ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಕಾಂಗ್ರೆಸ್‌ ಬಿಜೆಪಿಯೇತರ ರಂಗ ರಚನೆಗೆ ತೆಲಂಗಾಣ ಮುಖ್ಯಮಂತ್ರಿ ಕಸರತ್ತು

ಅತಂತ್ರ ಫಲಿತಾಂಶ: ಕೆಸಿಆರ್‌ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ, ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಇದ್ದಕ್ಕಿದ್ದಂತೆ ತಿರುವನಂತಪುರಕ್ಕೆ ಸೋಮವಾರ ಭೇಟಿ ಕೊಟ್ಟು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಜತೆ ಮಾತುಕತೆ ನಡೆಸಿದರು.

ಸ್ವಲ್ಪ ಕಾಲದಿಂದ ತಾವು ಪ್ರತಿಪಾದಿಸುತ್ತಿರುವ ಸಂಯುಕ್ತ ರಂಗಕ್ಕೆ ಸಿಪಿಐ ನಾಯಕ ವಿಜಯನ್‌ ಅವರ ಬೆಂಬಲ ಕೋರಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ತಮಗೊಂದು ಸ್ಥಾನ ರೂಪಿಸಿಕೊಳ್ಳಲು ಕೆಸಿಆರ್‌ ವೇದಿಕೆ ಸಿದ್ಧಪಡಿಸಲು ಆರಂಭಿಸಿದ್ದಾರೆ. 

ತಾವೇ ಅಧಿಕಾರಕ್ಕೆ ಏರಬೇಕು ಅಥವಾ ಕನಿಷ್ಠಪಕ್ಷ ‘ಕಿಂಗ್‌ಮೇಕರ್‌’ ಆಗಬೇಕು ಎಂಬ ಉದ್ದೇಶದಿಂದ ನೆರೆಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಚುನಾವಣೆ ಘೋಷಣೆಗೆ ಮುನ್ನವೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೆಸಿಆರ್‌ ಅವರು ಚುನಾವಣೆಯ ಬಳಿಕ ಈ ಯತ್ನಕ್ಕೆ ಕೈ ಹಾಕಿದ್ದಾರೆ. ಮೇ 23ರ ಫಲಿತಾಂಶದಲ್ಲಿ ಯಾರು ಎಷ್ಟು ಸ್ಥಾನ ಗಳಿಸಲಿದ್ದಾರೆ ಎಂಬುದು ತೃತೀಯ ರಂಗ, ಸಂಯುಕ್ತ ರಂಗಗಳ ಮುಂದಿನ ಸ್ಥಾನವನ್ನು ನಿರ್ಧರಿಸಲಿದೆ. 

ಇತರ ಪ್ರಾದೇಶಿಕ ಪಕ್ಷಗಳ ಮುಖಂಡರನ್ನೂ ಮತ ಎಣಿಕೆಯ ದಿನಕ್ಕೆ ಮೊದಲೇ ಭೇಟಿಯಾಗುವ ಯೋಜನೆಯನ್ನು ಕೆಸಿಆರ್‌ ಹಾಕಿಕೊಂಡಿದ್ದಾರೆ. ತಿರುವನಂತಪುರಕ್ಕೆ ಹೊರಡುವ ಮೊದಲು ಅವರು, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಮುಂದೆ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿಯಾಗುವುದಾಗಿಯೂ ಹೇಳಿದ್ದರು.  

 ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನೂ ಕೆಸಿಆರ್‌ ಭೇಟಿಯಾಗುವ ನಿರೀಕ್ಷೆ ಇದೆ. ತೃತೀಯ ರಂಗ ಅಥವಾ ಸಂಯುಕ್ತ ರಂಗದ ಸಂಚಾಲಕರಾಗುವ ಸಾಧ್ಯತೆ ಇರುವ ಕೆಸಿಆರ್‌ ಅವರು ಪ್ರಾದೇಶಿಕ ಮಟ್ಟದಲ್ಲಿ ಪ್ರಬಲ ನಾಯಕ. ಈ ಬಾರಿಯ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಅವರ ಪಕ್ಷ ಅತ್ಯುತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ. ಆದರೆ, ಚಂದ್ರಬಾಬು ನಾಯ್ಡು ಅವರಿಗೆ ಜಗನ್‌ ಮೋಹನ್ ರೆಡ್ಡಿ ಅವರಿಂದ ಬಲವಾದ ಸವಾಲು ಎದುರಾಗಿದೆ. ಅದರ ಜತೆಗೆ, ಜಗನ್‌ ಅವರೂ ಕೆಸಿಆರ್ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ. 

ಲೋಕಸಭೆ ಚುನಾವಣೆಯ ಎರಡು ಹಂತಗಳ ಮತದಾನ ಇನ್ನೂ ಬಾಕಿ ಇದೆ. 2014ಕ್ಕಿಂತ ಹೆಚ್ಚು ಸ್ಥಾನ ಪಡೆಯುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಿದ್ದರೂ, ದೆಹಲಿಯ ಅಧಿಕಾರದ ಗದ್ದುಗೆಯ ಬಗ್ಗೆ ಕೆಲವು ಮುಖ್ಯಮಂತ್ರಿಗಳು ಕನಸು ಕಾಣಲಾರಂಭಿಸಿದ್ದಾರೆ. 

ಬಿಜೆಪಿಗೆ ಬಹುಮತ ದೊರೆಯದು; ನಾಯಕತ್ವದ ಸ್ಥಾನಕ್ಕೆ ಬೇಡಿಕೆ ಇಡುವಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲದು ಎಂದು ಪ್ರಾದೇಶಿಕ ಪಕ್ಷಗಳ ನಾಯಕರು ಭಾವಿಸಿದ್ದಾರೆ. ಹಾಗಾಗಿಯೇ, 1996ರಲ್ಲಿ ಎಚ್‌.ಡಿ. ದೇವೇಗೌಡ ಅವರು ಪ್ರಧಾನಿಯಾದ ಸಂದರ್ಭ ಪುನರಾವರ್ತನೆ ಆಗಬಹುದು ಎಂಬ ನಿರೀಕ್ಷೆ ಅವರಲ್ಲಿ ಇದೆ. ಆಗ, ದೇವೇಗೌಡರಿಗೆ ಕಾಂಗ್ರೆಸ್ ಪಕ್ಷ ಬಾಹ್ಯ ಬೆಂಬಲ ಕೊಟ್ಟಿತ್ತು. 

ಸ್ಟಾಲಿನ್‌ ಭೇಟಿ ಸಾಧ್ಯತೆ ಕಮ್ಮಿ

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ಮೇ 13ರಂದು ಭೇಟಿ ಆಗುವ ಸಾಧ್ಯತೆ ಕಡಿಮೆ. ಸಂಯುಕ್ತ ರಂಗ ರಚಿಸುವ ಕೆಸಿಆರ್‌ ಅವರ ಯತ್ನಕ್ಕೆ ಹಿನ್ನಡೆ ಎಂದೇ ಇದನ್ನು ಭಾವಿಸಲಾಗಿದೆ.

ಡಿಎಂಕೆ ಮೂಲಗಳ ಪ್ರಕಾರ, ಮೇ 19ರಂದು ವಿಧಾನಸಭೆಯ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಆ ಸಂಬಂಧ ಪ್ರಚಾರ ಕಾರ್ಯದಲ್ಲಿ ಸ್ಟಾಲಿನ್‌ ತೊಡಗಿದ್ದಾರೆ. ಹೀಗಾಗಿ, ಭೇಟಿ ಸಾಧ್ಯತೆಗಳು ಕಡಿಮೆ.

‘ಪರಸ್ಪರ ಭೇಟಿಗೆ ಸಮಯ ನಿಗದಿಯಾಗಿಲ್ಲ’ ಎಂದು ಡಿಎಂಕೆ ನಾಯಕರೊಬ್ಬರು ಪ್ರತಿಕ್ರಿಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು