ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನೀಕಾಂತ್‌ ರಾಜಕೀಯ ಪಕ್ಷ; ಇಂದು ಮಹತ್ವದ ಘೋಷಣೆ?

Last Updated 12 ಮಾರ್ಚ್ 2020, 2:08 IST
ಅಕ್ಷರ ಗಾತ್ರ

ಚೆನ್ನೈ: ನಟ ರಜನೀಕಾಂತ್ ಅವರು ಗುರುವಾರ ತಮ್ಮ ಅಭಿಮಾನಿ ಸಂಘ ‘ರಜನಿ ಮಕ್ಕಳ್ ಮಂದ್ರಮ್’ನ (ಆರ್‌ಎಂಎಂ) ಪದಾಧಿಕಾರಿಗಳನ್ನು ಭೇಟಿ ಮಾಡಿ ಬಳಿಕ ‘ಮಹತ್ವದ ರಾಜಕೀಯ’ ನಡೆ ಘೋಷಿಸುವ ನಿರೀಕ್ಷೆ ಇದೆ.

‘ಗುರುವಾರ ಬೆಳಗ್ಗೆ 8 ಗಂಟೆಗೆ ಅವರು ಪದಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಎರಡು ತಾಸುಗಳ ಬಳಿಕ ಐಷಾರಾಮಿ ಹೋಟೆಲ್‌ವೊಂದರಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ತಮ್ಮ ಪಕ್ಷ ಆರಂಭಿಸುವ ದಿನಾಂಕ ಸೇರಿದಂತೆ ಈ ವೇಳೆ ಕೆಲವು ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ’ ಎಂದು ಮೂಲಗಳು ‘ಪ‍್ರಜಾವಾಣಿ’ಗೆ ತಿಳಿಸಿವೆ.

ಕಳೆದ ವಾರವಷ್ಟೆ ಆರ್‌ಎಂಎಂ ಪದಾಧಿಕಾರಿಗಳ ಜತೆ ಗೋಪ್ಯ ಮಾತುಕತೆ ನಡೆಸಿದ್ದ ರಜನೀಕಾಂತ್, ಬಳಿಕ ಮಾಧ್ಯಮದ ಜತೆ ಮಾತನಾಡಿ, ‘ಮಾತುಕತೆ ವೇಳೆ ವೈಯಕ್ತಿಕವಾಗಿ ವಿಷಯವೊಂದರ ಕುರಿತು ನನಗೆ ಅಸಮಾಧಾನವಾಗಿದೆ’ ಎಂದಿದ್ದರು.

‘ಈ ಹೇಳಿಕೆ ಕುರಿತು ಹಲವು ರೀತಿ ಊಹಾಪೋಹಗಳು ಹರಡಿರುವುದರಿಂದಾಗಿ, ರಜನೀಕಾಂತ್ ಅವರು ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಬಹುದು’ ಎಂದು ಮೂಲಗಳು ಹೇಳಿವೆ.

2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುವುದಾಗಿ ರಜನೀಕಾಂತ್‌ ಬಹಿರಂಗ ಪಡಿಸಿದ್ದರು. ಡಿಸೆಂಬರ್‌ 2017ರಲ್ಲೇ ರಾಜಕೀಯ ಪ್ರವೇಶಿಸುವ ಘೋಷಣೆ ಮಾಡಿದ್ದರು. ಆಗಿನಿಂದಲೂ ರಾಷ್ಟ್ರೀಯ ಪಕ್ಷಗಳನ್ನು ಸೇರುವ ಬಗ್ಗೆ ಹಾಗೂ ಹೊಸ ಪಕ್ಷ ಘೋಷಿಸುವ ಕುರಿತು ಊಹಾಪೋಹಗಳು ಹರಿದಾಡುತ್ತಿವೆ.

ತಮಿಳು ನಟ ಕಮಲ್‌ ಹಾಸನ್‌ ಈಗಾಗಲೇಮಕ್ಕಳ್‌ ನೀಧಿ ಮೈಯಂ (ಎಂಎನ್‌ಎಂ) ಪಕ್ಷ ಕಟ್ಟಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹಿಂದೆ ಎಂಜಿಆರ್‌, ಜಯಲಲಿತಾ ರಾಜಕೀಯ ಪ್ರವೇಶದಿಂದತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಯಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಸೂಪರ್‌ಸ್ಟಾರ್‌ರಜನೀಕಾಂತ್‌ ರಾಜಕೀಯ ಪ್ರವೇಶ ಕುರಿತಾದ ಮೀಮ್‌ಗಳು, ನಿರೀಕ್ಷೆಗಳು, ಪಂಚಿಂಗ್‌ ಡೈಲಾಗ್‌ಗಳು ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT