ಬುಧವಾರ, ಮಾರ್ಚ್ 3, 2021
30 °C

ದೆಹಲಿ ಲಾಕ್‌ಡೌನ್‌ ಉಲ್ಲಂಘನೆ: ಇಬ್ಬರು ಐಎಎಸ್‌ ಅಧಿಕಾರಿಗಳ ಅಮಾನತು 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದೆಹಲಿ– ಉತ್ತರ ಪ್ರದೇಶ ಗಡಿ ಭಾಗದಲ್ಲಿ ಊರುಗಳಿಗೆ ಮರಳಲು ಸೇರಿದ್ದ ವಲಸೆ ಕಾರ್ಮಿಕರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌–19 ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಲು ವಿಫಲರಾದ ಕಾರಣದಿಂದ  ದೆಹಲಿ ಸರ್ಕಾರದ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇನ್ನಿಬ್ಬರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. 

ದೆಹಲಿ ಸರ್ಕಾರದ ಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, 1988ನೇ ಬ್ಯಾಚ್‌ ಐಎಎಸ್‌ ಅಧಿಕಾರಿ ರೇಣು ಶರ್ಮಾ ಹಾಗೂ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ, 1992 ಬ್ಯಾಚ್‌ ಐಎಎಸ್‌ ಅಧಿಕಾರಿ ರಾಜೀವ್‌ ವರ್ಮಾ ಅವರನ್ನು ಕೇಂದ್ರ ಗೃಹ ಇಲಾಖೆ ಅಮಾನತು ಗೊಳಿಸಿದೆ. 

ಸರ್ಕಾರ ನೀಡಿರುವ ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿರುವುದು ಕೆಂದ್ರ ಗೃಹ ಸಚಿವಾಲಯದ ಗಮನಕ್ಕೆ ಬಂದಿದೆ.  ಕರ್ತವ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ವಿಫಲರಾಗಿದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. 

ದೆಹಲಿ ಸರ್ಕಾರದ ಭೂಮಿ ಮತ್ತು ಭವನ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಸೀಲಂಪುರದ ಸಬ್‌ ಡಿವಿಜನಲ್‌ ಮ್ಯಾಜಿಸ್ಟ್ರೇಟ್‌  ಅವರ ವಿರುದ್ಧವೂ ಕ್ರಮ ತೆಗೆದುಕೊಂಡಿರುವುದಾಗಿ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: 

ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಕಾರಣ ತಿಳಿದು ಬಂದಿಲ್ಲ. ಆದರೆ, ಕಳೆದ ಎರಡು ದಿನಗಳಿಂದ ವಲಸೆ ಕಾರ್ಮಿಕರನ್ನು ದೆಹಲಿ–ಉತ್ತರ ಪ್ರದೇಶ ಗಡಿ ಭಾಗಗಳಿಗೆ ತಲುಪಿಸಲು ದೆಹಲಿ ಸಾರಿಗೆ ಸಂಸ್ಥೆ (ಡಿಟಿಸಿ) ನಡೆಸಿರುವ ವ್ಯವಸ್ಥೆಗಳಿಗೆ ಸಂಬಂಧಿಸಿದಾಗಿದೆ ಎನ್ನಲಾಗಿದೆ. ವಲಸೆ ಕಾರ್ಮಿಕರನ್ನು ಒಳಗೊಂಡ 44 ಡಿಟಿಸಿ ಬಸ್‌ಗಳು ಉತ್ತರ ಪ್ರದೇಶದ ಗಡಿ ಭಾಗದ ಕಡೆಗೆ ತೆರಳಿರುವ ಬಗ್ಗೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಸರ್ಕಾರದ ಅಧಿಕಾರಿಗಳ ಆದೇಶದ ಮೇರೆಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮೊದಲ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 

ವಲಸೆ ಕಾರ್ಮಿಕರಿಗೆ ಯಾವುದೇ ಟಿಕೆಟ್‌ ಶುಲ್ಕ ವಿಧಸದೆ ಅವರನ್ನು ಉತ್ತರ ಪ್ರದೇಶದ ಗಡಿ ಭಾಗಗಳಿಗೆ ಸಾಗಿಸಲಾಗಿದೆ.  ಮೇಲಿನ ಅಧಿಕಾರಿಗಳ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಬಸ್‌ನ ಸಿಬ್ಬಂದಿ ತಿಳಿಸಿರುವುದಾಗಿ ವರದಿಯಾಗಿದೆ. 

ಸಾವಿರಾರು ವಲಸೆ ಕಾರ್ಮಿಕರು ಗಡಿ ಭಾಗಗಳಲ್ಲಿ ಗುಂಪಾಗಿ ಸೇರಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿದಂತಾಗಿದೆ. ರಾಜ್ಯಗಳ ಗಡಿ ಭಾಗಗಳನ್ನು ಬಂದ್‌ ಮಾಡುವಂತೆ ಸರ್ಕಾರಗಳಿಗೆ ಕೇಂದ್ರ ಆದೇಶ ನೀಡಿದೆ. ವಲಸೆ ಕಾರ್ಮಿಕರ ಸಂಚಾರ ನಿಲ್ಲಿಸುವಂತೆ ಸೂಚಿಸಲಾಗಿದ್ದು, ಈಗಾಗಲೇ ಊರುಗಳನ್ನು ಸೇರಿರುವವರು 14 ದಿನ ಪ್ರತ್ಯೇಕ ವಾಸ ಅನುಸರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು