ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮುಗಳ ಮೇಲೆ ದಾಳಿ: ₹11 ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ

Last Updated 4 ಜೂನ್ 2020, 15:32 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ವಂಚನೆ ವಿರುದ್ಧದ ದಾಳಿ ಮುಂದುವರಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಬುಧವಾರ ಶಿವಮೊಗ್ಗ ಮತ್ತು ಸಾಗರದಲ್ಲಿ ಒಟ್ಟು 13 ಗೋದಾಮುಗಳ ಮೇಲೆ ದಾಳಿ ಮಾಡಿ ₹11ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ ಹಚ್ಚಿ, ₹1.10 ಕೋಟಿ ದಂಡ ಹಾಕಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈಚೆಗೆ ವಾಣಿಜ್ಯ ತೆರಿಗೆ ಇಲಾಖೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ವರ್ತಕರ ತೆರಿಗೆ ವಂಚನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚಿಸಿದ ಬಳಿಕ ನಡೆದ ದೊಡ್ಡ ಕಾರ್ಯಾಚರಣೆ ಇದಾಗಿದೆ.

ವಾಣಿಜ್ಯ ಇಲಾಖೆ ಹೆಚ್ಚುವರಿ ಕಮಿಷನರ್‌ ನಿತೇಶ್‌ ಪಾಟೀಲ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಭಾಗವಹಿಸಿದ್ದ 120 ಅಧಿಕಾರಿ ಮತ್ತು ಸಿಬ್ಬಂದಿ ತಂಡ ಶಿವಮೊಗ್ಗದಲ್ಲಿ 9 ಹಾಗೂ ಸಾಗರದ 4 ಕಡೆಗಳಲ್ಲಿ ದಾಳಿ ನಡೆಸಿದಾಗ ದಾಖಲೆ ಇಲ್ಲದ ಅಡಕೆ ಅಕ್ರಮ ದಾಸ್ತಾನು ಪತ್ತೆಯಾಯಿತು ಎಂದು ಇಲಾಖೆ ಕಮಿಷನರ್‌ ಶ್ರೀಕರ್‌ ತಿಳಿಸಿದ್ದಾರೆ.

ದಾಳಿ ಸಮಯದಲ್ಲಿ ಕೆಲ ವರ್ತಕರ ಬಳಿ ತಮಿಳುನಾಡಿನ ವರ್ತಕರಿಂದ ಪಡೆದಿದ್ದಾರೆ ಎನ್ನಲಾದ ತೆರಿಗೆ ಮರುಪಾವತಿ ಇನ್‌ವಾಯ್ಸ್‌ಗಳು ಸಿಕ್ಕಿವೆ. ಈ ಬಿಲ್‌ಗಳನ್ನು ಮೋಸದ ಮಾರ್ಗದಲ್ಲಿ ಪಡೆಯಲಾಗಿದ್ದು, ಅಂತರರಾಜ್ಯ ಮಟ್ಟದಲ್ಲೂ ತನಿಖೆ ಆರಂಭವಾಗಿದೆ.

ಅಕ್ರಮ ಅಡಕೆ ದಾಸ್ತಾನುದಾರರ ಮೇಲೆ ವಿಧಿಸಲಾಗಿರುವ ₹ 1.10 ಕೋಟಿ ದಂಡದಲ್ಲಿ ₹ 86 ಲಕ್ಷ ವಸೂಲು ಮಾಡಲಾಗಿದ್ದು ಉಳಿದ ಹಣ ವಸೂಲಿಗೆ ಕ್ರಮ ಕೈಗೊಳ್ಳಾಗಿದೆ. ಅಡಕೆ ಅಕ್ರಮ ವಹಿವಾಟು ಹಿನ್ನೆಲೆಯಲ್ಲಿ ಎಪಿಎಂಸಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.

ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಅಡಕೆ ಬೆಳೆಯುತ್ತಿದ್ದು, ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಕಳೆದ ವಾರ ಚನ್ನಗಿರಿ ತಾಲೂಕಿನ ಕೆಲವು ಗೋದಾಮುಗಳ ಮೇಲೆ ದಾಳಿ ನಡೆಸಿ ₹3.1 ಕೋಟಿ ಅಡಕೆ ಅಕ್ರಮ ದಾಸ್ತಾನು ಪತ್ತೆ ಹಚ್ಚಿ ₹31 ಲಕ್ಷ ದಂಡ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT