

ಆದರೆ ಈ ನಡುವೆ ತುರ್ತು ಚಿಕಿತ್ಸಾ ಸೌಲಭ್ಯ ಬಳಸಲು ಇರುವ ನಿಯಮಗಳು ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಶೀಘ್ರವಾಗಿ ಶ್ವಾಸಕೋಶಗಳು ಸಾಮರ್ಥ್ಯ ಕಳೆದುಕೊಳ್ಳುವ ಯುವ ರೋಗಿಗಳಿಗೆ ಈ ಘಟಕಗಳನ್ನು ಮೀಸಲಿರಿಸಲಾಗಿದೆ.  

'ಎಲ್ಲವೂ ಕೈಮೀರುತ್ತಿದೆ ಎನಿಸುತ್ತಿದೆ' ಎಂದು ಬರ್ನಾಬ್ಯೂ ಹೇಳುತ್ತಾರೆ.

ಸ್ಪೇನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಈಗಾಗಲೇ ಎರಡು ವಾರ ದಾಟಿದೆ. ಕೊರೊನಾವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದು ನಿರ್ಣಾಯಕ ಘಟ್ಟವಾಗಿತ್ತು. ಲಾಕ್‌ಡೌನ್ ಘೋಷಣೆಯ ನಂತರ ಹೊಸ ಪ್ರಕರಣಗಳು ವರದಿಯಾಗುವ ಪ್ರಮಾಣ ಸಾಕಷ್ಟು ಕಡಿಮೆಯಾಗಲಿದೆ ಎಂಬುದು ಸ್ಪೇನ್‌ನ ವೈದ್ಯರು ಮತ್ತು ನರ್ಸ್‌ಗಳ ನಿರೀಕ್ಷೆಯಾಗಿತ್ತು. ಆದರೆ ಆರಂಭದಲ್ಲಿ ಜನರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಅಲ್ಲಿನ ವೈದ್ಯಕೀಯ ಸಿಬ್ಬಂದಿ ಹೇಳುತ್ತಾರೆ.

---

(ಮಾಹಿತಿ: ಎಎಫ್‌ಪಿ, ರಾಯಿಟರ್ಸ್‌, ಬ್ಲೂಂಬರ್ಗ್‌, ನ್ಯೂಯಾರ್ಕ್ ಟೈಮ್ಸ್‌. ಬರಹ: ಹರಿಶಂಕರ್‌ ಆರ್. ಮತ್ತು ಡಿ.ಎಂ.ಘನಶ್ಯಾಮ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು