ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಕೋಟ್‌ ದಾಳಿ: ಫೆ.26ರ ಮುಹೂರ್ತಕ್ಕೂ ಬೆಂಗಳೂರಿಗೂ ಏನು ನಂಟು?

Last Updated 20 ಮಾರ್ಚ್ 2019, 6:50 IST
ಅಕ್ಷರ ಗಾತ್ರ

ಪುಲ್ವಾಮಾ ದಾಳಿಯಾಗಿ 11 ದಿನಗಳ ನಂತರ ಭಾರತದ ವಾಯುಪಡೆ ಯುದ್ಧ ವಿಮಾನಗಳು ಪಾಕಿಸ್ತಾನ ನೆಲದಲ್ಲಿನ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದವು. ಫೆ.26ರ ಬೆಳಗಿನ ಜಾವವೇ ದಾಳಿ ನಡೆಸಿದ್ದು ಏಕೆ? ದಾಳಿಗೆ ಅದೇ ದಿನ ನಿಗದಿಯಾಗಿದ್ದು ಏಕೆ? ಯೋಧರು ಮೃತಪಟ್ಟು 11 ದಿನಗಳ ನಂತರ...ಎಂದೆಲ್ಲ ದಾಳಿ ನಡೆದ ದಿನದ ಬಗ್ಗೆ ವಿಶ್ಲೇಷಿಸಲಾಗಿತ್ತು. ಅದೇ ದಿನ ದಾಳಿಗೆ ಕಾರಣವಾದ ಅಂಶಗಳನ್ನು ಪ್ರಸ್ತಾಪಿಸಿ, ದಾಳಿ ಹಿನ್ನೆಲೆಯ ಸನ್ನಿವೇಶಗಳನ್ನು ಇಂಡಿಯಾ ಟುಡೇ ನಿಯತಕಾಲಿಕ‍ವಿವರಿಸಿದೆ.

ಫೆ.26ರಂದೇ ದಾಳಿ ನಡೆಸಿದ್ದು ಏಕೆ?

ಬೆಂಗಳೂರಿನಲ್ಲಿ ರಾಷ್ಟ್ರೀಯ ಮತ್ತು ವಿದೇಶಿ ವಿಮಾನಗಳ ವೈಮಾನಿಕ ಪ್ರದರ್ಶನ ಫೆ.20ರಿಂದ 24ರವರೆಗೂ ನಿಗದಿಯಾಗಿತ್ತು. ಅಂತರರಾಷ್ಟ್ರೀಯ ಮಟ್ಟದ ಉನ್ನತ ಅಧಿಕಾರಿಗಳು, ಮುಖಂಡರು ಹಾಗೂ ಉದ್ಯಮಿಗಳು ಏರೋ ಇಂಡಿಯಾದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ವಾಯುಪಡೆ ದಾಳಿ ನಡೆಸುವುದನ್ನು ನಿಯಂತ್ರಿಸಿಕೊಳ್ಳಲಾಗಿತ್ತು.

ಇದರೊಂದಿಗೆ ಬಾಲಾಕೋಟ್‌ನ ಉಗ್ರರ ಶಿಬಿರದಲ್ಲಿ ತರಬೇತಿ ಪಡೆಯಲು ಹೊಸದಾಗಿ ಆಯ್ಕೆಯಾದವರು ಫೆ.25ರಂದು ಅಲ್ಲಿಗೆ ತಲುಪುವ ಬಗ್ಗೆ ಗುಪ್ತಚರ ಮಾಹಿತಿ

ಸ್ಪಷ್ಟವಾಗಿತ್ತು. ಅದರ ಮುಂದಿನ ದಿನವೇ ದಾಳಿಗೆ ಸೂಕ್ತ ಸಮಯವೆಂದು ನಿರ್ಧರಿಸಲಾಯಿತು. ವಾಯುಪಡೆಯ ಹಿರಿಯ ಅಧಿಕಾರಿಗಳು ದಾಳಿಯ ತರಾತುರಿಯನ್ನು ಹಾವಭಾವಗಳಲ್ಲಿ ತೋರ್ಪಡಿಸದೆ ಎಲ್ಲವೂ ಸಹಜವಾಗಿರುವಂತೆ ವರ್ತಿಸಿದ್ದರು. ವಾಯುಪಡೆ ಸಿದ್ಧತೆಯ ಒಂದು ಸಣ್ಣ ಸುಳಿವೂ ಸಹ ಪಾಕಿಸ್ತಾನ ಗುಪ್ತಚರ ಸಂಸ್ಥೆಯನ್ನು ಎಚ್ಚರಿಸಬಹುದಿತ್ತು.ಫೆ.25ರ ಸಂಜೆ ಧನೋವಾ ಅವರು ಪಶ್ಚಿಮ ಏರ್‌ ಕಮಾಂಡ್‌ ಮುಖ್ಯಸ್ಥ ಚಂದ್ರಶೇಖರನ್‌ ಹರಿ ಕುಮಾರ್‌ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾದರು.

ಅದೇ ಚಂದ್ರಶೇಖರನ್‌ ಹರಿ ಕುಮಾರ್ ಬಾಲಾಕೋಟ್‌ನಲ್ಲಿ ನಡೆಸಬೇಕಿದ್ದ ವಾಯುದಾಳಿಯ ನೇತೃತ್ವ ವಹಿಸಿದ್ದವರು. ಅವರ ಬೀಳ್ಕೊಡುಗೆ ಸಮಾರಂಭ ಯಾವುದೇ ಅಡಚಣೆ ಇಲ್ಲದಂತೆ ನಡೆಸಲು ನಿರ್ಧರಿಸಲಾಗಿತ್ತು. ಸಮಾರಂಭ ಸ್ಥಗಿತಗೊಂಡಿದ್ದರೆ, ಇದರಿಂದ ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಂತೆ ಆಗುತ್ತಿತ್ತು. ಯಾವುದೇ ಅನುಮಾನದ ಸುಳಿವು ಸುಳಿಯದಂತೆ ಯೋಜಿತ ದಾಳಿಯ ಮುಂದಾಳುಗಳು ಸಮಾರಂಭದಲ್ಲಿ ಸಂಭ್ರಮಿಸುತ್ತಿರುವಂತೆ ಕಂಡುಬಂದರು.

ಫೆ.25ರ ರಾತ್ರಿ ಬಿಳ್ಕೊಡುಗೆ ಸಮಾರಂಭದ ನಂತರ: ರಾತ್ರಿ 10 ಗಂಟೆಯ ನಂತರವಷ್ಟೇ ಧನೋವಾಬಿಳ್ಕೊಡುಗೆ ಸಮಾರಂಭದಿಂದ ಮನೆಗೆ ಮರಳಿದ್ದರು. ಅಲ್ಲಿಂದಲೇ ವಾಯುಪಡೆ ಕಾರ್ಯಾಚರಣೆ ನಿರ್ವಹಿಸಲು ಶುರುಮಾಡಿದ್ದರು. ಅದೇ ಸಮಯದಲ್ಲಿ ದೆಹಲಿಯಲ್ಲಿ ಮಳೆ ಸುರಿಯುತ್ತಿತ್ತು, ಬಾಲ್‌ಕೋಟ್‌ನಲ್ಲಿಯೂ ವಾತಾವರಣ ಬದಲಾವಣೆಯಿಂದ ದಾಳಿಗೆ ತೊಡಕಾಗಬಹುದೆಂಬ ಆತಂಕ ಎದುರಾಗಿತ್ತು. ಅದೃಷ್ಟವಶಾತ್‌ ಬಾಲಾಕೋಟ್‌ ಪ್ರದೇಶದ ಆಗಸ ತಿಳಿಯಾಗಿತ್ತು, ಅದರಲ್ಲಿಯೂ ಅಂದು ಚಂದ್ರನ ಬೆಳದಿಂಗಳು ಬಾಲಾಕೋಟ್‌ ತುಂಬೆಲ್ಲ ಆವರಿಸಿತ್ತು.

ಫೆ.26ರ ಬೆಳಗಿನಜಾವ 3 ಗಂಟೆಗೆ ದಾಳಿ ಸಮಯವೆಂದು ನಿರ್ಧರಿಸಲಾಗಿತ್ತು. ಆ ಸಮಯದಲ್ಲಿ ಉಗ್ರರ ಶಿಬಿರದ ಬೇರೆ ಬೇರೆ ಸ್ಥಳಗಳಲ್ಲಿ ಎಲ್ಲರೂ ಗಾಢ ನಿದ್ರೆಗೆ ಜಾರಿರುತ್ತಾರೆಂದು ಊಹಿಸಲಾಗಿತ್ತು. ಯೋಜನೆ ತುಂಬಾ ಸರಳವಾಗಿದ್ದರೂ, ಅತ್ಯುತ್ತಮವಾಗಿತ್ತು. ಈ ದಾಳಿಗೆ ನಿಯೋಜಿಸಲಾಗಿದ್ದ ಯುದ್ಧ ವಿಮಾನಗಳು ಮಿರಾಜ್‌ 2000. ಸುಮಾರು 60 ಕಿ.ಮೀ. ದೂರದಿಂದಲೇ ನಿಗದಿತ ಗುರಿಯನ್ನು ಜಿಪಿಎಸ್ ಮತ್ತು ಆಪ್ಟಿಕಲ್‌ ಕ್ಯಾಮೆರಾ ಕಣ್ಣಿನ ಮೂಲಕ ಗುರುತಿಸುವ, ನಿಖರವಾಗಿ ದಾಳಿ ನಡೆಸುವ ಇಸ್ರೇಲಿ ನಿರ್ಮಿತ ಸ್ಪೈಸ್‌ 2000ಬಾಂಬ್‌ಗಳನ್ನು ತೆಕ್ಕೆಯಲ್ಲಿಟ್ಟು 12 ಮಿರಾಜ್‌ ವಿಮಾನಗಳು ಅಣಿಯಾಗಿದ್ದವು. ಮಿಗ್‌ ವಿಮಾನಗಳೊಂದಿಗೆ ಸುಖೋಯ್‌–30ಎಸ್‌ ಯುದ್ಧ ವಿಮಾನಗಳು ಕಾರ್ಯಾಚರಣೆಯ ಬೆಂಗಾವಲಾಗಿ ಆಗಸದಲ್ಲಿ ಹಾರಾಟ ನಡೆಸಿದ್ದವು.

ಪಾಕಿಸ್ತಾನದ ಕಣ್ತಪ್ಪಿಸಲು...

12 ಮಿರಾಜ್‌, 4 ಸುಖೋಯ್‌ ಹಾಗೂ ಮಿಗ್‌ ವಿಮಾನಗಳೊಂದಿಗೆ ಕಣ್ಗಾವಲು ನಡೆಸಲು ಎರಡು ವಿಮಾನಗಳು ಸಿದ್ಧಗೊಂಡಿದ್ದವು. ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ ಒಳಗೊಂಡ ಇಸ್ರೇಲಿ ವ್ಯವಸ್ಥೆ ಹಾಗೂ ದೇಶೀಯ ನಿರ್ಮಿತ ಕಣ್ಗಾವಲು ನೇತ್ರಾವಿಮಾನಗಳು ಕಾರ್ಯಾಚರಣೆಯಲ್ಲಿರುವ ಭಾರತೀಯ ವಾಯುಪಡೆಯ ಯುದ್ಧವಿಮಾನಗಳಿಗೆ ಬಂದೊದಗಬಹುದಾದ ಅಪಾಯಗಳ ಎಚ್ಚರಿಕೆ ನೀಡುವ ಹೊಣೆ ಹೊತ್ತಿದ್ದವು. ಕಾರ್ಯಾಚರಣೆ ಸಮಯಕ್ಕಿಂತಲೂ ಬಹಳ ಮುಂಚಿತವಾಗಿಯೇ ಹಾರಾಟ ಪ್ರಾರಂಭಿಸಿದ್ದ ವಿಮಾನಗಳಿಗೆ, ಆಗಸದಲ್ಲಿಯೇ ಇಂಧನ ಪೂರೈಕೆ ಮಾಡಲು ಐಎಲ್‌–76ಎರಡು ವಿಮಾನಗಳು ನಿಯೋಜನೆಗೊಂಡಿದ್ದವು.

ಪಾಕಿಸ್ತಾನಕ್ಕೆ ಯಾವುದೇ ಎಚ್ಚರಿಕೆ ರವಾನೆಯಾಗದಂತೆ, ವಿಮಾನಗಳು ಆಗ್ರಾ ಮತ್ತು ಬರೇಲಿ ವಾಯುನೆಲೆಗಳಿಂದ ಹಾರಾಟ ಪ್ರಾರಂಭಿಸಿದ್ದವು. ವಿಮಾನಗಳು ದೆಹಲಿಯ ವಾಯುವಲಯದ ಮೇಲೆ ಸಾಗಬೇಕಿದ್ದ ಕಾರಣ, ವಾಯುಪಡೆಯು ಏರ್ ಟ್ರಾಫಿಕ್‌ ನಿಯಂತ್ರಣಕ್ಕೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ರಹಸ್ಯ ವಾಯುಮಾರ್ಗವನ್ನು ಕಲ್ಪಿಸುವಂತೆ ಸೂಚಿಸುವ ಮೂಲಕ ಕಾರ್ಯಾಚರಣೆಯ ವಿಮಾನಗಳ ಹಾರಾಟ ಪತ್ತೆಯಾಗದಂತೆ ಮಾಡಲಾಗಿತ್ತು.

ನಿಗದಿತ ಸಮಯದಲ್ಲಿ ಭಾರತದ ಗಡಿ ದಾಟಿ ಪಾಕಿಸ್ತಾನ ವಾಯುವಲಯ ಪ್ರವೇಶಿಸಿದ ಯುದ್ಧ ವಿಮಾನಗಳು, ದಾಳಿ ಸನ್ನದ್ಧ ರಚನೆಯೊಂದಿಗೆ ಮುನ್ನುಗ್ಗಿದವು. ಇಂಥದ್ದೇ ರಚನೆಯೊಂದಿಗೆ ವಿಮಾನಗಳ ಒಂದು ತಂಡ ಬಹವಾಲ್ಪುರದತ್ತ ಸಾಗಿದವು. ಜೈಷ್‌ ಉಗ್ರ ಸಂಘಟನೆಯ ಮುಖ್ಯ ಕಚೇರಿಯ ಮೇಲೆ ದಾಳಿ ನಡೆಸಲು ಭಾರತೀಯ ವಾಯುಪಡೆ ಮುಂದಾಗುತ್ತಿರುವಂತೆ ಪಾಕಿಸ್ತಾನ ಭಾವಿಸುವಂತೆ ಮಾಡಲಾಯಿತು. ಪಾಕಿಸ್ತಾನದ ವಾಯುಪಡೆ ಭಾರತದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ತನ್ನ ವಿಮಾನಗಳನ್ನು ಹೊರಡಿಸಿದವು.

ಪಾಕಿಸ್ತಾನ ವಾಯುವಲಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇದೇ ಸಮಯದಲ್ಲಿ ಸೂಕ್ತ ರಚನೆಯೊಂದಿಗೆ ನಿಧಾನಗತಿಯಲ್ಲಿ ಹಾರಾಟ ನಡೆಸುತ್ತಿದ್ದ ಮಿರಾಜ್‌–2000 ವಿಮಾನಗಳು ವೇಗ ಹೆಚ್ಚಿಸಿಕೊಂಡು ಬಾಲಾಕೋಟ್‌ ಕಡೆಗೆ ನುಗ್ಗಿದವು. ಪಾಕಿಸ್ತಾನದ ರೆಡಾರ್‌ಗಳಲ್ಲಿ ಭಾರತದ ವಿಮಾನಗಳು ಪತ್ತೆಯಾಗಿ ಹಿಮ್ಮೆಟ್ಟಿಸಲು ಪಾಕಿಸ್ತಾನ ವಾಯುಪಡೆಯ ವಿಮಾನಗಳು ಬರುವ ಹೊತ್ತಿಗಾಗಲೇ ಮಿರಾಜ್‌ 150 ಕಿ.ಮೀ. ದೂರ ಸಾಗಿದ್ದವು. ಹೊತ್ತೊಯ್ದಿದ್ದ ಸ್ಪೈಸ್‌ ಬಾಂಬ್‌ಗಳನ್ನುಉಗ್ರರ ತರಬೇತಿ ಶಿಬಿರಗಳತ್ತ ಗುರಿಯಾಗಿಸಿ ಎಸೆದು, ಸುರಕ್ಷಿತವಾಗಿ ಮರಳಿದವು.

ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ವಿಮಾನಗಳು ವಾಯುನೆಲೆಗಳಿಗೆ ಸುರಕ್ಷಿತವಾಗಿ ಬಂದಿಳಿದವು. ಬೆಳಗಿನ ಜಾವದ ಕಾರ್ಯಾಚರಣೆ 4 ಗಂಟೆಗೆ ಪೂರ್ಣಗೊಂಡಿತ್ತು. ವಾಯುಪಡೆ ಮುಖ್ಯಸ್ಥ ಧನೋವಾ ಹಾಗೂ ಭದ್ರತಾ ಸಲಹೆಗಾರ ಡೊಭಾಲ್‌ ಹೊರತು ಪಡಿಸಿ, ಭಾರತೀಯ ಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರಿಗೆ ಯೋಜನೆ ಯಶಸ್ವಿಯಾದ ಸುದ್ದಿ ತಲುಪಿತ್ತು. ಭದ್ರತಾ ಪಡೆಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿತ್ತು. ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರಿಗೆ ಕಾರ್ಯಾಚರಣೆ ಸುರಕ್ಷಿತ ಮತ್ತು ಸಫಲ ಎಂದು ಸಂದೇಶ ರವಾನೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT