ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದಿ ಹೇರಿಕೆ’ಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ವಿರೋಧ

ಕೆಲವರಿಂದ ಸಮರ್ಥನೆ
Last Updated 4 ಜೂನ್ 2019, 9:17 IST
ಅಕ್ಷರ ಗಾತ್ರ

ಬೆಂಗಳೂರು:ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಅಂಶ ‘ರಾಷ್ಟ್ರೀಯ ಶಿಕ್ಷಣ ನೀತಿ 2019’ರ ಕರಡಿನಲ್ಲಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆ ಅಂಶವನ್ನು ಕೈಬಿಡಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿರುವುದೇನೋ ನಿಜ. ಆದರೆ, ‘ಹಿಂದಿ ಹೇರಿಕೆ’ ವಿಚಾರ ವಿವಾದಕ್ಕೀಡಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಚರ್ಚೆಯಾಗಿತ್ತು. ಬಳಿಕ ‘ಹಿಂದಿ ಹೇರಿಕೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಈ ವರ್ಷ ಮತ್ತದೇ ಚರ್ಚೆ ಮುನ್ನೆಲೆಗೆ ಬಂದಿದೆ.

ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಗೆ ತಮಿಳುನಾಡಿನ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕನ್ನಡಿಗರಿಂದಲೂ ‘ಹಿಂದಿ ಹೇರಿಕೆ’ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆ ಕಾವೇರಿದೆ.#StopHindiImpositionಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ನೂರಾರು ಕನ್ನಡಿಗರು‘ಹಿಂದಿ ಹೇರಿಕೆ’ ವಿರುದ್ಧ ದನಿಯೆತ್ತಿದ್ದಾರೆ. ಹಾಗೆಯೇ ಇನ್ನು ಕೆಲವರು ಹಿಂದಿ ಕಲಿತರೇನು ತಪ್ಪು ಎಂಬರ್ಥದಲ್ಲಿ ಸಂದೇಶಗಳನ್ನು ಪ್ರಕಟಿಸಿದ್ದಾರೆ.

‘ಕರ್ನಾಟಕಕ್ಕೆ ತ್ರಿಭಾಷಾ ಸೂತ್ರ ಒಳ್ಳೆಯದು. ಆದರೆ ವಿದ್ಯಾರ್ಥಿಗಳಿಗೆ ಹಿಂದಿ ಬದಲುಕೊಡವಅಥವಾತುಳುಭಾಷೆಯ ಆಯ್ಕೆ ನೀಡಬೇಕು’ ಎಂದು ಪ್ರವೀಣ್ ಶಂಕರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ರಾಷ್ಟ್ರೀಯತೆ ಎಂಬ ಭ್ರಮೆಯಿಂದ ಕನ್ನಡಿಗರು ಹೊರಬಂದು ಕನ್ನಡ, ಕರ್ನಾಟಕ, ಕನ್ನಡಿಗ ಎಂಬ ದೃಷ್ಟಿಕೋನ ಹೊಂದಬೇಕು. ಹಿಂದಿ ಹೇರಿಕೆ, ಹೊಸ ಶಿಕ್ಷಣ ನೀತಿ ಬಗ್ಗೆ ಗಮನಹರಿಸಬೇಕು’ ಎಂದು ವಿನಯ ಕುಮಾರ್ ಸೋದದ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಕನ್ನಡಿಗರಿಗೆ ಹಿಂದಿ ಕಲಿಸೋ ಬದಲು ಉತ್ತರ ಭಾರತೀಯರಿಗೆ ಕನ್ನಡ ಕಲಿಸಿ, ಅದು ಅವರಿಗೆ ಇಲ್ಲಿಗೆ ಗೋಲ್‌ಗಪ್ಪ ಮಾರಲು ಬಂದಾಗ ನೆರವಾಗಬಹುದು’ ಎಂದು ಟ್ರೋಲ್‌ ಹೈಕ್ಳು ಎಂಬ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಟ್ರೋಲ್ ಮಾಡಲಾಗಿದೆ.

‘ನಾವೇಕೆ ಹಿಂದಿಯನ್ನು ಕಲಿಯಬೇಕು?ನಾವು ದಕ್ಷಿಣ ಭಾರತದವರು ದ್ವಿತೀಯ ಭಾಷೆಯಾಗಿ ಹಿಂದಿ ಕಲಿಯುವಂತೆ, ಉತ್ತರ ಭಾರತದವರು ನಮ್ಮ ದಕ್ಷಿಣ ಭಾರತದ ಭಾಷೆಯನ್ನು ಕಲಿಯುವುದಿಲ್ಲ. ನಮ್ಮ ಮಹಾನ್ ಸಂಸದರು ಅದನ್ನ ಸಂಸತ್‌ನಲ್ಲಿ ಮಾತನಾಡುವುದೂ ಇಲ್ಲ.‌ ಕರ್ಮ ಇದು’ ಎಂದು ಸಂದೀಪ್ ಈಶಾನ್ಯ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ

ಬಾಲಕರ ರಕ್ಷಿಸೈ ಹೇ ತ್ರಿಣೇತ್ರ

ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ

ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣ ಶೂಲ.’

ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸುವ ಕುರಿತು ಕುವೆಂಪು ಅವರು ತಮ್ಮ ಸಾಹಿತ್ಯ ಭಾಷೆಯಲ್ಲಿಯೇ ಹಿಂದೆ ನೀಡಿದ್ದ ಉತ್ತರವನ್ನು ಈಗ ಕುವೆಂಪು ಫೇಸ್‌ಬುಕ್‌ ಪುಟದಲ್ಲಿ ಶೇರ್ ಮಾಡಲಾಗಿದೆ.

‘ದಕ್ಷಿಣ ಭಾರತದ ಒಕ್ಕೂಟ - ಹಿಂದಿ ಹೇರಿಕೆ ವಿರುದ್ಧ ನಮ್ಮ ಹೋರಾಟ’ ಎಂಬ ಫೇಸ್‌ಬುಕ್‌ ಗ್ರೂಪ್‌ನಲ್ಲಿಯೂ ‘ಹಿಂದಿ ಹೇರಿಕೆ’ಯನ್ನು ವಿರೋಧಿಸಲಾಗಿದೆ. ಜತೆಗೆ, ಕನ್ನಡದ ಮಹತ್ವ, ಇತಿಹಾಸ ಸಾರುವ ಬರಹ ಪ್ರಕಟಿಸಲಾಗಿದೆ.

ಮತ್ತೊಂದೆಡೆ, ‘ಇಂಗ್ಲಿಷ್‌ ಅನ್ನು ಅಪ್ಪಿ ಮುದ್ದಾಡೋರಿಗಡ ನಮ್ಮದೇ ಹಿಂದಿ ಯಾಕೆ ಬೇಡ? ಪರಕೀಯ ಮನೋಭಾವದಲ್ಲೇ ಮೈಮರೆಯೋ ಸಂತತಿ ಇದೆಯಲ್ಲ! ಹಿಂದಿ ಕಲಿತು ಉತ್ತರದ ಸೊಲ್ಲಡಗಿಸೋಣ’ ಎಂದುಡಾ.ಹನಿಯೂರು ಚಂದ್ರೇಗೌಡ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT