ಮಂಗಳವಾರ, ಮೇ 18, 2021
23 °C
16ಕ್ಕೆ ವಿಶ್ವಾಸಮತ ಸಾಬೀತಿಗೆ ಬಿಜೆಪಿ ಒತ್ತಾಯ

ಮಧ್ಯಪ್ರದೇಶ: 22 ಶಾಸಕರಿಗೆ ಸ್ಪೀಕರ್‌ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಭೋಪಾಲ್‌: ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ 22 ಬಂಡಾಯ ಶಾಸಕರಿಗೆ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್‌  ಎನ್‌.ಪಿ. ಪ್ರಜಾಪತಿ ನೋಟಿಸ್‌ ಜಾರಿಗೊಳಿಸಿದ್ದಾರೆ.

‘ಶುಕ್ರವಾರದ ಒಳಗೆ ಶಾಸಕರು ತಮ್ಮ ಮುಂದೆ ಹಾಜರಾಗಬೇಕು.ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಲಾಗಿದೆಯೋ ಅಥವಾ ಒತ್ತಡಕ್ಕೆ ಸಿಲುಕಿ ರಾಜೀನಾಮೆ ನೀಡಲಾಗಿದೆಯೋ ಎನ್ನುವ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಸ್ಪೀಕರ್‌ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇದೇ 16ರಂದು ಕಾಂಗ್ರೆಸ್‌ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ. ಆದರೆ, 22 ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳುವ ತನಕ ವಿಶ್ವಾಸಮತ ಯಾಚಿಸುವುದಿಲ್ಲ ಎಂದು ಕಾಂಗ್ರೆಸ್‌ ತಿಳಿಸಿದೆ.

‘ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಮಾರ್ಚ್‌ 16ರಂದು ಬಜೆಟ್‌ ಅಧಿವೇಶನ ಆರಂಭವಾಗಲಿದೆ. ಅಂದೇ ವಿಶ್ವಾಸಮತ ಕೋರಿಕೆಗೆ ಅವಕಾಶ ನೀಡುವಂತೆ ರಾಜ್ಯಪಾಲರು ಮತ್ತು ವಿಧಾನಸಭೆ ಸ್ಪೀಕರ್‌ ಅವರಿಗೆ ಮನವಿ ಮಾಡಲಾಗುವುದು’ ಎಂದು ವಿಧಾನಸಭೆಯಲ್ಲಿನ ಬಿಜೆಪಿ ಮುಖ್ಯ ಸಚೇತಕ ನರೋತ್ತಮ ಮಿಶ್ರಾ ತಿಳಿಸಿದ್ದಾರೆ.

 ಸ್ಪೀಕರ್‌ ಅವರನ್ನು ಭೇಟಿಯಾಗಲಿ: ‘ವಿಶ್ವಾಸಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕಮಲನಾಥ್‌ ಸಿದ್ಧರಿದ್ದಾರೆ. ಆದರೆ, ಅದಕ್ಕೂ ಮುನ್ನ ಶಾಸಕರ ರಾಜೀನಾಮೆ ವಿಷಯ ಇತ್ಯರ್ಥವಾಗಬೇಕಾಗಿದೆ. ರಾಜೀನಾಮೆ ಸಲ್ಲಿಸಲು ಶಾಸಕರು ಸ್ಪೀಕರ್‌ ಅವರನ್ನು ಯಾಕೆ ಭೇಟಿಯಾಗುತ್ತಿಲ್ಲ. ಶಾಸಕರು ಸ್ಪೀಕರ್‌ ಅವರನ್ನು ಖುದ್ದಾಗಿ ಭೇಟಿಯಾದಾಗ ಸಹಿ ಪರಿಶೀಲಿಸಲಾಗುವುದು. ಆಗ ರಾಜೀನಾಮೆಯನ್ನು ಅಂಗೀಕರಿಸಲಾಗುವುದು. ಬಳಿಕ ವಿಶ್ವಾಸಮತ ಕೋರಲಾಗುವುದು’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ತಿಳಿಸಿದ್ದಾರೆ.

‘ಬಿಜೆಪಿ ವಶದಲ್ಲಿರುವ 19 ಕಾಂಗ್ರೆಸ್‌ ಶಾಸಕರು ತಮ್ಮ ಕುಟುಂಬದ ಸದಸ್ಯರ ಜತೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರ ಮೊಬೈಲ್‌ ದೂರವಾಣಿಗಳನ್ನು ಸಹ ಕಿತ್ತುಕೊಳ್ಳಲಾಗಿದೆ. ಬಿಜೆಪಿ ನಾಯಕ ಭೂಪೇಂದ್ರ ಸಿಂಗ್‌ ಅವರು ಕಾಂಗ್ರೆಸ್‌ ಶಾಸಕರ ರಾಜೀನಾಮೆ ಪತ್ರಗಳನ್ನು ಸ್ಪೀಕರ್‌ ಅವರಿಗೆ ತಲುಪಿಸಿರುವುದು ಅಚ್ಚರಿ ಮೂಡಿಸಿದೆ’ ಎಂದು ಟೀಕಿಸಿದರು.

ನಾಮಪತ್ರ ಸಲ್ಲಿಕೆ: ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಗುರುವಾರ ಮಧ್ಯಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.

ಪತ್ರಿಕೆ ಓದಿ ಕಾಲ ಕಳೆದ ಶಾಸಕರು
ದೇವನಹಳ್ಳಿ:
ಇಲ್ಲಿನ ಫ್ರೆಸ್ಟಿಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಮಧ್ಯಪ್ರದೇಶದ 19 ಕಾಂಗ್ರೆಸ್‌ ಶಾಸಕರು ಬೆಳಿಗ್ಗೆ ವಾಯವಿಹಾರದ ನಂತರ ಮಧ್ಯಪ್ರದೇಶ ಶೈಲಿಯ ಉಪಾಹಾರ ಸೇವಿಸಿದರು. ಟಿ.ವಿ ವೀಕ್ಷಣೆ ಮತ್ತು ಆಂಗ್ಲ, ಹಿಂದಿ ದಿನಪತ್ರಿಕೆ ಓದುತ್ತಾ ಕಾಲ ಕಳೆದರು.

ಭದ್ರತೆಗಾಗಿ 40ಕ್ಕೂ ಹೆಚ್ಚು ಸ್ಥಳೀಯ ಪೊಲೀಸರು ಮತ್ತು 4 ಜಿಲ್ಲಾ ಮೀಸಲು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಎರಡು ಕಡೆ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ಡಿವೈಎಸ್ಪಿ ರಂಗಸ್ವಾಮಿ ತಿಳಿಸಿದರು.

ಸಿದ್ಧಾಂತ ಮರೆತ ಸಿಂಧಿಯಾ’
 ‘ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ರಾಜಕೀಯ ಭವಿಷ್ಯದ ಬಗ್ಗೆಯೇ ಅನುಮಾನ ಮೂಡಿತು. ಹೀಗಾಗಿ, ಸಿದ್ಧಾಂತ ಮರೆತರು’ ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

‘ಬಿಜೆಪಿಯಲ್ಲಿ ಅವರಿಗೆ ಗೌರವ ಮತ್ತು ತೃಪ್ತಿ ಸಿಗುವುದಿಲ್ಲ. ಸಿಂಧಿಯಾ ನೀಡುತ್ತಿರುವ ಹೇಳಿಕೆ ಮತ್ತು ಅವರ ಹೃದಯದ ಮಾತುಗಳಲ್ಲಿ ಅಪಾರ ವ್ಯತ್ಯಾಸವಿದೆ’ ಎಂದು ಗುರುವಾರ ಹೇಳಿದ್ದಾರೆ.

‘ಸಿಂಧಿಯಾ ನನ್ನ ಹಳೆಯ ಸ್ನೇಹಿತ. ಕಾಲೇಜಿನಲ್ಲೂ ನನ್ನ ಜತೆಗಿದ್ದರು. ರಾಜಕೀಯ ಭವಿಷ್ಯದ ಬಗ್ಗೆ ಭೀತಿ ಉಂಟಾಗಿ ಸಿದ್ಧಾಂತವನ್ನು ಜೇಬಿನಲ್ಲಿಟ್ಟರು ಮತ್ತು ಆರ್‌ಎಸ್‌ಎಸ್‌ ಜತೆ ತೆರಳಿದರು’ ಎಂದು ಹೇಳಿದ್ದಾರೆ.

ದಿಗ್ವಿಜಯ್‌ ಸಿಂಗ್‌ ನಾಮಪತ್ರ
ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಗುರುವಾರ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

ಮಧ್ಯಪ್ರದೇಶದಿಂದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ, ಬುಧವಾರ ಪಕ್ಷಕ್ಕೆ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು