ಸೋಮವಾರ, ಮಾರ್ಚ್ 1, 2021
29 °C
ಸರಿ ದಾರಿಗೆ ತರಲು ಏನು ಮಾಡಬೇಕು?

ಪಡಿತರ ಸುಧಾರಣೆ ಎಂಬ ಮಹಾಮೋಸ, ಶೋಷಣೆಯ ನಾನಾ ಮುಖಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕಾರ್ಡು ವಿತರಣೆಯನ್ನು ಕಂಪ್ಯೂಟರೀಕರಣಗೊಳಿಸಬೇಕು ಎಂದು ಆರಂಭಗೊಂಡ ಗೊಂದಲ ನಾನಾ ರೂಪ ಪಡಯುತ್ತಿದೆಯೇ ವಿನಃ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ವಿದ್ಯುತ್ ಮತ್ತು ಇಂಟರ್ ನೆಟ್‌ ಸಂಪರ್ಕ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಸರಿಯಾಗಿ ಸಿಗದೆ ಪಡಿತರ ಪಡೆಯಲು ಹರಸಾಹಸ ನಡೆಸಬೇಕಿದೆ, ಅನೇಕ ದಿನ ಕೂಲಿ ಕಳೆದುಕೊಳ್ಳಬೇಕಾದ ಅನಿವಾರ್ಯತೆಗೆ ಬಡವರು ಸಿಲುಕಿದ್ದಾರೆ.

ಮೊಬೈಲ್ ಸೇರ್ಪಡೆ ಸಂದರ್ಭದಲ್ಲೂ ಇದೇ ಸಮಸ್ಯೆ ಮರುಕಳಿಸಿತ್ತು, ಕೆಲವರ ಬಳಿ ಮೊಬೈಲ್ ಇಲ್ಲದೆ ಸಮಸ್ಯೆ ಎದುರಾದರೆ, ಇದ್ದವರಿಗೆ ಮೆಸೇಜ್ ಓದಲು ಬಾರದೆ, ಸಿಗ್ನಲ್ ತೊಂದರೆಯಿಂದ ಸಂದೇಶ ಸಿಗದೆ ಪಡಿತರ ನಿರಾಕರಣೆ ಮತ್ತು ಅಲೆದಾಟ ತಪ್ಪಿರಲಿಲ್ಲ. ಕೂಪನ್ ಪದ್ಧತಿ ಜಾರಿ ಬಳಿಕ ಪರಿಸ್ಥಿತಿ ವಿಷಮಿಸಿ ಅಲೆದಾಟ ಹೆಚ್ಚಾಯಿತು.

ತಹಸೀಲ್ದಾರ್/ಗ್ರಾಮಪಂಚಾಯಿತಿ ಕಚೇರಿಗೆ ಹೋಗಿ ಕಾರ್ಡು, ವೋಟರ್ ಐಡಿ ತೋರಿಸಿ ಕೂಪನ್ ತಂದು ರೇಷನ್ ಅಂಗಡಿಗೆ ಕೊಡಬೇಕು. ಕೆಲವು ಕಡೆ ಕೂಪನ್‌ಗೂ ಲಂಚ ಕೊಡುವ ಸ್ಥಿತಿ ಇತ್ತು. ಇದಾದ ಬಳಿಕ ವೋಟರ್ ಐಡಿ, ಬಯೋಮೆಟ್ರಿಕ್ ಜಾರಿಯಿಂದಲೂ ಕಾಟ ತಪ್ಪಲಿಲ್ಲ. ಮಾಹಿತಿ ಮತ್ತು ದಾಖಲೆ ಅಪ್‌ಲೋಡ್ ಮಾಡಲು ಸೈಬರ್ ಸೆಂಟರ್‌ಗಳಿಗೆ ಅಲೆದಾಟ ಮತ್ತು ಅವರು ನಿಗದಿ ಮಾಡಿದಷ್ಟು ಶುಲ್ಕ ತೆರಬೇಕಾದ ಅನಿವಾರ್ಯತೆ. ಸರ್ವರ್ ಡೌನ್ ಆದರೆ ಸರಿಯಾಗುವ ತನಕ ಕಾಯಬೇಕಿತ್ತು.

ಹಲವು ಸಲ ಮಧ್ಯರಾತ್ರಿವರೆಗೆ ಕಾದು ಅಪ್‌ಲೋಡ್‌ ಮಾಡಿಸಿದರೆ ಇತ್ತ ರೇಷನ್ ಪಡೆಯಲು ಹೋದಾಗ ಹೆಬ್ಬೆಟ್ಟು ಗುರುತು ಹೊಂದಾಣಿಕೆ ಆಗದೆ ದಿನಗಟ್ಟಲೆ ಕಾಯುವ ಸ್ಥಿತಿ ಎದುರಾಯಿತು. ಇದರಿಂದಲೂ ಅಲೆದಾಟ ಮತ್ತು ಪಡಿತರ ನಿರಾಕರಣೆ ಸಾಮಾನ್ಯವಾಯಿತು.

ಬೆಂಗಳೂರು ನಗರದಲ್ಲಿ ಬೆಸ್ಕಾಂ ಬಿಲ್ಲು ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಸಂಖ್ಯೆ ಕಡ್ಡಾಯಗೊಳಿಸಲಾಯಿತು. (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್‌ ಇಲಾಖೆಯ ಪಂಚತಂತ್ರ ವೆಬ್‌ಸೈಟ್‌ಗೆ ಲಿಂಕ್ ಮಾಡಲಾಯಿತು). ಇವೆರಡೂ ದಾಖಲೆ ಕೊಡಲು ಸಾಧ್ಯವಿಲ್ಲದವರು ಪ್ರತ್ಯೇಕ ಅರ್ಜಿ ಪಡೆದು ಸ್ಥಳ ಪರಿಶೀಲನೆ ಬಳಿಕ ಕಾರ್ಡು ವಿತರಣೆ ಮಾಡುವ ವ್ಯವಸ್ಥೆ ಜಾರಿಗೆ ಬಂತು.

ಇದ್ದುದರಲ್ಲೇ ಇದು ಪಾರದರ್ಶಕವಾಗಿತ್ತು. ನಕಲಿ ಕಾರ್ಡುಗಳಿಗೆ ಕಡಿವಾಣ ಹಾಕಲು ನೆರವಾಯಿತು. ಸರಕಾರಿ ಸ್ವಾಮ್ಯದ ಎನ್‌ಐಸಿ ಕಂಪನಿ ಮೂಲಕ ಡಾಟಾಬೇಸ್ ಮತ್ತು ಕಂಪ್ಯೂಟರೀಕರಣ ವ್ಯವಸ್ಥೆ ಮಾಡಲಾಯಿತು. ಮೊದಲ ಹಂತದಲ್ಲೇ ದೊಡ್ಡ ಸಂಖ್ಯೆಯಲ್ಲಿ 52 ಲಕ್ಷದಷ್ಟು ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಲಾಯಿತು.

ಕ್ರಮೇಣ ಈ ಮಾಹಿತಿಯನ್ನೇ ಸರಕಾರದ ಇತರೆ ಯೋಜನೆಗಳಿಗೂ ಬಳಸಬೇಕು ಎಂಬ ಚರ್ಚೆ ಶುರುವಾಯಿತು. ಇದು ಅಕ್ರಮ ಜಾಲದ ಬುಡವನ್ನು ಅಲುಗಾಡಿಸಿತು. ಅವರೆಲ್ಲ ಒಟ್ಟಾಗಿ ಶಾಸಕರುಗಳ ಮೇಲೆ ಒತ್ತಡ ತಂದು ಆ ವ್ಯವಸ್ಥೆ ಮುಂದುವರಿಯದಂತೆ ನೋಡಿಕೊಂಡರು. ಪ್ರಾಮಾಣಿಕ ಅಧಿಕಾರಿ ಮತ್ತು ಸಿಬ್ಬಂದಿ ಶ್ರಮ ವ್ಯರ್ಥವಾಯಿತು.

ಬಳಿಕ ಬಂದಿದ್ದೇ ವೋಟರ್ ಐಡಿ, ಆಧಾರ್ ಕಾರ್ಡು ಕಡ್ಡಾಯ. ಮನೆ ಮಾಲೀಕ ಸದಸ್ಯರೆಲ್ಲರ ಆಧಾರ್ ಕಾರ್ಡುಗಳನ್ನು ಒಟ್ಟಾಗಿ ತೆಗೆದುಕೊಂಡು ಹೋದರೆ ಆಗುತ್ತಿರಲಿಲ್ಲ. ಮೊದಲಿಗೆ ಎಲ್ಲರೂ ಒಟ್ಟಾಗಿ ಬಂದು ಹೆಬ್ಬೆಟ್ಟು ಗುರುತು ನೀಡಿ, ಅದು ಹೊಂದಾಣಿಕೆ ಆಗುತ್ತದೆಯೇ ಎಂಬ ಪರಿಶೀಲನೆ ಬಳಿಕ ವಿತರಣೆ ಎಂಬ ಸ್ಥಿತಿಗೆ ಬಂತು. ಮತ್ತದೇ ವಿದ್ಯುತ್, ಇಂಟರ್ ನೆಟ್ ಸಂಪರ್ಕಗಳ ಕಣ್ಣು ಮುಚ್ಚಾಲೆಯಲ್ಲಿ ಮನೆ ಮಂದಿ ಎರಡು ಮೂರು ದಿನ ಅಲೆಯಬೇಕಾದ ಸ್ಥಿತಿ. ಇಷ್ಟಾದರೂ ರೇಷನ್ ಪಡೆಯಲು ಹೋದಾಗ ಹೆಬ್ಬೆಟ್ಟು ಹೊಂದಾಣಿಕೆ ಆಗದಿದ್ದರೆ ಪಡಿತರ ಖೋತಾ. ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಆಧಾರ್ ಲಿಂಕ್ ನಿಂದ ವ್ಯಕ್ತಿ ಗುರುತು ಸಾಧ್ಯವೇ ಹೊರತು, ಆರ್ಥಿಕ ಹಿನ್ನಲೆ ಗೊತ್ತಾಗುವುದಿಲ್ಲ, ಇದರಿಂದ ಬಿಪಿಎಲ್ ದುರ್ಬಳಕೆ ತಪ್ಪಿಸುವುದು ಅಸಾಧ್ಯ ಎಂಬ ವಾದ ಎದುರಾಗಿದೆ.

ಮತ್ತೊಂದೆಡೆ ಸಬ್ಸಿಡಿ ಮತ್ತು ಸರಕಾರಿ ಸವಲತ್ತುಗಳಿಗೆ ಆಧಾರ್ ಕಡ್ಡಾಯ ಮಾಡಿ ರಾಜ್ಯ ಸರಕಾರ ವಿಧಾನಮಂಡಲದಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದು ಅದು ಕಾನೂನು ರೂಪದಲ್ಲಿ ಜಾರಿಯಲ್ಲಿದೆ, ಈಗ ಆಧಾರ್ ನಿಂದ ಹಿಂದೆ ಸರಿಯಲು ಆಗುವುದಿಲ್ಲ ಮತ್ತೊಂದೆಡೆ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಮಲೆನಾಡು, ಕರಾವಳಿ ಮತ್ತು ಬುಡಕಟ್ಟು ಪ್ರದೇಶಗಳ ಜನರಿಗೆ ಹೊಸ ಪದ್ಧತಿಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಹಾಗೆಯೇ ಅಂತ್ಯೋದಯ ಯೋಜನೆ ಅಡಿ ಬುಡಕಟ್ಟು ಕುಟುಂಬಗಳು, ಹಿರಿಯ ನಾಗರಿಕರು, ನಿರ್ಗತಿಕರು, ವಿಧವೆ ಮತ್ತು ಒಂಟಿ ಮಹಿಳೆಯರನ್ನು ಸೇರಿಸಲಾಗಿತ್ತು.

ಕೇಂದ್ರ ಸರಕಾರ ‘ಆದ್ಯತಾ ಕುಟುಂಬಗಳು’ ಪರಿಕಲ್ಪನೆ ಜಾರಿಗೊಳಿಸಿದ ಬಳಿಕ ನಾನಾ ಮಾನದಂಡಗಳಡಿ ಈ ಪೈಕಿ ಬಹುತೇಕರನ್ನು ಬಿಪಿಎಲ್‌ ಪಟ್ಟಿಗೆ ವರ್ಗಾಯಿಸಲಾಯಿತು. ಆ ಸಂದರ್ಭದಲ್ಲೂ ಅನೇಕ ಅರ್ಹ ಕುಟುಂಬಗಳು ಎರಡೂ ಪಟ್ಟಿಗಳಿಂದ ವಂಚಿತರಾಗಿ, ಪಡಿತರ ಸಿಗದೆ ಪರದಾಡುತ್ತಿದ್ದಾರೆ.

ಲೆಕ್ಕದ ಬಗ್ಗೆ ತಕರಾರು....

20011ರ ಗಣತಿ ಆಧರಿಸಿ ಸದ್ಯ ರಾಜ್ಯದ ಜನಸಂಖ್ಯೆ ಆರು ಕೋಟಿ ಎಂದು ಅಂದಾಜಿಸಲಾಗಿದೆ. ಸರಕಾರದ ಅಧಿಕೃತ ಅಂಕಿ ಅಂಶಗಳ (ಮಾರ್ಚ್ 2018) ಪ್ರಕಾರ ಬಿಪಿಎಲ್ ಕುಟುಂಬಗಳ ಸಂಖ್ಯೆ 1,08,84,899. ಒಂದು ಕುಟುಂಬದಲ್ಲಿ ಸರಾಸರಿ ಐದು ಮಂದಿ ಇದ್ದಾರೆ ಎಂದು ಲೆಕ್ಕ ಹಾಕಿದರೂ 5,44,24,495 ಮಂದಿ ಬಿಪಿಎಲ್ ವ್ಯಾಪ್ತಿಯಲ್ಲಿದ್ದಾರೆ ಎಂದರ್ಥ.

ಅಂದರೆ ಉಳಿದವರು ಕೇವಲ 46 ಲಕ್ಷದಷ್ಟು ಮಾತ್ರ. ಅದರಲ್ಲೂ ಅಂತ್ಯೋದಯ ಅನ್ನ ಯೋಜನೆಯಡಿ 7, 82,776 ಕಾರ್ಡುಗಳಿವೆ. ಇವರು ಕೂಡ ಆದ್ಯತಾ ಪಟ್ಟಿಗೆ ಸೇರಿ ಬಿಪಿಎಲ್ ಸವಲತ್ತುಗಳನ್ನು ಪಡೆಯುತ್ತಾರೆ. ಈ ಕುಟುಂಬಗಳಲ್ಲಿ ಒಬ್ಬರೇ ಸದಸ್ಯ ಎಂದೇ ಭಾವಿಸಿ ಉಳಿಕೆ 46 ಲಕ್ಷದಲ್ಲಿ 7 ಲಕ್ಷ ಮಂದಿಯನ್ನು ಹೊರತು ಪಡಿಸಿದರೆ ಉಳಿಯುವುದು ಕೇವಲ 39 ಲಕ್ಷ ಚಿಲ್ಲರೆ ಮಾತ್ರ. ಅದರರ್ಥ ರಾಜ್ಯದಲ್ಲಿ ಶೇಕಡಾ 90 ಕ್ಕೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿದ್ದೇವೆ ಎಂದಲ್ಲವೇ ? ಇದನ್ನು ನಂಬುವುದು ಹೇಗೆ?

ಬೆಂಗಳೂರು ನಗರದಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಅಂದರೆ, ಒಂದು ಕೋಟಿ ಚಿಲ್ಲರೆ ಜನಸಂಖ್ಯೆ ಎಂದು ಅಂದಾಜಿಸಿದ್ದು ಅರ್ಧದಷ್ಟು ಅಂದರೆ ಐವತ್ತು ಲಕ್ಷ ಮಂದಿ ಯಾವುದೇ ರೀತಿ ಕಾರ್ಡುಗಳನ್ನು ಪಡೆದಿಲ್ಲ. ಹಾಗೆಯೇ ಎರಡನೇ ಹಂತದ ನಗರ ಮತ್ತು ಪಟ್ಟಣಗಳಲ್ಲೂ ಶೇಕಡಾ 15 ರಿಂದ 20 ರಷ್ಟು ಕುಟುಂಬಗಳು ಯಾವುದೇ ಕಾರ್ಡು ಪಡೆದಿಲ್ಲ ಎಂದು ಸ್ವಯಂ ಸೇವಾ ಸಂಸ್ಥೆಯೊಂದರ ಸಮೀಕ್ಷೆ ಹೇಳುತ್ತದೆ.

ಹಾಗಿದ್ದರೆ ಈ ಬೃಹತ್ ಪ್ರಮಾಣದ ಪಡಿತರ ಸವಲತ್ತು ಹೋಗುತ್ತಿರುವುದಾದರೂ ಎಲ್ಲಿಗೆ ? ಸರಕಾರದ ಅಧಿಕೃತ ಅಂಕಿ ಸಂಖ್ಯೆ ಎಷ್ಟು ಸರಿ ? ಇದನ್ನು ಹೇಗೆ ನಂಬುವುದು ಎಂಬ ಪ್ರಶ್ನೆ ಎದುರಿಗಿಡುತ್ತಾರೆ ಸಾಮಾಜಿಕ ಕಾರ್ಯಕರ್ತರು.

* ಇದನ್ನೂ ಓದಿ: ಪಡಿತರ ವಿತರಣೆ ಮಾಫಿಯಾ, ಅಸಲಿ ನಕಲಿ ಆಟದಲ್ಲಿ ಬಡವರು ಬಲಿಪಶು

ಕಳವಿನ ನಾನಾ ಹಂತಗಳು ....

ಆಹಾರ ನಿಗಮದ ಗೋದಾಮಿನಿಂದ ನ್ಯಾಯಬೆಲೆ ಅಂಗಡಿ ತಲುಪುವ ತನಕ ಪಡಿತರ ನಾನಾ ಹಂತದಲ್ಲಿ ಕಳುವಾಗುತ್ತಾ ಹೋಗುತ್ತದೆ. 25 ಕೆಜಿ ಚೀಲದ ಬದಲು ಎಫ್‌ಸಿಐ ಗೋದಾಮಿನಲ್ಲೇ 22 ಕೆಜಿ ಅಥವಾ 23 ಕೆಜಿ ಬಂದರೆ ಹೆಚ್ಚು. ಅಲ್ಲೇ ಕದಿಯುತ್ತಾರೆ.

ನಂತರ ತಾಲೂಕು ಕೇಂದ್ರದ ಗೋದಾಮ ಮೂಲಕ ನ್ಯಾಯಬೆಲೆ ಅಂಗಡಿ ತಲುಪುವಷ್ಟರಲ್ಲಿ 25 ಕೆಜಿ ಚೀಲ 21 ಅಥವಾ 20 ಕೆಜಿಗೂ ಇಳಿದಿರುತ್ತದೆ. ಇದನ್ನು ಸರಿದೂಗಿಸಿಕೊಳ್ಳಲು ತೂಕದ ಯಂತ್ರವನ್ನೇ ಅಡ್ಜೆಸ್ಟ್ ಮಾಡದೆ ವಿಧಿಯಿಲ್ಲ ಅನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕರು.

ತೂಕದಲ್ಲಿ ಮೋಸ ಮಾಡುವ ಹಾಗೂ ನಕಲಿ ಕಾರ್ಡುಗಳಲ್ಲಿ ಉಳಿಸಿಕೊಂಡ, ತಾಂತ್ರಿಕ ಕಾರಣಗಳಿಂದ ನಿರಾಕರಿಸಲ್ಪಟ್ಟ ಮತ್ತು ಖರೀದಿಸದವರ ಪಡಿತರವನ್ನು ಒಟ್ಟು ಮಾಡಿ ಪಕ್ಕದ ಅಂಗಡಿಗೊ, ಮಿಲ್ಲಿಗೊ ಮಾರಲಾಗುತ್ತದೆ. ಇದು ಆಹಾರ ಇಲಾಖೆ ಅಧಿಕಾರಿಗಳಿಗೂ ಗೊತ್ತಿರುವ ಸಂಗತಿ. ಹೆಚ್ಚು ಪಡಿತರ ಉಳಿಸಿಕೊಳ್ಳಲು ಹೆಬ್ಬೆಟ್ಟು ಗುರುತು ಹೊಂದಾಣಿಕೆ ಆಗದಂತೆ ಮಾಡುವುದನ್ನೂ ಅಂಗಡಿಯವರು ಕಂಡುಕೊಂಡಿದ್ದಾರೆ.

ಒಂದೇ ಹೆಸರಿನವರ ಹೆಬ್ಬೆಟ್ಟಿನ ಮೇಲೆ ಐದಾರು ಸಲ ಇಟ್ಟರೆ ಅದು ಬದಲಾಗುತ್ತದಂತೆ. ಈ ರೀತಿ ಮಾಡಿದವರಿಗೆ ಕ್ರಮೇಣ ಪಡಿತರ ನಿರಾಕರಿಸಿ ಲಪಟಾಯಿಸಲಾಗುತ್ತದೆ. ಆನ್‌ಲೈನ್ ನಲ್ಲಿ ಪಡಿತರ ಅರ್ಹರಿಗೆ ವಿತರಣೆ ಆಗಿದೆ ಎಂಬಂತೆ ತೋರಿಸುವ ವ್ಯವಸ್ಥೆಯನ್ನು ಮಾಮೂಲಿ ಪಡೆಯುವ ಇಲಾಖೆ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಹೀಗಾಗಿ ದಾಖಲೆಗಳಲ್ಲಿ ಇದೆಲ್ಲಾ ಗೊತ್ತಾಗುವುದಿಲ್ಲ ಅನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕರೊಬ್ಬರು.

ಫುಡ್ ಆಫೀಸರ್ ಎಂಬ ಎಟಿಎಂಗಳು..

ಆಹಾರ ಇಲಾಖೆಯಲ್ಲಿ ಅತ್ಯಂತ ಪ್ರಭಾವಿಗಳು ಮತ್ತು ಇಡೀ ವ್ಯವಸ್ಥೆ ಹದಗೆಡಲು ಮುಖ್ಯ ಕಾರಣಕರ್ತರು ಎಂದರೆ ಫುಡ್ ಆಫೀಸರ್‌ಗಳು.

ಇವರು ಫೀಲ್ಡ್ ಹಂತದಲ್ಲಿ ಕೆಲಸ ಮಾಡುವ ಅಧಿಕಾರಿಗಳು. ಪ್ರತಿ ನ್ಯಾಯಬೆಲೆ ಅಂಗಡಿಗೆ ಪಡಿತರ ಸರಬರಾಜು ಆಗುವಂತೆ ಮತ್ತು ಅದು ಅರ್ಹರಿಗೆ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಇವರದ್ದು. ಹೆಚ್ಚಿನವರು ಅ ಕೆಲಸ ಮಾಡುವುದಿಲ್ಲ.

ಬದಲಿಗೆ ಶಾಸಕರು ಮತ್ತು ಹಿಂಬಾಲಕರ ಬೇಕು, ಬೇಡ ನೋಡಿಕೊಂಡು ನ್ಯಾಯಬೆಲೆ ಅಂಗಡಿಗಳಿಂದ ಮಾಮೂಲಿ ಸಂಗ್ರಹಿಸಿ ಚುನಾಯಿತ ಪ್ರತಿನಿಧಿಗಳಿಂದ ಮೇಲಧಿಕಾರಿತನಕ ಪಾಲು ತಲುಪಿಸುವ ಕೆಲಸ ಮಾಡುವುದು, ರಾಜಕಾರಣಿಗಳು ಮತ್ತು ಹಿಂಬಾಲಕರ ಮದುವೆ, ತಿಥಿ, ಮನೆ ಸಮಾರಂಭ, ಅವರು ಸೂಚಿಸುವ ಇತರೆ ಕಾರ್ಯಕ್ರಮಗಳಿಗೆ ಪಡಿತರ, ಇತರೆ ಪದಾರ್ಥಗಳನ್ನು ಸರಬರಾಜು ಮಾಡಿ ಸಂತೃಪ್ತರನ್ನಾಗಿಸುವುದು, ಅವರು ಸೂಚಿಸಿದ ಕಾರ್ಯಕರ್ತರಿಗೆ ಹಣ ನೀಡುವ ಕೆಲಸ ಮಾಡುವುದೇ ಹೆಚ್ಚು. ಇವರು ನಡೆದಾಡುವ ಎಟಿಎಂಗಳಿದ್ದಂತೆ.

ಕೇಳಿದ ತಕ್ಷಣ ಲಕ್ಷಾಂತರ ಹಣ ಹೊಂದಿಸಿ ತಲುಪಿಸಬೇಕಾದವರಿಗೆ ತಲುಪಿಸುವ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಹತ್ತುಪಟ್ಟು ಲೂಟಿ ಮಾಡುವುದೇ ಇವರ ಕಾಯಕ. ಇಲಾಖೆ ಮತ್ತು ಕಾಳಸಂತೆಗಳಿಗೆ ಲೈಸನಿಂಗ್ ಆಫೀಸರ್ ಇದ್ದಂತೆ. ಫುಡ್ ಇನ್ಸ್ ಪೆಕ್ಟರ್‌ಗಳು ಮನಸ್ಸು ಮಾಡಿದರೆ ನಕಲಿ ಕಾರ್ಡು ಪತ್ತೆ ಮತ್ತು ಪಡಿತರ ಕಳವು ತಡೆಯುವುದು ದೊಡ್ಡ ವಿಷಯ ಅಲ್ಲ.

ಇವರ ಮೇಲಿರುವ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಫುಡ್‌ ಡಿಸಿ, ಕಮಿಷ್ನರ್, ಪ್ರಧಾನ ಕಾರ್ಯದರ್ಶಿ ಮತ್ತು ಸಚಿವರು ಹೀಗೆ ಎಲ್ಲ ಹಂತದಲ್ಲೂ ಮಾಮೂಲಿ ನಿಗದಿಯಾಗಿರುತ್ತದೆ. ಎಲ್ಲೋ ಅಪರೂಪಕ್ಕೆ ಅಲ್ಲೊಬ್ಬ, ಇಲ್ಲೊಬ್ಬ ಪ್ರಾಮಾಣಿಕರು ಇರುತ್ತಾರೆ, ಆದರೆ ಬಹುತೇಕರು ಲಂಚ ಮುಟ್ಟದೆ ಕೆಲಸ ಮಾಡುವುದಿಲ್ಲ. ಸರಿಯಾಗಿ ಸಲ್ಲಿಕೆ ಆಗದಿದ್ದಾಗ ರೈಡ್ ಎಂಬ ಕಣ್ಕಟ್ಟು ಪ್ರಹಸನ ನಡೆಯುತ್ತವೆ ಎನ್ನುತ್ತಾರೆ ಅಹಾರ ಇಲಾಖೆ ನಿವೃತ್ತ ಅಧಿಕಾರಿ.

* ಬಡತನ ನಿರ್ಮೂಲನೆ ಮಾಡಬೇಕಿದ್ದ ಸರ್ಕಾರ ಬಡವರನ್ನೇ ನಾಶ ಮಾಡುತ್ತಿದೆ

–ಟಿ.ವಿ. ನರಸಿಂಹಪ್ಪ, ಬಿಪಿಎಲ್‌ ಕುಟುಂಬಗಳ ಪರ ಕಾನೂನು ಹೋರಾಟಗಾರ

ಕಾಗದದ ಮೇಲಿದೆ, ಫೀಲ್ಡನಲ್ಲಿಲ್ಲ...

ಅಕ್ರಮ ತಡೆ ಮತ್ತು ಪಡಿತರದಾರರ ಸಮಸ್ಯೆ ಆಲಿಸಿ ಪರಿಹರಿಸಲು ಗ್ರಾಮ ಹಂತದಿಂದ ರಾಜ್ಯ ಮಟ್ಟದತನಕ ಜಾಗೃತ ಸಮಿತಿ, ಆಹಾರ ಭದ್ರತಾ ಸಮಿತಿ, ಕುಂದು ಕೊರತೆ ನಿವಾರಣೆ ಸಮಿತಿ, ರಾಜ್ಯ ಮಟ್ಟದಲ್ಲಿ ಆಯೋಗ ಇವೆ.

ಆಹಾರ ಅದಾಲತ್ ನಡೆಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಹೆಚ್ಚು ಕಡಿಮೆ ಇವು ಕಾಗದದ ಮೇಲೆ ಮಾತ್ರ ಅಸ್ಥಿತ್ವ ಉಳಿಸಿಕೊಂಡಿವೆ. ಅಂಗಡಿ ಮಟ್ಟದ ಸಮಿತಿಗಳ ಬಹುತೇಕ ಸದಸ್ಯರಿಗೆ ವಿತರಣೆ ಮತ್ತು ದಾಸ್ತಾನು ಪರಿಶೀಲಿಸುವ, ಮಾಲೀಕನನ್ನು ಪ್ರಶ್ನಿಸುವ ಹಕ್ಕು ತಮಗಿದೆ ಅನ್ನುವುದೇ ಗೊತ್ತಿಲ್ಲ. ಅಸಲಿಗೆ ಜಾಗೃತ ಸಮಿತಿ ಸದಸ್ಯ ಅನ್ನುವುದು ಅವರಿಗೆ ಗೊತ್ತಾಗದಂತೆ ನೋಡಿಕೊಳ್ಳಲಾಗುತ್ತದೆ.

ಮೇಲು ಹಂತದ ಸಮಿತಿಗಳು ಯಾವಾಗ ಸಭೆ ಸೇರುತ್ತವೆ ? ಏನನ್ನು ಪರಿಶೀಲಿಸಿವೆ? ಯಾರ ಆಹವಾಲು ಸ್ವೀಕರಿಸಿವೆ ? ಆಯೋಗ ಏನು ಮಾಡುತ್ತಿದೆ ಎಂಬುದು ಆ ಭಗವಂತನಿಗೆ ಗೊತ್ತು. ಆದರೆ ದಾಖಲೆಗಳಲ್ಲಿ ಮಾತ್ರ ಸಭೆ ನಡೆದಂತೆ ವಿವರಗಳಿರುತ್ತವೆ. ಈ ಸಮಿತಿಗಳು ಮತ್ತು ಆಯೋಗ ಕ್ರಿಯಾಶೀಲವಾಗಿದ್ದಿದ್ದರೆ ಪಡಿತರ ವ್ಯವಸ್ಥೆ ಇಷ್ಟೊಂದು ಅದ್ವಾನಗೊಳ್ಳುತ್ತಿರಲ್ಲ.

ರಾಜಧಾನಿಯಲ್ಲಿ ಅರ್ಧಕ್ಕರ್ಧ ಬೋಗಸ್ ....

ರಾಜಧಾನಿ ಬೆಂಗಳೂರಿನಲ್ಲಿ ಇರುವ ನ್ಯಾಯಬೆಲೆ ಅಂಗಡಿಗಳಿಗೆ ಅರ್ಧಕ್ಕರ್ಧ ಬೋಗಸ್ ಮಾಲೀಕರಾದರೆ, ಶೇಕಡಾ 50 ಕ್ಕೂ ಹೆಚ್ಚು ನಕಲಿ ಪಡಿತರದಾರರಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆದರೆ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿಯುತ್ತಿರುವ ದೊಡ್ಡ ಜಾಲವೇ ಬಯಲಿಗೆ ಬರುತ್ತದೆ ಎನ್ನುತ್ತಾರೆ ಮಾಗಡಿ ರಸ್ತೆಯಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಮಾಲೀಕರೊಬ್ಬರು.

ಹಿಂದೆ ಯಾರ ಹೆಸರಿಗೊ ಹಂಚಿಕೆ ಆಗಿದ್ದನ್ನು ಈಗ ಇನ್ಯಾರೋ ನಡೆಸಿಕೊಂಡು ಹೋಗುತ್ತಿದ್ದಾರೆ, ನಕಲಿ ಮಾಲೀಕರ ಕಡೆ ಜನರೇ ಎಡಗೈ, ಬಲಗೈ ಬೆಟ್ಟು ಒತ್ತಿ ಪಡಿತರ ಮಾರಿಕೊಳ್ಳುತ್ತಾರೆ. ಇವೆಲ್ಲವೂ ಫುಡ್ ಇನ್ಸ್ ಪೆಕ್ಟರ್‌ಗಳಿಗೆ ಚೆನ್ನಾಗಿ ಗೊತ್ತಿದೆ.

ಎಲ್ಲವೂ ಅಡ್ಜೆಸ್ಟ್ ಮೆಂಟ್‌ ಪೊಲಿಟಿಕ್ಸ್ ಅವರ ಪಾಲು ಅವರು ಪಡೆದು ವಂಚನೆ ಮುಂದುವರಿಯುವಂತೆ ನೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶೇಕಡಾ 60ರಷ್ಟು ಪಡಿತರ ಕಾಳಸಂತೆಗೆ ಮಾರಾಟ ಆಗುತ್ತದೆ. ಉನ್ನತ ತನಿಖೆ ನಡೆದರೆ ವಾಸ್ತವ ಗೊತ್ತಾಗುತ್ತದೆ. ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಈ ದಂಧೆ ಹಿಂದೆ ಇದ್ದಾರೆ, ಅವರು ಏನನ್ನೂ ಮಾಡಲು ಹೇಸುವುದಿಲ್ಲ ಎಂದೂ ಅವರು ಹೇಳುತ್ತಾರೆ.

ಖಾಸಗಿ ಪಾಲೇ ಹೆಚ್ಚು...
ನ್ಯಾಯಬೆಲೆ ಅಂಗಡಿಗಳನ್ನು ಸ್ವಸಹಾಯ ಸಂಘ, ಯುವಕ ಸಂಘಗಳು, ರೈತರ ಸಹಕಾರ ಸಂಘಗಳು, ಸ್ತ್ರೀಶಕ್ತಿ ಸಂಘಗಳಿಗೆ ಹಂಚಿಕೆ ಮಾಡಬೇಕು, ಖಾಸಗಿ ವ್ಯಕ್ತಿಗಳಿಗೆ ಕೊಡಬಾರದು.ಶೇಕಡಾವಾರು ಅಂತರ ಕಾಯ್ದುಕೊಳ್ಳಬೇಕು ಎಂಬ ಮಾನದಂಡವಿದೆ.

ಆದರೆ ಹೆಚ್ಚಿನ ಅಂಗಡಿಗಳು ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿವೆ. ಅವರು ಒಕ್ಕೂಟ ಮಾಡಿಕೊಂಡು ಮಾಲೀಕರ ಹಿತಾಸಕ್ತಿ ಪರ ಹೋರಾಟ ನಡೆಸಿದ್ದಾರೆಯೇ ಹೊರತು, ಫಲಾನುಭವಿಗಳ ಪರ ದನಿ ಎತ್ತಿಲ್ಲ. ಬದಲಿಗೆ ಡಿಜಿಟಲೀಕರಣ ಮತ್ತು ಕಾಳಸಂತೆ ನಿಗ್ರಹದಿಂದ ನ್ಯಾಯಬೆಲೆ ಅಂಗಡಿಗಳ ಚಿಲ್ಲರೆ ಮಾರಾಟಗಾರರು ನಷ್ಟ ಅನುಭವಿಸುತ್ತಿದ್ದಾರೆ, ಆದ್ದರಿಂದ ಚಿಲ್ಲರೆ ಮಾರಾಟಗಾರರ ಲಾಭಾಂಶವನ್ನು ಹೆಚ್ಚಿಸಬೇಕು ಎಂದು ಸರಕಾರಕ್ಕೆ ಒಕ್ಕೂಟ ಒತ್ತಡ ಹೇರಿತ್ತು.

ಅದಕ್ಕೆ ತಲೆದೂಗಿರುವ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ನಡೆದ ಸಭೆಯಲ್ಲಿ ಲಾಭಾಂಶವನ್ನು ಕ್ವಿಂಟಾಲ್‌ಗೆ 87 ರೂಪಾಯಿ ನಿಂದ 100 ರೂಪಾಯಿಗಳಿಗೆ ಹೆಚ್ಚಿಸಿದೆ...!

ಬಿಪಿಎಲ್ ಕಾರ್ಡಿಗೆ ಏಕಿಷ್ಟು ಬೇಡಿಕೆ?

ಉಚಿತ, ಕಡಿಮೆ ದರದಲ್ಲಿ ಪಡಿತರ ಸಿಗುತ್ತದೆ ಅನ್ನುವುದಕ್ಕಿಂತ ಸರಕಾರದ ಹತ್ತಾರು ಸೌಲಭ್ಯಗಳ ಆಸೆಯಿಂದ ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ಹಾಗೂ ಸರಕಾರಿ ನೌಕರರು ವಾಮ ಮಾರ್ಗಗಳ ಮೂಲಕ ಬಿಪಿಎಲ್ ಕಾರ್ಡು ಗಿಟ್ಟಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೋಗುತ್ತಾರೆ.

ಗ್ರಾಮೀಣ ಭಾಗದಲ್ಲಿ ಚುನಾಯಿತ ಪ್ರತಿನಿಧಿಗಳೇ ಆಹಾರ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಧಮಕಿ ಹಾಕಿ ಕೊಡಿಸುತ್ತಾರೆ. ಆರೋಗ್ಯ ಸೇವೆ, ಪಿಂಚಣಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಇಲಾಖೆ ಸಹಿತ ನಾನಾ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಿಪಿಎಲ್ ಕರ್ಡುಗಳನ್ನೇ ಮಾನದಂಡವಾಗಿಸಿರುವುದು ನಕಲಿ ಹಾವಳಿಗೆ ಪ್ರಮುಖ ಕಾರಣ.

ನಕಲಿ ಲಿಸ್ಟ್‌ನಲ್ಲಿ ನೌಕರರು, ಅಕ್ರಮದಲ್ಲಿದ್ದ ಮೇಯರ್‌....

ನಕಲಿ ಕಾರ್ಡುಗಳ ಪತ್ತೆಗೆ ವ್ಯಾಪಕ ಕ್ರಮ ಕೈಗೊಂಡ ಸಂದರ್ಭದಲ್ಲಿ ಶಿಕ್ಷಕರು, ರೈಲ್ವೆ ಇಲಾಖೆ ನೌಕರರು, ಗ್ರಾಮಾಂತರ ಪ್ರದೇಶದಲ್ಲಿ ಜಮಿನ್ದಾರರು, ಮೇಲ್ಮಧ್ಯಮ ವರ್ಗದವರು ಸೇರಿದಂತೆ ಉಳ್ಳವರಿಗೇ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡು ವಿತರಣೆ ಆಗಿದ್ದು ಬೆಳಕಿಗೆ ಬಂದಿತ್ತು.

ಒಂದಿಬ್ಬರನ್ನು ಸೇವೆಯಿಂದ ವಜಾ ಮಾಡಿದ ನಿದರ್ಶನಗಳೂ ಇವೆ. ಹಾಗೆಯೇ ಖಚಿತ ಮಾಹಿತಿ ಮೇರೆಗೆ ಮೈಸೂರಿನ ನಿವಾಸವೊಂದರ ನೆಲ ಮಾಳಿಗೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸರ ಸಹಿತ ದಾಳಿ ನಡೆಸಿದಾಗ ಪಡಿತರ ವಿತರಣೆಯ ಅಕ್ಕಿ ಚೀಲಗಳ ರಾಶಿ ರಾಶಿ ಪತ್ತೆಯಾಗಿತ್ತು.

ಅದನ್ನು ಬಸವೇಶ್ವರ, ನಂಜುಂಡೇಶ್ವರ, ಮಹದೇಶ್ವರ ಬ್ರಾಂಡ್ ಹೆಸರಿನ ಚೀಲಕ್ಕೆ ತುಂಬಿಸಲಾಗುತ್ತಿತ್ತು. ಆ ನಿವಾಸ ಅಂದಿನ ಮೇಯರ್ ಅವರಿಗೆ ಸೇರಿದ್ದಾಗಿತ್ತು. ಖುದ್ದು ಅವರೇ ಚೀಲ ಬದಲಾವಣೆ ಚಟುವಟಿಕೆಯ ಉಸ್ತುವಾರಿ ಮಾಡುತ್ತಾ ಸಿಕ್ಕಿಬಿದ್ದಿದ್ದರು.

ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿ ಒಬ್ಬರು ಈಗಲು ಖುದ್ದು ನಿಂತು ಪಡಿತರ ಅಕ್ಕಿ ಚೀಲಗಳನ್ನು ಬದಲಿಸುವ ಕೆಲಸ ಮಾಡಿಸಿ ಆಂಧ್ರಕ್ಕೆ ಬ್ರಾಂಡೆಡ್ ಚೀಲಗಳ ಹೆಸರಿನಲ್ಲಿ ರವಾನೆ ಮಾಡುತ್ತಾರಂತೆ. ಅಧಿಕಾರಿಗಳು ಗೊತ್ತಿದ್ದು ಮೌನಕ್ಕೆ ಶರಣಾಗಿದ್ದಾರೆ.

ಸರಿ ದಾರಿಗೆ ತರಲು ಏನು ಮಾಡಬೇಕು?
* ಕಾರ್ಡುಗಳ ವಿತರಣೆ ಖಾಸಗಿಯವರಿಂದ ಮುಕ್ತಗೊಂಡು ಕಾನೂನು ಉಲ್ಲಂಘನೆಗೆ ಅವಕಾಶ ಇಲ್ಲದ ವ್ಯವಸ್ಥೆ ಜಾರಿಗೊಳ್ಳಬೇಕು.

* 2010 ರಿಂದ 2013ರ ಅವಧಿಯಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆ ಮರು ಜಾರಿ ಸಾಧ್ಯವೇ ಪರಿಶೀಲಿಸಬೇಕು.

* ಎಫ್ ಸಿಐ ಗೋದಾಮಿನಿಂದ ಅಂಗಡಿವರೆಗಿನ ಸರಬರಾಜು ಜಿಪಿಎಸ್‌ ವಾಹನ ಗಳಲ್ಲಿ ಅಧಿಕಾರಿ 
ಉಸ್ತುವಾರಿಯಲ್ಲೇ ನಡೆಯಬೇಕು.

* ವಿತರಣೆ ಸಮಯ, ಪಡಿತರ ವಿವರಗಳ ಫಲಕ ಕಡ್ಡಾಯಗೊಳಿಸಬೇಕು.

* ಹೊಸ ಕಾರ್ಡು ವಿತರಣೆಗೆ ಮುನ್ನ ಸ್ಥಳ ಪರಿಶೀಲನೆ ಕಡ್ಡಾಯಗೊಳ್ಳಬೇಕು.

* ಬಿಪಿಎಲ್ ಕಾರ್ಡು ಇತರೆ ಯೋಜನೆಗಳಿಗೆ ಮಾನ ದಂಡ ಆಗಬಾರದು.

* ದಾಸ್ತಾನು, ಸಾಗಾಟ, ವಿತರಣೆ ಮತ್ತು ಪ್ರತಿ ಫಲಾನುಭವಿ ಮಾಹಿತಿ ಎಲ್ಲರಿಗೂ, ಯಾವಾಗ ಬೇಕಾದರೂ ಸಿಗಬೇಕು

* ಟ್ಯಾಂಪರ್ ಆಗದ ತೂಕದ ಯಂತ್ರಗಳನ್ನು ಎಫ್‌ಸಿಐ, ಸ್ಥಳೀಯ ಗೋದಾಮು ಮತ್ತು ಅಂಗಡಿಗಳಲ್ಲಿ ಬಳಸಬೇಕು, ಅವುಗಳ ಪರಿಶೀಲನೆ ಕಡ್ಡಾಯ

* ಅಕ್ರಮ ಎಸಗಿ ಅಥವಾ ನಕಲಿ ಕಾರ್ಡು ಸಿಕ್ಕಿಬಿದ್ದಾಗ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು

* ಅಧಿಕಾರಿ, ಸಿಬ್ಬಂದಿಯನ್ನು ಸೇವೆಯಿಂದ ವಜಾವರೆಗಿನ ಗರಿಷ್ಠ ಶಿಕ್ಷೆಗೆ ಗುರಿಪಡಿಸಬೇಕು.

* ಜಾಗೃತ ಮತ್ತು ಕುಂದು ಕೊರತೆ ಸಮಿತಿಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು.

* ಬಿಪಿಎಲ್, ಎಪಿಲ್, ಎಎವೈ ಕಾರ್ಡುದಾರರ ಹೆಸರು, ವಿಳಾಸಗಳು ಅಂಗಡಿ, ಗ್ರಾಮ ಪಂಚಾಯಿತಿ/ಪುರಸಭೆ/ಪಟ್ಟಣ ಪಂಚಾಯಿತಿ/ನಗರಸಭೆ/ನಗರಪಾಲಿಕೆ ಮತ್ತು ತಹಸೀಲ್ದಾರ್ ಕಚೇರಿ, ಇಲಾಖೆ ವೆಬ್‌ಸೈಟ್‌ನಲ್ಲಿ ಸಿಗುವಂತಿರಬೇಕು.

ಪಡಿತರ ಚೀಟಿ: ವಿತರಣೆ ಹಾಗೂ ಬಾಕಿ
* 2017–18ನೇ ಸಾಲಿನಲ್ಲಿ ಆದ್ಯತಾ (ಎಎವೈ ಮತ್ತು ಬಿಪಿಎಲ್) ಪಡಿತರ ಚೀಟಿಗಳನ್ನು ಕೋರಿ ಬಂದ ಅರ್ಜಿಗಳ ಸಂಖ್ಯೆ – 27,92,143

* 2018 ಮಾರ್ಚ್ ಅಂತ್ಯದವರೆಗೆ ವಿತರಿಸಿರುವ ಪಡಿತರ ಚೀಟಿಗಳ ಸಂಖ್ಯೆ – 19,58,405

* 2017–18 ನೇ ಸಾಲಿನಲ್ಲಿ ಮಾರ್ಚ್ ಅಂತ್ಯಕ್ಕೆ ರದ್ದುಪಡಿಸಿದ ಅನರ್ಹ ಪಡಿತರ ಚೀಟಿಗಳ ಸಂಖ್ಯೆ – 3,27,626

* ಕೇಂದ್ರ ಸರಕಾರ ರಾಜ್ಯದ ಶೇಕಡಾ 31.29 ರಷ್ಟು ಕುಟುಂಬಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಎಂದು 1997ರಲ್ಲಿ ಪರಿಗಣಿಸಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರಲ್ಲಿ ಜಾರಿಯಾದ ಬಳಿಕ ಬಿಪಿಎಲ್ ಕುಟುಂಬಗಳು ಎಂಬ ಪರಿಕಲ್ಪನೆ ಕೈಬಿಟ್ಟು ಆದ್ಯತಾ ಕುಟುಂಬ (ಬಿಪಿಎಲ್ ಮತ್ತು ಎಎವೈ ಕುಟುಂಬಗಳು ಸೇರಿ) ಎಂದು ಪರಿಗಣಿಸಲಾಗುತ್ತಿದೆ. ಅದರನ್ವಯ ಗ್ರಾಮೀಣ ಪ್ರದೇಶದ ಶೇಕಡಾ 76.04 ಮತ್ತು ನಗರ ಪ್ರದೇಶದ ಶೇಕಡಾ 49.36 ಜನಸಂಖ್ಯೆಯನ್ನು ಫಲಾನುಭವಿಗಳು ಎಂದು ನಿಗದಿಪಡಿಸಿದೆ.

* 2017 ಏಪ್ರಿಲ್ ನಿಂದ 2018 ಮಾರ್ಚ್ ವರೆಗೆ ವಿತರಿಸಿದ ಪಡಿತರ ವಿವರ

* ಕೇಂದ್ರ ಬಿಡುಗಡೆ ಮಾಡಿದ ಅಕ್ಕಿ – 26,08,836 . 00 ಮೆಟ್ರಿಕ್ ಟನ್

* ಇತರೆ ಮೂಲಗಳಿಂದ ಸಂಗ್ರಹಿಸಿದ ಅಕ್ಕಿ – 1,94,220 . 00 ಮೆ. ಟನ್

ಹೈಟೆಕ್ ವಂಚನೆ..
ಪಡಿತರ ಚೀಟಿ ವಿತರಣೆಯನ್ನು ಹೈಟೆಕ್ ಗೊಳಿಸಿ ಇಡೀ ಇಲಾಖೆಯನ್ನೇ ಕಂಪ್ಯೂಟರೀಕರಣಗೊಳಿಸಿ ಒಂಚೂರು ಭ್ರಷ್ಟಾಚಾರ ಇಲ್ಲದಂತೆ ಮಾಡುವುದಾಗಿ ಖಾಸಗಿ ಕಂಪನಿಯೊಂದು 2006ರ ಮಾ.27 ರಂದು ಸರಕಾರದ ಜತೆ ಒಪ್ಪಂದ ಮಾಡಿಕೊಂಡಿತ್ತು.

56 ಕೋಟಿ ಮೊತ್ತದ ಒಪ್ಪಂದ ಅದಾಗಿತ್ತು. ಒಪ್ಪಂದದ ಕರಾರಿನಲ್ಲಿ ಆರು ತಿಂಗಳೊಳಗೆ ಡಾಟಾಬೇಸ್ ಪೂರ್ಣಗೊಳಿಸಿ, ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಆ ನಂತರ ಇಲಾಖೆಯಲ್ಲಿ ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಅನುಷ್ಠಾನಗೊಳ್ಳುತ್ತದೆ ಅಂದವರು ಆರು ತಿಂಗಳಿರಲಿ, 2010ರ ಆಗಸ್ಟ್‌ವರೆಗೂ ಏನನ್ನೂ ಮಾಡಿರಲಿಲ್ಲ. ಬದಲಿಗೆ ಖಾಸಗಿ ವ್ಯಕ್ತಿಗಳಿಗೆ ಕಾರ್ಡು ವಿತರಣೆ ಉಪ ಗುತ್ತಿಗೆ ಕೊಟ್ಟು ಸರಕಾರದ ಹಣ ಜೇಬಿಗಿಳಿಸಿದ್ದರು.

ಅಂತಿಮ ಕಂತಿನಲ್ಲಿ ಬಾಕಿಯಿದ್ದ 18 ಕೋಟಿಗೆ ಕಂಪನಿ ಬೇಡಿಕೆ ಇಟ್ಟಾಗ ಅಧಿಕಾರಿಯೊಬ್ಬರು ಗುತ್ತಿಗೆ ಕರಾರು ಪರಿಶೀಲಿಸಿ ಹಣ ಬಿಡುಗಡೆಗೆ ನಿರಾಕರಿಸಿದಾಗಲೇ ಕಂಪನಿ ಮುಖವಾಡ ಬಯಲಾಗಿತ್ತು. ಈ ಕಂಪನಿಯಿಂದ ಉಪ ಗುತ್ತಿಗೆ ಪಡೆದ ಖಾಸಗಿ ವ್ಯಕ್ತಿಗಳು ಹಣ ಪಡೆದು ಹಂಚಿಕೆ ಮಾಡಿದ ಕಾರ್ಡುಗಳೇ ಲೆಕ್ಕಕ್ಕೆ ಸಿಗದೆ ನಕಲಿ ಹಾವಳಿ ಹೆಚ್ಚಾಗಿದ್ದು. ಅಂದ ಹಾಗೆ ಇದು ಪ್ರಭಾವಿ ಅಧಿಕಾರಿಯೊಬ್ಬರ ಪತ್ನಿಗೆ ಸೇರಿದ ಕಂಪನಿಯಂತೆ. ಇದು ವಂಚನೆಯ ಸ್ಯಾಂಪಲ್ ಮಾತ್ರ.

ನಕಲಿ ಮತ್ತು ಮಹಾ ಪೋಷಕರು

ಅತಿ ಹೆಚ್ಚು ನಕಲಿ ಕಾರ್ಡುಗಳು ಸಿಕ್ಕಿಬಿದ್ದಿರುವುದು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ರಾಯಚೂರು, ಕಲಬುರಗಿ, ಕೊಪ್ಪಳ, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ನಕಲಿ ಹಾವಳಿ ಹೆಚ್ಚು.

ಈ ಭಾಗದ ಜನ ಅಕ್ಕಿಯನ್ನು ಹೆಚ್ಚಾಗಿ ಉಪಯೋಗಿಸದ ಕಾರಣಕ್ಕೆ ಅಲ್ಲಿನ ಬಹುತೇಕ ಅಕ್ಕಿ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ರೈಸ್ ಮಿಲ್ಲುಗಳಿಗೆ ರವಾನೆಯಾಗುತ್ತದೆ. ಮಿಲ್ಲುಗಳಲ್ಲಿ ಪಾಲಿಶ್ ಪಡೆದು ಬ್ರಾಂಡೆಡ್‌ ಚೀಲಗಳಿಗೆ ತುಂಬಿ ಮಾರುಕಟ್ಟೆಗೆ ರವಾನಿಸಲಾಗುತ್ತದೆ.

ಈ ಮಿಲ್ಲುಗಳ ಮೇಲೆ ನೂರಾರು ಸಲ ದಾಳಿ ನಡೆದು ಕೇಸು ದಾಖಲಾಗಿವೆ. ಅಷ್ಟೇ ವೇಗದಲ್ಲಿ ಖುಲಾಸೆಯೂ ಆಗಿವೆ. ದಾವಣಗೆರೆಯ ಸಾಮಾನ್ಯ ವ್ಯಕ್ತಿಯೊಬ್ಬರು ಶ್ರೀಮಂತ, ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದೇ ಈ ದಂಧೆಯಿಂದ ಎಂಬುದು ಜನಜನಿತ. ಆರಂಭದ ದಿನಗಳಲ್ಲಿ ಅವರು, ಜಿಲ್ಲೆಗೆ ಹೊಸದಾಗಿ ಬಂದ ಆಹಾರ ಇಲಾಖೆ ಉಪ ನಿರ್ದೇಶಕರನ್ನು ಗೆಸ್ಟ್ ಹೌಸ್‌ಗೆ ಕರೆದು ಔತಣ ನೀಡಿ ಅಲ್ಲಿರುತ್ತಿದ್ದ ಸೂಟ್‌ಕೇಸ್ ತೋರಿಸಿ ಅದನ್ನು ತೆಗೆದುಕೊಂಡು ಹೋಗಿ ಸುಮ್ಮನಿರಿ ಅನ್ನುತ್ತಿದ್ದರಂತೆ.

ಸೂಟ್‌ ಕೇಸ್ ತೆಗೆದುಕೊಳ್ಳದೆ ವಿರೋಧಿಸುತ್ತಿದ್ದವರಿಗೆ ನಿಮ್ಮ ಸೂಟ್‌ಕೇಸ್ ರೆಡಿ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿ ಕೆಲ ದಿನಗಳಲ್ಲೇ ಎತ್ತಂಗಡಿ ಮಾಡಿಸುತ್ತಿದ್ದರಂತೆ.

ನಿಗೂಢವಾದ ತಿವಾರಿ ಸಾವು

ನೂರಾರು ಕೋಟಿ ಅನುದಾನ ಪಡೆಯುವ ಆಹಾರ ಇಲಾಖೆ ಆಯುಕ್ತರ ಹುದ್ದೆಗೆ ಹಿಂದೆ ಪೈಪೋಟಿ ಇರುತ್ತಿತ್ತು. ಇತ್ತೀಚೆಗೆ ಈ ಹುದ್ದೆ ಒಪ್ಪಿಕೊಳ್ಳಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಕಾಣದ ಕೈಗಳು ಇಲಾಖೆಯನ್ನು ನಿಯಂತ್ರಿಸುತ್ತಿವೆ, ಒಂದು ವೇಳೆ ಅವರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕದಿದ್ದರೆ ಎತ್ತಂಗಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಲಾಗುತ್ತಿತ್ತು.

ಆದರೆ, 2017ರ ಮೇ 17 ರಂದು ಆಹಾರ ಇಲಾಖೆ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಲಖ್ನೊದ ಹಜರತ್ ಜಂಗ್ ಪ್ರದೇಶದ ಮೀರಾಬಾಯ್ ಗೆಸ್ಟ್‌ಹೌಸ್ ಮುಂಭಾಗ ನಿಗೂಢ ರೀತಿಯಲ್ಲಿ ಕೊಲೆಯಾದ ಬಳಿಕ ಅಧಿಕಾರಿಗಳಲ್ಲಿ ಆತಂಕ ಮನೆ ಮಾಡಿದೆ. ಅನುರಾಗ್ ತಿವಾರಿ ಎರಡು ಸಾವಿರ ಕೋಟಿ ಮೊತ್ತದ ಹಗರಣದ ಬೆನ್ನು ಬಿದ್ದಿದ್ದರು, ಆ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದರು.

ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಇದುವರೆಗೂ ನಿಗೂಢತೆ ಬೇಧಿಸಲು ಸಾಧ್ಯ ವಾಗಿಲ್ಲ. ಇದಕ್ಕೂ ಮೊದಲು 4–5 ವರ್ಷಗಳ ಅವಧಿಯಲ್ಲಿ 20 ಕ್ಕೂ ಹೆಚ್ಚು ಅಧಿಕಾರಿಗಳು ಆಯುಕ್ತರ ಹುದ್ದೆಗೆ ನೇಮಕಗೊಂಡು ಎತ್ತಂಗಡಿಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು