ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಎನ್‌ಡಿಎಗೆ ಬಹುಮತ: ವಿಶ್ವಾಸ ವ್ಯಕ್ತಪಡಿಸಿದ ಅಮಿತ್ ಶಾ

ಬಿಹಾರ ಬಿಜೆಪಿ ಕಾರ್ಯಕರ್ತರು ಮತ್ತು ಜನರನ್ನು ಉದ್ದೇಶಿ ಡಿಜಿಟಲ್ ರ‍್ಯಾಲಿ
Last Updated 7 ಜೂನ್ 2020, 16:34 IST
ಅಕ್ಷರ ಗಾತ್ರ

ನವದೆಹಲಿ: ‘ಬಿಹಾರದಲ್ಲಿ ಇದ್ದ ಜಂಗಲ್‌ ರಾಜ್‌ ಕೊನೆಯಾಗಿದೆ. ನಿತೀಶ್ ನೇತೃತ್ವದ ಸರ್ಕಾರದಲ್ಲಿ ಜನತಾ ರಾಜ್ ಬಂದಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸವ್ಯಕ್ತಪಡಿಸಿದರು.

ಭಾನುವಾರ ಮಧ್ಯಾಹ್ನ ನಡೆಸಿದ ಡಿಜಿಟಲ್ ರ‍್ಯಾಲಿಯಲ್ಲಿ ಅವರು ವಿರೋಧ ಪಕ್ಷಗಳನ್ನು ಟೀಕಿಸಿದರು. ರಾಜ್ಯದ ಎನ್‌ಡಿಎ ಸರ್ಕಾರದ ಆಡಳಿತವನ್ನು ಹೊಗಳಿದರು.

‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಈ ರ‍್ಯಾಲಿ ನಡೆಸುತ್ತಿದ್ದೇವೆ. ಆತ್ಮನಿರ್ಭರ ಭಾರತದ ಬಗ್ಗೆ ಜನರಿಗೆ ತಿಳಿಸಲು ಇಂತಹ ಇನ್ನೂ 75 ರ‍್ಯಾಲಿಗಳನ್ನು ನಡೆಸಬೇಕಿದೆ. ಈ ರ‍್ಯಾಲಿಗಳಿಗೂ, ರಾಜ್ಯದ ವಿಧಾನಸಭಾ ಚುನಾವಣೆಗೂ ಸಂಬಂಧವಿಲ್ಲ’ ಎಂದು ಹೇಳುತ್ತಲೇ,ಇದೇ ವರ್ಷದ ನವೆಂಬರ್–ಡಿಸೆಂಬರ್‌ನಲ್ಲಿ ನಡೆಯಬೇಕಿರುವ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಈ ಡಿಜಿಟಲ್ ರ‍್ಯಾಲಿಯ ಮೂಲಕ ಶಾ ನಾಂದಿ ಹಾಡಿದರು.

ತಮ್ಮ ಡಿಜಿಟಲ್ ರ‍್ಯಾಲಿಯ ವಿರುದ್ಧ ಪ್ರತಿಭಟನೆ ನಡೆಸಿದ ಆರ್‌ಜೆಡಿ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಶಾ ಕಿಡಿಕಾರಿದರು. ‘ಆರ್‌ಜೆಡಿ ಆಡಳಿತದಲ್ಲಿ ರಾಜ್ಯದ ಜಿಡಿಪಿ ವೃದ್ಧಿ ಶೇಕಡ 3.9ರಷ್ಟು ಇತ್ತು. ನಿತೀಶ್ ಕುಮಾರ್ ನೇತೃತ್ವದ ಆಡಳಿತದಲ್ಲಿ ರಾಜ್ಯದ ಜಿಡಿಪಿ ಬೆಳವಣಿಗೆ ಶೇ11.3ಕ್ಕೆ ತಲುಪಿದೆ’ ಎಂದು ಅವರು ಹೇಳಿದರು.

‘ಎಪ್ಪತ್ತು ವರ್ಷಗಳಲ್ಲಿ ಯಾವ ಸರ್ಕಾರವೂ ಮುಟ್ಟದ ಸಮಸ್ಯೆಗಳನ್ನು, ಆರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿಹರಿಸಿದೆ. 370ನೇ ವಿಧಿ, ತ್ರಿವಳಿ ತಲಾಖ್ ಸಮಸ್ಯೆಗಳನ್ನು ಪರಿಹರಿಸಿದೆ. ಇದೇ ರೀತಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರೂ ಬಡವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರು ಈ ಬಗ್ಗೆ ಪ್ರಚಾರ ಮಾಡಿಲ್ಲ’ ಎಂದು ಶಾ ಹೊಗಳಿದರು.

‘ಅಗತ್ಯವಿರುವಷ್ಟು ವೈದ್ಯಕೀಯ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿಕೊಂಡ ನಂತರ ದೇಶದ ವಿವಿಧೆಡೆಯಿಂದ 1.25 ಕೋಟಿ ವಲಸೆ ಕಾರ್ಮಿಕರನ್ನು ಅವರವರ ಹಳ್ಳಿಗಳಿಗೆ ತಲುಪಿಸಲಾಗಿದೆ. ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಬಡವರ ನೆರವಿಗಾಗಿ ಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಶ್ರಮಿಸಿದೆ. ಆದರೆ ವಿರೋಧ ಪಕ್ಷಗಳು ಮಾತನಾಡುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ’ ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT