ಶುಕ್ರವಾರ, ಜನವರಿ 22, 2021
29 °C
ಸಂಸತ್‌ನ ಉಭಯ ಸದನಗಳಲ್ಲಿ ಗದ್ದಲ

ರೇಪ್ ಇನ್ ಇಂಡಿಯಾ ಹೇಳಿಕೆ: ರಾಹುಲ್ ಗಾಂಧಿ ಕ್ಷಮೆಗೆ ಬಿಜೆಪಿ ಬಿಗಿ ಪಟ್ಟು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ‘ರೇಪ್‌ ಇನ್ ಇಂಡಿಯಾ’ ಹೇಳಿಕೆಗೆ ಲೋಕಸಭೆಯಲ್ಲಿ ಶುಕ್ರವಾರ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ, ರಾಹುಲ್ ಕ್ಷಮೆ ಕೋರಬೇಕು ಎಂದು ಪಟ್ಟುಹಿಡಿದಿದ್ದಾರೆ.

‘ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಯಕರೊಬ್ಬರು ಭಾರತೀಯ ಮಹಿಳೆಯರ ಮೇಲೆ ಅತ್ಯಾಚಾರ ಎಸಗಬೇಕು ಎಂದು ಕರೆ ನೀಡಿದ್ದಾರೆ. ದೇಶದ ಜನರಿಗೆ ರಾಹುಲ್ ಗಾಂಧಿ ಅವರು ನೀಡುತ್ತಿರುವ ಸಂದೇಶ ಇದುವೇ? ಅವರನ್ನು ಶಿಕ್ಷಿಸಬೇಕು’ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ರಾಹುಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಕ್ಷಮೆ ಕೋರಬೇಕು ಎಂದು ರಾಜ್ಯಸಭೆಯಲ್ಲಿಯೂ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದ್ದಾರೆ. ಈ ಸಂದರ್ಭ ಮಧ್ಯಪ್ರವೇಶಿಸಿದ ರಾಜ್ಯಸಭೆಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ಈ ಸದನದ ಸದಸ್ಯರಲ್ಲದವರ ಬಗ್ಗೆ ಇಲ್ಲಿ ಚರ್ಚಿಸುವಂತಿಲ್ಲ. ಕಲಾಪಕ್ಕೆ ಅಡ್ಡಿಪಡಿಸಬೇಡಿ ಎಂದು ಹೇಳಿದ್ದಾರೆ. ಆದರೂ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ತುಸು ಹೊತ್ತು ಮುಂದೂಡಲಾಗಿದೆ.

ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಗುರುವಾರ ಜನರನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕರೊಬ್ಬರು ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಹತ್ಯೆ ಯತ್ನ ಮಾಡಿದ್ದರ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ, ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿದ್ದರು. ಆ ಸಂದರ್ಭದಲ್ಲಿ, ನರೇಂದ್ರ ಮೋದಿಯವರು ‘ಮೇಕ್ ಇನ್ ಇಂಡಿಯಾ’ ಎಂದು ಹೇಳಿದ್ದರು. ಆದರೆ ಈಚಿನ ದಿನಗಳಲ್ಲಿ ನೀವು ಎಲ್ಲೇ ನೋಡಿದರೂ ‘ರೇಪ್ ಇನ್ ಇಂಡಿಯಾ’ ಆಗಿದೆ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಹೋಗಿ ಈಗ ರೇಪ್ ಇನ್ ಇಂಡಿಯಾ ಆಗಿದೆ: ರಾಹುಲ್ ಗಾಂಧಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು