ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ಮಾಡಿಕೊಳ್ಳಿ: ನಾವು ಹಿಂದಿ ವಿರೋಧಿಗಳಲ್ಲ, ಹೇರಿಕೆ ಸಹಿಸಲ್ಲ ಅಷ್ಟೇ...

Last Updated 14 ಸೆಪ್ಟೆಂಬರ್ 2019, 2:22 IST
ಅಕ್ಷರ ಗಾತ್ರ

‘ಕನ್ನಡಿಗರಿಗೆ ಹಿಂದಿ ಭಾಷೆಯ ಮೇಲೇಕೆ ಕೋಪ?’ ಕಳೆದ ಕೆಲವು ವರ್ಷಗಳಿಂದ ‘ಹಿಂದಿ ಹೇರಿಕೆ’ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಅಭಿಯಾನವನ್ನು ಗಮನಿಸಿದರೆ ಕೆಲವರ ಮನಸ್ಸಿನಲ್ಲಿಯಾದರೂ ಇಂತಹ ಪ್ರಶ್ನೆ ಉದ್ಭವಿಸದಿರದು. ಹಾಗಾದರೆ ನಿಜವಾಗಿಯೂ ಕನ್ನಡಿಗರಿಗೆ ಹಿಂದಿಯೆಂದರೆ ವಿರೋಧವೇ? ಕನ್ನಡದ ಮೇಲೆ ಹಿಂದಿ ಸಾಹಿತ್ಯ, ಪದಗಳು, ನುಡಿಗಟ್ಟುಗಳ ಪ್ರಭಾವ ಇಲ್ಲವೇ? ಹಾಗೆಯೇ ಕನ್ನಡ ಸಾಹಿತ್ಯವೂ ಹಿಂದಿಯ ಮೇಲೆ ಪ್ರಭಾವ ಬೀರಿಲ್ಲವೇ?

‘ಹಿಂದಿ ಹೇರಿಕೆ’ ಹಿಂದೆ–ಮುಂದೆ...

ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ‘ಹಿಂದಿ ಹೇರಿಕೆ’ ಎಂಬ ಪರಿಕಲ್ಪನೆ, ಅದರ ವಿರುದ್ಧದ ಕೂಗು ತೀವ್ರಗೊಳ್ಳತೊಡಗಿತು. ದಕ್ಷಿಣದ ರಾಜ್ಯಗಳಲ್ಲಿ ಬಲವಂತವಾಗಿ ಹಿಂದಿ ಭಾಷೆ ಹೇರಲು ಕೇಂದ್ರ ಸರ್ಕಾರ ಮುಂದಾಗಿದ್ದೇ ಇದಕ್ಕೆ ಕಾರಣ.

‘ಸೂಕ್ಷ್ಮವಾಗಿ ಗಮನಿಸಿದರೆ, ಸಂವಿಧಾನದ 351ನೇ ವಿಧಿಯಲ್ಲಿ ಹಿಂದಿ ಬಗ್ಗೆ ಹೆಚ್ಚಿನ ಒಲವು ಇದ್ದಂತಿರುವುದನ್ನು ಕಾಣಬಹುದು. ಅಲ್ಲಿ ಹಿಂದಿಯೇತರ 21 ಭಾಷೆಗಳ ಕುರಿತು ಹೇಳುವುದು ಮಾತ್ರ ತೀರಾ ಔಪಚಾರಿಕವಾಗಿದೆ. ಎಂಟನೇ ಷೆಡ್ಯೂಲ್‌ನಲ್ಲಿರುವ 22 ಭಾಷೆಗಳ ಅಭಿವೃದ್ಧಿಗೆ ಸಮಾನ ಪ್ರೋತ್ಸಾಹ ನೀಡಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ, 343 ರಿಂದ 351ರ ವರೆಗಿನ ವಿಧಿಗಳು ಇದನ್ನು ಮುಕ್ತವಾಗಿ ಹೇಳದೆ ಹಿಂದಿ ಭಾಷೆಗೆ ಕದ್ದುಮುಚ್ಚಿ ಸಹಕರಿಸುವುದು ದುಃಖದ ಸಂಗತಿ’ ಎಂದು ಹಿರಿಯ ವಕೀಲಸಿ.ಎಚ್‌.ಹನುಮಂತರಾಯ ಅವರು ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.

ಆದರೆ, ಹಿಂದಿ ‘ರಾಷ್ಟ್ರ ಭಾಷೆ’ ಎಂದು ಎಲ್ಲೂ ಉಲ್ಲೇಖವಾಗಿಲ್ಲ. ಇದುವರೆಗೂ ಸಂವಿಧಾನದಲ್ಲಾಗಲಿ, ಒಕ್ಕೂಟ ಸರ್ಕಾರದ ಅಧಿಕೃತ ದಾಖಲೆಯಲ್ಲಾಗಲಿ ‘ರಾಷ್ಟ್ರ ಭಾಷೆ’ಯ ಉಲ್ಲೇಖವೇ ಇಲ್ಲ. ಹೀಗಿದ್ದರೂ ಕೇಂದ್ರ ಸರ್ಕಾರ ಶಿಕ್ಷಣ ನೀತಿಗೆ ತಿದ್ದುಪಡಿ ತಂದು ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳೂ ಆ ಭಾಷೆ ಕಲಿಯಬೇಕು ಎಂದು ಹೇರಿಕೆ ಮಾಡಹೊರಟಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಯಿತು. ಬಳಿಕ ವಿರೋಧಕ್ಕೆ ಮಣಿದ ಸರ್ಕಾರ ಶಿಕ್ಷಣ ನೀತಿಗೆ ಮತ್ತೆ ತಿದ್ದುಪಡಿ ಮಾಡಿದ್ದು ಈಗ ಇತಿಹಾಸ. ಆದರೂ ದಕ್ಷಿಣದ ರಾಜ್ಯಗಳಲ್ಲಿ ಪರೋಕ್ಷವಾಗಿ ಹಿಂದಿ ಭಾಷೆ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಹಲವು ನಿದರ್ಶನಗಳು ಸಾಬೀತುಪಡಿಸಿವೆ.

ಹಳಸಿಲ್ಲ ಭಾಷೆ–ಬಾಂಧವ್ಯ

ಒಂದು ಭಾಷೆಯಾಗಿ ಹಿಂದಿಯನ್ನು ಯಾವತ್ತಿಗೂ ಕನ್ನಡಿಗರು ದ್ವೇಷಿಸಿಲ್ಲ. ಹಿಂದಿ–ಕನ್ನಡದ ನಡುವಣ ಸಂಬಂಧ ಬಹಳ ಹಿಂದಿನಿಂದಲೂ ಚೆನ್ನಾಗಿಯೇ ಇತ್ತು ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ.

ಹಿಂದಿಯಿಂದ ಅನೇಕ ಕಥೆ, ಕಾದಂಬರಿ, ಕವನ ಸಂಕಲನಗಳು ಕನ್ನಡಕ್ಕೆ ಅನುವಾದಗೊಂಡಿವೆ.ತತ್ವಜ್ಞಾನಿ, ವಾಗ್ಗೇಯಕಾರ ತುಳಸೀದಾಸ್ ಅವರ ‘ರಾಮಚರಿತಮಾನಸ’ದಿಂದ ತೊಡಗಿ ಇತ್ತೀಚಿನವರೆಗಿನ ಅನೇಕ ಕೃತಿಗಳು ಹಿಂದಿಯಿಂದ ಕನ್ನಡಕ್ಕೆ ಅನುವಾದಗೊಂಡಿವೆ.

ಹಿಂದಿ ಭಾಷೆಯ ಸಾಹಿತ್ಯಗಳನ್ನು ಕನ್ನಡಕ್ಕೆ ಅನುವಾದಿಸಿದವರಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಪ್ರಮುಖರು. ಇವರು ಮೋಹನ ರಾಕೇಶ ಎಂಬುವವರು ಹಿಂದಿಯಲ್ಲಿ ಬರೆದ ನಾಟಕಗಳನ್ನು ‘ಆಷಾಢದ ಒಂದು ದಿನ’, ‘ಅಲೆಗಳಲ್ಲಿ ರಾಜಹಂಸಗಳು’, ‘ಅಧೇ ಅಧೂರೆ’ ಎಂದೂ ಧರ್ಮವೀರ ಎಂಬುವವರ ಹಿಂದಿ ನಾಟಕವನ್ನು ‘ಅಂಧಯುಗ’ ಎಂದೂ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಹಿಂದಿ ಮೂಲದ ಮತ್ತೊಂದು ನಾಟಕವನ್ನು ‘ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ’ ಎಂದೂ ಭಾಷಾಂತರ ಮಾಡಿದ್ದಾರೆ. ಹಿಂದಿಯಿಂದ ಕನ್ನಡಕ್ಕೆ 'ಮೀರವಾಣಿ'ಮತ್ತು ‘ಕನುಪ್ರಿಯಾ’ ಎಂಬ ಹೆಸರಿನಲ್ಲಿ ಕಾವ್ಯಗಳೆರಡನ್ನೂ ಅನುವಾದ ಮಾಡಿದ್ದಾರೆ.

ಶಿವಮೊಗ್ಗ ಮೂಲದ ಹಿರಿಯ ಸಾಹಿತಿ, ಅಧ್ಯಾಪಕ ಡಿ.ಎನ್‌.ಶ್ರೀನಾಥ್ ಅವರೂ ಹಿಂದಿಯ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅಭಿಜ್ಞಾನ, ಅಂತಿಮ ಪಣ,ಶಿಶಿರ,ಲಬಂಗಿ ಮೂಲತಃ ಹಿಂದಿ ಭಾಷೆಯವು. ಹಾಗೆಯೇಜಿ.ಎಸ್.ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಕನ್ನಡದ 15ಕ್ಕೂ ಹೆಚ್ಚು ಸಾಹಿತಿಗಳ ಕೃತಿಗಳನ್ನು ಹಿಂದಿಗೂ ಅನುವಾದಿಸಿದ್ದಾರೆ.ವಾರಿಸ್ ತಥಾ ಅನ್ಯ ಕಹಾನಿಯಾಂ, ಧರತೀ ಸೇ (ಕವನ ಸಂಕಲನ) ಮತ್ತು ಕನ್ನಡ್‌ಕೀ ಪ್ರತಿನಿಧಿ ಕಹಾನಿಯಾಂ ಇತ್ಯಾದಿ ಕೃತಿಗಳು ಹಿಂದಿಗೆ ಅನುವಾದಗೊಂಡಿವೆ.

ಹಿಂದಿಯ ನಿರ್ಮಲ್‌ವರ್ಮಾ ಅವರ ‘ವೇದಿನ್’ಕಾದಂಬರಿಯನ್ನು ತಿಪ್ಪೇಸ್ವಾಮಿಯವರು ‘ಆ ದಿನಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದಿಯ ‘ಸಾರ್ಥವಾಹನ’ ಕೃತಿಯನ್ನುಎಚ್.ಎಸ್.ಪಾಟೀಲರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದಿಯ ಖ್ಯಾತ ಸಾಹಿತಿ ಪ್ರೇಮಚಂದ್ ಅವರ ನಿರ್ಮಲಾ, ಗೋದಾನ್ ಕೃತಿಗಳೂ ಕನ್ನಡಕ್ಕೆ ಅನುವಾದಗೊಂಡಿವೆ. ವಿ.ಎಸ್‌. ಖಂಡೇಕರ್ ಅವರ ಯಯಾತಿ, ರಾಹುಲಸಾಂಕ್ರುತ್ಯಾಯನಅವರ 'ವೊಲ್ಗಾ ಸೇ ಗಂಗಾ' (ವೋಲ್ಗಾಗಂಗಾ) ಹೀಗೆ ಅನೇಕ ಹಿಂದಿ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಕನ್ನಡಿಗರು ಇವುಗಳನ್ನು ಮುಕ್ತವಾಗಿ ಸ್ವೀಕರಿಸಿದ್ದಾರೆ.

ತಿಪ್ಪೇಸ್ವಾಮಿ, ಕುಮುದಪ್ರಿಯ, ಬಿ.ನಂ.ಚಂದ್ರಯ್ಯ, ಎಸ್.ಎಂ.ರಾಮಚಂದ್ರ ಸ್ವಾಮಿ,ಡಿ.ಕೆ.ಭಾರದ್ವಾಜ, ಗುರುನಾಥ ಜೋಶಿ, ಎಂ.ಎಸ್.ಕೃಷ್ಣ ಮೂರ್ತಿ, ಪ್ರತಾಪ್ ಸುಧಾಕರ್ ಸೇರಿದಂತೆಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಕೈಂಕರ್ಯದಲ್ಲಿ ಅನೇಕ ಸಾಹಿತಿಗಳು, ಲೇಖಕರು ತೊಡಗಿಸಿಕೊಂಡಿದ್ದಾರೆ.

ಇದೇ ರೀತಿ ಕನ್ನಡದಿಂದ ಹಿಂದಿಗೆ ಅನುವಾದ ಮಾಡುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಪ್ರಮುಖರೆಂದರೆಬಿ.ಆರ್.ನಾರಾಯಣ್. ಇವರು ಕನ್ನಡದ 40ಕ್ಕೂ ಹೆಚ್ಚು ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ.

ಬಿ.ವಿ.ಕಾರಂತ, ಎಸ್.ರಾಮಚಂದ್ರ, ತಿಪ್ಪೇಸ್ವಾಮಿ, ಹಿರಣ್ಣಯ್ಯ, ಸರೋಜಿನಿ ಮಹಿಷಿ, ಡಿ.ಎನ್.ಶ್ರೀನಾಥ್, ಟಿ.ಆರ್.ಭಟ್, ಜಿ.ಎಂ.ಉಮಾಪತಿ ಶಾಸ್ತ್ರಿ ಹೀಗೆ ಅನೇಕರು ಕನ್ನಡದ ಪ್ರಮುಖ ಕೃತಿಗಳನ್ನು ಹಿಂದಿಗೆ ಅನುವಾದ ಮಾಡಿದ್ದಾರೆ.ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಪ್ರಧಾನ ಗುರುದತ್ತ ಅವರು ಹಿಂದಿಗೆ ಅನುವಾದಿಸಿದ್ದಾರೆ. ಸರೋಜಿನಿ ಮಹಿಷಿ ಅವರು ಡಿ.ವಿ.ಗುಂಡಪ್ಪನವರ ಮಂಕು ತಿಮ್ಮನ ಕಗ್ಗವನ್ನು, ಶಿವರಾಮ ಕಾರಂತರ ಪ್ರವಾಸ ಕಥನ ‘ಅಪೂರ್ವ ಪಶ್ಚಿಮ’ ಕೃತಿಯನ್ನು ಹಿಂದಿಗೆ ಭಾಷಾಂತರಿಸಿದ್ದಾರೆ. ಇದೇ ರೀತಿ ಗಿರೀಶ್ ಕಾರ್ನಾಡರ ತುಘಲಕ್, ಹಯವದನ, ಹಿಟ್ಟಿನ ಹುಂಜ, ಶ್ರೀರಂಗರ ಕೇಳು ಜನಮೇಜಯ, ರಂಗಭಾರತ, ಕತ್ತಲೆ ಬೆಳಕು ಸೇರಿದಂತೆ ಸುಮಾರು 15 ಕೃತಿಗಳನ್ನು ಬಿ.ವಿ.ಕಾರಂತ ಅವರು ಹಿಂದಿಗೆ ಅನುವಾದಿಸಿದ್ದಾರೆ. ಖ್ಯಾತ ಸಾಹಿತಿಯು.ಆರ್.ಅನಂತಮೂರ್ತಿಯವರ ‘ಘಟಶ್ರಾದ್ಧ’ ಕಥೆ ಆಧರಿಸಿ ಹಿಂದಿಯಲ್ಲಿ ‘ದೀಕ್ಷಾ’ ಎಂಬ ಚಲನಚಿತ್ರವೂ ತಯಾರಾಗಿತ್ತೆಂಬುದು ಗಮನಾರ್ಹ.

ಇವೆಲ್ಲ ಹಿಂದಿ ಮತ್ತು ಕನ್ನಡದ ನಡುವಣ ಬಾಂಧವ್ಯಕ್ಕೆ ಪ್ರತ್ಯಕ್ಷ ನಿದರ್ಶನಗಳು. ಕನ್ನಡ ಸಾಹಿತ್ಯವನ್ನು ಹಿಂದಿ ಭಾಷಿಕರು ಸ್ವೀಕರಿಸಿದ್ದರೆ ಇತ್ತ ಕನ್ನಡಿಗರೂ ಹಿಂದಿ ಸಾಹಿತ್ಯ ಮೇಲೆ ಸಾಕಷ್ಟು ಅಧ್ಯಯನ ನಡೆಸಿರುವುದಕ್ಕೆ ನೂರಾರು ಉದಾಹರಣೆಗಳಿವೆ. ಆದರೆ, ಈಗ ಸಮಸ್ಯೆ ತಂದೊಡ್ಡಿರುವುದು ‘ಹಿಂದಿ’ಯ ಹೇರಿಕೆ ವಿಚಾರ.

ಹೇರಿಕೆ ಸಲ್ಲ

‘ಹಿಂದಿ ಹೇರಿಕೆ’ಯ ಕಾವು ಏರಲು ಕಾರಣವಾಗಿದ್ದು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ‘ತ್ರಿಭಾಷಾ ಸೂತ್ರ’. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರಕಟಿಸಿದ್ದ ಕೇಂದ್ರ ಸರ್ಕಾರವು ‘ಪ್ರಾಥಮಿಕ ಹಂತದಲ್ಲಿ ಎಲ್ಲ ವಿದ್ಯಾರ್ಥಿಗಳು ಹಿಂದಿ, ಇಂಗ್ಲಿಷ್‌ ಮತ್ತು ಒಂದು ಪ್ರಾದೇಶಿಕ ಭಾಷೆಯನ್ನು ಕಲಿಯಬೇಕು. ಆರನೇ ತರಗತಿಯಲ್ಲಿ ಒಂದು ಭಾಷೆಯನ್ನು ಬದಲಾಯಿಸಲು ಅವಕಾಶ ಇದೆ. ಆದರೆ, ಹಿಂದಿ ಭಾಷಿಕ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯನ್ನು ಬದಲಾಯಿಸಲು ಅವಕಾಶ ಇಲ್ಲ. ಭಾರತದ ಒಂದು ಭಾಷೆಯ ಕಲಿಕೆಯನ್ನು ಬದಲಾಯಿಸಲು ಮಾತ್ರ ಅವಕಾಶ. ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಕೂಡ ಹಿಂದಿ ಮತ್ತು ಇಂಗ್ಲಿಷ್‌ ಕಲಿಕೆಯನ್ನು ಮುಂದುವರಿಸಬೇಕು. ಪ್ರಾದೇಶಿಕ ಭಾಷಾ ಕಲಿಕೆಯನ್ನು ಮಾತ್ರ ಬದಲಾಯಿಸಬಹುದು’ ಎಂದು ಉಲ್ಲೇಖಿಸಿತ್ತು. ಇದು ಕನ್ನಡಿಗರೂ ಸೇರಿದಂತೆ ಇತರ ದಕ್ಷಿಣ ಭಾರತದ ಇತರ ಭಾಷಿಕರನ್ನು ಕೆರಳಿಸಿದ್ದು ನಿಜ.

ತೀವ್ರ ವಿರೋಧದ ಬಳಿಕ,‘ತ್ರಿಭಾಷಾ ಸೂತ್ರವನ್ನು ಕರಡು ನೀತಿಯಲ್ಲಿ ಸೇರಿಸುವ ಉದ್ದೇಶವೇ ಇರಲಿಲ್ಲ. ಹಾಗಿದ್ದರೂ ಅದು ವರದಿಯಲ್ಲಿ ಹೇಗೆ ಸೇರಿಕೊಂಡಿತು ಮತ್ತು ಇಡೀ ನೀತಿಯ ಕೇಂದ್ರ ಬಿಂದುವಾಗಿ ಪರಿವರ್ತಿತವಾಯಿತು ಎಂಬುದು ತಿಳಿದಿಲ್ಲ’ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಈಗ ಇತಿಹಾಸ.

ಬಳಿಕ ಪರಿಷ್ಕೃತ ಕರಡನ್ನು ಪ್ರಕಟಿಸಿದ ಸರ್ಕಾರ, ‘ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಮೂರು ಭಾಷೆಗಳನ್ನು ಕಲಿಯಬೇಕು. ಅವುಗಳ ಪೈಕಿ ಒಂದು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳನ್ನು ಬದಲಾಯಿಸಲು ಬಯಸಿದರೆ ಆರು ಅಥವಾ ಏಳನೇ ತರಗತಿಯಲ್ಲಿ ಅದಕ್ಕೆ ಅವಕಾಶ ಇದೆ. ಆದರೆ, ಈ ಹಂತದಲ್ಲಿ ಮಾಧ್ಯಮಿಕ ಶಾಲೆಯ ಭಾಷಾ ಪರೀಕ್ಷೆಯಲ್ಲಿ ಅವರು ತೇರ್ಗಡೆ ಆಗಬೇಕು (ಒಂದು ಭಾಷೆಯ ಸಾಹಿತ್ಯವನ್ನೂ ಕಲಿಯಬೇಕು). ಮಾಧ್ಯಮಿಕ ಹಂತದ ಪರೀಕ್ಷೆಗಳಲ್ಲಿ ಭಾಷಾ ಬಳಕೆಯ ಜ್ಞಾನವನ್ನಷ್ಟೇ ಪರೀಕ್ಷಿಸಲಾಗುತ್ತದೆ. ಆದ್ದರಿಂದ, ಆರನೇ ತರಗತಿಯಲ್ಲಿ ವಿದ್ಯಾರ್ಥಿಯು ಭಾಷೆಯನ್ನು ಬದಲಾಯಿಸುವುದು ಕಾರ್ಯಸಾಧುವಾದ ವಿಚಾರ. ಮಾಧ್ಯಮಿಕ ಶಾಲೆಯ ಹಂತದಲ್ಲಿ ಹೆಚ್ಚುವರಿ ಭಾಷೆಗಳ ಕಲಿಕೆಯ ಅವಕಾಶ ಒದಗಿಸಬೇಕು’ ಎಂದು ಉಲ್ಲೇಖಿಸಿತು.

ಇಷ್ಟಾದರೂ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡುವ ಹುನ್ನಾರ ತೆರೆಯ ಮರೆಯಲ್ಲಿ ನಡೆಯುತ್ತಲೇ ಇದೆ. ಭಾಷೆ–ಭಾಷೆಗಳ ನಡುವಣ ಉತ್ತಮ ಬಾಂಧವ್ಯ ರಾಜಕೀಯ ಆಯಾಮದಿಂದಾಗಿ ವಿಚಿತ್ರ ತಿರುವು ಪಡೆದುಕೊಂಡಿರುವುದು ವಿಷಾದನೀಯ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT