ಗುರುವಾರ , ಫೆಬ್ರವರಿ 20, 2020
18 °C
ಸ್ವಯಂಸೇವಾ ಸಂಸ್ಥೆ ವಿರುದ್ಧ ಕ್ರಮ: ಸಚಿವ ಸುರೇಶ್‌ಕುಮಾರ್

ವಿವಾದ | ಶಿಕ್ಷಣ ಇಲಾಖೆ ವೆಬ್‌ಸೈಟ್‌ನಿಂದ ಸಂವಿಧಾನ ಕೈಪಿಡಿ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಂವಿಧಾನ ರಚನೆ ವಿಚಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಪ್ರಸ್ತಾಪಿಸಿ ವಿವಾದ ಸೃಷ್ಟಿಸಿರುವ ಸ್ವಯಂಸೇವಾ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರ ಗಮನಕ್ಕೆ ಬಂದ ತಕ್ಷಣ ಕೈಪಿಡಿ ವಾಪಸ್ ಪಡೆಯಲಾಗಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ಶಾಲೆಗಳಲ್ಲಿ ನ. 26ರಂದು ಸಂವಿಧಾನ ದಿನಾಚರಣೆ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಸಂವಿಧಾನ ದಿನಾಚರಣೆಗೆ ಪೂರಕವಾಗಿ ಏನೆಲ್ಲ ಚಟುವಟಿಕೆ ನಡೆಸಬಹುದು ಎಂಬ ಕೈಪಿಡಿಯನ್ನು ಸಿಎಂಸಿಎ ಸಂಸ್ಥೆ ಸಿದ್ಧಪಡಿಸಿ ಇಲಾಖೆಗೆ ಕೊಟ್ಟಿತ್ತು. ಇದನ್ನು ಶಿಕ್ಷಣ ತಜ್ಞರಿಗೆ ಕೊಟ್ಟು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಆದರೆ ಈ ಸಂಸ್ಥೆಯು ಅಧಿಕಾರಿಗಳ ಗಮನಕ್ಕೆ ತರದೆ, ಅನುಮತಿಯನ್ನೂ ಪಡೆಯದೆ ಕೈಪಿಡಿಯನ್ನು ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದೆ. ಗಮನಕ್ಕೆ ಬಂದ ತಕ್ಷಣ ಕೈಪಿಡಿ ವಾಪಸ್ ಪಡೆಯಲಾಗಿದೆ’ ಎಂದು ಸಚಿವರು ತಿಳಿಸಿದರು.

‘ಕೈಪಿಡಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವಾಗ ವಿವಾದಗಳಿರುವ ಅನಗತ್ಯ ವಿವರಗಳನ್ನು ಸಂಸ್ಥೆ ಸೇರಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದೂ ಅವರು ಹೇಳಿದರು.

ಸಂಸ್ಥೆ ಸ್ಪಷ್ಟನೆ: ‘ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್ ಅವರ ಪ್ರಮುಖ ಪಾತ್ರವನ್ನು ಅಲ್ಲಗಳೆಯಲು ನಾವು ಪ್ರಯತ್ನಿಸಿಲ್ಲ. ಅವರ ಜತೆ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಅನೇಕರು ಒಗ್ಗೂಡಿ ಸಂವಿಧಾನ ರೂಪಿಸಿದ್ದಾರೆ ಎಂದು ವಿವರಿಸಿದ್ದೇವೆ. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಪಿತಾಮಹರಲ್ಲ ಎಂದೂ ನಾವು ಹೇಳಿಲ್ಲ. ಆ ರೀತಿ ಅರ್ಥ ಉಂಟಾಗಿರುವುದು ದುರಾದೃಷ್ಟಕರ. ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ’ ಎಂದು ಸಿಎಂಸಿಎ ಸಂಸ್ಥೆ ತಿಳಿಸಿದೆ.

‘20 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನದ ಪ್ರಸ್ತಾವನೆ ಹಾಗೂ ಅದರ ಮೂಲ ಆಶಯಗಳ ಮೇಲೆ ನಮ್ಮ ಕೆಲಸ ಕೇಂದ್ರೀಕೃತಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಯುವ ಸಮೂಹದಲ್ಲಿ ಸಂವಿಧಾನದ ಆದರ್ಶಗಳನ್ನು ಬಿತ್ತಿ, ಅವರನ್ನು ಸಶಕ್ತಗೊಳಿಸುವುದೇ ನಮ್ಮ ಉದ್ದೇಶ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು