ಭಾನುವಾರ, ಸೆಪ್ಟೆಂಬರ್ 15, 2019
26 °C
ಪತ್ರಕರ್ತರ ಹತಾಶೆಯ ಚಿತ್ರಣ ಕಟ್ಟಿಕೊಟ್ಟ ಪ್ರತ್ಯಕ್ಷ ವರದಿ

ಮಾಧ್ಯಮದ ಮೇಲೆ ನಿರ್ಬಂಧ: ಕಾಶ್ಮೀರ ಕಣಿವೆಯಲ್ಲಿ ಸುದ್ದಿ ಸದ್ದಿಲ್ಲ

Published:
Updated:
Prajavani

ಬೆಂಗಳೂರು: ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸುವ ನಿರ್ಧಾರ ಜಾರಿಯಾಗಿ ಸೆಪ್ಟೆಂಬರ್ 5ಕ್ಕೆ ಒಂದು ತಿಂಗಳು ಸಂದಿದೆ. ಆದರೆ ಕಾಶ್ಮೀರ ಕಣಿವೆಯಲ್ಲಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧ ಮುಂದುವರಿದಿದೆ.

ಸುದ್ದಿ ಸಂಗ್ರಹ, ಸುದ್ದಿ ಪರಿಶೀಲನೆ, ಸುದ್ದಿ ಪ್ರಸಾರದಂತಹ ಮಾಧ್ಯಮ ಸಂಬಂಧಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು, ಮಾಧ್ಯಮಗಳ ಕತ್ತು ಹಿಸುಕಿದಂತಾಗಿದೆ ಎಂದು ಪ್ರತ್ಯಕ್ಷ ವರದಿಯೊಂದು ಅಭಿಪ್ರಾಯಪಟ್ಟಿದೆ. ಕಣಿವೆಯ ಮಾಧ್ಯಮಗಳು ನಿತ್ಯ ಎದುರಿಸುತ್ತಿರುವ ಸವಾಲುಗಳನ್ನು ವರದಿ ಬಿಚ್ಚಿಟ್ಟಿದೆ.

ಕಾಶ್ಮೀರದ ಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆ ಅರಿಯುವ ಸಲುವಾಗಿ ಇಬ್ಬರು ಸದಸ್ಯರ ಸಮಿತಿ ಆಗಸ್ಟ್ 30ರಿಂದ ಸೆಪ್ಟೆಂಬರ್ 3ರವರೆಗೆ ಐದು ದಿನ ಕಣಿವೆಯಲ್ಲಿ ಸುತ್ತಾಡಿ ವರದಿ ಸಿದ್ಧಪಡಿಸಿತ್ತು.

ನೆಟ್‌ವರ್ಕ್‌ ಆಫ್ ವಿಮೆನ್ ಇನ್ ಮೀಡಿಯಾ, ಇಂಡಿಯಾ (ಎನ್‌ಡಬ್ಲ್ಯುಎಂಐ) ಹಾಗೂ ಫ್ರೀ ಸ್ಪೀಚ್ ಕಲೆಕ್ಟಿವ್‌ನ (ಎಫ್‌ಎಸ್‌ಸಿ) ಸದಸ್ಯರು ಶ್ರೀನಗರ ಹಾಗೂ ದಕ್ಷಿಣ ಕಾಶ್ಮೀರದಲ್ಲಿ 70ಕ್ಕೂ ಹೆಚ್ಚು ಪತ್ರಕರ್ತರು, ಅಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಸಂವಾದ ನಡೆಸಿ ಪ್ರತ್ಯಕ್ಷ ವರದಿ ಸಿದ್ಧಪಡಿಸಿದ್ದಾರೆ. 

ಕಾಶ್ಮೀರದ ಮಾಧ್ಯಮಗಳು ಎದುರಿಸುತ್ತಿರುವ ಕಠಿಣ ‍ಪರಿಸ್ಥಿತಿ ಹಾಗೂ ಹತಾಶೆಯ ಚಿತ್ರಣವನ್ನು ವರದಿ ಕಟ್ಟಿಕೊಟ್ಟಿದೆ.

ಸೇನೆಯ ಸರ್ಪಗಾವಲಿನ ನೆರಳಿನಲ್ಲಿ ಮಾಧ್ಯಮಗಳು ಸುದ್ದಿಗಾಗಿ ಸೆಣಸುತ್ತಿವೆ. ಸರ್ಕಾರದ ನಿಯಂತ್ರಣದ ಮಧ್ಯೆಯೂ ನೈಜಸ್ಥಿತಿಯನ್ನು ಧೈರ್ಯದಿಂದ ವರದಿ ಮಾಡಲು ಮಾಧ್ಯಮಗಳು ಯತ್ನಿಸುತ್ತಿವೆ. ನಿಗಾ ವ್ಯವಸ್ಥೆ, ಅನೌಪಚಾರಿ ತನಿಖೆಗಳು ಮತ್ತು ಸರ್ಕಾರದ ವಿರುದ್ಧವಾಗಿ ವರದಿ ಮಾಡಿದ ಪತ್ರಕರ್ತರ ಬಂಧನದಂತಹ ಘಟನೆಗಳನ್ನು ತಂಡ ದಾಖಲಿಸಿದೆ. 

ಸಂಪಾದಕೀಯ ಇಲ್ಲದ ಪತ್ರಿಕೆಗಳು:  ಮುಖ್ಯ ಪತ್ರಿಕೆಗಳು ಹಾಗೂ ಸಣ್ಣ ಪತ್ರಿಕೆಗಳ ಗಾತ್ರವು ಗರಿಷ್ಠ 8 ಪುಟಗಳಿಗೆ ಸೀಮಿತಗೊಂಡಿದೆ. ಸಂಪಾದಕೀಯ ಇಲ್ಲದ ಈ ಪತ್ರಿಕೆಗಳ ಮುದ್ರಣ ಸಂಖ್ಯೆಯೂ ಕಡಿತಗೊಂಡಿದ್ದು, ಸರಿಯಾಗಿ ವಿತರಣೆಯೂ ಆಗುತ್ತಿಲ್ಲ. ಇಂಟರ್ನೆಟ್ ಸೌಲಭ್ಯ ಇಲ್ಲದ ಕಾರಣ  ಆನ್‌ಲೈನ್ ಸುದ್ದಿ ವೆಬ್‌ಸೈಟ್‌ಗಳು ಆಗಸ್ಟ್ 4ರ ಬಳಿಕ ಯಾವುದೇ ಹೊಸ ಸುದ್ದಿಯನ್ನು ಅಪ್‌ಡೇಟ್ ಮಾಡಿಲ್ಲ. ಆಯ್ದ ಸರ್ಕಾರಿ ಅಧಿಕಾರಿಗಳು, ಪೊಲೀಸರು ಹಾಗೂ ಭದ್ರತಾಪಡೆ ಸಿಬ್ಬಂದಿಗೆ ಮಾತ್ರ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸೌಲಭ್ಯವಿದೆ.

ಬಹುತೇಕ ಸುದ್ದಿಸಂಸ್ಥೆಗಳು ನೆಲೆಗೊಂಡಿರುವ ಪ್ರೆಸ್ ಎನ್‌ಕ್ಲೇವ್‌ನಲ್ಲಿ ದೂರವಾಣಿಗಳು ಕೆಲಸ ಮಾಡುತ್ತಿಲ್ಲ.

180 ಸಲ: ಕಾಶ್ಮೀರದಲ್ಲಿ 2012ರ ಬಳಿಕ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ

414:  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕಟವಾಗುವ ಪತ್ರಿಕೆ, ನಿಯತಕಾಲಿಕಗಳ ಸಂಖ್ಯೆ

ವಶ, ಬೆದರಿಕೆ ಮತ್ತು ತನಿಖೆ
ಪೊಲೀಸರು ವಶಕ್ಕೆ ಪಡೆದ ಮೊದಲ ಪತ್ರಕರ್ತ ತ್ರಾಲ್‌ನ ಇರ್ಫಾನ್ ಮಲಿಕ್. ಇವರನ್ನು ಏಕೆ ವಶಕ್ಕೆ ಪಡೆಯಲಾಯಿತು ಎಂಬುದಕ್ಕೆ ಯಾವುದೇ ಸ್ಪಷ್ಟೀಕರಣ ಇಲ್ಲ. ಅನಂತನಾಗ್‌ ನಿವಾಸಿ ಖಾಜಿ ಶಿಬ್ಲಿ ಅವರನ್ನು ಆಗಸ್ಟ್ ತಿಂಗಳ ಆರಂಭದಲ್ಲೇ ವಶಕ್ಕೆ ಪಡೆಯಲಾಗಿತ್ತು. ಕಾಶ್ಮೀರದಲ್ಲಿ ಹೆಚ್ಚುವರಿ ಪಡೆ ನಿಯೋಜನೆ ಕುರಿತಂತೆ ಅವರು ಟ್ವೀಟ್ ಮಾಡಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. 

ಸುದ್ದಿ ಹಾಗೂ ಸುದ್ದಿಮೂಲ ಬಹಿರಂಗಪಡಿಸುವಂತೆ ಪೊಲೀಸರು ಪತ್ರಕರ್ತರಿಗೆ ಒತ್ತಡ ಹೇರಿದ್ದಾರೆ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸುದ್ದಿಸಂಸ್ಥೆಗಳ ಹಿರಿಯ ಪತ್ರಕರ್ತರಾದ ಫಯಾಜ್ ಬುಖಾರಿ, ಅಯಾಜ್ ಹುಸೇನ್ ಮತ್ತು ನಾಜಿರ್ ಮಸೂದಿ ಅವರಿಗೆ ಹಿಂಸೆ ನೀಡುವ ಯತ್ನಗಳೂ ನಡೆದಿವೆ. ಸರ್ಕಾರ ನೀಡಿರುವ ವಸತಿಗೃಹ ಖಾಲಿಮಾಡುವಂತೆ ಮೌಖಿಕವಾಗಿ ಸೂಚಿಸುವ ಮೂಲಕ ಒತ್ತಡ ಹೇರಲಾಗುತ್ತಿದೆ.

ಪ್ರಕಟಣೆ ಸರ್ಕಾರದ ಕೈಯಲ್ಲಿ

*ಗಡಿ ಪ್ರದೇಶಗಳಲ್ಲಿ ಸುದ್ದಿ ಪ್ರಸರಣದ ನಿಯಂತ್ರಣ ಸಾಧಿಸಿದ ಸೇನೆ

*ಆಗಸ್ಟ್ 5ರ ಬಳಿಕ ಕೆಲವು ಸುದ್ದಿಪತ್ರಿಕೆ, ನಿಯತಕಾಲಿಕಗಳ ಮುದ್ರಣ ಒತ್ತಾಯಪೂರ್ವಕವಾಗಿ ಸ್ಥಗಿತ

*ಪತ್ರಿಕಾ ಸಂಸ್ಥೆಗಳು ಯಾವ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ‘ಅನಧಿಕೃತ’ ನಿರ್ದೇಶನ ನೀಡಲಾಗುತ್ತಿದೆ

*ಪ್ರತಿಭಟನೆ, ಕಲ್ಲು ತೂರಾಟ, ನಿರ್ಬಂಧ ಹೇರಿಕೆ ವಿಷಯಗಳನ್ನು ಪ್ರಕಟಿಸದಂತೆ ಉನ್ನತಾಧಿಕಾರಿಗಳ ಸೂಚನೆ

*ಏಳೆಂಟು ಸುದ್ದಿಗಳನ್ನು ಹಿಡಿದು ಪತ್ರಿಕಾ ಕಚೇರಿಗೆ ಬರುವ ಬಿಜೆಪಿ ಮುಖಂಡರು, ಸುದ್ದಿ ಪ್ರಕಟಿಸುವಂತೆ ಒತ್ತಾಯಿಸುತ್ತಾರೆ; ಹೀಗೆ ತರುವ ಸುದ್ದಿ ಮತ್ತು ಲೇಖನಗಳಲ್ಲಿ ಹೆಚ್ಚಿನವರು ಪಾಕಿಸ್ತಾನ ವಿರೋಧಿ

*ಮುಖಪುಟದಲ್ಲಿ ಇಮ್ರಾನ್ ಖಾನ್ ಸುದ್ದಿ ಪ್ರಕಟಿಸದಂತೆ ಒತ್ತಡ

*ಕೆಲವೇ ಮಾಧ್ಯಮಗಳಿಗೆ ಸರ್ಕಾರದ ಜಾಹೀರಾತು ಸೀಮಿತ; ಪತ್ರಿಕೆಗಳಿಗೆ ಆರ್ಥಿಕ ಸಂಕಷ್ಟ

*ಪ್ರಮುಖ ಪತ್ರಿಕೆಗಳು ಶೇ 75ರಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸಿವೆ.

*ಹಿರಿಯ ಸಿಬ್ಬಂದಿಗಳಿಗೆ ಶೇ 30ರಷ್ಟು ವೇತನ ಕಡಿತ

ಪ್ರಶ್ನೆ ಕೇಳಿದರೂ ಉತ್ತರ ಇಲ್ಲ!

*ಶ್ರೀನಗರದ ಖಾಸಗಿ ಹೋಟೆಲ್‌ನಲ್ಲಿ ಸರ್ಕಾರದ ತಾತ್ಕಾಲಿಕ ಮಾಧ್ಯಮ ಕೇಂದ್ರ 

*5 ಕಂಪ್ಯೂಟರ್‌, ಬಿಎಸ್‌ಎನ್‌ಎಲ್ ಇಂಟರ್ನೆಟ್ ಸಂಪರ್ಕ, ಒಂದು ಸ್ಥಿರ ದೂರವಾಣಿ

*ಇಂಟರ್ನೆಟ್‌ ಮೂಲಕ ಸುದ್ದಿ ಕಳುಹಿಸಲು ಸರದಿಯಲ್ಲಿ ನಿಲ್ಲಬೇಕು ಪತ್ರಕರ್ತರು; ಒಂದು ಫೈಲ್ ಕಳುಹಿಸಲು ಇಡೀ ದಿನ ಬೇಕು

*ಆಗಾಗ ನಡೆಯುವ ಸುದ್ದಿಗೋಷ್ಠಿ 10 ನಿಮಿಷದಲ್ಲಿ ಸಮಾಪ್ತಿ; ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗದ ಅಧಿಕಾರಿಗಳು

Post Comments (+)