ಶನಿವಾರ, ಆಗಸ್ಟ್ 13, 2022
26 °C
ಸಿಪಿಐ ಯುವ ನಾಯಕ ಕನ್ಹಯ್ಯಾ ಕುಮಾರ್‌ ಪ್ರತಿಪಾದನೆ

ಸರ್ಕಾರದ ಅಂಧಭಕ್ತಿಯೇ ದೇಶದ್ರೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: 'ದೇಶದೊಳಗೆ ಕೆಲವರು ದೇಶಭಕ್ತಿಯ ಹೆಸರಿನಲ್ಲಿ ಸರ್ಕಾರದ ಮೇಲೆ ಭಕ್ತಿ ಪ್ರದರ್ಶನ ಮಾಡಿಸುತ್ತಿದ್ದಾರೆ. ಇದು ದೊಡ್ಡ ದೇಶದ್ರೋಹ' ಎಂದು ಸಿಪಿಐ ಯುವ ನಾಯಕ ಕನ್ಹಯ್ಯಾ ಕುಮಾರ್ ಹೇಳಿದರು.

ನಗರದಲ್ಲಿ ಶನಿವಾರ ಆರಂಭವಾದ ದಿವಂಗತ ಬಿ.ವಿ.ಕಕ್ಕಿಲ್ಲಾಯ ಜನ್ಮ‌ಶತಾಬ್ದಿ ಕಾರ್ಯಕ್ರಮದಲ್ಲಿ ‘ಕವಲು ದಾರಿಯಲ್ಲಿ ಭಾರತದ ಯುವಕರು’ ವಿಷಯ ಮಾತನಾಡಿದ ಅವರು, ‘ದೇಶದ ಜನರ ಪರವಾಗಿ ಧ್ವನಿ ಎತ್ತುವುದು ಮತ್ತು ಆಳುವ ವರ್ಗವನ್ನು ಪ್ರಶ್ನಿಸುವುದನ್ನು ದೇಶದ್ರೋಹ ಎಂದು ಬಿಂಬಿಸುತ್ತಾ ನಿಜವಾದ ದೇಶದ್ರೋಹವನ್ನು ಮರೆಮಾಚುತ್ತಿದ್ದಾರೆ’ ಎಂದರು.

‘ಆಳುವ ವರ್ಗವನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ. ನಾವು ಸರ್ಕಾರವನ್ನು ಪ್ರಶ್ನಿಸುತ್ತೇವೆಯೋ, ಇಲ್ಲವೋ ಎಂಬುದರ ಮೇಲೆ ನಮ್ಮ ಶಕ್ತಿ ನಿರ್ಧಾರವಾಗುತ್ತದೆ’ ಎಂದು ಹೇಳಿದರು.

ಈಗ ಜನಪರ ಚಳವಳಿಗಳು ಹುಟ್ಟದಂತೆ ತಡೆಯಲಾಗುತ್ತಿದೆ. ಒಂದು ಚಳವಳಿಯ ಜನರನ್ನು ಮತ್ತೊಂದು ಚಳವಳಿಯ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ.ತಪ್ಪು ಮಾಹಿತಿ ಪೂರೈಕೆ, ಅಪಪ್ರಚಾರ, ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ಯುವಕರೊಳಗೆ ತುಂಬಿ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ದೂರಿದರು.

ಹೊಸ ಬೆಳವಣಿಗೆಯಲ್ಲ: ಹಿಂದೂ– ಮುಸ್ಲಿಮರನ್ನು ವಿಭಜಿಸಿ ರಾಜಕಾರಣ ಮಾಡುವ ತಂತ್ರಗಾರಿಕೆ ಕುರಿತು ಭಾರತೀಯ ಜನಸಂಘದ ಆರಂಭದ ಸಭೆಗಳಲ್ಲೇ ಚರ್ಚೆ ನಡೆದಿತ್ತು. ಬಿಜೆಪಿ ಕೂಡ ಆರಂಭದಿಂದ ಇದನ್ನೇ ಮಾಡಿಕೊಂಡು ಬಂದಿದೆ. ಮುಸ್ಲಿಮರಿಗೆ ಬಿಜೆಪಿ ಸದಸ್ಯತ್ವ ನೀಡಬೇಕೆ, ಬೇಡವೆ ಎಂಬ ಚರ್ಚೆ ಆರಂಭದಲ್ಲೇ ನಡೆದಿತ್ತು ಎಂದರು. ಸಂವಿಧಾನದ ರಕ್ಷಣೆಯ ಅಡಿಯಲ್ಲಿ ದೇಶದಲ್ಲಿ ಸಮಾಜವಾದಿ, ಜಾತ್ಯತೀತ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದು ಹೇಳಿದರು.

ಜೈ ಶ್ರೀರಾಮ್‌ ಘೋಷಣೆಗೆ ಒತ್ತಾಯ

ಸಂವಾದದ ನಡುವೆಯೇ ಯುವತಿಯೊಬ್ಬಳು ಕನ್ಹಯ್ಯಾ ಅವರ ಎಡಪಂಥೀಯ ನಿಲುವನ್ನು ಪ್ರಶ್ನಿಸುತ್ತಾ, ‘ಜೈ ಶ್ರೀರಾಮ್‌ ಘೋಷಣೆ’ ಕೂಗಿ ಎಂದು ಆಗ್ರಹಿಸಿದಳು. ‘ಒಂದು ಭಾರತ, ಒಂದು ಕಾನೂನು ಎಂಬುದನ್ನೂ ಒಪ್ಪಿಕೊಳ್ಳಬೇಕು. ಭಾರತ್‌ ಮಾತಾಕಿ ಜೈ ಎನ್ನಬೇಕು’ ಎಂದು ಒತ್ತಾಯಿಸಿದಳು. ಅದಕ್ಕೆ ಉತ್ತರಿಸಿದ ಕನ್ಹಯ್ಯಾ, ‘ನಾನು ಜೈ ಸೀತಾರಾಮ್‌ ಎನ್ನುತ್ತೇನೆ. ನಾನು ಅಪ್ಪ– ಅಮ್ಮ ಇಬ್ಬರಿಂದಲೂ ಜನಿಸಿದವನು.ನನಗೆ ತಾಯಿ ಮೇಲೆ ಇರುವಷ್ಟೇ ಪ್ರೀತಿ ದೇಶದ ಮೇಲೂ ಇದೆ. ಸಂವಿಧಾನವೇ ಬಹುತ್ವಕ್ಕೆ ಬುನಾದಿ ಹಾಕಿದೆ ಎಂದು ಅರಿಯಿರಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು