ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಕಿಸ್ತಾನ ಸೃಷ್ಟಿಗೆ ಕಾಂಗ್ರೆಸ್‌ ಕಾರಣ’

ಔಸಾದಲ್ಲಿ ಬಿಜೆಪಿ– ಶಿವಸೇನಾ ಜಂಟಿ ರ್‍ಯಾಲಿ
Last Updated 9 ಏಪ್ರಿಲ್ 2019, 20:04 IST
ಅಕ್ಷರ ಗಾತ್ರ

ಔಸಾ (ಮಹಾರಾಷ್ಟ್ರ): ‘ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್‌ ನಾಯಕರು ಬುದ್ಧಿವಂತಿಕೆ ತೋರಿದ್ದಿದ್ದರೆ 1947ರಲ್ಲಿ ಪಾಕಿಸ್ತಾನವೆಂಬ ರಾಷ್ಟ್ರ ಸೃಷ್ಟಿಯಾಗುತ್ತಲೇ ಇರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ಇಲ್ಲಿ ಬಿಜೆಪಿ– ಶಿವಸೇನಾ ಜಂಟಿ ರ್‍ಯಾಲಿಯಲ್ಲಿ ಕಾಂಗ್ರೆಸ್‌ ಮೇಲೆ ಟೀಕಾಸ್ತ್ರಗಳನ್ನು ಪ್ರಯೋಗಿಸಿದ ಅವರು, ‘ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್‌ ವಾದಿಸುತ್ತಿದೆ. ಪಾಕಿಸ್ತಾನವೂ ಅದೇ ಒತ್ತಾಯ ಮಾಡುತ್ತಿದೆ. ಆ ಮೂಲಕ ಭಯೋತ್ಪಾದಕರ ಓಡಾಟಕ್ಕೆ ಮುಕ್ತವಾದ ವಾತಾವರಣ ನಿರ್ಮಿಸುವುದು ಅವರ ಉದ್ದೇಶ’ ಎಂದು ಹೇಳಿದರು.

‘ದೇಶದ್ರೋಹದ ಕಾನೂನನ್ನು ರದ್ದು ಮಾಡುವ ಮೂಲಕ ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನು ಬೆಂಬಲಿಸಲು ಕಾಂಗ್ರೆಸ್‌ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಎನ್‌ಸಿಪಿ ಮುಖಂಡ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ. ಕಾಂಗ್ರೆಸ್‌ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಇಂಥವರು ದೇಶವನ್ನು ರಕ್ಷಿಸುವರೇ? ತನ್ನನ್ನು ತಾನು ಮರಾಠ ಎಂದು ಹೇಳಿಕೊಳ್ಳುತ್ತಿರುವ ಶರದ್‌ ಪವಾರ್‌ ಇಂಥವರ ಜೊತೆ ಸೇರಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ’ ಎಂದರು.

ಠಾಕ್ರೆಗೆ ಪ್ರಧಾನಿ ಮೋದಿ ಶ್ಲಾಘನೆ
ಔಸಾದಲ್ಲಿ ನಡೆದ ರ್‍ಯಾಲಿಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ‘ಸಹೋದರ’ ಎಂದು ಸಂಬೋಧಿಸಿದ ಮೋದಿ, ಸೇನಾ ಸಂಸ್ಥಾಪಕ ಬಾಳ ಠಾಕ್ರೆ ಅವರನ್ನೂ ಕೊಂಡಾಡಿದರು.

‘ಶಿವಸೇನಾ ಅಧಿಕಾರಕ್ಕೆ ಬಂದಾಗ ಬಾಳ ಠಾಕ್ರೆ ಅವರು ಸ್ವತಃ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬಹುದಾಗಿತ್ತು. ಅವರು ಹಾಗೆ ಮಾಡಲಿಲ್ಲ. ಅಷ್ಟೇ ಅಲ್ಲ ತನ್ನ ಮಗನನ್ನೂ ಆ ಸ್ಥಾನದಲ್ಲಿ ಕೂರಿಸಲಿಲ್ಲ. ವಂಶಾಡಳಿತ ಮಾಡುವವರು ಠಾಕ್ರೆ ಅವರಿಂದ ಪಾಠ ಕಲಿಯಬೇಕು’ ಎಂದರು.

ಪಾಕ್‌ಗೆ ಪಾಠ ಕಲಿಸಿ: ಅದೇ ವೇದಿಕೆಯಿಂದ ಮಾತನಾಡಿದ ಉದ್ಧವ್‌ ಠಾಕ್ರೆ, ‘ಭಾರತದೊಂದಿಗೆ ಚೆಲ್ಲಾಟವಾಡಿದರೆ ಏನಾಗುತ್ತದೆ ಎಂಬುದು ಅರ್ಥವಾಗುವ ರೀತಿಯಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಿ’ ಎಂದು ಮೋದಿಗೆ ಮನವಿ ಮಾಡಿದರು.

ಮೋದಿ ಮತ್ತು ಉದ್ಧವ್‌ ಅವರು ನಾಲ್ಕು ವರ್ಷಗಳ ಬಳಿಕ ವೇದಿಕೆ ಹಂಚಿಕೊಂಡಿದ್ದರು. ಉದ್ಧವ್‌ ಅವರ ಕೈ ಹಿಡಿದುಕೊಂಡೇ ಮೋದಿ ವೇದಿಕೆಯನ್ನು ಏರಿದರು.

ಸ್ವಯಂಚಾಲಿತ ಟ್ವಿಟರ್‌ ಸಮರ
ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರ ಪರ ಮತ್ತು ವಿರುದ್ಧ ಟ್ವಿಟರ್‌ನಲ್ಲಿ ಬಾಟ್‌ಗಳ (ಸ್ವಯಂಚಾಲಿತ ಸಂದೇಶ ರವಾನೆ ವ್ಯವಸ್ಥೆ) ಭಾರಿ ಸಂಖ್ಯೆಯಲ್ಲಿ ಸಂದೇಶಗಳು ರವಾನೆ ಆಗುತ್ತಿವೆ ಎಂದು ಅಮೆರಿಕದ ಅಟ್ಲಾಂಟಿಕ್‌ ಕೌನ್ಸಿಲ್‌ನ ಡಿಜಿಟಲ್‌ ಫೊರೆನ್ಸಿಕ್‌ ರಿಸರ್ಚ್‌ ಲ್ಯಾಬ್‌ ವರದಿ ಹೇಳಿದೆ.

ಫೆಬ್ರುವರಿ 9–10ರಂದು ಭಾರಿ ಸಂಖ್ಯೆಯಲ್ಲಿ ಇಂತಹ ಸ್ವಯಂಚಾಲಿತ ಖಾತೆಗಳನ್ನು ಸೃಷ್ಟಿಸಲಾಗಿದೆ. ಟ್ವಿಟರ್‌ ಖಾತೆಗಳ ಸಣ್ಣ ಸಣ್ಣ ಗುಂಪುಗಳು ತಾಸಿಗೆ ಸಾವಿರಾರು ಸಂದೇಶಗಳನ್ನು ಕಳುಹಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೋದಿ ಪರ ಮತ್ತು ಮೋದಿ ವಿರೋಧಿ ಖಾತೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ, ಮೋದಿ ಪರ ಖಾತೆಗಳೇ ಹೆಚ್ಚು ಸಂದೇಶಗಳನ್ನು ಕಳುಹಿಸುತ್ತಿವೆ.

‘ಟ್ವಿಟರ್‌ನಲ್ಲಿನ ಕಾರ್ಯಚಟುವಟಿಕೆಗಳನ್ನು ತಿರುಚಲು ಭಾರತದ ಮುಖ್ಯ ರಾಜಕೀಯ ಪಕ್ಷಗಳು ಇನ್ನಿಲ್ಲದ ಯತ್ನ ನಡೆಸುತ್ತಿವೆ. ಸಾಮಾಜಿಕ ಜಾಲ ತಾಣವೇ ಹೋರಾಟದ ಪ್ರಮುಖ ಕಣವಾಗಿಬಿಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇಂತಹ ಚಟುವಟಿಕೆ ಅಗಾಧ ಪ್ರಮಾಣದಲ್ಲಿ ಇದ್ದರೂ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿ ಇಲ್ಲ. ಇಂತಹ ಖಾತೆಗಳ ‘ಫಾಲೋವರ್‌’ಗಳ ಸಂಖ್ಯೆ ಕಡಿಮೆ ಎಂದು ಲ್ಯಾಬ್‌ನ ಹಿರಿಯ ಅಧಿಕಾರಿ ಬೆನ್‌ ನಿಮ್ಮೊ ಹೇಳಿದ್ದಾರೆ.

ಟಿಎನ್‌ ವೆಲ್‌ಕಮ್ಸ್‌ ಮೋದಿ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ‘ತಮಿಳುನಾಡು ವೆಲ್‌ಕಮ್ಸ್‌ ಮೋದಿ’‍ ಎಂಬುದು ಫೆ. 9–10ರಂದು 7.77 ಲಕ್ಷ ಬಾರಿ ಪ್ರಸ್ತಾಪವಾಗಿದೆ ಎಂಬುದನ್ನು ವರದಿಯಲ್ಲಿ ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT