ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್‌ಟಾಕ್ ಈಗ ಆಫ್‌ಲೈನ್‌, ಕಾರ್ಯಾಚರಣೆ ಸ್ಥಗಿತಗೊಳಿಸಿದ ವಿಡಿಯೊ ಶೇರಿಂಗ್ ಆ್ಯಪ್‌

Last Updated 30 ಜೂನ್ 2020, 19:27 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಆ್ಯಪ್‌ಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿದ ಮರುದಿನವೇ ಟಿಕ್‌ಟಾಕ್‌ ಆ್ಯಪ್ ಭಾರತದಲ್ಲಿ ಆನ್‌ಲೈನ್‌ನಿಂದ ಮರೆಗೆ ಸರಿದಿದೆ. ಗೂಗಲ್ ಪ್ಲೇಸ್ಟೋರ್‌ ಮತ್ತು ಆ್ಯಪಲ್ ಸ್ಟೋರ್‌ಗಳಿಂದ ಟಿಕ್‌ಟಾಕ್ ಆ್ಯಪ್‌ ಅನ್ನು ಅದರ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್ ಹಿಂಪಡೆದಿದೆ. ಆದರೆ, ನಿಷೇಧಿತ ಪಟ್ಟಿಯಲ್ಲಿ ಇರುವ ಇನ್ನೂ ಹಲವು ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿವೆ.

ಮಂಗಳವಾರ ಸಂಜೆಯವರೆಗೂ ಪ್ಲೇಸ್ಟೋರ್‌ನಲ್ಲಿ ಟಿಕ್‌ಟಾಕ್ ಲಭ್ಯವಿತ್ತು. ಆದರೆ, ಸಂಜೆಯ ನಂತರ ಟಿಕ್‌ಟಾಕ್‌ ಅನ್ನು ತೆಗೆದುಹಾಕಲಾಗಿದೆ. ಟಿಕ್‌ಟಾಕ್‌ನ ಜಾಲತಾಣವೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

‘ಭಾರತ ಸರ್ಕಾರದ ಆದೇಶದ ಅನ್ವಯ ಟಿಕ್‌ಟಾಕ್ ಸೇರಿದಂತೆ 59 ಆ್ಯಪ್‌ಗಳು ನಿಷೇಧವಾಗಿವೆ. ಸರ್ಕಾರದ ನಿರ್ದೇಶನವನ್ನು ನಾವು ಪಾಲಿಸುತ್ತಿದ್ದೇವೆ. ಸಮಸ್ಯೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಮತ್ತು ಪರಿಹಾರ ಹುಡುಕುತ್ತಿದ್ದೇವೆ’ ಎಂದು ಟಿಕ್‌ಟಾಕ್‌ನ ಜಾಲತಾಣದ ಪುಟದಲ್ಲಿ ಸಂದೇಶ ಬಿತ್ತರವಾಗುತ್ತಿದೆ.

ಟಿಕ್‌ಟಾಕ್ ಇನ್‌ಸ್ಟಾಲ್ ಆಗಿರುವ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ‘ಇಂಟರ್ನೆಟ್ ಸಂಪರ್ಕ ಇಲ್ಲ’ ಎಂದು ಸೂಚನೆ ಬಿತ್ತರವಾಗುತ್ತಿದೆ. ನಂತರ ಜಾಲತಾಣದಲ್ಲಿ ಬಿತ್ತರವಾಗುತ್ತಿರುವ ಸಂದೇಶವೇ, ಫೋನ್‌ನ ಪರದೆಯಲ್ಲೂ ಬಿತ್ತರವಾಗುತ್ತಿದೆ. ಈ ಆ್ಯಪ್ ಕಾರ್ಯನಿರ್ವಹಿಸುವುದು ಸಂಪೂರ್ಣ ಸ್ಥಗಿತವಾಗಿದೆ.

ಶೇರ್‌ಇಟ್, ಲೈಕೀ ಕೆಲಸ ಮಾಡುತ್ತಿವೆ:ನಿಷೇಧವಾಗಿರುವ ಶೇರ್‌ಇಟ್, ಲೈಕೀ ಸೇರಿದಂತೆ ಹಲವು ಆ್ಯಪ್‌ಗಳು ಮಂಗಳವಾರ ರಾತ್ರಿ 8 ಗಂಟೆಯಲ್ಲೂ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದವು. ಅಲ್ಲದೆ ಈಗಾಗಲೇ ಇನ್‌ಸ್ಟಾಲ್ ಮಾಡಲಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.

ಭಾರತದ ಈ ಕ್ರಮ ಅತ್ಯಂತ ಕಳವಳಕಾರಿ. ಪರಿಸ್ಥಿತಿಯನ್ನು ನಾವು ಅವಲೋಕಿಸುತ್ತಿದ್ದೇವೆ. ಚೀನಾ ಸೇರಿದಂತೆ ಅಂತರರಾಷ್ಟ್ರೀಯ ಹೂಡಿಕೆದಾರರ ನ್ಯಾಯಸಮ್ಮತ ಹಕ್ಕುಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಭಾರತ ಸರ್ಕಾರದ್ದುಝಾವೊ ಲಿಜಿಯಾನ್, ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ

ಸರ್ಕಾರಕ್ಕೆ ಸ್ಪಷ್ಟೀಕರಣ ನೀಡುತ್ತೇವೆ. ಭಾರತದ ದತ್ತಾಂಶ ಭದ್ರತೆ ಹಾಗೂ ಸುರಕ್ಷತಾ ನಿಯಮಗಳನ್ನು ಟಿಕ್‌ಟಾಕ್ ಪಾಲಿಸುತ್ತಿದೆ. ಚೀನಾ ಸೇರಿದಂತೆ ಯಾವುದೇ ದೇಶದ ಸರ್ಕಾರದ ಜತೆ ಭಾರತದ ಬಳಕೆದಾರರ ಮಾಹಿತಿಯನ್ನು ಕಂಪನಿ ಹಂಚಿಕೊಂಡಿಲ್ಲ ನಿಖಿಲ್ ಗಾಂಧಿ, ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ

ವಹಿವಾಟಿಗೆ ಏಟು: ಚೀನಾ ಕಂಪನಿಗಳಿಗೆ ಚಿಂತೆ
‘ಚೀನಾದ ಆ್ಯಪ್‌ಗಳ ಮೇಲೆ ಹೇರಿರುವ ನಿಷೇಧವನ್ನು ರದ್ದುಮಾಡದೇ ಇದ್ದರೆ, ಆ್ಯಪ್‌ಗಳ ಮಾಲೀಕತ್ವ ಹೊಂದಿರುವ ಕಂಪನಿಗಳು ಭಾರತದಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸದೇ ಬೇರೆ ದಾರಿಯಿಲ್ಲ. ಕಾರ್ಯಾಚರಣೆ ಸ್ಥಗಿತಗೊಳಿಸಿದರೆ, ಆ ಕಂಪನಿಗಳು ಭಾರತದಲ್ಲಿ ಹೂಡಿರುವ ಬಂಡವಾಳವನ್ನು ಹಿಂತೆಗೆಯುತ್ತವೆ. ಇದು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು’ ಎಂದು ಚೀನಾದ ಕಂಪನಿಗಳ ಪರ ವಕೀಲರು ಹೇಳಿದ್ದಾರೆ.

ಟಿಕ್‌ಟಾಕ್ ಆ್ಯಪ್‌ನ ಮಾಲೀಕತ್ವ ಹೊಂದಿರುವ ಬೈಟ್‌ಡ್ಯಾನ್ಸ್ ಕಂಪನಿಯು ಭಾರತದಲ್ಲಿ 100 ಕೋಟಿ ಡಾಲರ್‌ (ಸುಮಾರು ₹ 75,500 ಕೋಟಿ) ಮೊತ್ತದ ಉದ್ದಿಮೆ ವಿಸ್ತರಣಾ ಯೋಜನೆಯನ್ನು ಹಾಕಿಕೊಂಡಿತ್ತು. ಈ ಯೋಜನೆಯ ಭಾಗವಾಗಿ ಭಾರತದಲ್ಲಿ 1,000ಕ್ಕೂ ಹೆಚ್ಚು ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಈಗ ಟಿಕ್‌ಟಾಕ್‌ಗೆ ನಿಷೇಧ ಹೇರಿರುವ ಕಾರಣ ಈ ಯೋಜನೆಗೆ ತಡೆ ನೀಡಿದೆ. ಈ ಯೋಜನೆಯನ್ನು ಕೈಬಿಡಲಾಗುತ್ತೆಯೇ ಅಥವಾ ಮುಂದುವರಿಸಲಾಗುತ್ತದೆಯೇ ಎಂಬುದರ ಬಗ್ಗೆ ಕಂಪನಿ ಮಾಹಿತಿ ನೀಡಲು ನಿರಾಕರಿಸಿದೆ.

ವಿಚಾಟ್ ಆ್ಯಪ್‌ನ ಮಾಲೀಕತ್ವ ಇರುವ ಟೆನ್‌ಸೆಂಟ್‌‌ ಕಂಪನಿಯೂ ಭಾರತದಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ. ಭಾರತದಲ್ಲಿ ವಿಚಾಟ್‌ ಹೆಚ್ಚು ಜನಪ್ರಿಯವೇನೂ ಅಲ್ಲ. ಆದರೆ, ಹೆಚ್ಚು ಜನಪ್ರಿಯತೆ ಪಡೆದಿರುವ ಗೇಮಿಂಗ್‌ ಆ್ಯಪ್ ‘ಪಬ್‌ಜಿ’ ಟೆನ್‌ಸೆಂಟ್‌ ಕಂಪನಿಯದ್ದು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ‘ಕ್ಲಾಶ್ ಆಫ್‌ ಕಿಂಗ್ಸ್‌’ ಮತ್ತು ‘ಮೊಬೈಲ್‌ ಲೆಜೆಂಡ್ಸ್‌’ ಎಂಬ ಗೇಮಿಂಗ್ ಆ್ಯಪ್‌ಗಳನ್ನು ನಿಷೇಧಿಸಿದೆ. ಹೀಗಾಗಿ ಮುಂದೊಂದು ದಿನ ‘ಪಬ್‌ಜಿ’ ಸಹ ನಿಷೇಧವಾಗುವ ಬಗ್ಗೆ ಟೆನ್‌ಸೆಂಟ್‌ ಕಂಪನಿ ಕಳವಳ ವ್ಯಕ್ತಪಡಿಸಿದೆ.

ನಿಷೇಧ ತೆರವಾಗುವ ಸಾಧ್ಯತೆ ಕಡಿಮೆ:‘ಪೋರ್ನೋಗ್ರಫಿ (ಲೈಂಗಿಕ ಚಿತ್ರಗಳು) ಹಚಿಕೆಯಾಗುತ್ತಿದೆ ಎಂಬ ಕಾರಣದಿಂದ ವರ್ಷದ ಹಿಂದೆ ಟಿಕ್‌ಟಾಕ್‌ ಮೇಲೆ ಭಾರತದಲ್ಲಿ ಕೆಲವು ದಿನ ನಿಷೇಧ ಹೇರಲಾಗಿತ್ತು. ನ್ಯೂನತೆಯನ್ನು ಸರಿಪಡಿಸಿದ ಕಾರಣ ನಿಷೇಧ ತೆರವಾಯಿತು. ಆದರೆ ಈ ಬಾರಿ ನಿಷೇಧ ತೆರವಾಗುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು’ ಎಂದು ಬೈಟ್‌ಡ್ಯಾನ್ಸ್‌ ಕಂಪನಿಯ ಪರ ವಕೀಲ ಸಂತೋಷ್ ಪೈ ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಇತರ ಕಂಪನಿಗಳಿಗೂ ಇವರು ಕಾನೂನು ಸಲಹೆ ನೀಡುತ್ತಿದ್ದಾರೆ.

‘ದತ್ತಾಂಶ ಕಳವು, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತಂದ ಆರೋಪದಲ್ಲಿ ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಕಾನೂನು ಹೋರಾಟದಲ್ಲಿ ಈ ನಿಷೇಧವನ್ನು ತೆರವು ಮಾಡಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಬದಲಿಗೆ ಕಂಪನಿಗಳು ಕೇಂದ್ರ ಸರ್ಕಾರದ ಬಳಿ ಲಾಬಿ ನಡೆಸಬಹುದು ಅಷ್ಟೆ’ ಎಂದು ಸಂತೋಷ್ ಹೇಳಿದ್ದಾರೆ.

ಬಂಡವಾಳ ವಾಪಸ್‌ಗೆ ವಾರದ ಹಿಂದೆ ಸೂಚನೆ
ಭಾರತದಲ್ಲಿ ಹೂಡಿರುವ ಬಂಡವಾಳವನ್ನು ಹಿಂತೆಗೆಯುವ ಸಾಧ್ಯತೆ ಬಗ್ಗೆ ಯೋಚನೆ ಮಾಡಿ ಎಂದು ಜೂನ್ ಮೂರನೇ ವಾರದಲ್ಲಿ, ಗ್ಲೋಬಲ್‌ ಟೈಮ್ಸ್‌ ಪತ್ರಿಕೆಯು ಚೀನಾದ ಕಂಪನಿಗಳಿಗೆ ತನ್ನ ಸಂಪಾದಕೀಯದಲ್ಲಿ ಹೇಳಿತ್ತು. ಸರ್ಕಾರದ ಹಿಡಿತದಲ್ಲಿ ಇರುವ ಗ್ಲೋಬಲ್‌ ಟೈಮ್ಸ್‌ನಲ್ಲಿ ಬರುವ ವರದಿಗಳು ಮತ್ತು ಸಂಪಾದಕೀಯವನ್ನು ಅಧಿಕೃತ ಎಂದೇ ಪರಿಗಣಿಸಲಾಗುತ್ತದೆ.

‘ಭಾರತದಲ್ಲಿ ಚೀನಾ ಮತ್ತು ಚೀನಾ ಉತ್ಪನ್ನ ವಿರೋಧಿ ಭಾವನೆ ವ್ಯಾಪಕವಾಗುತ್ತಿದೆ. ಗಡಿ ಸಂಘರ್ಷದ ವಿಚಾರದಲ್ಲಿ ಎರಡೂ ದೇಶಗಳ ಸರ್ಕಾರಗಳು ಚರ್ಚೆ ನಡೆಸುತ್ತವೆ, ಸಮಸ್ಯೆ ಬಗೆ ಹರಿಯಲು ಕಾಯುತ್ತವೆ. ಆದರೆ ಬಂಡವಾಳ ಹೂಡಿರುವ ಕಂಪನಿಗಳು ಪರಿಸ್ಥಿತಿ ತಿಳಿ ಆಗಲಿ ಎಂದು ಕಾದು ಕೂರುವ ಹಾಗಿಲ್ಲ. ಭಾರತದಲ್ಲಿ ಚೀನಾ ಕಂಪನಿಗಳು ಹೂಡಿರುವ ಬಂಡವಾಳ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಚೀನಿ ಪ್ರಜೆಗಳ ಸುರಕ್ಷತೆ ಆ ಕಂಪನಿಗಳ ಜವಾಬ್ದಾರಿ. ನಮ್ಮ ಒಟ್ಟು ಆರ್ಥಿಕತೆಯಲ್ಲಿ ಭಾರತದಲ್ಲಿನ ವಹಿವಾಟು ತೀರಾ ಕಡಿಮೆ. ಹೀಗಾಗಿ ಭಾರತದಲ್ಲಿ ಹೂಡಿರುವ ಬಂಡವಾಳವನ್ನು ತೆಗೆಯುವ ಬಗ್ಗೆ ಯೋಚನೆ ಮಾಡಿ. ಆ ಬಂಡವಾಳವನ್ನು ಆಗ್ನೇಯ ಏಷ್ಯಾದ ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ’ ಎಂದು ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಹೇಳಿತ್ತು.

*
ಭಾರತದ ಈ ಕ್ರಮ ಅತ್ಯಂತ ಕಳವಳಕಾರಿ. ಪರಿಸ್ಥಿತಿಯನ್ನು ನಾವು ಅವಲೋಕಿಸುತ್ತಿದ್ದೇವೆ. ಚೀನಾ ಸೇರಿದಂತೆ ಅಂತರರಾಷ್ಟ್ರೀಯ ಹೂಡಿಕೆದಾರರ ನ್ಯಾಯಸಮ್ಮತ ಹಕ್ಕುಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಭಾರತ ಸರ್ಕಾರದ್ದು.
-ಝಾವೊ ಲಿಜಿಯಾನ್,ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ

*
ಸರ್ಕಾರಕ್ಕೆ ಸ್ಪಷ್ಟೀಕರಣ ನೀಡುತ್ತೇವೆ. ಭಾರತದ ದತ್ತಾಂಶ ಭದ್ರತೆ ಹಾಗೂ ಸುರಕ್ಷತಾ ನಿಯಮಗಳನ್ನು ಟಿಕ್‌ಟಾಕ್ ಪಾಲಿಸುತ್ತಿದೆ. ಚೀನಾ ಸೇರಿದಂತೆ ಯಾವುದೇ ದೇಶದ ಸರ್ಕಾರದ ಜತೆ ಭಾರತದ ಬಳಕೆದಾರರ ಮಾಹಿತಿಯನ್ನು ಕಂಪನಿ ಹಂಚಿಕೊಂಡಿಲ್ಲ.
-ನಿಖಿಲ್ ಗಾಂಧಿ, ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ

***
ಭಾರತದಲ್ಲಿ ಸಕ್ರಿಯ ಬಳಕೆದಾರರ ಸಂಖ್ಯೆ
ಶೇರ್‌‌ ಇಟ್;
40 ಕೋಟಿ
ಯುಸಿ ಬ್ರೌಸರ್;13 ಕೋಟಿ
ಟಿಕ್‌ಟಾಕ್;12 ಕೋಟಿ
ಕ್ಲಬ್‌ ಫ್ಯಾಕ್ಟರಿ;10 ಕೋಟಿ
ಹೆಲೊ; 5 ಕೋಟಿ
ಎಂಐ ಕಮ್ಯುನಿಟಿ;1.8 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT