ಶಿವಮೊಗ್ಗ: ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಶಾಲೆಗಳನ್ನು ಆರಂಭಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ.ಲೋಕೇಶ್ ಎಚ್ಚರಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿಯಾಗಿ ಶಾಲೆಗಳನ್ನು ಆರಂಭಿಸಲಿಚ್ಛಿಸುವ ಸಂಸ್ಥೆಗಳ ಮುಖ್ಯಸ್ಥರು, ನಿಯಮಾನುಸಾರ ಇಲಾಖೆಯ ಅನುಮತಿ ಪಡೆದ ನಂತರವೇ ಶಾಲೆಯನ್ನು ಆರಂಭಿಸಬೇಕು ಎಂದು ತಿಳಿಸಿದರು.
ರಾಜ್ಯ ಪಠ್ಯಕ್ರಮ ಮತ್ತು ಐಸಿಎಸ್ಇ ಪಠ್ಯಕ್ರಮ ಪಾಲನೆ ಮಾಡುತ್ತಿರುವ ಎಲ್ಲಾ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಶುಲ್ಕದ ವಿವರಗಳನ್ನು ಶಾಲೆಯ ಸೂಚನಾ ಫಲಕದಲ್ಲಿ ಹಾಕಬೇಕು. ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಕಡ್ಡಾಯವಾಗಿ ವಿವರಗಳನ್ನು ಪ್ರಕಟಿಸಬೇಕು. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲೇ ಶಾಲೆಯ ದಾಖಲಾತಿ ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಸೂಚಿಸಿದರು.
ಉಚಿತ ಮತ್ತು ಕಡ್ಡಾಯ ಶಿಕ್ಷಣ, ಮಕ್ಕಳ ಹಕ್ಕು ಕಾಯ್ದೆಯಂತೆ ಖಾಸಗಿ ಶಾಲೆಗಳಲ್ಲಿ ಮೂರು ವರ್ಷದ ಅವಧಿಯೊಳಗೆ ಅಗತ್ಯ
ಮೂಲ ಸೌಲಭ್ಯ ಗಳನ್ನು ಕಲ್ಪಿಸಬೇಕು. ನಿಗದಿಪಡಿಸಿದ →ವಿದ್ಯಾರ್ಹತೆ →ಹೊಂದಿರುವ →ಶಿಕ್ಷಕರನ್ನೇ →ನೇಮಿಸಿಕೊಳ್ಳ →ಬೇಕು. ಇಲ್ಲದಿದ್ದರೆ ಅಂತಹ ಶಾಲೆಯ ಆಡಳಿತ ಮಂಡಳಿ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವು ವಿಚಾರಣೆ ನಡೆಸಿ, ₹ 5 ಲಕ್ಷದವರೆಗೆ ದಂಡ ವಿಧಿಸಲಿದೆ ಎಂದು ತಿಳಿಸಿದರು.
ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ತೆರಿಗೆ ವಸೂಲಿ ಮಾಡುವಂತಿಲ್ಲ. ಪ್ರವೇಶ ಪರೀಕ್ಷೆಯನ್ನೂ ನಡೆಸುವಂತಿಲ್ಲ. ಪಾಲಕರಿಂದ ಪಡೆದ ಶುಲ್ಕಕ್ಕೆ ಸೂಕ್ತ ರಸೀದಿ ನೀಡಬೇಕು. ಶಿಕ್ಷಣ ಸಂಸ್ಥೆಯವರು ಯಾವುದೇ ಕಾರಣಕ್ಕೂ ಮಕ್ಕಳ ದಾಖಲಾತಿಯನ್ನು ನಿರಾಕರಿಸುವಂತಿಲ್ಲ. ಪೋಷಕರಿಗಾಗಲೀ, ಮಕ್ಕಳಿಗಾಗಲೀ ಲಿಖಿತ ಅಥವಾ ಮೌಖಿಕ ಸಂದರ್ಶನ ನಡೆಸುವಂತಿಲ್ಲ ಎಂದು ಸೂಚಿಸಿದರು.
ಶಾಲೆಯಲ್ಲಿ ಮೂಲಸೌಲಭ್ಯ ಒದಗಿಸುವ ಜತೆಗೆ ಮಕ್ಕಳ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಬೇಕು. ಅಲ್ಲದೇ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಜಾಗೃತ ದಳವನ್ನು ರಚಿಸಬೇಕು. ಪ್ರತಿ ಶಾಲೆಗೂ ಭೇಟಿ ನೀಡಿ, ದಾಖಲಾತಿ ಪ್ರಕ್ರಿಯೆಯನ್ನು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.
ಶಾಲಾ ವಾಹನದಲ್ಲಿ ಸುರಕ್ಷತಾ ನಿಯಮಗಳನ್ನು ಅಳವಡಿಸಿರಬೇಕು. ಚಾಲಕರು ಪರವಾನಗಿ ಹೊಂದಿರಬೇಕು. ಅವರಿಗೆ ಕನಿಷ್ಠ 4 ವರ್ಷಗಳ ಅನುಭವ ಇರಬೇಕು. ವಾಹನದಲ್ಲಿ ಕರೆದೊಯ್ಯುವ ಮಕ್ಕಳ ಹೆಸರು, ತರಗತಿ ಮತ್ತು ಮನೆಯ ವಿಳಾಸ, ದೂರವಾಣಿ ಸಂಖ್ಯೆ, ರಕ್ತದ ಗುಂಪು, ಮಾರ್ಗದ ವಿವರಗಳನ್ನು ವಾಹನದಲ್ಲಿ ಇಟ್ಟಿರಬೇಕು. ಅಲ್ಲದೇ 15 ವರ್ಷಕ್ಕಿಂತ ಹಳೆಯದಾದ ವಾಹನ ಬಳಸಬಾರದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ರಾಕೇಶ್‌ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚಾದೊ ಅವರೂ ಇದ್ದರು.
ಓದಿರಬೇಕು ಎಂಬ ನಿರ್ಬಂಧ ಬೇಡ
ಶಾಲೆಗಳಲ್ಲಿ 1ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಜೂನ್ 1ರಂದು 5ವರ್ಷ 10ತಿಂಗಳು ಹಾಗೂ ಎಲ್‌ಕೆಜಿ ತರಗತಿಗೆ ದಾಖಲಾಗುವ ಮಗುವು ಮೂರು ವರ್ಷ 10ತಿಂಗಳು ಪೂರ್ಣಗೊಂಡಿರಬೇಕು. ಪೋಷಕರು ಪದವೀಧರರಾಗಿರಬೇಕು. ಪ್ರವೇಶ ಬಯಸುವ ಮಕ್ಕಳು ಇಂತಿಷ್ಟೇ ಅಂಕಗಳನ್ನು ಪಡೆದಿರಬೇಕು ಎಂದು ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.