ಬುಧವಾರ, ಜನವರಿ 22, 2020
21 °C
ತಮಿಳುನಾಡು: ₹2 ಲಕ್ಷದಿಂದ ₹50 ಲಕ್ಷಕ್ಕೆ ಹುದ್ದೆಗಳು ಹರಾಜು: ಪ್ರಭಾವ ಬೀರುತ್ತಿರುವ ಪ್ರಬಲ ಜಾತಿಗಳು

ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮಾರಾಟಕ್ಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡಿನ ಕೆಲವು ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳನ್ನು ಹರಾಜು ಹಾಕುತ್ತಿರುವುದು ನಡೆದಿದೆ.

ಗ್ರಾಮದ ಮುಖ್ಯಸ್ಥರೇ ಈ ಸ್ಥಾನಗಳನ್ನು ಹರಾಜು ಹಾಕುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾದ ಬಳಿಕ ಈ ಸ್ಥಾನಗಳನ್ನು ₹2 ಲಕ್ಷದಿಂದ ₹50 ಲಕ್ಷಕ್ಕೆ ಹರಾಜು ಹಾಕುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಡಲೂರ್‌, ಥೆನಿ, ತಂಜಾವೂರು, ಪುದುಕ್ಕೊಟ್ಟೈ, ರಾಮನಾಥಪುರ, ತಿರುಚಿನಾಪಳ್ಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹರಾಜುಗಳು ನಡೆದಿರುವ ವಿಡಿಯೊಗಳು ಹರಿದಾಡುತ್ತಿವೆ.

ಹರಾಜಿನಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡುವವರು ಗ್ರಾಮದ ಮುಖ್ಯಸ್ಥರು ನೇಮಿಸುವ ಸಮಿತಿ ಬಳಿ ಹಣವನ್ನು ಠೇವಣಿ ಇಡಬೇಕು. ಹರಾಜು ಪ್ರಕ್ರಿಯೆ ನಡೆದ ಬಳಿಕ ಈ ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸದಂತೆ ಗ್ರಾಮದ ಮುಖ್ಯಸ್ಥರು ಆದೇಶ ಹೊರಡಿಸುತ್ತಾರೆ. ಒಂದು ವೇಳೆ, ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೂ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದು ಮುಖ್ಯಸ್ಥರ ಆದೇಶವನ್ನು ಗ್ರಾಮಸ್ಥರು ಗಂಭೀರವಾಗಿ ಪರಿಗಣಿಸುವುದಕ್ಕೆ ಸಾಕ್ಷಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಕಡಲೂರಿನ ನದುಕುಪ್ಪಂ ಗ್ರಾಮದಲ್ಲಿನ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ₹50 ಲಕ್ಷಕ್ಕೆ ಹರಾಜು ಹಾಕಲಾಗಿದೆ. ಈ ಹರಾಜಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಹರಿದಾಡಿತ್ತು. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಕಡಲೂರ್‌ ಜಿಲ್ಲಾಧಿಕಾರಿ ವಿ. ಅಂಬುಸೇಲ್ವನ್‌ ತಿಳಿಸಿದ್ದಾರೆ.

‘ಹರಾಜಿನಲ್ಲಿ ಹಣ ನೀಡಿದ್ದಾರೆ ಎನ್ನಲಾದ ವ್ಯಕ್ತಿಯೂ ದೂರು ಸಲ್ಲಿಸಿದ್ದಾರೆ. ಚುನಾವಣಾ ಪ್ರಕ್ರಿಯೆಗೆ ಭಂಗ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು