ಶುಕ್ರವಾರ, ಜುಲೈ 30, 2021
21 °C

ಕೊರೊನಾ ಉಲ್ಭಣ: ತಮಿಳುನಾಡಿನ ಆರೋಗ್ಯ ಇಲಾಖೆ ಕಾರ್ಯದರ್ಶಿ ವರ್ಗ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡು ಸರ್ಕಾರ ಕೋವಿಡ್‌–19 ಅನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ವಿಚಾರದಲ್ಲಿ ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಆರೊಗ್ಯ ಇಲಾಖೆಯ ಕಾರ್ಯದರ್ಶಿ ಡಾ. ಬೀಲಾ ರಾಜೇಶ್‌ ಅವರನ್ನು ಸರ್ಕಾರ ಶುಕ್ರವಾರ ವರ್ಗಾವಣೆ ಮಾಡಿದೆ. 

ಬೀಲಾ ಅವರ ಸ್ಥಾನಕ್ಕೆ ಚೆನ್ನೈನ ಕೋವಿಡ್‌ ನಿಗಾ ಉಸ್ತುವಾರಿಯಾಗಿರುವ ಡಾ. ಜೆ ರಾಧಾಕೃಷ್ಣನ್‌ ಅವರನ್ನು ನೇಮಿಸಲಾಗಿದೆ. ಚೆನ್ನೈ ನಗರದಲ್ಲಿ 27 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳಿವೆ. ಇದೇ ವೇಳೆ ರಾಜ್ಯದಲ್ಲಿ ಒಟ್ಟಾರೆ 38,716 ಪ್ರಕರಣಗಳಿವೆ. 

ಲೋಕಸಭಾ ಚುನಾವಣೆಗೆ ಮುನ್ನ 2019ರ ಫೆಬ್ರುವರಿಯಲ್ಲಿ ಡಾ. ಬೀಲಾ ರಾಜೇಶ್ ಅವರನ್ನು ಸರ್ಕಾರ ಆರೋಗ್ಯ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಿತ್ತು. ಕೋವಿಡ್ -19 ವಿರುದ್ಧದ ರಾಜ್ಯದ ಹೋರಾಟದಲ್ಲಿ ಬೀಲಾ  ಮುಂಚೂಣಿಯಲ್ಲಿದ್ದರು. ಆದರೆ, ತಮಿಳುನಾಡಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಅವರು ಟೀಕೆಗೆ ಗುರಿಯಾಗಿದ್ದರು. ಸದ್ಯ ಚೆನ್ನೈ ಸೋಂಕಿನ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಗೊಂಡಿದೆ. ಆರೋಗ್ಯ ಇಲಾಖೆಯೊಂದಿಗೆ ಬೇರೆ ಇಲಾಖೆಗಳನ್ನು ಸಮನ್ವಯಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಬೀಲಾ ರಾಜೇಶ್‌ ಅವರ ವಿರುದ್ಧದ ಪ್ರಮುಖ ಆರೋಪ. 

ಬೀಲಾ ಅವರ ವರ್ಗಾವಣೆಯು ನಿರೀಕ್ಷಿತವಾಗಿದ್ದು, ಮುಖ್ಯ ಕಾರ್ಯದರ್ಶಿ ಕೆ.ಷಣ್ಮುಗಂ ಹೊರಡಿಸಿದ ಆದೇಶದ ಪ್ರಕಾರ ಇನ್ನು ಮುಂದೆ ಅವರು ವಾಣಿಜ್ಯ ತೆರಿಗೆ ಮತ್ತು ನೋಂದಣಿ ವಿಭಾಗದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಬೀಲಾ ಸ್ಥಾನಕ್ಕೆ ಸುನಾಮಿ ಹೀರೊ 

ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕವಾಗಿರುವ, ಚೆನ್ನೈ ಕೋವಿಡ್‌ ನಿಗಾ ವ್ಯವಸ್ಥೆಯ ಉಸ್ತುವಾರಿ, ಕಂದಾಯ ಇಲಾಖೆ ಆಯುಕ್ತ ರಾಧಾಕೃಷ್ಣನ್‌ ಅವರು ಈ ಹಿಂದೆ 2012–2019ರ ವರೆಗೆ 6 ವರ್ಷಗಳ ಕಾಲ ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದರು.  2004ರಲ್ಲಿ ಚೆನ್ನೈಗೆ ಅಪ್ಪಳಿಸಿದ್ದ ಸುನಾಮಿಯ ನಂತರದ ಪರಿಸ್ಥಿತಿಯನ್ನು ಇದೇ ರಾಧಾಕೃಷ್ಣ ಅವರು ಸಮರ್ಥವಾಗಿ ನಿಭಾಯಿಸಿದ್ದರು ಎಂಬ ಮಾತು ತಮಿಳುನಾಡಿನಲ್ಲಿದೆ.  

ಸುನಾಮಿ ಸಂದರ್ಭದಲ್ಲಿ ನಾಗಪಟ್ಟಣಂನ ಜಿಲ್ಲಾಧಿಕಾರಿಯಾಗಿದ್ದ ರಾಧಾಕೃಷ್ಣನ್‌ ಪರಿಹಾರ ಕಾರ್ಯದಲ್ಲಿ ಕೈಗೊಂಡಿದ್ದ ದಿಟ್ಟಕ್ರಮಗಳಿಂದಾಗಿ ರಾಜ್ಯದಲ್ಲಿ ಜನಜನಿತರಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು