ಭಾನುವಾರ, ಮೇ 31, 2020
27 °C

ನಿಖಿಲ್‌ ಮದುವೆ | ಅಂತರ ಕಾಯ್ದುಕೊಳ್ಳದ ಬಗ್ಗೆ ತೀವ್ರ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ನಡುವೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರ ವಿವಾಹ ಬಿಡದಿಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ನೆರವೇರಿದೆ. ಆದರೆ, ಸಮಾರಂಭದ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಂತರ ಕಾಯ್ದುಕೊಳ್ಳದ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಕೆಲವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ಮದುವೆ‌ ಸಮಾರಂಭದಲ್ಲಿ ಭಾಗವಹಿಸಿರುವವರು ಮಾಸ್ಕ್‌ ಧರಿಸಿಲ್ಲ.  ಅಂತರ ಕಾಯ್ದುಕೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಡಿಎಸ್‌ ಎಂಎಲ್‌ಸಿ ಟಿ.ಎ.ಶರವಣ, ‘ನಮ್ಮಲ್ಲಿ ಯಾರೂ ಕೂಡ ಮದುವೆಗೆ ಹೋಗಿಲ್ಲ. ಕೇವಲ ವಧು–ವರನ ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಿದ್ದರು. ಇದಕ್ಕೆ ಜಿಲ್ಲಾಧಿಕಾರಿಗಳು 40 ಪಾಸ್‌ಗಳನ್ನು ವಿತರಿಸಿದ್ದರು. ಎಲ್ಲವನ್ನೂ ಸೂಚನೆಯಂತೆ ನಡೆಸಲಾಗಿದೆ. ಕೇವಲ ಪೋಷಕರು ಹಾಗೂ ದೇವೇಗೌಡ ದಂಪತಿಗಳು ಮಾತ್ರ ವಧು–ವರನ ಹತ್ತಿರ ನಿಂತಿದ್ದಾರೆ. ಸಮಾರಂಭದಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ’ ಎಂದು ಹೇಳಿದ್ದಾರೆ. 

ಡಿಸಿಯಿಂದ ವರದಿ ಕೇಳಿದ್ದೇನೆ: ಡಿಸಿಎಂ ಅಶ್ವತ್ಥನಾರಾಯಣ
ಬೆಂಗಳೂರು:
 ‘ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್‌ ಕುಮಾರಸ್ವಾಮಿ ಅವರ ಮದುವೆ ಸಮಾರಂಭದಲ್ಲಿ  ಅಂತರ ಕಾಯ್ದುಕೊಳ್ಳದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ರಾಮನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಯೊಂದಿಗೆ ಮಾತನಾಡುತ್ತೇನೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದೇ ಆದರೆ, ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದರು.

ಲಾಕ್‌ಡೌನ್‌ಗೂ ಮುಂಚೆ ರಾಮನಗರದ ಜಾನಪದ ಲೋಕ ಸಮೀಪ ಬೃಹತ್ ವೇದಿಕೆ ನಿರ್ಮಿಸಿ, ಸುಮಾರು 5 ಲಕ್ಷ ಜನರ ಸಮ್ಮುಖದಲ್ಲಿ ನಿಖಿಲ್‌ ಮದುವೆಯನ್ನು ವೈಭವಯುತವಾಗಿ ನೆರವೇರಿಸಲು ಕುಮಾರಸ್ವಾಮಿ ಅವರು ಯೋಜನೆ ರೂಪಿಸಿದ್ದರು. ರಾಜಕಾರಣಿಗಳು, ಉದ್ಯಮಿಗಳು, ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರೆನ್ನೆಲ್ಲ ಆಹ್ವಾನಿಸಲು ನಿರ್ಧರಿಸಿದ್ದರು. ಆದರೆ, ಕೊರೊನಾ ವೈರಸ್‌ ಕಾರಣಕ್ಕೆ ಆ ಯೋಜನೆ ಕೈಬಿಟ್ಟು ಮದುವೆಯನ್ನು ಸರಳವಾಗಿ ನೆರವೇರಿಸುವುದು ಅನಿವಾರ್ಯವಾಗಿತ್ತು. ಬೆಂಗಳೂರಿನಲ್ಲಿ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮವನ್ನು ಸದ್ಯ ಬೆಂಗಳೂರು ನಗರ ಕೊರೊನಾ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿರುವ ಕಾರಣ ಕೇತಗಾನಹಳ್ಳಿಯ ತೋಟದ ಮನೆಗೆ ಸ್ಥಳಾಂತರಿಸಲಾಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು