ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ ಎರಡು ಭಾಗವಾಯಿತು: ಏನು ಇದರ ಅರ್ಥ?

Last Updated 7 ಆಗಸ್ಟ್ 2019, 5:20 IST
ಅಕ್ಷರ ಗಾತ್ರ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿ, ಕಣಿವೆ ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಸೋಮವಾರ ಮಂಡಿಸಿ ಅನುಮೋದನೆ ಪಡೆದಿದೆ.ಇದರೊಂದಿಗೆ ಭಾರತದಲ್ಲಿ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳ ಉದಯವಾಗಿದ್ದು, ಅವುಗಳ ಸಂಖ್ಯೆ ಸದ್ಯ 7ರಿಂದ 9ಕ್ಕೆ ಏರಿಕೆಯಾಗಿದೆ.

ದೆಹಲಿ, ಪುದುಚೇರಿ, ಚಂಡೀಗಢ, ದಾದ್ರಾ–ನಗರ್‌ ಹವೇಲಿ, ದಾಮನ್‌–ಡಿಯು, ಲಕ್ಷದ್ವೀಪ ಮತ್ತು ಅಂಡಮಾನ್‌ ನಿಕೋಬಾರ್‌ಗಳು ಸದ್ಯ ದೇಶದಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರಾಡಳಿತ ಪ್ರದೇಶಗಳು. ಇವುಗಳ ಪೈಕಿ ಪುದುಚೇರಿ ಮತ್ತು ದೆಹಲಿಗೆ ಪ್ರತ್ಯೇಕ ವಿಧಾನಸಭೆಗಳಿವೆ. ಅಲ್ಲಿ ಸರ್ಕಾರಗಳೂ ಇವೆ. ಮುಖ್ಯಮಂತ್ರಿಗಳೂ ಇದ್ದಾರೆ. ಇನ್ನುಳಿದ ಪ್ರದೇಶಗಳಲ್ಲಿ ಕೇಂದ್ರವೇ ನೇರವಾಗಿ ಆಡಳಿತ ನಡೆಸುತ್ತದೆ. ಸದ್ಯ ಜಮ್ಮು ಕಾಶ್ಮೀರಕ್ಕೆ ವಿಧಾನಸಭೆ ಪ್ರಾಪ್ತವಾಗುತ್ತಿದೆ. ಆದರೆ, ಲಡಾಕ್‌ಗೆ ವಿಧಾನಸಭೆ ಇಲ್ಲ.

ಕೇಂದ್ರಾಡಳಿತ ಪ್ರದೇಶಗಳು ಅಂದರೆ ನಿಜಕ್ಕೂ ಏನು, ಅಲ್ಲಿ ಆಡಳಿತ ನಡೆಸುವವರು ಯಾರು, ವಿಧಾನಸಭೆ ಇದ್ದ ಕಡೆಗಳಲ್ಲಿಆಡಳಿತಕ್ಕೆ ಇರುವ ಮಿತಿಗಳೇನು... ಈಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಕೇಂದ್ರಾಡಳಿತ ಪ್ರದೇಶ ಅಂದರೆ...

ಸರಳವಾಗಿ ಹೇಳುವುದಾದರೆ, ಕೇಂದ್ರಾಡಳಿತ ಪ್ರದೇಶ ಎಂಬುದು ಆಡಳಿತಾತ್ಮಕ ವಿಭಾಗ. ಇಲ್ಲಿ ಕೇಂದ್ರ ಸರ್ಕಾರದ್ದೇ ಆಡಳಿತ.

ವಿಧಾಸನಭೆಯುಳ್ಳ ಕೇಂದ್ರಾಡಳಿತ ಪ್ರದೇಶ ಎಂದರೇನು?

ವಿಧಾನಸಭೆಯುಳ್ಳ ಕೇಂದ್ರಾಡಳಿತ ಪ್ರದೇಶವು ಬಹುಪಾಲು ರಾಜ್ಯದ ಸ್ಥಾನಮಾನವನ್ನುಹೊಂದಿರುತ್ತದೆ. ಇಲ್ಲಿ ವಿಧಾಸಭೆ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಇರುತ್ತಾರೆ. ಚುನಾಯಿತ ಶಾಸಕರು, ಮುಖ್ಯಮಂತ್ರಿ, ಮಂತ್ರಿ ಮಂಡಲವೂ ಇರುತ್ತದೆ. ಲೆಫ್ಟಿನೆಂಟ್‌ ಗವರ್ನರ್‌ ಅವರು ರಾಷ್ಟ್ರಪತಿಗಳ ಪ್ರತಿನಿಧಿಗಳಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಮಂತ್ರಿ ಮಂಡಲದ ಶಿಫಾರಸುಗಳು, ಅಧಿಕಾರಿಗಳ ಸಲಹೆಗಳ ಆಧಾರದಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ. ಆದರೆ, ಪ್ರತಿ ವಿಷಯಗಳಲ್ಲೂ ಇವರು ಕ್ಯಾಬಿನೆಟ್‌ನ ಸಮ್ಮತಿ ಪಡೆಯಲೇಬೇಕು ಎಂಬ ಅನಿವಾರ್ಯತೆಗಳೇನೂ ಇಲ್ಲ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ದೆಹಲಿ. ರಾಷ್ಟ್ರ ರಾಜಧಾನಿಯಲ್ಲಿರುವ ಸರ್ಕಾರಕ್ಕೆ ಭೂಮಿ, ಕಾನೂನು, ಪೊಲೀಸ್‌ ವಿಚಾರದಲ್ಲಿ ಅಧಿಕಾರಗಳೇ ಇಲ್ಲ. ಈ ವಿಚಾರಗಳಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಅವರದ್ದೇ ಅಂತಿಮ ತೀರ್ಮಾನ.

-ದೆಹಲಿ, ಪುದುಚೇರಿಗಳು ಸದ್ಯ ಇರುವ ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶಗಳು

–ಜಮ್ಮು ಕಾಶ್ಮೀರವೂ ಈ ಪಟ್ಟಿ ಸೇರಿಕೊಳ್ಳಲಿದೆ.

ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವೆಂದರೇನು?

ಈ ಪ್ರದೇಶಗಳಿಗೆ ವಿಧಾನಸಭೆ, ಮುಖ್ಯಮಂತ್ರಿಗಳು ಇರಲಾರರು. ಕೇಂದ್ರ ಸರ್ಕಾರವೇ ಇಲ್ಲಿ ನೇರವಾಗಿ ಆಡಳಿತ ನಡೆಸುತ್ತದೆ. ಇಲ್ಲಿರುವ ಲೆಫ್ಟಿನೆಂಟ್‌ ಗವರ್ನರ್‌ ಅವರು ನಿತ್ಯದ ಆಡಳಿತ ಉಸ್ತುವಾರಿ ವಹಿಸಿರುತ್ತಾರೆ. ಇವರಿಗೆ ಸಲಹೆ ಸೂಚನೆಗಳನ್ನು ನೀಡಲು ಅಧಿಕಾರಿಗಳ ತಂಡವೂ ಇರುತ್ತದೆ.

– ಚಂಡಿಗಢ, ದಾದ್ರ–ನಗರ್‌ ಹವೇಲಿ, ಡಾಮನ್‌–ಡಿಯು, ಲಕ್ಷದ್ವೀಪ ಮತ್ತು ಅಂಡಮಾನ್‌ ನಿಕೋಬಾರ್‌ ಈಗಿರುವ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶಗಳು

– ಕೇಂದ್ರ ಸರ್ಕಾರದ ಪ್ರಸ್ತಾವದೊಂದಿಗೆ ಲಡಾಕ್‌ ಕೂಡ ಈ ಪಟ್ಟಿ ಸೇರಿಕೊಳ್ಳಲಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT