ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಸಿ ದಾಟಿ ಬಂದಿದ್ದ ಚೀನಾ ಸೈನಿಕರು; ಚಾರಿತ್ರಿಕ ದಾಖಲೆಗಳು

ಉಪಗ್ರಹ ಚಿತ್ರಗಳು ನೀಡುವ ಚಿತ್ರಣ
Last Updated 29 ಜೂನ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ:ಚೀನಾದ ಸೈನಿಕರು ಭಾರತದ ಭೂ ಪ್ರದೇಶದೊಳಕ್ಕೆ ಬಂದಿದ್ದಾರೆ ಎಂಬುದನ್ನು ಚಾರಿತ್ರಿಕ ದಾಖಲೆಗಳು ಮತ್ತು ಉಪಗ್ರಹ ಚಿತ್ರಗಳು ತೋರಿಸುತ್ತಿವೆ. ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ದಾಟಿ ಬಂದಿರುವ ಚೀನಾದ ಸೈನಿಕರು ಭಾರತದ ಭೂಪ್ರದೇಶದಲ್ಲಿ ನೆಲೆಯಾಗಿದ್ದಾರೆ ಎಂದು ಈ ದಾಖಲೆಗಳು ಹೇಳುತ್ತಿವೆ. ಎಲ್‌ಎಸಿಯ ಸಮೀಪದಲ್ಲಿ ಮೂಲಸೌಕರ್ಯಗಳನ್ನು ಚೀನಾ ಸೃಷ್ಟಿಸಿಕೊಂಡಿದೆ.

ಎಲ್ಲಿಯವರೆಗೆ ತನ್ನ ಭೂಭಾಗ ಇದೆ ಎಂದು ಚೀನಾ ಪ್ರತಿಪಾದಿಸುತ್ತಿದೆ ಎಂಬ ದಾಖಲೆಯನ್ನು ವಿದೇಶಾಂಗ ಸಚಿವಾಲಯವು 1960–61ರಲ್ಲಿ ಪ್ರಕಟಿಸಿತ್ತು. ಗಾಲ್ವನ್‌ ನದಿ ಪ್ರದೇಶದಲ್ಲಿ ಚೀನಾದ ಗಡಿ ರೇಖೆಯ ಪ್ರತಿಪಾದನೆ ಏನು ಎಂಬ ವಿವರಗಳು ಈ ದಾಖಲೆಯಲ್ಲಿ ಇವೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್‌ ಅವರು ಈ ದಾಖಲೆಯನ್ನು ಟ್ವೀಟ್‌ ಮಾಡಿದ್ದಾರೆ.

ಈ ದಾಖಲೆಗಳ ಪ್ರಕಾರ, ಚೀನಾದ ಪ್ರತಿಪಾದನೆಯ ಗಡಿ ರೇಖೆಯು ಎರಡು ಶಿಖರಗಳ ಮೂಲಕ ಸಾಗಿ, ದಕ್ಷಿಣದಲ್ಲಿ ಸಣ್ಣ ಕಣಿವೆಯ ಮೂಲಕ ಗಾಲ್ವನ್‌ ನದಿಯನ್ನು ಹಾದು ಹೋಗುತ್ತದೆ (ರೇಖಾಂಶ 78 ಡಿಗ್ರಿ 13 ನಿಮಿಷ ಪೂರ್ವ, ಅಕ್ಷಾಂಶ 34 ಡಿಗ್ರಿ 46 ನಿಮಿಷ ಉತ್ತರ).

ಈ ಮಾಹಿತಿಯನ್ನು ಗೂಗಲ್‌ ಅರ್ಥ್‌ ಪ್ರೊದಲ್ಲಿ ಹಾಕಿ ಪರಿಶೀಲಿಸಿದರೆ, ಚೀನಾದ ಪ್ರತಿಪಾದನೆಯ ರೇಖೆ ಎಲ್ಲಿ ಎಂಬುದು ತಿಳಿಯುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಉಪ‍ಗ್ರಹ ಚಿತ್ರಗಳ ಜತೆಗೆ ಇದನ್ನು ಹೋಲಿಸಿದಾಗ, ಚೀನಾ ಸೈನಿಕರು ಆ ದೇಶವೇ ಪ್ರತಿಪಾದಿಸುತ್ತಿದ್ದ ರೇಖೆಯನ್ನು ದಾಟಿ ಮುಂದೆ ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

‘ಭಾರತ ಸರ್ಕಾರ ಮತ್ತು ಚೀನಾ ಸರ್ಕಾರದ ಅಧಿಕಾರಿಗಳು ಗಡಿಗೆ ಸಂಬಂಧಿಸಿ ಸಿದ್ಧಪಡಿಸಿದ ವರದಿ’ಯಲ್ಲಿ ಚೀನಾದ ಪ್ರತಿಪಾದನೆಯ ಅಕ್ಷಾಂಶ ಮತ್ತು ರೇಖಾಂಶದ ನಿಖರ ಮಾಹಿತಿ ಇದೆ ಎಂದು ರಾವ್‌ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. ಈ ದಾಖಲೆಯ ಎರಡು ಪುಟಗಳನ್ನು ಅವರು ಟ್ವೀಟ್‌ ಮಾಡಿದ್ದಾರೆ.

ಕಮಾಂಡರ್‌ಗಳ ಸಭೆ ನಾಳೆ
ಪೂರ್ವ ಲಡಾಖ್‌ನ ಎಲ್‌ಎಸಿ ಬಿಕ್ಕಟ್ಟು ಶಮನಕ್ಕಾಗಿ ಭಾರತ ಮತ್ತು ಚೀನಾ ಸೇನೆಯ ಹಿರಿಯ ಕಮಾಂಡರ್‌ಗಳ ಸಭೆಯು ಮಂಗಳವಾರ ನಡೆಯಲಿದೆ.

‘ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಸಭೆಯು ಈ ಬಾರಿ ಭಾರತದ ಭಾಗವಾದ ಚುಸುಲ್‌ನಲ್ಲಿ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಎರಡು ಸಭೆಗಳು ನಡೆದಿದ್ದವು. 14 ಕೋರ್‌ನ ಮುಖ್ಯಸ್ಥ ಲೆ.ಜ. ಹರಿಂದರ್‌ ಸಿಂಗ್‌ ಮತ್ತು ಚೀನಾದ ಮೇ.ಜ. ಲಿಯು ಲಿನ್‌ ನಡುವೆ ಜೂನ್‌ 6 ಮತ್ತು ಜೂನ್‌ 22ರಂದು ಸಭೆಗಳು ನಡೆದಿದ್ದವು. ಈ ಎರಡೂ ಸಭೆಗಳು ಚೀನಾದ ಮೊಲ್ಡೊದಲ್ಲಿ ಜರುಗಿದ್ದವು.

ಎರಡನೇ ಸಭೆಯು ಸುಮಾರು 11 ತಾಸು ನಡೆದಿದ್ದರೂ ಫಲಪ್ರದ ಆಗಿರಲಿಲ್ಲ.

ಭಾರತ ಮತ್ತು ಚೀನಾ ನಡುವೆ ಗಡಿ ತಕರಾರು ಏಪ್ರಿಲ್‌ನಿಂದಲೇ ಆರಂಭವಾಗಿತ್ತು. ಪಾಂಗಾಂಗ್‌ ಸರೋವರದ ಉತ್ತರ ದಂಡೆ, ಗಾಲ್ವನ್‌ ಕಣಿವೆ, ದೌಲತ್‌ ಬೇಗ್‌ ಓಲ್ಡಿ ಸಮೀಪದ ದೆಪ್ಸಾಂಗ್‌ಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.

ಜೂನ್‌ 6ರ ಸಭೆಯಲ್ಲಿ ಸಂಧಾನ ಸೂತ್ರವೊಂದನ್ನು ಒಪ್ಪಿಕೊಳ್ಳಲಾಗಿತ್ತು. ಆದರೆ, ಅದರ ಅನುಷ್ಠಾನ ಸಂದರ್ಭದಲ್ಲಿ ಜೂನ್‌ 15ರಂದು ಗಸ್ತು ಪಾಯಿಂಟ್‌ 14ರಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟು ಸಾವು ನೋವು ಉಂಟಾಗಿತ್ತು. ಪರಿಸ್ಥಿತಿ ಇನ್ನಷ್ಟು ವಿಷಮಗೊಂಡಿತ್ತು.

ಗಾಲ್ವನ್‌ ಕಣಿವೆಯಲ್ಲಿ ಅತಿಕ್ರಮಣ, ಪಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿ ಚೀನಾ ಸೈನಿಕರ ಉಪಸ್ಥಿತಿಯು ಕಮಾಂಡರ್‌ಗಳ ಸಭೆಯಲ್ಲಿ‍ಪ್ರಸ್ತಾಪ ಆಗಲಿದೆ. ಎಲ್‌ಎಸಿಯ ಭಾರತೀಯ ಕಡೆಯಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಯಥಾಸ್ಥಿತಿ ಸ್ಥಾಪನೆ ಕೂಡ ಚರ್ಚೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT