ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿರ್ವಹಣೆ | ಕೇಂದ್ರ, ಮೂರು ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್

ರೋಗಿಗಳಿಗೆ ಚಿಕಿತ್ಸಾ ವ್ಯವಸ್ಥೆ, ಶವಗಳ ನಿರ್ವಹಣೆ ಕುರಿತು ಕಳವಳ
Last Updated 12 ಜೂನ್ 2020, 11:40 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ರೋಗಿಗಳ ಸಮೀಪದಲ್ಲಿಯೇ ಶವಗಳನ್ನು ಇರಿಸಲಾಗಿದೆ ಎಂಬ ದೆಹಲಿ ಆಸ್ಪತ್ರೆಯಲ್ಲಿನ ಸ್ಥಿತಿಯನ್ನು ಸುಪ್ರಿಂ ಕೋರ್ಟ್‌ ಶುಕ್ರವಾರ ‘ಭಯಂಕರ’ ಎಂದು ಬಣ್ಣಿಸಿದೆ.

ರೋಗಿಗಳಿಗೆ ಚಿಕಿತ್ಸೆ ಮತ್ತು ಶವಗಳ ನಿರ್ವಹಣೆ ಕುರಿತು ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ದಾಖಲಿಸಲು ಕೇಂದ್ರ, ವಿವಿಧ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಮತ್ತು ಆಸ್ಪತ್ರೆಗಳ ಸ್ಥಿತಿಗತಿ ಕುರಿತಂತೆ ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿತು.

ಶವಗಳ ನಿರ್ವಹಣೆ ಕುರಿತಂತೆ ದೆಹಲಿಯಲ್ಲಿ ಆಸ್ಪತ್ರೆಗಳು ಅಗತ್ಯ ಕಾಳಜಿಯನ್ನು ತೋರುತ್ತಿಲ್ಲ. ರೋಗಿಗಳ ಸಾವಿನ ಕುರಿತು ಕುಟುಂಬದ ಸದಸ್ಯರಿಗೂ ಮಾಹಿತಿ ನೀಡುತ್ತಿಲ್ಲ. ಇದರ ಪರಿಣಾಮ, ಶವದ ಅಂತ್ಯಕ್ರಿಯೆ ನಡೆಸಲೂ ಆಗುತ್ತಿಲ್ಲ ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್‌, ಎಸ್‌.ಕೆ.ಕೌಲ್‌, ಎಂ.ಆರ್‌.ಶಾ ಅವರಿದ್ದ ಪೀಠ ಕೋವಿಡ್‌–19 ಪರೀಕ್ಷೆ ಕುರಿತಂತೆ, ‘ದೈನಿಕ ತಪಾಸಣೆಯು 7,000 ದಿಂದ 5000ಕ್ಕೆ ಇಳಿಯಲು ಕಾರಣಗಳೇನು’ ಎಂದು ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ.

ಚೆನ್ನೈ ಮತ್ತು ಮುಂಬೈನಲ್ಲಿ ಕೋವಿಡ್‌ ತಪಾಸಣೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಪರಿಸ್ಥಿತಿಯು ಇನ್ನಷ್ಟು ಗಂಭೀರ ಮತ್ತು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿತು.

ಕೋವಿಡ್‌ ರೋಗಿಗಳ ಚಿಕಿತ್ಸಾ ಕ್ರಮ, ರೋಗಿಗಳ ಶವವನ್ನು ಸಂಬಂಧಿಗಳಿಗೆ ಒಪ್ಪಿಸುವ ಕುರಿತು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರು ಪ್ರಕರಣವನ್ನು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠಕ್ಕೆ ಒಪ್ಪಿಸಿದ್ದರು.

ಕೋವಿಡ್‌ನಿಂದ ಮೃತಪಟ್ಟ ರೋಗಿಗಳ ಶವದ ನಿರ್ವಹಣೆಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಬಗ್ಗೆ ಮಾದ್ಯಮಗಳಲ್ಲಿಯೂ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT