ಸೋಮವಾರ, ಅಕ್ಟೋಬರ್ 26, 2020
27 °C
ಶೇ 50ರಷ್ಟು ತೋಟಗಳನ್ನು ಆವರಿಸಿರುವ ಕೊಳೆ ರೋಗ

ಅತಿವೃಷ್ಟಿ: ಅಡಿಕೆಗೆ ವ್ಯಾಪಕ ಹಾನಿ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್‌ ಎರಡನೇ ವಾರದಲ್ಲಿ ಸುರಿದ ಭಾರಿ ಮಳೆ ದೀರ್ಘಾವಧಿ ಬೆಳೆಯಾಗಿರುವ ಅಡಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗಾಳಿ– ಮಳೆಗೆ ಆಗಿರುವ ಮರಗಳ ನಾಶ ಒಂದೆಡೆಯಾದರೆ, ತೋಟಗಳನ್ನು ಆವರಿಸಿರುವ ಕೊಳೆ ರೋಗ ಬೆಳೆಗಾರರನ್ನು ಕಂಗಾಲು ಮಾಡಿದೆ.

ಅತಿವೃಷ್ಟಿಯ ಸಂದರ್ಭದಲ್ಲಿ ತೋಟದಲ್ಲಿ ವಾರಗಟ್ಟಲೆ ನೀರು ನಿಂತಿದ್ದ ಕಾರಣ ಅಡಿಕೆಗೆ ಬೇರುಕೊಳೆ ರೋಗ ಹರಡಿದೆ. ಗಾಳಿಯ ಅಬ್ಬರಕ್ಕೆ ಸಾವಿರಾರು ಅಡಿಕೆ ಮರಗಳು ಧರೆಗುರುಳಿವೆ. ‘ಅಡಿಕೆ ಮರವೊಂದು ಮುರಿದು ಬಿದ್ದರೆ ಹೊಸ ಸಸಿ ನೆಟ್ಟು, ಅದು ಫಸಲು ನೀಡಲು ಏಳೆಂಟು ವರ್ಷಗಳೇ ಬೇಕು. ಅಲ್ಲಿಯ ತನಕ ರೈತ ಆದಾಯವಿಲ್ಲದೇ ಆ ಸಸಿಯ ರಕ್ಷಣೆ ಮಾಡಬೇಕು. ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರೇ ಹೆಚ್ಚು ಇರುವುದರಿಂದ ಈ ಬಾರಿಯ ಮಳೆ ಬೆಳೆಗಾರರ ಆರ್ಥಿಕ ಸ್ಥಿತಿಯನ್ನು 10 ವರ್ಷ ಹಿಂದಕ್ಕೆ ಒಯ್ದಿದೆ’ ಎನ್ನುತ್ತಾರೆ ಬೆಳೆಗಾರ ಮಂಜುನಾಥ ಪಟಗಾರ.

‘ಸಾಮಾನ್ಯವಾಗಿ ಅಡಿಕೆ ತೋಟಗಳು ಹೊಳೆ, ಕೆರೆಗಳ ತಟದಲ್ಲಿರುತ್ತವೆ. ಈ ಬಾರಿಯ ಹೊಳೆ, ಕೆರೆಗಳು ಉಕ್ಕಿ ಹರಿದು ತೋಟದಲ್ಲಿ ಹೂಳು ತುಂಬಿದೆ. ಕಲ್ಲು, ಮಣ್ಣಿನಿಂದ ಬಸಿಗಾಲುವೆ ಮುಚ್ಚಿ ಹೋಗಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಸಿಗಾಲುವೆ ನಿರ್ಮಾಣಕ್ಕೆ ಪ್ರತ್ಯೇಕ ಯೋಜನೆ ರೂಪಿಸಬೇಕು’ ಎನ್ನುತ್ತಾರೆ ಸಾಮಾಜಿಕ ಮುಖಂಡ ಪ್ರಮೋದ ಹೆಗಡೆ ಯಲ್ಲಾಪುರ.

‘ಅರೆಬಯಲು ಸೀಮೆ ಪ್ರದೇಶಗಳಲ್ಲಿ ಹದವಾದ ಮಳೆಯಾಗಿರುವುದರಿಂದ ಅಲ್ಲಿ ಉತ್ತಮ ಫಸಲು ಇದೆ. ಹೀಗಾಗಿ ಅಡಿಕೆ ದರ ಏರುವ ನಿರೀಕ್ಷೆಯಿಲ್ಲ. ಈ ಭಾಗದ ರೈತರಿಗೆ ಆಗಿರುವ ನಷ್ಟ ಸರಿಪಡಿಸಲು ಸರ್ಕಾರ ಅಡಿಕೆ ಬೆಳೆಗಾರರಿಗೆ ಲಘು ಪೋಷಕಾಂಶ, ಸಾವಯವ ಗೊಬ್ಬರವನ್ನು ಪ್ಯಾಕೇಜ್ ರೂಪದಲ್ಲಿ ನೀಡಬೇಕು’ ಎಂದು ಅಡಿಕೆ ವಹಿವಾಟು ಸಂಸ್ಥೆ ‘ಟಿಎಸ್ಎಸ್‌’ನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಅಡಿಕೆ, ಬಾಳೆ, ಕಾಳು ಮೆಣಸು, ಶುಂಠಿ, ಬಾಳೆ, ಅನಾನಸ್ ಬೆಳೆಹಾನಿಯಾಗಿದೆ. ಇದರ ಜೊತೆಗೆ, ಶೇ 50ರಷ್ಟು ಭಾಗದ ತೋಟಕ್ಕೆ ಕೊಳೆರೋಗ ಬಂದಿದೆ. ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಪ್ರಾಥಮಿಕ ಸಮೀಕ್ಷೆ ಪ್ರಕಾರ ಶೇ 35ರಿಂದ 50ರಷ್ಟು ಅಡಿಕೆ ಉದುರಿದೆ. ಇದರಿಂದ ಅಂದಾಜು ₹35 ಕೋಟಿ ನಷ್ಟವಾಗಿದೆ. ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿ ಹಾನಿಯ ಸ್ಪಷ್ಟ ಮಾಹಿತಿ ದೊರೆಯುತ್ತದೆ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ಮಣ್ಣು ಸವಕಳಿ ತಡೆ, ತೋಟಕ್ಕೆ ಪೋಷಕಾಂಶ, ಹೆಚ್ಚುವರಿ ಮೈಲುತುತ್ತ ಪೂರೈಕೆ ಸೇರಿ ತೋಟಗಾರಿಕಾ ಬೆಳೆಗಳ ಪುನರುಜ್ಜೀವನಕ್ಕೆ ₹ 2.5 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ

– ಬಿ.ಪಿ. ಸತೀಶ,‌ ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು