ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ತಲುಪಿದೆ ಆರ್ಥಿಕ ವೃದ್ಧಿ ದರ

ಜೂನ್‌ ತ್ರೈಮಾಸಿಕದಲ್ಲಿ ಶೇ 5ರಷ್ಟು ವೃದ್ಧಿ
Last Updated 3 ಸೆಪ್ಟೆಂಬರ್ 2019, 8:51 IST
ಅಕ್ಷರ ಗಾತ್ರ

ನವದೆಹಲಿ: ತಯಾರಿಕಾ ವಲಯದಲ್ಲಿನ ತೀವ್ರ ಕುಸಿತ ಮತ್ತು ಮಂದಗತಿಯ ಕೃಷಿ ಚಟುವಟಿಕೆಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿನ ಆರ್ಥಿಕ ವೃದ್ಧಿ ದರವು ಶೇ 5ರಷ್ಟಾಗಿದೆ.

ಈ ವೃದ್ಧಿ ದರ ಕುಸಿತವು ಆರ್ಥಿಕ ತಜ್ಞರ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿ ಇದೆ. ಶೇ 5.7ರಷ್ಟು ವೃದ್ಧಿ ದಾಖಲಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದರು. 2013ರ ಮೊದಲ ತ್ರೈಮಾಸಿಕದ ನಂತರದ ಅತಿ ಕಡಿಮೆ ವೃದ್ಧಿ ದರ ಇದಾಗಿದೆ. ಆರ್ಥಿಕತೆಯಲ್ಲಿನ ಸಂಕಷ್ಟದ ಪರಿಸ್ಥಿತಿಯು ಮುಂದುವರೆದಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡವನ್ನೂ ಹೆಚ್ಚಿಸಲಿದೆ.

ಏಪ್ರಿಲ್‌ನಿಂದ ಜೂನ್‌ ಅಂತ್ಯದವರೆಗಿನ ತ್ರೈಮಾಸಿಕದಲ್ಲಿನ ಒಟ್ಟು ಆಂತರಿಕ ಉತ್ಪಾದನೆ ಹೆಚ್ಚಳವು (ಜಿಡಿಪಿ) 6 ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ತಲುಪಿದೆ. 2012–13ನೇ ಸಾಲಿನ ಜನವರಿ– ಮಾರ್ಚ್‌ ತ್ರೈಮಾಸಿಕ ಅವಧಿಯಲ್ಲಿನ ವೃದ್ಧಿ ದರ ಶೇ 4.3ರಷ್ಟಾಗಿತ್ತು. 2018–19ರಲ್ಲಿನ ಇದೇ ತ್ರೈಮಾಸಿಕದಲ್ಲಿನ ವೃದ್ಧಿ ದರ ಶೇ 8ರಷ್ಟಿತ್ತು. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡಿದ್ದ ತ್ರೈಮಾಸಿಕದಲ್ಲಿ ಶೇ 5.8ರಷ್ಟು ವೃದ್ಧಿ ದರ ದಾಖಲಾಗಿತ್ತು.

ತಯಾರಿಕಾ ವಲಯದಲ್ಲಿನ ಒಟ್ಟು ಮೌಲ್ಯ ಸೇರ್ಪಡೆಯು ಶೇ 0.6ರಷ್ಟಕ್ಕೆ ಕುಸಿದಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು ಶೇ 12.1ರಷ್ಟಿತ್ತು. ಇದು ಆರ್ಥಿಕತೆಯಲ್ಲಿನ ಕೈಗಾರಿಕಾ ವಲಯದ ನಿರಾಶಾದಾಯಕ ಸ್ಥಿತಿಗೆ ಕನ್ನಡಿ ಹಿಡಿದಿದೆ. ಅದೇ ಬಗೆಯಲ್ಲಿ ಕೃಷಿ ವಲಯದಲ್ಲಿನ ಮೌಲ್ಯ ಹೆಚ್ಚಳವು ಶೇ 2ರಷ್ಟು ಮಾತ್ರ ಹೆಚ್ಚಾಗಿದೆ. 2018–19ರ ಮೊದಲ ತ್ರೈಮಾಸಿಕದಲ್ಲಿ ಇದು ಶೇ 5.1ರಷ್ಟಿತ್ತು.

ಸ್ಥಿರ ಬೆಲೆ ಆಧರಿಸಿದ ‘ಜಿಡಿಪಿ’ಯು ಮೊದಲ ತ್ರೈಮಾಸಿಕದಲ್ಲಿ ₹ 35.85 ಲಕ್ಷ ಕೋಟಿಗಳಷ್ಟಾಗಿದೆ. 2018–19ರಲ್ಲಿನ ಇದೇ ಅವಧಿಯಲ್ಲಿ ಈ ಮೊತ್ತವು ₹ 34.14 ಲಕ್ಷ ಕೋಟಿಗಳಷ್ಟಿತ್ತು. ಈ ಲೆಕ್ಕದಲ್ಲಿ ವೃದ್ಧಿ ದರವು ಕೇವಲ ಶೇ 5ರಷ್ಟಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗಣಿಗಾರಿಕೆ ವಲಯವು ಮಾತ್ರ ಶೇ 2.7ರಷ್ಟು ಹೆಚ್ಚಳ ದಾಖಲಿಸಿದೆ. ನಿರ್ಮಾಣ ವಲಯದಲ್ಲಿನ ಬೆಳವಣಿಗೆ ದರ ಹಿಂದಿನ ವರ್ಷದ ಶೇ 9.6ಕ್ಕೆ ಹೋಲಿಸಿದರೆ ಶೇ 5.7ಕ್ಕೆ ಇಳಿದಿದೆ. ಸೇವಾ ವಲಯದಲ್ಲಿ ವ್ಯಾಪಾರ, ಹೋಟೆಲ್‌ ಮತ್ತು ದೂರಸಂಪರ್ಕ ವಲಯಗಳು ಮಾತ್ರ ಮಾರ್ಚ್‌ ತ್ರೈಮಾಸಿಕದಲ್ಲಿನ ಶೇ 6ಕ್ಕೆ ಹೋಲಿಸಿದರೆ ಶೇ 7.1ರಷ್ಟು ಹೆಚ್ಚಳ ಸಾಧಿಸಿವೆ.

ದೇಶಿ ಆರ್ಥಿಕತೆಯ ಪ್ರಗತಿಯು ನಿಧಾನವಾಗಿರುವುದನ್ನು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು ಒಪ್ಪಿಕೊಂಡಿದ್ದಾರೆ. ‘2013–14ರಲ್ಲಿಯೇ ಇದೇ ಪರಿಸ್ಥಿತಿ ಇತ್ತು. ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಬಂಡವಾಳ ಹೂಡಿಕೆ ಹೆಚ್ಚಳಗೊಳ್ಳಲಿದೆ’ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

**

ದೇಶಿ ಮತ್ತು ವಿದೇಶಿ ವಿದ್ಯಮಾನಗಳ ಪ್ರಭಾವದಿಂದಾಗಿ ಆರ್ಥಿಕ ವೃದ್ಧಿ ದರ ಹೆಚ್ಚಳದಲ್ಲಿ ಕುಸಿತ ಕಂಡಿದೆ
- ಕೆ. ವಿ. ಸುಬ್ರಮಣಿಯನ್‌,ಮುಖ್ಯ ಆರ್ಥಿಕ ಸಲಹೆಗಾರ

**

10 ಬ್ಯಾಂಕ್‌ಗಳ ಮಹಾವಿಲೀನ

ಕರ್ನಾಟಕದ ಎರಡು ಬ್ಯಾಂಕ್‌ಗಳೂ ಸೇರಿದಂತೆ ಸರ್ಕಾರಿ ಸ್ವಾಮ್ಯದ ಒಟ್ಟಾರೆ 6 ಬ್ಯಾಂಕ್‌ಗಳನ್ನು, ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ, ವಿಜಯ ಬ್ಯಾಂಕ್‌ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಈಗಾಗಲೇ ವಿಲೀನಗೊಂಡಿವೆ. ಈಗ ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್‌ ಬ್ಯಾಂಕ್ ಮತ್ತು ಯೂನಿಯನ್‌ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಕಾರ್ಪೊರೇಷನ್‌ ಬ್ಯಾಂಕ್‌ ವಿಲೀನದಿಂದಾಗಿ ರಾಜ್ಯದಲ್ಲಿ ಸ್ಥಾಪನೆಗೊಂಡು ರಾಷ್ಟ್ರೀಕರಣಗೊಂಡಿದ್ದ ಐದು ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್‌ ಒಂದೇ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಜಾಗತಿಕ ಮಟ್ಟದ ಬ್ಯಾಂಕ್‌ಗಳನ್ನಾಗಿ ಪರಿವರ್ತಿಸಲು 10 ಬ್ಯಾಂಕ್‌ಗಳ ಮಹಾ ವಿಲೀನ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಅತಿದೊಡ್ಡ ವಿಲೀನ ನಿರ್ಧಾರ ಇದಾಗಿದೆ. ಈ ನಿರ್ಧಾರವೂ ಸೇರಿದಂತೆ 2017ರಿಂದೀಚೆಗೆ ನಡೆದ ವಿಲೀನ ಪ್ರಕ್ರಿಯೆಯಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆಯು ಈಗ 27 ರಿಂದ 12ಕ್ಕೆ ಇಳಿಯಲಿದೆ. ವಿಲೀನ ಪ್ರಕ್ರಿಯೆಯಿಂದಾಗಿ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಈಗ ದೇಶದ ಎರಡನೆ ಅತಿದೊಡ್ಡ ಬ್ಯಾಂಕ್‌ ಆಗಲಿದೆ.

‘ವಿಲೀನದಿಂದಾಗಿ ಸಿಬ್ಬಂದಿ ಸಂಖ್ಯೆ ಕಡಿತವಾಗುವುದಿಲ್ಲ. ನೌಕರರ ಸೌಲಭ್ಯಗಳಲ್ಲಿ ಸುಧಾರಣೆ ಆಗಲಿದೆ. ಅವರೆಲ್ಲ ಹೆಚ್ಚು ಪ್ರಯೋಜನ ಪಡೆದುಕೊಳ್ಳಲಿದ್ದಾರೆ’ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT