ಬುಧವಾರ, ಜೂನ್ 3, 2020
27 °C
ಟ್ವಿಟರ್‌ನಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್ ಗಾಂಧಿ

ರಫೇಲ್‌ ಪರೀಕ್ಷೆಯಿಂದ ಓಡಿಹೋದ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಫೇಲ್ ಪರೀಕ್ಷೆಯನ್ನು ಎದುರಿಸದೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಿಂದ ಓಡಿಹೋಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ರಫೇಲ್‌ ಒಪ್ಪಂದದ ಬಗ್ಗೆ ನಡೆದ ಚರ್ಚೆಯಲ್ಲಿ ಮೋದಿ ಭಾಗವಹಿಸಿರಲಿಲ್ಲ. ಹೀಗಾಗಿ ಅವರ ಮುಂದೆ ರಫೇಲ್ ಪರೀಕ್ಷೆ ಇಡುತ್ತಿದ್ದೇನೆ ಎಂದು ರಾಹುಲ್ ಬುಧವಾರ ರಾತ್ರಿ ಟ್ವೀಟ್ ಮಾಡಿದ್ದರು.

ಪ್ರಧಾನಿ ಮೋದಿ ಅವರು ಗುರುವಾರವೂ ಸಂಸತ್ತಿಗೆ ಬರಲಿಲ್ಲ. ಹೀಗಾಗಿ ಮೋದಿ ವಿರುದ್ಧದ ತಮ್ಮ ಟೀಕೆಯನ್ನು ರಾಹುಲ್ ಮುಂದುವರೆಸಿದ್ದಾರೆ.

ಪರೀಕ್ಷೆ ನಿಮ್ಮ ಮುಂದಿದೆ

‘ಪರೀಕ್ಷೆಗೂ ಮುಂಚಿತವಾಗೇ ಪ್ರಶ್ನೆಗಳು ನಿಮ್ಮ ಮುಂದಿವೆ.

ಪ್ರಶ್ನೆ 1: ವಾಯುಪಡೆಗೆ ಬೇಕಿದ್ದ 126 ವಿಮಾನಗಳ ಬದಲಿಗೆ ಕೇವಲ 36 ವಿಮಾನಗಳನ್ನು ಖರೀದಿಸುತ್ತಿರುವುದು ಏಕೆ?

ಪ್ರಶ್ನೆ 2: ಪ್ರತಿ ವಿಮಾನಕ್ಕೆ ₹ 526 ಕೋಟಿಯ ಬದಲಿಗೆ ₹ 1,600 ಕೋಟಿ ನೀಡುತ್ತಿರುವುದೇಕೆ?

ಪ್ರಶ್ನೆ 4: ಎಚ್‌ಎಎಲ್‌ ಬದಲಿಗೆ ‘ಎಎ’ ಏಕೆ?

ಪ್ರಧಾನಿ ಸಂಸತ್ತಿಗೆ ಬರುತ್ತಾರೋ? ಅಥವಾ ಬೇರೆಯವರನ್ನು ಕಳುಹಿಸುತ್ತಾರೋ’ ಎಂದು ರಾಹುಲ್ ಟ್ವೀಟ್ ಮಾಡಿದರು.

ಅನುತ್ತೀರ್ಣ ವಿದ್ಯಾರ್ಥಿ

ರಾಹುಲ್ ಅವರ ಟ್ವೀಟ್‌ನಲ್ಲಿ ಮೂರನೇ ಪ್ರಶ್ನೆ ಇಲ್ಲದೇ ಇರುವುದನ್ನು ಲೇವಡಿ ಮಾಡಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದರು.

‘ತರಗತಿಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿ, ತರಗತಿಯ ಹೊರಗೆ ಸವಾಲು ಹಾಕುತ್ತಿದ್ದಾನೆ’ ಎಂದು ರಕ್ಷಣಾ ಸಚಿವೆ ರಾಹುಲ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದರು.

ಮೂರನೇ ಪ್ರಶ್ನೆ ಇಲ್ಲಿದೆ

ನಿರ್ಮಲಾ ಟ್ವೀಟ್‌ಗೆ ರಾಹುಲ್ ತಕ್ಷಣವೇ ಪ್ರತಿಕ್ರಿಯೆ ನೀಡಿದರು.

‘ಮೂರನೇ ಪ್ರಶ್ನೆ ಇಲ್ಲಿದೆ.

‘ಗೋವಾ ಟೇಪ್’ ಬಗ್ಗೆ ಮಾತನಾಡಬಾರದು ಎಂದು ಸ್ಪೀಕರ್ ಮೇಡಂ ಹೇಳಿದ್ದರು. ಹೀಗಾಗಿ ಮೂರನೇ ಪ್ರಶ್ನೆ ತಡೆಹಿಡಿದಿದ್ದೆ. ಆದರೆ ಆ ಮೂರನೇ ಪ್ರಶ್ನೆ ರಫೇಲ್‌ನಷ್ಟೇ ವಿವಾದವನ್ನು ಸೃಷ್ಟಿಸಿದೆ. ಭಾರಿ ಬೇಡಿಕೆ ಇರುವುದರಿಂದ ಮೂರನೇ ಪ್ರಶ್ನೆ ನಿಮ್ಮ ಮುಂದಿದೆ.

ಪ್ರಶ್ನೆ 3: ರಫೇಲ್ ಕಡತಗಳನ್ನು ಪರ್ರೀಕರ್ ಅವರು ತಮ್ಮ ಶಯನಗೃಹದಲ್ಲಿ ಇರಿಸಿಕೊಂಡಿರುವುದೇಕೆ ಮತ್ತು ಆ ಕಡತಗಳಲ್ಲಿ ಏನಿದೆ ಎಂಬುದನ್ನು ದಯವಿಟ್ಟು ಹೇಳಿ, ಮೋದಿಜೀ’ ಎಂದು ರಾಹುಲ್ ಮತ್ತೊಂದು ಟ್ವೀಟ್ ಮಾಡಿದರು.

ಪರೀಕ್ಷೆ ಬಿಟ್ಟು, ಪಾಠ

‘ಪ್ರಧಾನಿ ತಮ್ಮದೇ ಆದ ರಫೇಲ್ ಪರೀಕ್ಷೆ ಮತ್ತು ಸಂಸತ್ತನ್ನು ಬಿಟ್ಟು ಓಡಿಹೋಗಿದ್ದಾರೆ. ಪರೀಕ್ಷೆ ಬದಲಿಗೆ ಅವರು ಪಂಜಾಬ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.

ಪ್ರಧಾನಿಗೆ ನಾನು ಕೇಳಿದ ನಾಲ್ಕು ಪ್ರಶ್ನೆಗಳನ್ನು ನೀವೂ ಕೇಳಿ ಎಂದು ಪಂಜಾಬ್‌ನ ವಿದ್ಯಾರ್ಥಿಗಳನ್ನು ಕೇಳಿಕೊಳ್ಳುತ್ತಿದ್ದೇನೆ’ ಎಂದು ರಾಹುಲ್ ಗುರುವಾರ ಬೆಳಿಗ್ಗೆ ಟ್ವೀಟ್ ಮಾಡಿದರು.

ಪತ್ರಕರ್ತೆಯ ಟೀಕೆಗೆ ಆಕ್ಷೇಪ

ನವದೆಹಲಿ (ಪಿಟಿಐ): ಜನವರಿ 1ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ನಡೆಸಿದ್ದ ಎಎನ್‌ಐನ ಸಂಪಾದಕಿ ಸ್ಮಿತಾ ಪ್ರಕಾಶ್ ಅವರನ್ನು ರಾಹುಲ್ ‘ಅನುಕೂಲಸಿಂಧು ಪತ್ರಕರ್ತೆ’ ಎಂದು ಕರೆದಿದ್ದಾರೆ. ಈ ಟೀಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಈ ಮಾತು ಹೇಳಿದ್ದರು. ‘ನೋಡಿ. ನಾನು ಏಳೆಂಟು ದಿನಕ್ಕೊಮ್ಮೆ ನಿಮ್ಮ (ಪತ್ರಕರ್ತರ) ಮುಂದೆ ಬರುತ್ತೇನೆ. ಮೋದಿ ಮೊನ್ನೆ ನೀಡಿದ್ದ ಸಂದರ್ಶನವನ್ನು ನೀವೆಲ್ಲಾ ನೋಡಿರಬೇಕಿಲ್ಲ. ಆ ಅನುಕೂಲಸಿಂಧು ಪತ್ರಕರ್ತೆ ತಾವೇ ಪ್ರಶ್ನೆ ಕೇಳುತ್ತಿದ್ದರು. ಪ್ರಧಾನಿಯ ಉತ್ತರವನ್ನೂ ಅವರೇ ಹೇಳುತ್ತಿದ್ದರು’ ಎಂದು ರಾಹುಲ್ ಹೇಳಿದ್ದರು.

ಇದರ ಬೆನ್ನಲ್ಲೇ ರಾಹುಲ್ ಹೇಳಿಕೆಯನ್ನು ಖಂಡಿಸಿ ಜೇಟ್ಲಿ ಟ್ವೀಟ್ ಮಾಡಿದ್ದಾರೆ. ‘ಸ್ವತಂತ್ರ ಪತ್ರಕರ್ತೆಯ ಮೇಲಿನ ದಾಳಿ. ತಮ್ಮ ಡಿಎನ್‌ಎಯಲ್ಲಿ ಇರುವುದೇನು ಎಂಬುದನ್ನು ‘ತುರ್ತುಪರಿಸ್ಥಿತಿಯ ಸರ್ವಾಧಿಕಾರಿ’ಯ ಮೊಮ್ಮಗ ಬಹಿರಂಗಪಡಿಸಿದ್ದಾರೆ’ ಎಂದು  ಟೀಕಿಸಿದ್ದಾರೆ.

ರಾಹುಲ್ ಹೇಳಿಕೆಯನ್ನು ಖಂಡಿಸಿ ಭಾರತೀಯ ಸಂಪಾದಕರ ಕೂಟ ಹೇಳಿಕೆ ಬಿಡುಗಡೆ ಮಾಡಿದೆ. ‘ಸ್ಮಿತಾ ಪ್ರಕಾಶ್ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಡಿರುವ ಮಾತುಗಳನ್ನು ನಾವು ಗಮನಿಸಿದ್ದೇವೆ. ಬಿಜೆಪಿಯ ಹಿರಿಯ ನಾಯಕರು ಮತ್ತು ಎಎಪಿ ನಾಯಕರು ಪತ್ರಕರ್ತರನ್ನು ‘ತಲೆಹಿಡುಕರು’, ‘ಸುದ್ದಿ ಮಾರಾಟಗಾರರು’ ಎಂದೆಲ್ಲಾ ಕರೆದಿದ್ದನ್ನು ನಾವು ಕಂಡಿದ್ದೇವೆ. ಇಂತಹ ಬೆಳವಣಿಗೆಯನ್ನು ನಾವು ಆಕ್ಷೇಪಿಸುತ್ತೇವೆ. ಮತ್ತು ಇಂತಹವು ಇಲ್ಲಿಗೇ ನಿಲ್ಲಬೇಕು’ ಎಂದು ಕೂಟವು ಆಗ್ರಹಿಸಿದೆ. 

ಪ್ರಧಾನಿಗೆ ಕಿವಿಮಾತು

‘ಸರ್. ಪೂರ್ವಯೋಜಿತವಾದ, ಸಾಕಷ್ಟು ಸಂಶೋಧನೆ ಮತ್ತು ತಾಲೀಮಿನ ನಂತರ ನಡೆಸಲಾದ ನಿಮ್ಮ ಟಿ.ವಿ. ಸಂದರ್ಶನವನ್ನು ನೋಡಿದೆ. ಅನಿರೀಕ್ಷಿತವಾಗಿ ಪ್ರಶ್ನೆಗಳು ಬಂದೆರಗುವಂತಹ ಮಾಧ್ಯಮಗೋಷ್ಠಿಯನ್ನು ಎದುರಿಸುವ ಸಾಮರ್ಥ್ಯ ತಮಗಿದೆ ಎಂದು ತೋರಿಸಲು ಇದು ಸರಿಯಾದ ಸಮಯ’ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಟ್ವೀಟ್‌ನಲ್ಲಿ ಪ್ರಧಾನಿಗೆ ಕಿವಿಮಾತು ಹೇಳಿದ್ದಾರೆ.

‘ಅಂತಹ ಮಾಧ್ಯಮಗೋಷ್ಠಿಯನ್ನು ಎದುರಿಸಲು ನೀವು ಬಯಸುವುದಿಲ್ಲ ಎಂದು ನಮಗೆ ಗೊತ್ತಿದೆ. ಕನಿಷ್ಠ ಪಕ್ಷ, ನಮ್ಮ ಅತ್ಯುತ್ತಮ ಸಂಸದೀಯ ಪಟು ಯಶವಂತ ಸಿನ್ಹಾ ಮತ್ತು ಹಿರಿಯ ಪತ್ರಕರ್ತ ಅರುಣ್ ಶೌರಿ ಅವರ ಪ್ರಶ್ನೆಗಳನ್ನಾದರೂ ಎದುರಿಸಿ. ನಿಮ್ಮ ಸೋದರನಾಗಿ, ಸಹೋದ್ಯೋಗಿಯಾಗಿ ಈ ಮಾತು ಹೇಳುತ್ತಿದ್ದೇನೆ. ಇಲ್ಲದಿದ್ದರೆ ದೇವರೇ ನಮ್ಮನ್ನು ಕಾಪಾಡಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು