ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲು ವಿರುದ್ಧ ರಾಕೇಶ್‌ ಅಸ್ತಾನಾ, ಪಿಎಂಒ, ಸುಶೀಲ್ ಮೋದಿ ಸಂಚು: ಅಲೋಕ್ ವರ್ಮಾ

ಕೇಂದ್ರ ಜಾಗೃತ ಆಯೋಗಕ್ಕೆ ಮಾಹಿತಿ
Last Updated 19 ನವೆಂಬರ್ 2018, 7:37 IST
ಅಕ್ಷರ ಗಾತ್ರ

ನವದೆಹಲಿ:ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲುಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ, ಪ್ರಧಾನಿ ಕಾರ್ಯಾಲಯದ (ಪಿಎಂಒ) ಹಿರಿಯ ಅಧಿಕಾರಿ ಮತ್ತು ಬಿಹಾರದ ಬಿಜೆಪಿ ನಾಯಕ ಸುಶೀಲ್ ಮೋದಿ ಸಂಚು ಹೂಡಿದ್ದರು ಎನ್ನಲಾಗಿದೆ. ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರುಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ನೀಡಿರುವ ಹೇಳಿಕೆಯಿಂದ ಈ ವಿಚಾರ ಬಯಲಾಗಿದೆ ಎಂದು ದಿ ವೈರ್ ಸುದ್ದಿ ತಾಣ ವರದಿ ಮಾಡಿದೆ.

ಲಾಲು ವಿರುದ್ಧದ ಪ್ರಕರಣವನ್ನು ಅಲೋಕ್ ದುರ್ಬಲಗೊಳಿಸಿದ್ದಾರೆ ಎಂದು ಅಸ್ತಾನಾ ಆರೋಪಿಸಿದರೆ, ರಾಜಕೀಯ ಪ್ರೇರಿತ ಪ್ರಕರಣದ ತನಿಖೆಯ ನೇತೃತ್ವವನ್ನು ಅಸ್ತಾನಾ ಅವರೇ ವಹಿಸಿದ್ದರು ಎಂದು ಅಲೋಕ್ ಪ್ರತ್ಯಾರೋಪ ಮಾಡಿದ್ದಾರೆ.

‘ಪಿಎಂಒ, ಸುಶೀಲ್ ಮೋದಿ ಜತೆ ಸಂಪರ್ಕದಲ್ಲಿದ್ದರು’

ಐಆರ್‌ಸಿಟಿಸಿ (ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್) ಹಗರಣಕ್ಕೆ ಸಂಬಂಧಿಸಿ ಅಲೋಕ್ ವರ್ಮಾ ಅವರ ಬಳಿ ಸಿವಿಸಿ ಹಲವು ಪ್ರಶ್ನೆಗಳನ್ನು ಕೇಳಿತ್ತು. ನಿಯಮಿತ ಪ್ರಕರಣ (ರೆಗ್ಯುಲರ್ ಕೇಸ್ ಅಥವಾ ಆರ್‌ಸಿ) ದಾಖಲಿಸುವ ಬದಲು ಪ್ರಾಥಮಿಕ ತನಿಖೆ (ಪ್ರಿಲಿಮಿನರಿ ಎನ್‌ಕ್ವಯರ್) ಕೈಗೆತ್ತಿಕೊಂಡಿದ್ದೇಕೆ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕುತ್ತರಿಸಿದ್ದ ವರ್ಮಾ, ಹಗರಣಕ್ಕೆ ಸಂಬಂಧಿಸಿದ ದೂರೊಂದು 2013–14ರಲ್ಲಿ ಸಿಬಿಐಗೆ ಸಲ್ಲಿಕೆಯಾಗಿತ್ತು. ನಂತರ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಈ ವಿಚಾರವನ್ನು ಆಗ ಹೆಚ್ಚುವರಿ ನಿರ್ದೇಶಕರಾಗಿದ್ದ ಅಸ್ತಾನಾ ಮುಚ್ಚಿಟ್ಟಿದ್ದರು. ಈ ಪ್ರಕರಣಕ್ಕೆ ರಾಜಕೀಯ ಆಯಾಮವೂ ಇದೆ. ಅಸ್ತಾನಾ ಅವರು ಸುಶೀಲ್ ಮೋದಿ, ಪಿಎಂಒದ ಹಿರಿಯ ಅಧಿಕಾರಿ ಜತೆ ಸತತ ಸಂಪರ್ಕದಲ್ಲಿದ್ದರು ಎಂದು ತಿಳಿಸಿರುವುದಾಗಿ ದಿ ವೈರ್ ಉಲ್ಲೇಖಿಸಿದೆ.

ಪ್ರಕರಣಕ್ಕೆ ರಾಜಕೀಯ ಆಯಾಮವೂ ಇರುವುದರಿಂದ, ಸುಮಾರು 11 ವರ್ಷಗಳಷ್ಟು ಹಳೆಯ ಪ್ರಕರಣವನ್ನು ಏಕಾಏಕಿ ತನಿಖೆ ನಡೆಸುವ ಬದಲು ಎಚ್ಚರಿಕೆಯಿಂದ ತನಿಖೆ ನಡೆಸುವ ಬಗ್ಗೆ ವರ್ಮಾ ಒಲವು ಹೊಂದಿದ್ದರು ಎಂದೂ ಹೇಳಲಾಗಿದೆ.

‘ಹಗರಣಕ್ಕೆ ಸಂಬಂಧಿಸಿ ಇರಲಿಲ್ಲ ಸಾಕಷ್ಟು ಸಾಕ್ಷ್ಯ’

ಪ್ರಕರಣದ ಕಾನೂನು ಅರ್ಹತೆ ಬಗ್ಗೆ ಪರಿಶೀಲಿಸುವಂತೆ ಸಿಬಿಐನ ಹಿರಿಯ ಅಧಿಕಾರಿಯಾಗಿರುವ ಕಾನೂನು ನಿರ್ದೇಶಕರು, ಹೆಚ್ಚುವರಿ ಕಾನೂನು ಸಲಹಾಗಾರರಿಗೆ ಸೂಚಿಸಲಾಗಿತ್ತು. ಇವರಿಬ್ಬರೂ ಹಗರಣಕ್ಕೆ ಸಂಬಂಧಿಸಿ ಇರುವ ಸಾಕ್ಷ್ಯಗಳು ದುರ್ಬಲವಾಗಿದ್ದು,ನಿಯಮಿತ ಪ್ರಕರಣ (ರೆಗ್ಯುಲರ್ ಕೇಸ್ ಅಥವಾ ಆರ್‌ಸಿ) ದಾಖಲಿಸಲು ಹೆಚ್ಚಿನ ಸಾಕ್ಷ್ಯ ಬೇಕು ಎಂದು ಹೇಳಿದ್ದರು. ಹೀಗಾಗಿಪ್ರಾಥಮಿಕ ತನಿಖೆ (ಪ್ರಿಲಿಮಿನರಿ ಎನ್‌ಕ್ವಯರ್) ಕೈಗೆತ್ತಿಕೊಳ್ಳಲಾಗಿತ್ತು ಎಂಬುದನ್ನೂ ಅಲೋಕ್ ವರ್ಮಾ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಐಆರ್‌ಸಿಟಿಸಿ ನಿರ್ದೇಶಕ ರಾಕೇಶ್ ಸಕ್ಸೆನಾ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸದ ಬಗ್ಗೆಯೂ ಅಲೋಕ್ ವರ್ಮಾ ಸಿವಿಸಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ ನಿಯಮಿತ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಅಸ್ತಾನಾ ಸೇರಿದಂತೆ ಯಾರಿಗೂ ಸಕ್ಸೆನಾ ಹೆಸರಿಲ್ಲದಿರುವುದು ಗಮನಕ್ಕೇ ಬಂದಿರಲಿಲ್ಲ. ತನಿಖಾ ಅಧಿಕಾರಿಯಿಂದ ತೊಡಗಿ ಜಂಟಿ ನಿರ್ದೇಶಕರ ವರೆಗೆ ಯಾರೊಬ್ಬರೂ ಆ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. 2017ರ ಜುಲೈ 4ರ ಶೋಧ ಪ್ರಸ್ತಾವ ಈ ಬಗ್ಗೆ ಖಚಿತಪಡಿಸಬಲ್ಲದು ಎಂದು ವರ್ಮಾ ಹೇಳಿದ್ದಾರೆ. ಅಲ್ಲದೆ, ನಿರ್ದಿಷ್ಟ ಆರೋಪಗಳು ವಾಸ್ತವವಾಗಿ ಸಮರ್ಪಕವಾಗಿರಲಿಲ್ಲ ಎಂದೂ ಹೇಳಿದ್ದಾರೆ.

ಜುಲೈ 4ರಂದು ಕರಡು ಎಫ್‌ಐಆರ್‌ಗೆ ಅನುಮೋದನೆ ನೀಡಿದ ನಂತರ ಸಕ್ಸೆನಾ ಹೆಸರು ಬಿಟ್ಟುಹೋಗಿರುವ ಬಗ್ಗೆ ಚರ್ಚೆಯಾಯಿತು. ನಂತರ ಆರೋಪಿಯಾಗಿ ಅವರ ಹೆಸರು ಸೇರಿಸಲು ಸಮ್ಮತಿ ನೀಡಲಾಯಿತು. ಸಕ್ಸೆನಾ ಹೆಸರು ಉಲ್ಲೇಖಿಸದೇ ಇರುತ್ತಿದ್ದರೆ ಅದು ಮೇಲ್ವಿಚಾರಣಾ ಅಧಿಕಾರಿಗಳ ಲೋಪವಾಗುತ್ತಿತ್ತು ಎಂದೂ ವರ್ಮಾ ತಿಳಿಸಿದ್ದಾರೆ.ನಿಯಮಿತ ಪ್ರಕರಣದಲ್ಲಿ ಹಸರು ದಾಖಲಾಗದೇ ಇರುವ ಮನೋಜ್ ಅಗರ್‌ವಾಲ್ ಮತ್ತು ಎಸ್‌.ಕೆ. ನಾಯಕ್ ಎಂಬುವವರ ನಿವಾಸಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದರು. ಇನ್ನು ಸಕ್ಸೆನಾ ನಿವಾಸದಲ್ಲಿ ಶೋಧ ನಡೆಸದ್ದಕ್ಕೆ ಕಾರಣವಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಸಕ್ಸೆನಾ ವಿರುದ್ಧದ ಆರೋಪ ಸಮರ್ಪಕವಾಗಿ ಸಾಬೀತಾಗಿಲ್ಲ ಎಂದು ಪಟ್ನಾದ ತನಿಖಾಧಿಕಾರಿ ಅಭಿಪ್ರಾಯ ತಿಳಿಸಿದ್ದರು. ಆದರೆ, ಅದನ್ನು ಮೇಲ್ವಿಚಾರಣಾ ಅಧಿಕಾರಿಗಳು ತಳ್ಳಿಹಾಕಿದ್ದರು. ಸಕ್ಸೆನಾ ಹಾಗೂ ಪ್ರಮುಖ ಆರೋಪಿ ಲಾಲು ಪಾತ್ರದ ಕುರಿತು ಅಥವಾ ಒಟ್ಟಾರೆ ಪ್ರಕರಣದ ಬಗ್ಗೆ ತನಿಖಾಧಿಕಾರಿಗೆ ಸಮ್ಮತವಿರಲಿಲ್ಲ ಎಂದೂ ವರ್ಮಾ ಹೇಳಿದ್ದಾರೆ. ಪ್ರಕರಣವನ್ನು ನಿಭಾಯಿಸುವ ಕರ್ತವ್ಯದಲ್ಲಿ ಅಸ್ತಾನಾ ವಿಫಲರಾಗಿದ್ದಾರೆ ಎಂದೂ ಆರೋಪಿಸಿದ್ದಾರೆ.

‘ನಿತೀಶ್‌ ಕುಮಾರ್‌ಗೆ ಗೊತ್ತಿತ್ತು’

ಸಿಬಿಐನ ಯೋಜನೆಗಳ ಬಗ್ಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರಿಗೆ ಮಾಹಿತಿ ಇತ್ತು ಎಂದೂ ವರ್ಮಾ ತಿಳಿಸಿದ್ದಾರೆ. ಬಿಹಾರದ ಆಗಿನ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿಗಳ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುವುದರಿಂದ ಕಾನೂನು ಸುವ್ಯವಸ್ಥೆ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಕಳವಳವಿತ್ತು. ಪ್ರಕರಣದ ತನಿಖೆಯ ಪ್ರಗತಿಗೆ ಸಂಬಂಧಿಸಿ ಪ್ರಧಾನಿ ಕಾರ್ಯಾಲಯದ ಅಧಿಕಾರಿಯೇ ನಿಕಟ ಸಂಪರ್ಕದಲ್ಲಿದ್ದುದರಿಂದ ಆ ಕುರಿತಾದ ನನ್ನ ಕಳವಳವನ್ನು ವಿಶೇಷ ನಿರ್ದೇಶಕರಿಗೆ ತಿಳಿಸಿದ್ದೆ. ನಂತರ, ಬಿಹಾರದ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶೋಧ ಕಾರ್ಯ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿತ್ತು. ಪೂರ್ವನಿಯೋಜಿತವಾಗಿ ಶೊಧ ಕಾರ್ಯ ನಡೆಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಈ ಘಟನೆಗಳ ಬಗ್ಗೆ ದೃಢಪಡಿಸಿಕೊಳ್ಳಬೇಕು ಎಂದು ಸಿವಿಸಿ ಬಯಸಿದಲ್ಲಿ ಬಿಹಾರದ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನೆರವಾದ ವ್ಯಕ್ತಿಗಳ ಮತ್ತು ಪಿಎಂಒದ ಅಧಿಕಾರಿಯ ಹೆಸರು ಬಹಿರಂಗಪಡಿಸುವೆ ಎಂದು ಅಲೋಕ್ ವರ್ಮಾ ಹೇಳಿದ್ದಾರೆ ಎನ್ನಲಾಗಿದೆ.

ಅಲೋಕ್‌ ಮತ್ತು ರಾಕೇಶ್‌ ಅಸ್ತಾನಾ ಅವರ ನಡುವಣ ಕಚ್ಚಾಟದಿಂದಾಗಿ ಇಬ್ಬರೂ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರಜೆ ಮೇಲೆ ಕಳುಹಿಸಿತ್ತು. ನಂತರದ ಬೆಳವಣಿಗೆಯಲ್ಲಿ ಅಲೋಕ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿ ಎರಡು ವಾರದಲ್ಲಿ ವರದಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಸಿವಿಸಿಗೆ ಹೇಳಿತ್ತು.ತನಿಖಾ ವರದಿಯನ್ನು ಈಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿರುವ ವರ್ಮಾ, ಸಿಬಿಐನ ಸದ್ಯದ ಪರಿಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾರಣ. ಕೇಂದ್ರ ಸರ್ಕಾರಕ್ಕೆ ಸಿಬಿಐ ಸ್ವಾಯತ್ತೆ ಮೇಲೆ ಗೌರವ ಇಲ್ಲದಿರುವುದು ಕಾರಣ ಎಂದು ದೂರಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT