ಸೋಮವಾರ, ಜುಲೈ 26, 2021
20 °C

ಸಾಗರದಲ್ಲಿ ಭಾರತ–ಜಪಾನ್‌ ಜಂಟಿ ಸಮರಾಭ್ಯಾಸ: ಚೀನಾಕ್ಕೆ ಸ್ಪಷ್ಟ ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಮತ್ತು ಜಪಾನ್‌ನ ಯುದ್ಧ ನೌಕೆಗಳು ಹಿಂದೂ ಮಹಾಸಾಗರದಲ್ಲಿ ಜಂಟಿ ಕವಾಯತು ನಡೆಸಿವೆ. ಭಾರತದ ಗಡಿಯಲ್ಲಿ ಉಪಟಳ ನೀಡುತ್ತಿರುವ ಚೀನಾಕ್ಕೆ ಈ ಮೂಲಕ ಭಾರತ ಮತ್ತು ಜಪಾನ್‌ ಜತೆಯಾಗಿ ಸ್ಪಷ್ಟ ಸಂದೇಶವನ್ನು ರವಾನಿಸಿವೆ.

ಭಾರತದ ನೌಕಾಪಡೆಯ ಐಎನ್‌‌ಎಸ್‌ ರಾಣಾ ಮತ್ತು ಐಎನ್‌ಎಸ್‌ ಕುಲಿಷ್‌ ಹಾಗೂ ಜಪಾನ್‌ನ ಜೆಎಸ್‌ ಕಶಿಮಾ ಮತ್ತು ಜೆಎಸ್‌ ಶಿಮಯುಕಿ ಶನಿವಾರ ಜಂಟಿ ಕವಾಯತು ನಡೆಸಿದವು. ಭಾರತದ ಗಡಿಯಲ್ಲಿ ಮಾತ್ರವಲ್ಲದೆ, ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿಯೂ ಚೀನಾವು ಅತಿಕ್ರಮಣಕಾರಿ ಮನೋಭಾವ ತೋರುತ್ತಿದೆ ಎಂದು ಜಪಾನ್‌ನ ರಕ್ಷಣಾ ಸಚಿವ ಟಾರೊ ಕೊನೊ ಇತ್ತೀಚೆಗೆ ಆರೋಪಿಸಿದ್ದರು.

ಕೆಲ ದಿನಗಳ ಹಿಂದೆಯೂ ಜಪಾನ್‌ನ ಎರಡು ಯುದ್ಧ ನೌಕೆಗಳು ಅಮೆರಿಕದ ಯುದ್ಧ ನೌಕೆಗಳ ಜತೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಅಭ್ಯಾಸ ನಡೆಸಿದ್ದವು. ಇದು ಚೀನಾದ ಕೆಂಗಣ್ಣಿಗೆ ಗುರಿಯಾಗಿತ್ತು. 

ಅಮೆರಿಕ ಮತ್ತು ಭಾರತದ ನೌಕೆಗಳ ಜತೆಗೆ ಬೆನ್ನು ಬೆನ್ನಿಗೆ ಎರಡು ಕವಾಯತುಗಳನ್ನು ನಡೆಸಲಾಗಿದೆ. ಇದು ಈ ಎರಡೂ ದೇಶಗಳ ಜತೆಗಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಎಂದು ಜಪಾನ್‌ನ ನೌಕಾಪಡೆಯು ಟ್ವಿಟರ್‌ನಲ್ಲಿ ಹೇಳಿದೆ. 

ಜಲ ಪ್ರದೇಶದ ಸುರಕ್ಷತೆಗೆ ಸಂಬಂಧಿಸಿ ಭಾರತ ಮತ್ತು ಜಪಾನ್‌ ನಡುವೆ ಕೆಲ ವರ್ಷಗಳಿಂದಲೇ ಸಹಕಾರ ಇದೆ. ದ್ವಿಪಕ್ಷೀಯ ಮತ್ತು ಅಮೆರಿಕದ ಜತೆ ಸೇರಿ ಬಹುಪಕ್ಷೀಯ ಸಮರಾಭ್ಯಾಸಗಳನ್ನೂ ನಡೆಸಲಾಗುತ್ತಿದೆ. ನಾಲ್ಕು ದೇಶಗಳ ಕೂಟ ‘ಕ್ವಾಡ್‌’ಗೆ 2017ರ ನವೆಂಬರ್‌ನಲ್ಲಿ ಪುನಶ್ಚೇತನ ನೀಡಲಾಗಿದೆ. ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾ ಈ ಕೂಟದ ಸದಸ್ಯ ರಾಷ್ಟ್ರಗಳು. ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಡೆ ಒಡ್ಡುವುದು ‘ಕ್ವಾಡ್‌’ನ ಮುಖ್ಯ ಉದ್ದೇಶ. 

ನೌಕಾಪಡೆಗಳ ಸಹಕಾರಕ್ಕೆ ಭಾರತ ಮತ್ತು ಜಪಾನ್‌ 2018ರಲ್ಲಿಯೇ ಒಪ್ಪಿಗೆ ಸೂಚಿಸಿವೆ. ಇದಕ್ಕೆ ಸಂಬಂಧಿಸಿದ ಒಪ್ಪಂದವೊಂದು ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ. 

ಪೂರ್ವ ಲಡಾಖ್‌ನ ಗಡಿಯಲ್ಲಿ ಸುಮಾರು ಏಳು ವಾರಗಳಿಂದ ಭಾರತ–ಚೀನಾ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ. ಅಲ್ಲಿನ ಪರಿಸ್ಥಿತಿ ಇನ್ನೂ ಶಮನವಾಗಿಲ್ಲ. ಇದರ ನಡುವಲ್ಲಿಯೇ, ಹಿಂದೂ ಮಹಾಸಾಗರದಲ್ಲಿಯೂ ಭಾರತವು ಹೆಚ್ಚು ಜಾಗೃತವಾಗಿದೆ. ಈ ಜಲ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ಚೀನಾವು ಕಳೆದ ಕೆಲ ವರ್ಷಗಳಿಂದ ಯತ್ನಿಸುತ್ತಿದೆ.

ಚೀನಾದ ನೌಕಾಪಡೆಯು ತನ್ನ 35ನೇ ‘ಟಾಸ್ಕ್‌ ಫೋರ್ಸ್‌’ (690 ಸಿಬ್ಬಂದಿ ಇರುವ ಯುದ್ಧನೌಕೆ) ಅನ್ನು ಹಿಂದೂ ಮಹಾಸಾಗರದಲ್ಲಿ ಏಪ್ರಿಲ್‌ ಕೊನೆಯ ಹೊತ್ತಿಗೆ ನಿಯೋಜಿಸಿತ್ತು. ಅದಾಗಿ ಕೆಲವೇ ದಿನಗಳ ಬಳಿಕ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿ ಬದಲಾವಣೆಗೆ ಮುಂದಾಗಿತ್ತು. ಕ್ಷಿಪಣಿ ಧ್ವಂಸ ಮಾಡಬಲ್ಲ ನೌಕೆ ತೈಯಾನ್‌ ಮತ್ತು ಯುದ್ಧ ನೌಕೆ ಜಿಂಗ್‌ಝೌ ಅನ್ನು ಹಿಂದೂ ಮಹಾಸಾಗರದಲ್ಲಿ ಚೀನಾ ನಿಯೋಜಿಸಿದೆ. 

ಹಿಂದೂ ಮಹಾಸಾಗರದಲ್ಲಿ ಉಪಟಳ
ಹಿಂದೂ ಮಹಾಸಾಗರದಲ್ಲಿ ಚೀನಾದ ಚಟುವಟಿಕೆ ಭಾರತಕ್ಕೆ ಕಳವಳ ಮೂಡಿಸಿದೆ. ಈ ಪ್ರದೇಶದಲ್ಲಿ ಚೀನಾವು ಜಲಡ್ರೋನ್‌ಗಳನ್ನು ನಿಯೋಜಿಸಿದೆ ಎಂಬ ವರದಿ ಇತ್ತೀಚೆಗೆ ಬಂದಿತ್ತು. ಅಂಡಮಾನ್‌–ನಿಕೋಬಾರ್‌ ದ್ವೀಪಗಳ ಸಮೀಪ 2019ರ ಸೆಪ್ಟೆಂಬರ್‌ನಲ್ಲಿ ಪತ್ತೆಯಾಗಿದ್ದ ಚೀನಾದ ನೌಕೆ ಶಿಯಾನ್‌–1 ಅನ್ನು ಭಾರತದ ನೌಕಾಪಡೆಯು ಓಡಿಸಿತ್ತು. ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿಗಳನ್ನೂ ಚೀನಾ ನಿಯೋಜಿಸಿದೆ. ಕಡಲ್ಗಳ್ಳರಿಂದ ಹಡಗುಗಳನ್ನು ರಕ್ಷಿಸಲು ಇದನ್ನು ನಿಯೋಜಿಸಲಾಗಿದೆ ಎಂದು ಚೀನಾ ಹೇಳಿದೆ. ಆದರೆ, ಚೀನಾದ ಈ ನಡೆಯ ಬಗ್ಗೆ ಭಾರತಕ್ಕೆ ಅನುಮಾನ ಇದೆ. 

ತಕ್ಕ ಪ್ರತ್ಯುತ್ತರ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ (ಪಿಟಿಐ): ಭಾರತದ ಭೂಭಾಗದ ಮೇಲೆ ಕಣ್ಣಿಟ್ಟಿದ್ದವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ನೇಹಕ್ಕೆ ಭಾರತ ಮಹತ್ವ ನೀಡುತ್ತದೆ. ಜತೆಗೆ, ಎದುರಾಳಿಗಳಿಗೆ ತಕ್ಕ ಉತ್ತರ ನೀಡಲೂ ದೇಶ ಸಮರ್ಥವಾಗಿದೆ ಎಂದು ಚೀನಾಕ್ಕೆ ಪರೋಕ್ಷ  ಎಚ್ಚರಿಕೆ ನೀಡಿದ್ದಾರೆ.  

ತಿಂಗಳ ಬಾನುಲಿ ಕಾರ್ಯಕ್ರಮ ‘ಮನದ ಮಾತು‌’ನಲ್ಲಿ ಅವರು, ಲಡಾಖ್‌ನಲ್ಲಿ ಹುತಾತ್ಮರಾದ ಭಾರತದ 20 ಯೋಧರ ಶೌರ್ಯವನ್ನು ಸ್ಮರಿಸಿದರು.

ದೇಶದಲ್ಲಿ ತಯಾರಾದ ಉತ್ಪನ್ನಗಳ ಬಳಕೆಯನ್ನು ಪ್ರಧಾನಿ ಒತ್ತಿ ಹೇಳಿದರು. ‘ಸ್ಥಳೀಯ ಸರಕುಗಳ ಬಳಕೆಯಿಂದ ದೇಶದ ಆರ್ಥಿಕತೆ ಬಲಗೊಳ್ಳುತ್ತದೆ. ದೇಶಸೇವೆ ಮಾಡಿದಂತೆಯೂ ಆಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

‘ಸ್ವಾವಲಂಬನೆಯೇ ದೇಶದ ಮುಂದಿರುವ ಗುರಿ. ಭಾರತ ಎಂದಿಗೂ ತನ್ನ ಸ್ವಂತ ಶಕ್ತಿಯ ಮೇಲೆ ನಂಬಿಕೆ ಇರಿಸಿದೆ. ದೇಶದ ಗಡಿಗಳನ್ನು ಕಾಪಾಡಲು ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ನಮ್ಮನ್ನಗಲಿದ ವೀರ ಯೋಧರಿಗೆ ಸ್ವಾವಲಂಬನೆಯ ಮೂಲಕವೇ ನಾವು ಗೌರವ ಸಲ್ಲಿಸೋಣ’ ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ.

‘ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ಗಮನಿಸಿದ ಅಸ್ಸಾಂನ ಮಹಿಳೆಯೊಬ್ಬರು ಸ್ಥಳೀಯ ಪದಾರ್ಥಗಳನ್ನು ಬಳಸಲು ತೀರ್ಮಾನಿಸಿದ್ದಾರೆ. ಅವರು ಪತ್ರ ಬರೆದು ಇದನ್ನು ತಿಳಿಸಿದರು. ಇಂತಹ ಹಲವು ಪತ್ರಗಳು ಬಂದಿವೆ. ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ದೇಶದಲ್ಲಿ ದೊಡ್ಡದಾಗಿ ಎದ್ದಿದೆ’ ಎಂದು ಮೋದಿ ಹೇಳಿದರು.

ಮೋದಿ ಅವರ ಬಾನುಲಿ ಕಾರ್ಯಕ್ರಮ ಪ್ರಸಾರಕ್ಕೂ ಮುನ್ನ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ದೇಶದ ರಕ್ಷಣೆ ಮತ್ತು ಸುರಕ್ಷತೆ ಬಗ್ಗೆ ಯಾವಾಗ ಮಾತಾಡುತ್ತೀರಿ’ ಎಂದು ಪ್ರಶ್ನಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು